ADVERTISEMENT

ವಾಚಕರ ವಾಣಿ: ರಿಯಾಯಿತಿ ಘೋಷಣೆ ಜನಪರವಲ್ಲ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 14:55 IST
Last Updated 17 ಫೆಬ್ರುವರಿ 2023, 14:55 IST

ರಿಯಾಯಿತಿ ಘೋಷಣೆ ಜನಪರವಲ್ಲ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲಿನ ಶೇ 50 ರಿಯಾಯಿತಿ ಅವಧಿ ವಿಸ್ತರಣೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿರುವುದು ದುರದೃಷ್ಟಕರ. ರಿಯಾಯಿತಿಗಳು ಬಳಕೆದಾರರನ್ನು ನಿಯಮ ಉಲ್ಲಂಘಿಸುವಂತೆ ಉತ್ತೇಜಿಸುತ್ತವೆ. ಅದರಲ್ಲೂ ಮುಖ್ಯವಾಗಿ ಸಂಚಾರ ನಿಯಮ ಉಲ್ಲಂಘನೆಯು ಹೆಚ್ಚಿನಾಂಶ ರಸ್ತೆ ಅಪಘಾತಕ್ಕೆ, ಆ ಮೂಲಕ ಸಾವು ನೋವಿಗೆ ಕಾರಣವಾಗುತ್ತದೆ. ರಾಜ್ಯ ಸರ್ಕಾರವು ಕಾನೂನುಗಳನ್ನು ಅನುಸರಿಸದವರಿಗೆ ರಿಯಾಯಿತಿಗಳನ್ನು ನೀಡುವ ಬದಲು, ಕಾನೂನು ಪಾಲನೆಗೆ ಮತ್ತು ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗುವಂತಹ ಕ್ರಮಗಳನ್ನು ಕೈಗೊಳ್ಳಬೇಕು. ಕಾನೂನಿನ ಬಗೆಗಿನ ಎಚ್ಚರವನ್ನು ಖಚಿತಪಡಿಸಿಕೊಳ್ಳಬೇಕು. ದಂಡಕ್ಕೆ ರಿಯಾಯಿತಿಯು ಜನಪರವಾದ ಕ್ರಮವಲ್ಲ, ಜನವಿರೋಧಿ ಕ್ರಮ.

ವಿಜಯಕುಮಾರ್ ಎಚ್.ಕೆ., ರಾಯಚೂರು

ADVERTISEMENT

ಇದೆಂಥಾ ಸಂಸ್ಕೃತಿ ನಿಮ್ಮದು?

‘ಟಿಪ್ಪು ಎಂದೊಡನೇ ಸಿದ್ದರಾಮಯ್ಯ ಬಂದುಬಿಡುತ್ತಾರೆ. ಉರಿಗೌಡ, ನಂಜೇಗೌಡ ಟಿಪ್ಪುವನ್ನು ಮೇಲೆ ಕಳುಹಿಸಿದಂತೆ, ಇವರನ್ನೂ ಮೇಲೆ ಕಳುಹಿಸಬೇಕು, ಹೊಡೆದುಹಾಕಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರು ಹೇಳಿರುವ ವಿಡಿಯೊ ‌‌‌‌‌‌‌‌‌‌‌‌‌‌ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಉನ್ನತ ಶಿಕ್ಷಣ ಸಚಿವರಾದವರು ಈ ರೀತಿ ಮಾತನಾಡಬಹುದೇ? ಇದೆಯೇ ಇವರು ನೀಡುವ ಉನ್ನತ ಶಿಕ್ಷಣ?

ಅಧಿಕಾರದಲ್ಲಿ ಇರುವವರು, ಬಹಳಷ್ಟು ಅಮಾಯಕ ಹಿಂಬಾಲಕರು ಇರುವಂಥವರು ಇಂತಹ ಮಾತುಗಳನ್ನು ಆಡುವುದು ಅಪಾಯಕರ. ಚುನಾವಣೆ ಸಮಯ, ನಿಮ್ಮ ನಿಮ್ಮ ಧ್ಯೇಯಗಳ ಬಗ್ಗೆ ಮಾತನಾಡಿ. ಅದುಬಿಟ್ಟು, ಹೊಡಿ, ಬಡಿ ಎನ್ನುವುದೇ? ಇದೆಂಥಾ ಸಂಸ್ಕೃತಿ ನಿಮ್ಮದು? ಇಂತಹ ಮಾತುಗಳು ಖಂಡಿತ ನಿಮಗೆ ಶ್ರೇಯಸ್ಕರವಲ್ಲ, ಸಚಿವ ಮಹಾಶಯರೇ.

ಜಿ.ಎಚ್.ವೆಂಕಟೇಶ್ ಮೂರ್ತಿ, ಚಿಂತಾಮಣಿ

ಹೊಸ ಚಿತ್ರಮಂದಿರ ನಿರೀಕ್ಷೆ ನೋವು ತಂದೀತು

‘ಚೈತನ್ಯ ಇರುವ ನಟರು ಚಿತ್ರರಂಗದ ಬಗೆಗಿನ ಕಾಳಜಿಗಾದರೂ ಒಂದು ಚಿತ್ರಮಂದಿರ ನಿರ್ಮಿಸಿ ನಡೆಸಲಿ’ ಎಂಬ ಮಲ್ಲಿಕಾರ್ಜುನ ಅವರ ಅಭಿಪ್ರಾಯ (ವಾ.ವಾ., ಫೆ. 17) ಸರಿಯಿದೆ. ಆದರೆ, ಅದು ಕಾರ್ಯಗತ ಆಗದಿದ್ದರೆ ನೋವನ್ನು ತರುತ್ತದೆ. ದಶಕಗಳ ಹಿಂದೆ ಬೆಂಗಳೂರಿನ ಜಯನಗರದಲ್ಲಿ ಸರ್ಕಾರಿ ಒಡೆತನದ ‘ಪೂನಂ’ ಎಂಬ ಹೆಸರಿನ ಚಿತ್ರಮಂದಿರ ಇತ್ತು. ಕನ್ನಡಪರರ ಒತ್ತಡಗಳಿಂದ ಸರ್ಕಾರವು ಅದಕ್ಕೆ ‘ಪುಟ್ಟಣ್ಣ ಕಣಗಾಲ್’ ಎಂಬ ಹೆಸರನ್ನಿಟ್ಟು ನಡೆಸುತ್ತಿತ್ತು. ವಾಣಿಜ್ಯ ದೃಷ್ಟಿಯಿಂದ ಸರ್ಕಾರವೇ ಅದನ್ನು ಕೆಡವಿ ವಾಣಿಜ್ಯ ಮಳಿಗೆ ನಿರ್ಮಿಸಿದೆ. ಪುಟ್ಟಣ್ಣ ಅವರೇ ಮುಂದೆತಂದ ನಟರಾದ ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರಿಂದಲೂ ಅದನ್ನು ಉಳಿಸಿಕೊಳ್ಳಲಾಗಲಿಲ್ಲ. ಅಂಬರೀಷ್ ಅವರಂತೂ ಸಚಿವರಾಗಿದ್ದರು, ಚಿತ್ರರಂಗದ ಮೇಲೆ ಹಿಡಿತವನ್ನೂ ಹೊಂದಿದ್ದರು.

ಇನ್ನು ಚೈತನ್ಯ ಇರುವ ನಟರಿಂದ ಹೊಸ ಚಿತ್ರಮಂದಿರದ ನಿರೀಕ್ಷೆ ಬಿಸಿಲುಕುದುರೆಯೆ. ಚಿತ್ರರಂಗದಲ್ಲಿ ಮಿಂಚಿ ಮುಂದಿನ ಕ್ಷೇತ್ರದತ್ತ ಮುನ್ನುಗ್ಗುವವರೇ ಹೆಚ್ಚು. ಇದು ಒಂದು ಚಿಮ್ಮುಹಲಗೆ ಅಷ್ಟೆ. ಅನೇಕರು ಬೇರೆಬೇರೆ ರೀತಿಯ ಸಮಾಜ ಸೇವೆ ಮಾಡುವುದನ್ನು ಕಂಡಿದ್ದೇವೆ. ಆದರೆ ಮೂಲ ಚಿತ್ರರಂಗವನ್ನು ಉಳಿಸಿಕೊಳ್ಳುವತ್ತ ಚೈತನ್ಯ ಉಳ್ಳ ನಟರು ಕೂಡಲೇ ಗಮನಹರಿಸಲಿ. ಕಡಿಮೆ ಬೆಲೆಗೆ ಕುಟುಂಬದ ಸದಸ್ಯರೆಲ್ಲಾ ಚಿತ್ರಮಂದಿರದಲ್ಲೇ ಚಲನಚಿತ್ರ ನೋಡುವಂತಹ ಅವಕಾಶ ಲಭ್ಯವಾಗಲಿ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಕೇಂದ್ರದ ಯೋಜನೆಗಳಿಗೂ ರಾಜ್ಯದ ಪಾಲು?

ಚುನಾವಣಾ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚಿನ ಜನಪ್ರಿಯ ಘೋಷಣೆಗಳನ್ನು ಮಾಡದೆ ಅಭಿವೃದ್ಧಿಗೆ ಪೂರಕವಾದ ಬಜೆಟ್‌ ಮಂಡಿಸಿದ್ದಾರೆ. ಆದರೆ, ಎರಡು ವರ್ಷಗಳಿಂದ ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಿಗುವ ಅನುದಾನ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ.
ಕೇಂದ್ರದ ಯೋಜನೆಗಳು ಮುಖ್ಯವಾಗಿ ಬಡವರ ಆರ್ಥಿಕ ಉನ್ನತಿಗಾಗಿ ಕೈಗೊಳ್ಳಲಾಗುವ ಕಾರ್ಯಕ್ರಮಗಳು, ಅವು ಬಡವರ ಆದಾಯವನ್ನು ಹೆಚ್ಚಿಸುತ್ತವೆ. 15ನೇ ಹಣಕಾಸು ಆಯೋಗವು ಕರ್ನಾಟಕ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವೆಂದು ಹೇಳಿ, ಕೇಂದ್ರದ ತೆರಿಗೆ ಪಾಲು ಹಾಗೂ ಅನುದಾನವನ್ನು ಕಡಿತಗೊಳಿಸಿದೆ. ನೀತಿ ಆಯೋಗದ ಪ್ರಕಾರ, ದಕ್ಷಿಣದ ಎಲ್ಲ ರಾಜ್ಯಗಳಿಗಿಂತ ಬಡತನದ ಪ್ರಮಾಣ ಕರ್ನಾಟಕದಲ್ಲಿ ಹೆಚ್ಚಿದೆ. ಆದರೆ ಬಡತನ ನಿರ್ಮೂಲನೆಗಾಗಿ ದಕ್ಷಿಣದ ಇತರ ರಾಜ್ಯಗಳಿಗಿಂತ (ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ) ಕಡಿಮೆ ಅನುದಾನವನ್ನು ಕರ್ನಾಟಕವು ಪಡೆಯುತ್ತಿದೆ. ಬೆಂಗಳೂರಿನಲ್ಲಿರುವ ಐಟಿ ಹಾಗೂ ಇತರ ಉದ್ದಿಮೆಗಳ ಉತ್ತಮ ನಿರ್ವಹಣೆಯಿಂದಾಗಿ ಕರ್ನಾಟಕದ ಜಿಡಿಪಿ ಬೆಳೆಯುತ್ತಿದೆ. ಆದರೆ ಇದರ ಅನುಕೂಲ ಉತ್ತರ ಕರ್ನಾಟಕದಲ್ಲಿರುವ ಬಡವರಿಗೆ ಆಗಿದೆಯೇ?

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ (ಪಿಎಂಎವೈಜಿ) ಕೇಂದ್ರ ಸರ್ಕಾರ ₹ 3 ಕೋಟಿಗೂ ಅಧಿಕ ಮನೆಗಳನ್ನು ಗ್ರಾಮೀಣ ಬಡವರಿಗೆ ಹಂಚಿದೆ. ಆದರೆ ಕರ್ನಾಟಕದ ಬಡವರಿಗೆ ಈ ಯೋಜನೆಯ ಪ್ರಯೋಜನ ದೊರಕಿಲ್ಲ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಂದ ರಾಜ್ಯದ ಬಡವರನ್ನು ಹೊರಗಿಡುವುದು ಎಷ್ಟು ಸೂಕ್ತ? ಕೇಂದ್ರ ಸರ್ಕಾರ ಮಾಡುವ ರಸ್ತೆ, ರೈಲು ಮಾರ್ಗಗಳ ನಿರ್ಮಾಣಕ್ಕೂ ಇನ್ನು ಮುಂದೆ ರಾಜ್ಯ ಸರ್ಕಾರ ತನ್ನ ಪಾಲನ್ನು ನೀಡಬೇಕಾಗುತ್ತದೆ ಎನ್ನುವುದು ಮುಖ್ಯಮಂತ್ರಿಯವರ ಬಜೆಟ್ ಭಾಷಣದಲ್ಲಿ ತಿಳಿದುಬರುತ್ತದೆ.

ಡಾ. ದೇವಿದಾಸ ಪ್ರಭು, ಭಟ್ಕಳ

ಬಿಲ್ ವಿದ್ಯೆ!

ಗುರಿಯನ್ನೇ ನೋಡದೆ
ಬಾಣ ಹೊಡೆಯುವುದು
ಅಂದಿನ ಬಿಲ್ಲುಗಾರರ
ಬಿಲ್ವಿದ್ಯೆ,
ಕಾಮಗಾರಿಯನ್ನೇ ಮಾಡದೆ
ಹಣ ಪಡೆಯುವುದು
ಇಂದಿನ ಕೆಲವು

ಗುತ್ತಿಗೆದಾರರ
ಬಿಲ್ ವಿದ್ಯೆ!

ಡಾ. ವಸಂತ ಕುಮಾರ್

ಯರಬಳ್ಳಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.