ವಾಚಕರ ವಾಣಿ
ಹುಬ್ಬಳ್ಳಿ ತಾಲ್ಲೂಕಿನಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅನ್ಯಜಾತಿ ಅನ್ನುವ ಕಾರಣಕ್ಕೆ ಹೆತ್ತ ಮಗಳನ್ನೇ ಕೊಲ್ಲುವುದು ಎಷ್ಟು ಸರಿ? ಇದರಲ್ಲಿ ಹಲವು ಸೂಕ್ಷ್ಮಗಳನ್ನು ಗಮನಿಸಬೇಕಾಗುತ್ತದೆ. ಅನ್ಯಜಾತಿಯ ಯುವಕನನ್ನು ಮದುವೆಯಾದ ಮಗಳನ್ನು ಕೊಂದೆ ಎಂದು ತನ್ನ ಜಾತಿಯವರೊಂದಿಗೆ ಹೆಮ್ಮೆಯಿಂದ ಹೇಳಿಕೊಳ್ಳಬೇಕು ಅನ್ನುವ ವಿಕೃತ ಮನಸ್ಸು; ನಾನು ಹುಟ್ಟಿಸಿದ ಮಗಳು. ನನಗೆ ಕೊಲ್ಲುವ ಹಕ್ಕಿದೆ ಎನ್ನುವ ಅಜ್ಞಾನದ ಪರಮಾವಧಿ. ಅಥವಾ ಅವಳು ಹೆಣ್ಣಾಗಿರುವುದರಿಂದ ಅವಳನ್ನು ಏನು ಬೇಕಾದರೂ ಮಾಡಬಹುದು ಎನ್ನುವ ದುರುಳ ಧೋರಣೆಯೂ ಇರಬಹುದು. ಇವೆಲ್ಲದರ ಹಿಂದೆ ಕಾಣದ ಕೈಯಂತೆ ಕೆಲಸ ಮಾಡುತ್ತಿರುವುದು ಪುರುಷ ಪ್ರಧಾನ ಜಾತಿ ವ್ಯವಸ್ಥೆ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವುದೇ ಮರ್ಯಾದೆಗೇಡು ಹತ್ಯೆ ತಡೆಗಿರುವ ಪರಿಹಾರ.
– ಸೋಮಶೇಖರ ಯು.ಟಿ., ಮೈಸೂರು
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಮಲತಾಯಿ ಧೋರಣೆಯನ್ನು ಸಂಪಾದಕೀಯದಲ್ಲಿ (ಪ್ರ.ವಾ., ಜ. 26) ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಈ ಧೋರಣೆಯು ಜನರ ಸಾಂವಿಧಾನಿಕ ಹಕ್ಕುಗಳನ್ನು ಧಿಕ್ಕರಿಸುತ್ತಿರುವ ದ್ಯೋತಕವಾಗಿದೆ. ಕರ್ನಾಟಕವು ಕೇಂದ್ರಕ್ಕೆ ನೀಡಿದ ಒಂದು ರೂಪಾಯಿ ತೆರಿಗೆಯಲ್ಲಿ ಕೇವಲ 13 ಪೈಸೆಯಷ್ಟೆ ರಾಜ್ಯಕ್ಕೆ ವಾಪಸ್ ಬರುತ್ತಿರುವುದು ಅನ್ಯಾಯದ ಪರಮಾವಧಿ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳಿಗೆ ಸಂಬಂಧಿಸಿದಂತೆ1990ರಲ್ಲಿ ರಚನೆಯಾದ ಸರ್ಕಾರಿಯಾ ಆಯೋಗದ 247 ಶಿಫಾರಸುಗಳನ್ನು 35 ವರ್ಷಗಳಾದರೂ ಅನುಷ್ಠಾನಕ್ಕೆ ತಂದಿಲ್ಲ. ಮತ್ತೊಂದೆಡೆ ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರದ ಏಜೆಂಟ್‌ರಂತೆ ವರ್ತಿಸುವುದು ಸಂವಿಧಾನ ವಿರೋಧಿ ನಡೆ. ಇಂಥ ಅನ್ಯಾಯದ ನಡೆಗಳು ಕೊನೆಯಾಗಬೇಕಿದೆ.
– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ
‘ಒಂದು ರಾಷ್ಟ್ರ; ಒಂದು ಚುನಾವಣೆ’ ಬೇಕೆಂದು ಬೀಗುವ ಆಳುವ ವರ್ಗವು ಶೈಕ್ಷಣಿಕ ಪಠ್ಯಕ್ರಮದಲ್ಲಿನ ತಾರತಮ್ಯ ನೀತಿಯ ಬಗ್ಗೆ ಚಕಾರ ಎತ್ತುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿನ ಪಠ್ಯಕ್ರಮ ಬೇರೆ; ಖಾಸಗಿ ಶಾಲೆಗಳ ಪಠ್ಯಕ್ರಮವೇ ಬೇರೆ ಮಾದರಿಯದ್ದಾಗಿದೆ. ರಾಜ್ಯ ಪಠ್ಯ, ಕೇಂದ್ರ ಪಠ್ಯ, ಅಂತರರಾಷ್ಟ್ರೀಯ ಪಠ್ಯವೆಂದು ಮಕ್ಕಳ ಓದುವಿಕೆಯಲ್ಲಿ ಭೇದಭಾವ ಬಿತ್ತಲಾಗುತ್ತಿದೆ. ಶಿಕ್ಷಣ ಉದ್ಯಮದ ಸ್ವರೂಪ ಪಡೆದಿರುವುದೇ ಇದಕ್ಕೆ ಕಾರಣ. ಬಡವರ ಮಕ್ಕಳು ಸರ್ಕಾರಿ ಶಾಲೆಗೆ ಸೇರಿದರೆ ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗೆ ದಾಖಲಾಗುತ್ತಾರೆ. ಇದರಿಂದ ಶಿಕ್ಷಣದ ಸಮನ್ವತೆ ಸಾಧಿಸುವುದಾದರೂ ಹೇಗೆ? ರಾಷ್ಟ್ರದಲ್ಲಿ ಶಿಕ್ಷಣವನ್ನೂ ಸಮಾನತೆಯ ಮಾದರಿಯನ್ನಾಗಿ ರೂಪಿಸಿಕೊಳ್ಳುವ ಸಾಧ್ಯತೆ ಜೀವತಳೆದಿಲ್ಲ.
– ರಾಜೇಂದ್ರಕುಮಾರ್ ಮುದ್ನಾಳ್, ಯಾದಗಿರಿ
‘ಕಲಬುರಗಿ ಕೋಟೆ ನೋಡದೇ ವಾಪಸಾದ ವಿದೇಶಿ ಪ್ರವಾಸಿಗರು’ ಸುದ್ದಿ ಓದಿ ಬೇಸರವಾಯಿತು. ಪ್ರವಾಸಿಗರನ್ನು ಕೈಬೀಸಿ ಕರೆಯುವ ಐತಿಹಾಸಿಕ ತಾಣಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ. ಪ್ರವಾಸೋದ್ಯಮವು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಉದ್ಯೋಗ
ಗಳನ್ನು ಸೃಜಿಸುತ್ತದೆ. ಆದರೆ, ಒಂದಷ್ಟು ವಿದೇಶಿಗರ ನಕಾರಾತ್ಮಕ ಅಭಿಪ್ರಾಯವು ಬರಲಿರುವ ಪ್ರವಾಸಿಗರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈಗಲಾದರೂ ಪ್ರವಾಸೋದ್ಯಮ ಸಚಿವರು ಎಚ್ಚತ್ತುಕೊಳ್ಳಬೇಕಿದೆ.
– ವೆಂಕಟೇಶ್ ಮುದಗಲ್, ಕಲಬುರಗಿ
ಅಂಚೆ ಕಚೇರಿಗಳಲ್ಲಿ ಗ್ರಾಹಕರು ಉಳಿತಾಯ ಖಾತೆ ಸೇರಿದಂತೆ ಆರ್‌ಡಿ, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಯಡಿ ಹಣ ತೊಡಗಿಸುತ್ತಾರೆ. ಅವಧಿ ಮುಗಿದ ನಂತರ ಈ ಹಣ ಹಿಂಪಡೆಯುವಾಗ ಚಲನ್ ಭರ್ತಿ ಮಾಡಬೇಕಿದೆ. ಆದರೆ, ಈ ಚಲನ್‌ನ ಒಂದು ಭಾಗ ಇಂಗ್ಲಿಷ್‌ನಲ್ಲಿ, ಮತ್ತೊಂದು ಭಾಗ ಹಿಂದಿ ಭಾಷೆಯಲ್ಲಿ ಮುದ್ರಿತವಾಗಿರುತ್ತದೆ. ಇಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ನೆರೆಯ ತಮಿಳುನಾಡಿನಲ್ಲಿ ಒಂದು ಭಾಗದಲ್ಲಿ ಇಂಗ್ಲಿಷ್; ಮತ್ತೊಂದು ಭಾಗದಲ್ಲಿ ತಮಿಳಿನಲ್ಲಿ ಚಲನ್‌ಗಳು ಮುದ್ರಿತವಾಗಿರುತ್ತವೆ. ಕನ್ನಡ ಭಾಷೆಯ ಬಗ್ಗೆ ಇಷ್ಟು ತಾತ್ಸಾರ ಏಕೆ?
– ಬೂಕನಕೆರೆ ವಿಜೇಂದ್ರ, ಮೈಸೂರು
ಕಳೆದ ವರ್ಷ ರಾಮನಗರ ತಾಲ್ಲೂಕಿನ ಬನ್ನಿಕುಪ್ಪೆ ‘ಬಿ’ ಕ್ಲಸ್ಟರ್‌ನಲ್ಲಿ ನಡೆದ ಮಕ್ಕಳ ಕಲಿಕಾ ಹಬ್ಬದ ಸಂದರ್ಭದಲ್ಲಿ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನ ಆರಂಭಿಸಿದ್ದೆವು. ಪ್ರತಿ ಶನಿವಾರ ಶಾಲಾವಧಿಯ ನಂತರ ಒಂದು ಗಂಟೆ ಪೋಷಕರ ಮೊಬೈಲ್ ಫೋನ್ ಸ್ವಿಚ್‌ಆಫ್ ಮಾಡಿಸಿ ವಿದ್ಯಾರ್ಥಿಗಳ ಜೊತೆ ಪುಸ್ತಕ ಓದಿಸುವುದು ಈ ಅಭಿಯಾನದ ಉದ್ದೇಶ. ಇದನ್ನು ನಿರಂತರವಾಗಿ ಮುಂದುವರಿಸಲಾಯಿತು. ಈ ಅಭಿಯಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಶ್ಲಾಘಿಸಿದ್ದಾರೆ. ಈಗಾಗಲೇ ತುಮಕೂರು, ಶಿವಮೊಗ್ಗ, ಬೆಂಗಳೂರು ನಗರ ವಿಶ್ವವಿದ್ಯಾಲಯಗಳು ಈ ಅಭಿಯಾನ ಅಳವಡಿಸಿಕೊಂಡಿವೆ. ಆಂಧ್ರಪ್ರದೇಶ ಸರ್ಕಾರವು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆನ್‌ಲೈನ್ ಬಳಕೆಯ ನಿರ್ಬಂಧ ಕುರಿತು ಚಿಂತನೆ ನಡೆಸುತ್ತಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಈ ಅಭಿಯಾನ ಆರಂಭಿಸಿದರೆ ಮಕ್ಕಳಲ್ಲಿ ಸೃಜನಶೀಲತೆ ವೃದ್ಧಿಸಲಿದೆ.
– ಚಿಕ್ಕವೀರಯ್ಯ ಟಿ.ಎನ್., ರಾಮನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.