ಸಕ್ಕರೆ ಬೆಲೆ: ಜನಹಿತದ ಅಂಕುಶ ಅಗತ್ಯ
ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಕೆ.ಜಿ.ಗೆ ₹31ರಿಂದ ₹40ಕ್ಕೆ ಹೆಚ್ಚಿಸಬೇಕೆನ್ನುವುದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಒಕ್ಕೂಟದ ಒತ್ತಾಯ. ಈ ಬಗ್ಗೆ ಪರಿಶೀಲಿಸುವುದಾಗಿ ಕೇಂದ್ರ ಆಹಾರ ಸಚಿವರು ಹೇಳಿದ್ದಾರೆ. ಕೆಲವು ತಿಂಗಳ ಹಿಂದೆ ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹40ರಿಂದ ₹42 ಇದ್ದ ಸಕ್ಕರೆ ಬೆಲೆ ಈಗ ₹45ರಿಂದ ₹46ಕ್ಕೆ ಮುಟ್ಟಿದೆ. ಸರ್ಕಾರವು ಏಕಾಏಕಿ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸಲು ಒಪ್ಪಿದರೆ, ಸಕ್ಕರೆ ಬೆಲೆ ₹56ರಿಂದ ₹60ಕ್ಕೆ ಜಿಗಿಯುವ ಸಂಭವವಿದೆ. ಹಾಗಾಗಿ, ಒಕ್ಕೂಟದ ಹಿತಕಾಯುವ ಆತುರದಲ್ಲಿ ಗ್ರಾಹಕರ ಬಗೆಗಿನ ಕಾಳಜಿಯನ್ನೂ ಮರೆಯಬಾರದು.
- ಮುಳ್ಳೂರು ಪ್ರಕಾಶ್, ಮೈಸೂರು
ಕುರುಡು ಕಾಂಚಾಣದ ಬೆನ್ನತ್ತಿದ ಬಿಸಿಸಿಐ
ಪಾಕಿಸ್ತಾನ ಪ್ರಚೋದಿತ ಉಗ್ರರ ಅಟ್ಟಹಾಸ ಭಾರತದಲ್ಲಿ ನಿಂತಿಲ್ಲ. ದೆಹಲಿಯ ಕೆಂಪುಕೋಟೆ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣ ಇನ್ನೂ ಜನರ ಮನದಲ್ಲಿ ಹಸಿರಾಗಿಯೇ ಇದೆ. ಹಾಗಾಗಿ, ಪಾಕಿಸ್ತಾನದ ಕ್ರಿಕೆಟ್ ತಂಡದ ಜೊತೆಗಿನ ಕ್ರೀಡಾ ಸಂಬಂಧಕ್ಕೆ ಸಂಪೂರ್ಣ ನಿರ್ಬಂಧ ಹೇರುವುದು ಹಿತಕರ. ಆದರೆ, ಬಾಂಬ್ ಸ್ಫೋಟಕ್ಕೆ ಸಿಲುಕಿದ ಸಂತ್ರಸ್ತರು ಮತ್ತು ದೇಶದ ಜನರ ಭಾವನೆಗಳಿಗೆ ಬೆಲೆ ಕೊಡದೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕುರುಡು ಕಾಂಚಾಣದ ಬೆನ್ನುಹತ್ತಿರುವುದು ದುರದೃಷ್ಟಕರ.
- ಆರ್.ಟಿ. ಶರಣ್, ಕಲಬುರಗಿ
ಹಸೀನಾ ಹಸ್ತಾಂತರ ಮಾಡುವುದು ಬೇಡ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಮರಣದಂಡನೆ ವಿಧಿಸಿದೆ. ಇದು ರಾಜಕೀಯ ದ್ವೇಷ ಸಾಧನೆಯೇ ಹೊರತು, ಸಹಜ ನ್ಯಾಯ ಅಲ್ಲ. ಬಾಂಗ್ಲಾದ ಕೋರಿಕೆ ಮೇರೆಗೆ ಹಸೀನಾ ಅವರನ್ನು ಹಸ್ತಾಂತರಿಸಬಾರದು. ಈ ಹಿಂದೆ ಭಾರತವು ಪಾರ್ಸಿಗಳು ಮತ್ತು ಬೌದ್ಧರಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದಿದೆ. ಮಾನವೀಯತೆಯೇ ಪರಮ ಧರ್ಮ ಎಂಬುದನ್ನು ಜಗತ್ತಿಗೆ ಸಾರಬೇಕು.
- ಚಂದ್ರಶೇಖರ ಎಚ್.ಎಸ್., ಬೆಂಗಳೂರು
ಕಣ್ಣುಕುಕ್ಕುವ ವಿಡಿಯೊ ಪರದೆ ನಿರ್ಬಂಧಿಸಿ
ಪ್ರಸ್ತುತ ಹಲವು ಕಂಪನಿಗಳು ವಿಡಿಯೊ ಜಾಹೀರಾತು ಕಾರ್ಯತಂತ್ರಕ್ಕೆ ಒತ್ತು ನೀಡುತ್ತಿವೆ. ಮಾರುಕಟ್ಟೆಯಲ್ಲಿ ಹೊಸತನ ಮತ್ತು ವರ್ಚಸ್ಸು ಬೆಳೆಸಿಕೊಳ್ಳುವುದು ಇದರ ಹಿಂದಿರುವ ಉದ್ದೇಶ. ಈಗ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಎಲ್ಲೆಂದರಲ್ಲಿ ಜಾಹೀರಾತು ಪ್ರದರ್ಶಿಸುವ ವಿಡಿಯೊ ಪರದೆಗಳು ತಲೆಎತ್ತುತ್ತಿದ್ದು, ಬೆಳಕಿನ ಮಾಲಿನ್ಯವನ್ನು ಸೃಷ್ಟಿಸುತ್ತಿವೆ. ಮೊದಲೇ ಹೈಬೀಮ್ ಲೈಟ್ ಬಳಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿದೆ. ಸಿಗ್ನಲ್‌ಗಳ ಬಳಿ ಅಳವಡಿಸಿರುವ ಕಣ್ಣು ಕೋರೈಸುವ ವಿಡಿಯೊ ಪರದೆಗಳಿಂದ ನಾಗರಿಕರು ರಸ್ತೆ ದಾಟಲೂ ತೊಂದರೆ ಅನುಭವಿಸುವಂತಾಗಿದೆ. ಇದು ದೊಡ್ಡ ಪಿಡುಗಾಗುವ ಮೊದಲೇ, ರಾಜ್ಯ ಸರ್ಕಾರ ಹೊಸ ಜಾಹೀರಾತು ನೀತಿಯನ್ನು ರೂಪಿಸಬೇಕಿದೆ.
- ಶ್ರೀರಾಮ ಶಾಸ್ತ್ರಿ, ಬೆಂಗಳೂರು
‘ಜನಶತಾಬ್ದಿ’ಯ ಮಂದಗತಿ ಪ್ರಯಾಣ!
ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಡುವ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಬೆಳಿಗ್ಗೆ 11.14 ಗಂಟೆಗೆ ಹಾವೇರಿಯನ್ನು, ಮಧಾಹ್ನ 1.10 ಗಂಟೆಗೆ ಹುಬ್ಬಳ್ಳಿಯನ್ನು ತಲುಪುತ್ತದೆ. ಪ್ರತಿ ಗಂಟೆಗೆ ಸರಾಸರಿ 76.65 ಕಿ.ಮೀ. ವೇಗದಲ್ಲಿ ಬೆಂಗಳೂರಿನಿಂದ ಹಾವೇರಿಗೆ 394 ಕಿ.ಮೀ. ಅಂತರ ಕ್ರಮಿಸಲು ಅದು ತೆಗೆದುಕೊಳ್ಳುವ ಸಮಯ 5.14 ಗಂಟೆ. ಅದೇ ರೈಲು ಪ್ರತಿ ಗಂಟೆಗೆ 48.38 ಕಿ.ಮೀ. ವೇಗದಲ್ಲಿ ಹಾವೇರಿಯಿಂದ ಹುಬ್ಬಳ್ಳಿಗೆ 75 ಕಿ.ಮೀ. ಅಂತರ ಕ್ರಮಿಸಲು ತೆಗೆದುಕೊಳ್ಳುವ ಸಮಯ 1.55 ಗಂಟೆ! ಹಾವೇರಿಯಿಂದ ಹುಬ್ಬಳ್ಳಿಗೂ ಗಂಟೆಗೆ 76.65 ಕಿ.ಮೀ. ವೇಗದಲ್ಲಿ ಚಲಿಸಿದರೆ ಕೇವಲ 6.11 ಗಂಟೆಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ತಲುಪುವ ಸಾಮರ್ಥ್ಯ ಈ ರೈಲಿಗಿದ್ದರೂ, ವಾಸ್ತವದಲ್ಲಿ 7.10 ಗಂಟೆ ತೆಗೆದುಕೊಳ್ಳುತ್ತದೆ. 2002ರ ನವೆಂಬರ್ 24ರಂದು ತನ್ನ ಮೊದಲ ಪ್ರಯಾಣ ಆರಂಭಿಸಿದ ಈ ರೈಲಿಗೆ ಇದೇ 24ಕ್ಕೆ 23 ವರ್ಷ ತುಂಬುವ ಸಂದರ್ಭದಲ್ಲೂ, ಅದರ ವೇಗ ಹೆಚ್ಚಾಗಿಲ್ಲ ಎನ್ನುವುದು ವಿಪರ್ಯಾಸ.
- ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.