ಕಾಲೇಜು ಆವರಣದಲ್ಲಿ ಆಸ್ಪತ್ರೆ ಬೇಡ
ಬೆಂಗಳೂರಿನ ಹೆಬ್ಬಾಳದ ಪಶುವೈದ್ಯ ಕಾಲೇಜಿನ ಆವರಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಸಲುವಾಗಿ ನಗರಾಭಿವೃದ್ಧಿ ಸಚಿವರಿಂದ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆದಿದೆ. ಈ ಭಾಗದಲ್ಲಿ ಈಗಾಗಲೇ ಮೂರು ಬೃಹತ್ ಖಾಸಗಿ ಆಸ್ಪತ್ರೆಗಳಿವೆ. ಆದರೂ, ಮಲ್ಟಿ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ನಿರ್ಮಿಸುವ ಸಚಿವರ ಉದ್ದೇಶದ ಬಗ್ಗೆ ತಕರಾರಿಲ್ಲ. ಆದರೆ, ಉದ್ದೇಶಿತ ಆಸ್ಪತ್ರೆಯನ್ನು ಪಶುವೈದ್ಯ ಕಾಲೇಜಿನ ಆವರಣದಲ್ಲಿ ನಿರ್ಮಿಸುವುದು ಸೂಕ್ತವಲ್ಲ.
ವಿಧಾನಸೌಧದಿಂದ 7 ಕಿ.ಮೀ. ದೂರದಲ್ಲಿ ಪ್ರಶಾಂತ ವಾತಾವರಣದಲ್ಲಿರುವ ಪಶುವೈದ್ಯ ಕಾಲೇಜು ಬೆಂಗಳೂರು ಉತ್ತರ ಭಾಗದ ಪಾರಂಪರಿಕ ಕಟ್ಟಡವಾಗಿದೆ. ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಈ ಸಂಸ್ಥೆಯು, ಪಶುಪಾಲನೆ ಮತ್ತು ಪಶುವೈದ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದೆ. ಇದೇ ಆವರಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿದರೆ, ಆಸ್ಪತ್ರೆಗೆ ಬರುವ ರೋಗಿಗಳಿಗೂ ಪ್ರಾಣಿಗಳ ಮಾಲೀಕರಿಗೂ ಅನನುಕೂಲ. ಈ ಹಿಂದೆಯೂ ಕಾಲೇಜಿನ ಸ್ಥಳವನ್ನು ಖಾಸಗಿಯವರಿಗೆ ಹಸ್ತಾಂತರ ಮಾಡುವ ಪ್ರಯತ್ನ ನಡೆದು, ಅದಕ್ಕೆ ಪ್ರತಿಭಟನೆ ಎದುರಾಗಿತ್ತು. ಪಶುವೈದ್ಯ ಕಾಲೇಜು ಆವರಣದಲ್ಲಿ ಪಶುವೈದ್ಯ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆ, ಇತ್ಯಾದಿ ಚಟುವಟಿಕೆಗಳನ್ನು ಹೊರತುಪಡಿಸಿ ಅನ್ಯ ಕ್ಷೇತ್ರದ ಚಟುವಟಿಕೆಗಳಿಗೆ ಅವಕಾಶ ಬೇಡ.
- ಡಾ. ಟಿ. ಜಯರಾಂ, ಕೋಲಾರ
ಗಾಜಾದ ಸಂಕಟಕ್ಕೆ ವಿಶ್ವ ಕುರುಡು
‘ಗಾಜಾದ ಮಗುವಿಗೆ ಇಟಲಿಯಲ್ಲಿ ಚಿಕಿತ್ಸೆ’ (ಪ್ರ.ವಾ., ಸೆ. 7) ಸುದ್ದಿ, ನೋವಿನ ನಡುವೆಯೂ ಮಾನವೀಯತೆಯ ಕಿರಣದಂತೆ ಕಾಣಿಸಿತು. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಲಕ್ಷಾಂತರ ಮಕ್ಕಳು, ವೃದ್ಧರು, ರೋಗಿಗಳು ಅನುಭವಿಸುತ್ತಿರುವ ಬವಣೆ ಹೃದಯವಿದ್ರಾವಕ.
ಇಸ್ರೇಲ್ ದಾಳಿಯಿಂದ ಗಾಜಾ ನಗರ ನಾಶವಾಗಿದೆ, ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ. ಇಷ್ಟಾದರೂ ಇಸ್ರೇಲ್ ವಿರುದ್ಧ ವಿಶ್ವನಾಯಕರು ಮೌನವಾಗಿದ್ದಾರೆ. ಅರಬ್ ರಾಷ್ಟ್ರಗಳು ತುಟಿಬಿಚ್ಚಿಲ್ಲ. ಅಮೆರಿಕದ ಟ್ರಂಪ್ ಅವರ ಧ್ವನಿ ಯಾರಿಗೂ ಕೇಳಿಸದಷ್ಟು ಸೌಮ್ಯವಾಗಿದೆ! ವಿಶ್ವಸಂಸ್ಥೆಯು ಯಾವ ಉದ್ದೇಶಕ್ಕಾಗಿ ಸ್ಥಾಪನೆ ಆಯಿತೋ ಅರ್ಥವಾಗದ ಸ್ಥಿತಿಯಲ್ಲಿ ಜಗತ್ತು ಸಾಗುತ್ತಿದೆ. ನಿರಪರಾಧಿಗಳಾದ ಮಕ್ಕಳು ತುತ್ತು ಅನ್ನಕ್ಕಾಗಿ ಪರಿತಪಿಸುವ ದೃಶ್ಯಗಳನ್ನು ನೋಡಿದರೆ ವಿಶ್ವದ ಅಂತರಂಗದಿಂದ ಮಾನವೀಯತೆಯನ್ನು
ಅಳಿಸಿಹಾಕಿರುವಂತೆ ಭಾಸವಾಗುತ್ತದೆ.
- ತಿರುಪತಿ ನಾಯಕ್, ಕಲಬುರಗಿ
ಪ್ರಶಸ್ತಿಗೆ ಶಿಫಾರಸು–ಮನವಿ ಸಲ್ಲದು
ಪ್ರಶಸ್ತಿಯೊಂದಕ್ಕೆ ಗೌರವ ಸಿಗಬೇಕಾದರೆ, ಪ್ರಶಸ್ತಿಗೆ ಇರುವ ಮಾನದಂಡಗಳ ಮೂಲಕವೇ ಫಲಾನುಭವಿಗಳ ಆಯ್ಕೆ ನಡೆಯಬೇಕು. ಅದಕ್ಕೆ ಶಿಫಾರಸು, ಮನವಿ ಅಗತ್ಯವಿಲ್ಲ. ಯಾರದೋ ಆಗ್ರಹ–ಮನವಿಗೆ ದೊರೆಯುವಂತಾದರೆ ಪ್ರಶಸ್ತಿಗೆ ಗೌರವ ಸಿಗಲು ಹೇಗೆ ಸಾಧ್ಯ? ದಿವಂಗತ ನಟ ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಎಂದು ಚಲನಚಿತ್ರ ನಟಿಯರಾದ ಮಾಳವಿಕಾ, ಜಯಮಾಲಾ ಹಾಗೂ ಶ್ರುತಿ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಸಲ್ಲಿಸಿದ ಬೇಡಿಕೆ ನೋಡಿದಾಗ ಹೀಗನ್ನಿಸಿತು. ವಿಷ್ಣುವರ್ಧನ್ ಅವರು ಜೀವಂತವಾಗಿದ್ದಾಗ ಪ್ರಶಸ್ತಿ ದೊರೆತಿದ್ದರೆ ಅದಕ್ಕೆ ಅರ್ಥವಿರುತ್ತಿತ್ತು. ನಮ್ಮೊಂದಿಗೆ ಇಲ್ಲದಿರುವ ಸಾಧಕರಿಗೆ ಪ್ರಶಸ್ತಿ ನೀಡಿರೆಂದು ಒತ್ತಾಯಿಸುವುದು ಅಗಲಿದವರಿಗೆ ಗೌರವ ತರುವಂತಹದ್ದಲ್ಲ. ನಾಡು ಮೆಚ್ಚಿದ ಕಲಾವಿದನಿಗೆ ಪ್ರಶಸ್ತಿಯ ಹಂಗಾದರೂ ಎಲ್ಲಿ? ವಿಷ್ಣು ಅವರನ್ನು ಜನಮನದಲ್ಲಿ ಅರ್ಥಪೂರ್ಣವಾಗಿ ಉಳಿಸುವ ಕೆಲಸಕ್ಕೆ ಚಿತ್ರೋದ್ಯಮ ಮುಂದಾಗಬೇಕು.
- ವಿ.ಜಿ. ಇನಾಮದಾರ, ಸಾರವಾಡ
ಯಾವುದು ಗಂಭೀರ? ಯಾವುದು ಲಘು?
ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಲಘು ಸ್ವರೂಪದ ಪ್ರಕರಣಗಳನ್ನು ಗಂಭೀರವಾಗಿಯೂ, ಗಂಭೀರ ಸ್ವರೂಪದ ಪ್ರಕರಣಗಳನ್ನು ಲಘುವಾಗಿಯೂ ಪರಿಗಣಿಸುತ್ತಿರುವಂತಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿ ದಾಂಧಲೆ ಎಬ್ಬಿಸಿದ್ದ ಪ್ರಕರಣ ಸೇರಿದಂತೆ ರಾಜ್ಯದ ಬೇರೆಬೇರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಲವು ಪ್ರಕರಣಗಳನ್ನು ಹಿಂಪಡೆಯಲು ಇತ್ತೀಚಿನ ಸಚಿವ ಸಂಪುಟ ಸಭೆ ನಿರ್ಧರಿಸಿದೆಯಂತೆ! ಅವೆಲ್ಲವೂ ಗಂಭೀರ ಸ್ವರೂಪದ ಅಪರಾಧದ ಪ್ರಕರಣಗಳು. ಇನ್ನೊಂದೆಡೆ, ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ದಂಡವನ್ನು ಪೊಲೀಸರು ವಸೂಲು ಮಾಡುತ್ತಾ ಬೀಗುತ್ತಿದ್ದಾರೆ.
- ಪಿ.ಜೆ. ರಾಘವೇಂದ್ರ, ಮೈಸೂರು
ದಂಡ ಪಾವತಿ: ಮುಖ್ಯಮಂತ್ರಿ ಮಾದರಿ
ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ 2500 ರೂಪಾಯಿ ದಂಡ ಪಾವತಿ ಮಾಡಿದ್ದಾರೆ (ಪ್ರ.ವಾ., ಸೆ. 6). ಸಂಚಾರ ನಿಯಮ ಉಲ್ಲಂಘನೆ ಅಡಿಯಲ್ಲಿ ಮುಖ್ಯಮಂತ್ರಿ ಅವರ ಕಾನೂನು ಗೌರವಿಸುವ ಧೋರಣೆ ಮಾದರಿ ನಡೆಯಾಗಿದೆ. ಇದೇ ರೀತಿಯ ಉಲ್ಲಂಘನೆಯಾಗಿದ್ದಲ್ಲಿ ಉಳಿದ ಸಚಿವರು, ಅಧಿಕಾರಿ ವರ್ಗದವರು ಸ್ವಯಂಪ್ರೇರಣೆಯಿಂದ ದಂಡ ಕಟ್ಟಬೇಕು. ಅದು ಸಾಧ್ಯವಾದಲ್ಲಿ, ಕಾನೂನು ಪಾಲನೆ ಬಗ್ಗೆ ಜನಸಾಮಾನ್ಯರಿಗೂ ಪ್ರೇರಣೆ ದೊರೆಯುವಂತಾಗುತ್ತದೆ.
- ಡಿ. ಪ್ರಸನ್ನಕುಮಾರ್, ಬೆಂಗಳೂರು
ಗ್ರಹಣ
ಸೂರ್ಯ ಚಂದ್ರರ
ನಡುವೆ ಭೂಮಿ ಬಂದರೆ
ಚಂದ್ರಗ್ರಹಣ!
ಭಾರತ–ರಷ್ಯಾ ನಡುವೆ
ಅಮೆರಿಕ ಬಂದರೆ
‘ಸುಂಕ’ಗ್ರಹಣ!
- ಮ.ಗು. ಬಸವಣ್ಣ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.