ವಾಚಕರ ವಾಣಿ
ದುಬಾರಿ ಸ್ಟ್ಯಾಂಪ್; ಶಿಕ್ಷಕರು ಕಕ್ಕಾಬಿಕ್ಕಿ
ಪ್ರತಿವರ್ಷ ಶಿಕ್ಷಕರಿಗೆ ‘ಶಿಕ್ಷಕರ ದಿನಾಚರಣೆ’ಯ ಶುಭಾಶಯ ಇರುವ ಸ್ಟ್ಯಾಂಪ್ ಖರೀದಿಸಲು ನೀಡಲಾಗುತ್ತದೆ. ಎರಡು ವರ್ಷದ ಹಿಂದೆ ₹40 ಇದ್ದ ಇದರ ಬೆಲೆ ಈ ವರ್ಷ ₹200ಕ್ಕೇರಿದೆ. ಈ ಬೆಲೆ ನೋಡಿದಾಗ ಇದರ ಅಗತ್ಯವಾದರೂ ಏನು? ಇದರ ಬೆಲೆ ನಿರ್ಧರಿಸುವವರು ಯಾರು? ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಖರೀದಿ ಕಡ್ಡಾಯ ಮಾಡಿರುವುದು ಹಾಗೂ ಅದರಿಂದ ಸಂಗ್ರಹವಾಗುವ ಮೊತ್ತವನ್ನು ಅವರ ಕಲ್ಯಾಣಕ್ಕೆ ಬಳಸಿಕೊಳ್ಳುವುದೇನೋ ಸರಿ. ಆದರೆ, ಅನುದಾನರಹಿತ ಶಾಲಾ–ಕಾಲೇಜಿನ ಶಿಕ್ಷಕರ ವೇತನ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಶಿಕ್ಷಕರೂ ಸ್ಟ್ಯಾಂಪ್ ಖರೀದಿಸಬೇಕು ಎಂದು ಕಡ್ಡಾಯಗೊಳಿಸುವುದು ಸರಿಯಲ್ಲ.
– ಅಜಯ್ ಕುಮಾರ್, ಬೆಂಗಳೂರು
ನಕಲಿ ವೈದ್ಯರಿಗೆ ಲಗಾಮು ಏಕಿಲ್ಲ?
‘ರಾಜ್ಯದಲ್ಲಿ ನಕಲಿ ವೈದ್ಯರ ಜಾಲ’ ಸುದ್ದಿ (ಪ್ರ.ವಾ., ಸೆಪ್ಟೆಂಬರ್ 8) ಓದಿ ಗಾಬರಿಯಾಯಿತು. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನಕಲಿ ವೈದ್ಯರಿದ್ದಾರೆ. ಮಾನವನ ಅಭಿವೃದ್ಧಿಯಲ್ಲಿ ಆರೋಗ್ಯ ಸೂಚ್ಯಂಕಕ್ಕೆ ಪ್ರಧಾನ ಸ್ಥಾನ. ಈಗಾಗಲೇ, ಈ ಸೂಚ್ಯಂಕದಲ್ಲಿ ಜಿಲ್ಲೆಯು ಹಿಂದುಳಿದಿದೆ. ನಕಲಿ ವೈದ್ಯರಿಂದ ಜಿಲ್ಲೆಯ ಆರೋಗ್ಯ ಮಟ್ಟ ಮತ್ತಷ್ಟು ಹದಗೆಡಲಿದೆ. ನಕಲಿ ವೈದ್ಯರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ.
– ಡಾ. ಗಾನ ಶ್ರುತಿ ಎಂ.ಕೆ., ಬೀದರ್
ಸರಳತೆ ಮರೆತ ಯುವಜನ
ನಮ್ಮ ಬಡಾವಣೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ತಯಾರಿ ನಡೆಯುತ್ತಿತ್ತು. ನಾನು ₹200 ಕಾಣಿಕೆ ನೀಡಿದೆ. ಬಳಿಕ ಪ್ರತಿಷ್ಠಾಪನೆಗೆ ಎಷ್ಟು ಖರ್ಚಾಗುತ್ತದೆಂದು ಕುತೂಹಲದಿಂದ ಕೇಳಿದೆ. ಪೆಂಡಾಲ್, ಲೈಟಿಂಗ್‌ಗೆ ₹30 ಸಾವಿರ, ಗಣೇಶನ ವಿಗ್ರಹಕ್ಕೆ ₹30 ಸಾವಿರ ವೆಚ್ಚವಾಗುತ್ತದೆ. ವಿಸರ್ಜನೆ ವೇಳೆ ಪಟಾಕಿ, ಅಲಂಕಾರ ವೆಚ್ಚವು ಇದಕ್ಕಿಂತ ಹೆಚ್ಚಿರುತ್ತದೆ ಎಂದು ಪ್ರತಿಷ್ಠಾಪನಾ ಮಂಡಳಿಯ ಸದಸ್ಯನೊಬ್ಬ ಉತ್ತರಿಸಿದ. ಬಳಿಕ ₹1 ಸಾವಿರ ನೀಡಿ ಮನೆಗೆ ಬಂದೆ. ಸಣ್ಣ ಗಣಪತಿ ಕೂರಿಸಲು ಇಷ್ಟು ವೆಚ್ಚವಾಗುವುದಾದರೆ ದೊಡ್ಡ ಮೂರ್ತಿಯ ಪ್ರತಿಷ್ಠಾಪನೆಗೆ ಸಮಿತಿಯವರು ಎಷ್ಟು ಹಣ ಸಂಗ್ರಹಿಸುತ್ತಾರೆ ಎಂಬುದನ್ನು ಊಹಿಸಲಾರದೆ ಹೋದೆ. ಯುವಜನರಲ್ಲಿ ಸರಳತೆ ಮರೆಯಾಗಿರುವುದು ಮನದಟ್ಟಾಯಿತು.
– ಬಾಲಕೃಷ್ಣ ಎಂ.ಆರ್., ಬೆಂಗಳೂರು
ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ
ದಾವಣಗೆರೆ ವಿಶ್ವವಿದ್ಯಾಲಯವು ಕಳೆದ ಜುಲೈನಲ್ಲಿ ಸ್ನಾತಕ ಪದವಿಯ ಆರನೇ ಸೆಮಿಸ್ಟರ್ ಪರೀಕ್ಷೆಯ ಮೌಲ್ಯಮಾಪನ ಮುಗಿದ ಕೇವಲ ಎರಡು ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿತ್ತು. ತುಮಕೂರು ವಿ.ವಿ. ಕೂಡ ಕ್ಷಿಪ್ರವಾಗಿ ಪದವಿ ಫಲಿತಾಂಶ ಹಾಗೂ ಉನ್ನತ ಶ್ರೇಣಿಗಳನ್ನು ಪ್ರಕಟಿಸಿದೆ. ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟಣೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಮಾತ್ರ ಕಳೆದ ವರ್ಷ ನಡೆದ ಸ್ನಾತಕ ಪದವಿ ಪರೀಕ್ಷೆಗಳ ರ‍್ಯಾಂಕ್‌ಗಳನ್ನು ಒಂದು ವರ್ಷವಾದರೂ ಪ್ರಕಟಿಸಿಲ್ಲ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಹಿನ್ನಡೆಯ ದಾಖಲೆ ಆಗಬಹುದೇನೊ! ಕಳೆದ ವರ್ಷ ಪದವಿ ಪಾಸಾಗಿ ಮೊದಲ ವರ್ಷದ ಸ್ನಾತಕೋತ್ತರ ಪದವಿ ಮುಗಿಸಿರುವ ಈ ವಿದ್ಯಾರ್ಥಿಗಳು ಇದೀಗ ಕೊನೆಯ ವರ್ಷದ ಶೈಕ್ಷಣಿಕ ವರ್ಷಕ್ಕೆ ಬಂದಿರುತ್ತಾರೆ. ಆದರೂ, ವಿ.ವಿ. ಆಡಳಿತ ವರ್ಗ ಯಾವುದೇ ಕ್ರಮಕೈಗೊಳ್ಳದೆ ಮೌನವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ವಿ.ವಿ.ಯ ಈ ಚೆಲ್ಲಾಟ ಅಮಾನವೀಯ.
– ನೊಂದ ಪೋಷಕರು, ಶಿವಮೊಗ್ಗ
ವಿದ್ಯುತ್ ಇಲ್ಲದೆ ಪೇಚಾಟ
ಸುಪ್ರೀಂ ಕೋರ್ಟ್ ಆದೇಶದನ್ವಯ ಕಟ್ಟಡದ ಸ್ವಾಧೀನಾನುಭವ ಪತ್ರ (ಒಸಿ) ಇಲ್ಲದಿರುವ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ. ಒಸಿ ಹಾಜರುಪಡಿಸಿದವರಿಗೆ ಸಂಪರ್ಕ ಕಲ್ಪಿಸುವಂತೆ ಕೋರ್ಟ್‌ನ ನಿರ್ದೇಶನವಿದೆ. ಆದರೂ, ಸಂಬಂಧಪಟ್ಟ ಇಲಾಖೆಯು ಇದಕ್ಕೆ ಕಿವಿಗೊಡುತ್ತಿಲ್ಲ. ನಾಲ್ಕು ತಿಂಗಳಿಂದಲೂ ನಮ್ಮ ಮನೆಯ ಗೃಹಪ್ರವೇಶ ಮಾಡಲಾರದೆ ಪರದಾಡುವಂತಾಗಿದೆ. ರಾಜ್ಯ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ.
– ನಂಜನಹಳ್ಳಿ ನಾರಾಯಣ, ಬೆಂಗಳೂರು
ತಗ್ಗಿದ ಜೇಬಿನ ಹೊರೆ
ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ಹಂತಗಳನ್ನು ಪರಿಷ್ಕರಿಸಿರುವುದು ಒಳ್ಳೆಯ ನಿರ್ಧಾರ. ಇದು ಪುರೋಗಾಮಿ ತೆರಿಗೆ ಮತ್ತು ಪ್ರತಿಗಾಮಿ ತೆರಿಗೆಯ ಸಮ್ಮಿಶ್ರಣ ಎನ್ನಬಹುದು. ದೇಶದ ಆರ್ಥಿಕ ವ್ಯವಸ್ಥೆಯಲ್ಲಿನ ಹೂಡಿಕೆ, ಉತ್ಪಾದನೆ, ಆದಾಯ ಮುಂತಾದ ಚಟುವಟಿಕೆಗಳು ಸಮಗ್ರ ಬೇಡಿಕೆಯನ್ನು ಅವಲಂಬಿಸಿರುತ್ತವೆ. ತೆರಿಗೆ ದರದಲ್ಲಿನ ಇಳಿಕೆಯು ಜನರು ವಿನಿಯೋಗಿಸಬಹುದಾದ ಆದಾಯವನ್ನು ಹೆಚ್ಚಿಸುತ್ತದೆ. ಈ ಆದಾಯದಲ್ಲಿನ ಹೆಚ್ಚಳವು ಬೇಡಿಕೆ ಹೆಚ್ಚಳಕ್ಕೆ ನೆರವಾಗುತ್ತದೆ. ಬೇಡಿಕೆ ಹೆಚ್ಚಳವು ಆರ್ಥಿಕತೆಯಲ್ಲಿನ ಹೂಡಿಕೆ, ಉತ್ಪಾದನೆ, ವಿನಿಮಯ, ವಿತರಣೆಗೆ ಬಲ ನೀಡುತ್ತದೆ. ಈ ದಿಸೆಯಲ್ಲಿ ಜಿಎಸ್‌ಟಿ ಸ್ಲ್ಯಾಬ್‌ಗಳ ಪರಿಷ್ಕರಣೆಯು ದೇಶದ ಸಮಗ್ರ ಆರ್ಥಿಕ ಬೆಳವಣಿಗೆಗೆ ಇಂಬು ನೀಡಲಿದೆ.
– ನಿರ್ಮಲಾ ನಾಗೇಶ್, ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.