ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 23:30 IST
Last Updated 10 ಸೆಪ್ಟೆಂಬರ್ 2025, 23:30 IST
   

ಯುವಕ್ರಾಂತಿ: ಭಾರತಕ್ಕೆ ಎಚ್ಚರಿಕೆ ಗಂಟೆ

ನೇಪಾಳದ ಜನಕ್ರಾಂತಿಯಿಂದ ಭಾರತ ಎಚ್ಚೆತ್ತುಕೊಳ್ಳಬೇಕಿದೆ. ಈ ಹಿಂದೆ ಶ್ರೀಲಂಕಾ, ಬಾಂಗ್ಲಾದೇಶದಲ್ಲಿಯೂ ಜನಕ್ರಾಂತಿ ನಡೆದ ನಿದರ್ಶನಗಳು ಕಣ್ಣಮುಂದಿವೆ. ಈ ಜನಕ್ರಾಂತಿಗಳು ಭಾರತದ ಪಾಲಿಗೆ ಎಚ್ಚೆತ್ತುಕೊಳ್ಳಬೇಕಾದ ಕರೆಗಂಟೆಯಂತಿವೆ. ನಮ್ಮಲ್ಲೂ ಭ್ರಷ್ಟಾಚಾರ ಮಿತಿಮೀರಿದೆ. ಬಹುತೇಕ ಕಡುಭ್ರಷ್ಟ ರಾಜಕಾರಣಿಗಳು, ಅವರಿಗೆ ಆಸರೆಯಾಗಿ ನಿಂತ ಅಧಿಕಾರ ವರ್ಗ. ಶಾಸಕ, ಸಂಸದ, ಸಚಿವ ಮಹೋದಯರು ಚುನಾವಣೆಗೆ ಸ್ಪರ್ಧಿಸಲು, ಗೆಲ್ಲಲು ಮತ್ತು ಅಧಿಕಾರ ಉಳಿಸಿಕೊಳ್ಳಲು ಕುಟುಂಬವನ್ನು ಮತ್ತು ಹಿಂಬಾಲಕರನ್ನು ಆರ್ಥಿಕವಾಗಿ ಬೆಳೆಸಲು ರಾಜಾರೋಷವಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಎಲ್ಲರಿಗೂ ತಿಳಿದಿದೆ. ಲೋಕಪಾಲ, ಲೋಕಾಯುಕ್ತರ ಜೊತೆಗೆ ಆರ್‌ಟಿಐ, ಸಕಾಲ, ಭೂಮಿ, ಕಾವೇರಿ ಇತ್ಯಾದಿ ತಂತ್ರಾಂಶಗಳಿದ್ದರೂ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯವಾಗಿಲ್ಲ. ಜನ ತಾಳ್ಮೆ ಕಳೆದುಕೊಳ್ಳುವ ಮೊದಲು ರಾಜಕಾರಣಿಗಳು ಮತ್ತು ಅಧಿಕಾರ ವರ್ಗ ಬದಲಾಗಬೇಕು. ‘ಕಾಯಕವೇ
ಕೈಲಾಸ’ ತತ್ವದಡಿ ಕರ್ತವ್ಯ ನಿರ್ವಹಿಸಿದರೆ ಜನಾಕ್ರೋಶ ಮತ್ತು ಜನಕ್ರಾಂತಿಯನ್ನು ತಡೆಗಟ್ಟಬಹುದು.

– ಕೃ.ಪ. ಗಣೇಶ, ಮೈಸೂರು

ADVERTISEMENT

ಸೌಹಾರ್ದದ ಪಾದಯಾತ್ರೆ ನಡೆಸಲಿ

‘ಕೋಮು ರಾಜಕೀಯದ ವಿರುದ್ಧ ಸಾಮರಸ್ಯದ ಸಹಪಯಣ ಅಗತ್ಯ’ ಶೀರ್ಷಿಕೆಯ ಸಂಪಾದಕೀಯ ಅರ್ಥಪೂರ್ಣವಾಗಿದೆ (ಪ್ರ.ವಾ., ಸೆಪ್ಟೆಂಬರ್‌ 10). ಕೋಮುಸೌಹಾರ್ದ ಕಾಪಾಡುವ ಪಯಣವನ್ನು ಸರ್ಕಾರವೇ ಏಕೆ ಆರಂಭಿಸಬಾರದು? ನಾಡಿನ ಪರಂಪರೆಯಲ್ಲಿ ಕಾಲಕಾಲಕ್ಕೆ ಸಾಮಾಜಿಕ ಬಿಕ್ಕಟ್ಟುಗಳು
ಎದುರಾದಾಗಲೆಲ್ಲ ಸಾಧು-ಸಂತರು, ಕವಿಗಳು, ಅರಸರು ಮುಂದೆಬಂದು ಕೋಮುಸೌಹಾರ್ದ ಕಾಪಾಡಿದ ಚರಿತ್ರೆಯೇ ಇದೆ. ಈಗಲೂ ಸಾಹಿತಿಗಳು, ಸಿನಿಮಾ ನಟರು, ನಾಟಕಕಾರರು, ಮಠಾಧೀಶರು ಸೇರಿದಂತೆ ಸಾಮಾಜಿಕ ಕಾಳಜಿ ಹೊಂದಿರುವವರು ಸಾಕಷ್ಟಿದ್ದಾರೆ. ಅವರನ್ನೊಳಗೊಂಡ ಒಂದು ಪಾದಯಾತ್ರೆಯನ್ನು ನಾಡಿನಾದ್ಯಂತ ಸರ್ಕಾರ ಆಯೋಜಿಸಲಿ.

– ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ಮಾನವೀಯ ಪರಿಹಾರ ಬೇಕು

ಯುಜಿಸಿ ಅರ್ಹತೆ ಹೊಂದಿದವರನ್ನು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಆಯ್ಕೆ ಮಾಡುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಯುಜಿಸಿ ನಿಗದಿಪಡಿಸಿದ ಸೇವಾ ಅರ್ಹತೆ ಪಡೆಯದಿರುವುದು ಲೋಪವೇನೋ ಹೌದು. ಆದರೆ, ಹದಿನೈದು ಇಪ್ಪತ್ತು ವರ್ಷಗಳಿಂದ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿದ ಯುಜಿಸಿ ಅರ್ಹತೆ ಪಡೆಯದ ಸಾವಿರಾರು ಅತಿಥಿ ಉಪನ್ಯಾಸಕರನ್ನು ಹಾಗೂ ಅವರನ್ನು ನಂಬಿದ ಕುಟುಂಬದವರನ್ನು ಬೀದಿಪಾಲು ಮಾಡುವುದು ಅತ್ಯಂತ ಅಮಾನವೀಯ. ಸರ್ಕಾರ ಈ ಕುರಿತು ಮಾನವೀಯವಾಗಿ ಯೋಚಿಸಬೇಕು. ಯಾರ ಬದುಕಿಗೂ ಧಕ್ಕೆಯಾಗದ ರೀತಿಯಲ್ಲಿ ಪರಿಹಾರ ಮಾರ್ಗ ಕಂಡುಕೊಂಡು ಸಮಸ್ಯೆ ಬಗೆಹರಿಸಬೇಕು.

– ಸರ್ಜಾಶಂಕರ ಹರಳಿಮಠ, ಶಿವಮೊಗ್ಗ

ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ

ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಬನ್ನಿ ಮಂಟಪದಲ್ಲಿ ಪ್ರಪ್ರಥಮ ಬಾರಿಗೆ ಏರ್‌ ಶೋ ನಡೆಯುತ್ತಿರುವುದು ಸಂತಸದ ವಿಷಯ. ಮುನ್ನೆಚ್ಚರಿಕೆ ಕ್ರಮವಾಗಿ ನೂಕುನುಗ್ಗಲು ತಪ್ಪಿಸಲು ಪ್ರದರ್ಶನಕ್ಕೆ ಪಾಸ್ ವಿತರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ರಾಜ್ಯದ ಶಾಲಾ ಹಾಗೂ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಪ್ರದರ್ಶನ ವೀಕ್ಷಿಸಲು ಪ್ರತ್ಯೇಕವಾಗಿ ಅವಕಾಶ ಮಾಡಿಕೊಡಬೇಕಿದೆ.   

– ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ಶಿಕ್ಷಕ ಆಕಾಂಕ್ಷಿಗಳ ಗೋಳು

ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರತಿವರ್ಷ ಅತಿಥಿ ಶಿಕ್ಷಕರ ನೇಮಕಕ್ಕೆ ಆಸ್ಥೆವಹಿಸುವ ಸರ್ಕಾರ ನೇರ ನೇಮಕಾತಿಗೆ ಮುಂದಾಗುತ್ತಿಲ್ಲ. 2025-26ನೇ ಸಾಲಿಗೂ ಸುಮಾರು 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದೆ. ಮುಂದಿನ ವರ್ಷದ ಮಾರ್ಚ್‌ಗೆ ಇಷ್ಟೂ ಶಿಕ್ಷಕರನ್ನು ಬಿಡುಗಡೆ ಮಾಡುತ್ತದೆ. ಅತಿಥಿ ಶಿಕ್ಷಕರಿಗೆ ಪ್ರಾಥಮಿಕ ಶಾಲೆಗೆ ಮಾಸಿಕ ₹12 ಸಾವಿರ ಮತ್ತು ಪ್ರೌಢಶಾಲೆಗೆ ₹12,500 ನಿಗದಿ ಮಾಡಿದೆ. ಬೆಲೆ ಏರಿಕೆಯ ದಿನಮಾನಗಳಲ್ಲಿ ಇಷ್ಟು ಸಂಬಳಕ್ಕೆ ಸಂಸಾರದ ನೊಗ ಎಳೆಯಲು ಸಾಧ್ಯವೇ?

ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ದಿನವೊಂದಕ್ಕೆ ₹524 ದಿನಗೂಲಿ ನಿಗದಿಪಡಿಸಲಾಗಿದೆ. ಜೈಲಿನಲ್ಲಿ ಇರುವ ಕೈದಿಗಳ ದಿನಗೂಲಿಗಿಂತ ಅತಿಥಿ ಶಿಕ್ಷಕರ ಗೌರವಧನ ಕಡಿಮೆ ಇರುವುದು ವ್ಯಂಗ್ಯವೇ ಸರಿ. ಕಾಯಂ ಶಿಕ್ಷಕರಿಲ್ಲದೆ ಮಕ್ಕಳ ಶಿಕ್ಷಣ ಅಡಕತ್ತರಿಗೆ ಸಿಲುಕಿದೆ. ಶೀಘ್ರವೇ, ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಬೇಕಿದೆ.

– ದುರಗಪ್ಪ ಬಂಡೇಭಾವಿ, ಲಿಂಗಸುಗೂರು  

ದಸರಾ ಆಚರಣೆ ಯಾರದ್ದು?

ನವರಾತ್ರಿ, ಆಯುಧಪೂಜೆ, ವಿಜಯದಶಮಿ... ಎಲ್ಲಕ್ಕೂ ಧಾರ್ಮಿಕ ಹಿನ್ನೆಲೆ ಇದೆಯಲ್ಲವೇ? ಹತ್ತನೇ ದಿನದ ಚಾಮುಂಡೇಶ್ವರಿ ಮೆರವಣಿಗೆಯೇ ದಸರಾ ಉತ್ಸವ. ಇದು ಸಂಪೂರ್ಣವಾಗಿ ಹಿಂದೂ ಸಂಪ್ರದಾಯದ ಆಚರಣೆ. ದಸರಾ ಹಿಂದೂಗಳಿಗೆ ಸಂಬಂಧಿಸಿದ್ದಲ್ಲ ಎಂದು ಹೇಳುವುದು ಹೇಗೆ?

– ಅ.ನಾ. ರಾವ್ ಜಾದವ್, ಬೆಂಗಳೂರು

ಪ್ರಾರ್ಥನೆ

ಬೆನಕ

ನಿನ್ನ ಕಳಿಸಲು

ಎಷ್ಟು ಅಡ್ಡಿ ಆತಂಕ!

ಕೋಮು ಎಂಬ

ಭಯಂಕರ ನಾಟಕ!

ವಿಘ್ನನಿವಾರಕ,

ಕರುಣಿಸು ಶಾಂತಿ

ಸಮತೆಯ ಕರ್ನಾಟಕ!

ವಿಜಯ ಚಂದ್ರಶೇಖರ್, ದಾವಣಗೆರೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.