ADVERTISEMENT

ಭಾಷೆಯ ದೋಷಪೂರಿತ ಬಳಕೆ ಸರಿಯೇ?

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 19:45 IST
Last Updated 10 ಫೆಬ್ರುವರಿ 2020, 19:45 IST

ಕಲಬುರ್ಗಿಯಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಥಾಪ್ರಕಾರ ಕಾರ್ಯಕ್ರಮದ ವ್ಯವಸ್ಥೆಗಾಗಿ ಹಲವಾರು ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ಹಂಚಲಾಗಿತ್ತು. ಗಣ್ಯರ ವಾಹನಗಳಿಗೆ ಅನುಮತಿ ಪತ್ರವನ್ನು ಪೊಲೀಸ್‌ ಆಯುಕ್ತರ ಮೊಹರು, ಕಾರ್ಯಾಧ್ಯಕ್ಷರ ಸಹಿಯೊಂದಿಗೆ ವಿತರಿಸಲಾಗಿತ್ತು. ‘ಕಾರ್ಯಧ್ಯಕ್ಷರು’ ಎಂದು ಮುದ್ರಿತವಾಗಿದ್ದ ಅನುಮತಿ ಪತ್ರದಲ್ಲಿ ಸಂಬಂಧಿತರು ಸಹಿ ಮಾಡಿದ್ದರು! ಕನ್ನಡ ನಾಡು-ನುಡಿಯ ಸಂರಕ್ಷಣೆಯ ಗುರಿಯೊಂದಿಗೆ ಸ್ಥಾಪಿಸಲಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನಿಂದಲೇ ಭಾಷೆಯ ಇಂತಹ ದೋಷಪೂರಿತ ಬಳಕೆಯಾಗುವುದಾದಲ್ಲಿ ಇನ್ನು ಯಾರಿಂದ ಶುದ್ಧ ಕನ್ನಡ ಬಳಕೆಯನ್ನು ನಿರೀಕ್ಷಿಸುವುದು?

ಸಮ್ಮೇಳನ ಆರಂಭಕ್ಕೆ ಮುನ್ನ, ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಡಳಿತದಿಂದ ಆಹ್ವಾನ ಬಂದಿಲ್ಲವೆಂದು ಗುಲ್ಲೆಬ್ಬಿಸಿದ್ದರೆ, ಆ ಎಲ್ಲ ಸಂಘಟನೆಗಳವರಿಗೆ ಭಾಷಾಜ್ಞಾನ ಕುರಿತಂತೆ ಸ್ಪರ್ಧೆ ಏರ್ಪಡಿಸುವ ಮಾತನ್ನು ಜಿಲ್ಲಾಧಿಕಾರಿ ಆಡಿದ್ದರು. ಈಗ ಪರಿಷತ್ತಿನ ಪದಾಧಿಕಾರಿಗಳಿಗೇ ಭಾಷಾ ಪರೀಕ್ಷೆ ಏರ್ಪಡಿಸುವ ಸಂದಿಗ್ಧ ಬಂದಿದೆ! ಹತ್ತಿಪ್ಪತ್ತು ಕೋಟಿ ರೂಪಾಯಿ ಖರ್ಚು ಮಾಡಿ ಸಮ್ಮೇಳನ ನಡೆಸಿದ ಮಾತ್ರಕ್ಕೆ ಭಾಷೆ ಬೆಳೆಯುವುದಿಲ್ಲ. ಬದ್ಧತೆ, ಶ್ರದ್ಧೆ, ಆಸಕ್ತಿ ಇದ್ದರಷ್ಟೇ ಕನ್ನಡ ನುಡಿಯನ್ನು ಶುದ್ಧವಾಗಿ, ಸಮಗ್ರವಾಗಿ ಬೆಳೆಸಲು ಸಾಧ್ಯ. ಮುಂದಿನ ದಿನಗಳಲ್ಲಾದರೂ ಇಂತಹ ಪ್ರಮಾದಗಳು ಆಗದಂತೆ ಪರಿಷತ್‌ ನಿಗಾ ವಹಿಸಲಿ.

-ಡಾ. ಚೆನ್ನು ಅ. ಹಿರೇಮಠ, ರಾಣೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.