ವಾಚಕರ ವಾಣಿ
ಹೊಣೆಗಾರಿಕೆ ಮರೆತ ಯುವಜನ
ದಶಕಗಳ ಹಿಂದೆ ಪದವಿ ವಿದ್ಯಾರ್ಥಿಗಳು ಸಮಾಜದ ಒಳಿತಿಗಾಗಿ ಹಳ್ಳಿಗಳಲ್ಲಿ ನಾಟಕ ಹಾಗೂ ಭಿತ್ತಿಚಿತ್ರಗಳ ಪ್ರದರ್ಶನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಪ್ರಸ್ತುತ ಪದವಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಇಂತಹ ಆಲೋಚನೆಗಳೇ ಕಂಡುಬರುತ್ತಿಲ್ಲ. ಸಾಮಾಜಿಕ ಜಾಲತಾಣಗಳ ಗುಂಗಿನಲ್ಲಿ ಮುಳುಗಿ ಹೋಗಿದ್ದು, ಧರ್ಮ, ಜಾತಿ ಹೆಸರಿನಲ್ಲಿ ಅವಹೇಳನಕಾರಿ ಪೋಸ್ಟ್, ಕಮೆಂಟ್ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಯುವ ಮನಸ್ಸಿನಲ್ಲಿ ಬದಲಾವಣೆ ತರುವ ಕೆಲಸ ನಡೆಯಬೇಕಿದೆ.
⇒ಪ್ರಸನ್ನ ಶಿವಾಜಿ ನಾಯಕ, ಜಮಖಂಡಿ
ಸುಖದ ಪುಗ್ಗೆಗೆ ಕಾನೂನಿನ ಸೂಜಿ
ಜಾರಿ ನಿರ್ದೇಶನಾಲಯದ ವಶದಲ್ಲಿರುವ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ), ‘ನಾನು ಸತ್ತರೆ ಇ.ಡಿ ಹೊಣೆ’ ಎಂದು ನ್ಯಾಯಾಧೀಶರ ಮುಂದೆ ಹೇಳಿರುವುದು ಅಚ್ಚರಿಯೇನೂ ಅಲ್ಲ (ಪ್ರ.ವಾ., ಆಗಸ್ಟ್ 29). ಕಿರುಕುಳ ನೀಡುತ್ತಿದ್ದಾರೆ, ಶುದ್ಧ ನೀರು, ಆಹಾರ ಕೊಟ್ಟಿಲ್ಲ ಎಂದು ಗೋಗರೆದಿರುವುದು ವ್ಯರ್ಥ ಪ್ರಲಾಪ. ಹಣ ಬಲದಿಂದ ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯುತ್ತಿರುವವರು ಯಾರೇ ಆದರೂ ಅಕ್ರಮದಲ್ಲಿ ತೊಡಗಿ ಜೈಲಿನ ಕಂಬಿಗಳ ಹಿಂದೆ ಹೋದಾಗ ನ್ಯಾಯಾಧೀಶರ ಮುಂದೆ ಹೀಗೆ ಹೇಳುವುದು ಹೊಸದೇನಲ್ಲ. ಕಾನೂನಿನ ಮುಂದೆ ಯಾರೂ ಅತೀತರಲ್ಲ ಎಂಬುದನ್ನು ನ್ಯಾಯಾಲಯಗಳ ಇತ್ತೀಚಿನ ತೀರ್ಪುಗಳು ಸಾರಿ ಹೇಳಿವೆ.
⇒ನಾರಾಯಣರಾವ ಕುಲಕರ್ಣಿ, ಯಲಬುರ್ಗಾ
ಮಲೆನಾಡ ಮಳೆಯ ಮಧುರ ಅನುಭೂತಿ
‘ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ’ ಎಂಬ ಕುವೆಂಪು ಅವರ ಕವಿತೆಯೊಂದರ ಸಾಲುಗಳಂತೆ, ಬೀದರ್, ಕಲಬುರಗಿ ಜಿಲ್ಲೆಗಳು ಅಕ್ಷರಶಃ ಮಲೆನಾಡಾಗಿ ಬದಲಾಗಿವೆ. ಅಷ್ಟೊಂದು ಮಳೆ ಇಲ್ಲಿ ಸುರಿದಿದೆ. ನದಿಗಳು, ತೊರೆಗಳು ಭೋರ್ಗರೆಯುತ್ತಿವೆ. ಪ್ರಕೃತಿಪ್ರಿಯರು ಗುಡಿಸಲು ಕಟ್ಟಿಕೊಂಡು ಗಿಳಿ, ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುವುದನ್ನು ಆನಂದಿಸಲು ಇದು ಸಕಾಲ. ಮುಂದೆ ಏಪ್ರಿಲ್, ಮೇ ತಿಂಗಳಿನ ಬಿಸಿಲಿಗೆ, ‘ಅಯ್ಯೊ ಸೆಕೆ ತಾಳಲಾರೆ’ ಎಂಬ ಉದ್ಗಾರಕ್ಕೆ, ಕುವೆಂಪು ಅವರ, ‘ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ’ ಎಂಬ ಸಾಲುಗಳನ್ನು ನೆನಪಿಸಿಕೊಂಡು ಸಮಾಧಾನಿಸಿಕೊಳ್ಳಬೇಕಷ್ಟೇ.
⇒ವೆಂಕಟೇಶ್ ಮುದಗಲ್, ಕಲಬುರಗಿ
ನಿರುದ್ಯೋಗಿಗಳ ನೋವು ಆಲಿಸಿ
ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡುವ ಜವಾಬ್ದಾರಿ ಯಾವ ಪಕ್ಷದ ಯಾವ ಸರ್ಕಾರಕ್ಕೂ ಇಲ್ಲ. ಖಾಲಿ ಹುದ್ದೆಗಳಿಗೆ ಹೊರಗುತ್ತಿಗೆಯಡಿ ನೇಮಿಸಿಕೊಳ್ಳಲಾಗುತ್ತಿದೆ. ಇದರಿಂದ ಸರ್ಕಾರಿ ನೌಕರಿ ಬಯಸಿ ಕಾದು ಕುಳಿತಿರುವ ಯುವಜನರ ಬವಣೆ ಹೇಳತೀರದಾಗಿದೆ.
ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮಸ್ಯೆಯೂ ಬಗೆಹರಿದಿದೆ. ಮತ್ತೊಂದೆಡೆ ಪರೀಕ್ಷೆಗೆ ಸಿದ್ಧರಾಗಿ ಉದ್ಯೋಗಕ್ಕಾಗಿ ಕಾದು ಕುಳಿತ ಯುವಜನರ ವಯಸ್ಸು ಮೀರುತ್ತಿದೆ. ಹಾಗಾಗಿ, ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ತ್ವರಿತವಾಗಿ ಅಧಿಸೂಚನೆ ಪ್ರಕಟಿಸಬೇಕಿದೆ. ಜೊತೆಗೆ, ಹುದ್ದೆಗಳ ಭರ್ತಿಯಲ್ಲಿ ಅನಗತ್ಯ ವಿಳಂಬ ಮಾಡಬಾರದು. ಕಾಲಮಿತಿಯೊಳಗೆ ಪಾರದರ್ಶಕತೆ ಕಾಯ್ದುಕೊಂಡು ಭರ್ತಿ ಮಾಡಬೇಕಿದೆ.
⇒ಗೌರೀಶ ನಾಯಕ, ಅಂಕೋಲಾ
ಏಕತೆ ಸಾರುವ ಸಮಚಿತ್ತದ ಬರಹ
‘ಎಲ್ಲರ ಎದೆ ಬೆಳಗಲಿ ಹಣತೆ!’ ಲೇಖನವು (ಲೇ: ರವೀಂದ್ರ ಭಟ್ಟ, ಪ್ರ.ವಾ., ಆಗಸ್ಟ್ 29) ಏಕತೆಯ ಬಿಂಬ. ಮೈಸೂರು ದಸರಾ ಪರಂಪರೆ, ಇತಿಹಾಸದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಆಗಿರುವುದರ ಪಕ್ಷಿನೋಟವಿದು. ಉತ್ತಮ ಹಾಗೂ ಸಮಚಿತ್ತದ ಮಾಹಿತಿಪೂರ್ಣ ಬರಹ. ಸಾಹಿತಿ ಬಾನು ಮುಷ್ತಾಕ್
ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಅವರ ಸಾಹಿತ್ಯ ಸಾಧನೆಯನ್ನು ಕಡೆಗಣಿಸಿ ರಾಜಕೀಯ ಮಾಡುವುದು, ಅಸೂಯೆ, ಅಸಹನೆಯಿಂದ ಟೀಕಿಸುವುದು ಸರಿಯಲ್ಲ.
ಕಾರಣವಿಲ್ಲದೆಯೂ ಟೀಕಿಸುವವರು, ತಪ್ಪು ಅಭಿಪ್ರಾಯ ಹೊಂದಿದವರು ಮನನ ಮಾಡಬೇಕಾದ ಹಾಗೂ ತಮ್ಮೊಳಗಿನ ಆತ್ಮಸಾಕ್ಷಿಗೆ ಪ್ರಶ್ನೆ ಹಾಕಿಕೊಳ್ಳಬಹುದಾದ ಬರಹ ಇದು. ಅನಗತ್ಯ ವಿವಾದಕ್ಕೆ ತೆರೆ ಎಳೆಯುವ ಇಂಥ ಎಚ್ಚರ ಮೂಡಿಸುವ ವಿಚಾರಗಳು ಇಂದಿನ ಅಗತ್ಯವಾಗಿವೆ.
⇒ಆರ್.ಜಿ. ಹಳ್ಳಿ ನಾಗರಾಜ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.