ADVERTISEMENT

ವಾಚಕರ ವಾಣಿ | ಚಲನಚಿತ್ರೋತ್ಸವ ಎಲ್ಲರನ್ನೂ ಒಳಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 22:00 IST
Last Updated 15 ಜನವರಿ 2023, 22:00 IST

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಈ ಸಲ ತಡವಾಗಬಹುದು ಎಂಬ ವರದಿ (ಪ್ರ.ವಾ., ಜ. 15) ಆಶ್ಚರ್ಯ ಅಥವಾ ಆತಂಕ ಮೂಡಿಸಬೇಕಿಲ್ಲ. ಕರ್ನಾಟಕ ಚಲನಚಿತ್ರ ಅಕಾಡೆಮಿ ಎಂದು ಗೂಗಲ್ ಮಾಡಿದರೆ, ವಿಕಿಪೀಡಿಯಾ ನೋಡಿದರೆ ಹಳೆಯ ಅಧ್ಯಕ್ಷರ ಹೆಸರೇ ಕಾಣುತ್ತದೆ. ಈಗಿನವರು ಪದಗ್ರಹಣ ಮಾಡಿದ ಎರಡು ತಿಂಗಳಲ್ಲಿ ಅಕಾಡೆಮಿ ಏನಾದರೂ ಮಾಡಿದೆಯೇ? ಚಿತ್ರೋತ್ಸವ ತಡವಾಗಿ ನಡೆಯಲು ಆರಂಭವಾಗಿದ್ದು 2015ರಿಂದ (ಎಂಟನೆಯದು ಜ. 28- ಫೆ. 5, 2016). 2020ರಲ್ಲಿ ಮಾರ್ಚ್‌ಗೆ ಜಾರಿತು (ಫೆ. 26- ಮಾರ್ಚ್‌ 4).

ಈಗ ಚುನಾವಣೆ ಬರಲಿದೆ ಎಂಬ ಕಾರಣಕ್ಕಾಗಿ ಸುಮಾರು 70 ದಿನಗಳ ತಯಾರಿ ನಡೆಸಿ ಮಾರ್ಚ್ 31ರೊಳಗೆ ಮುಗಿಸುವುದು ಸರಿಯಲ್ಲ. ಲಾಂಛನ, ಸಮಿತಿ ರಚನೆ ನಡೆಯಬಹುದು. ಆದರೆ ಅಸಲಿ ಉದ್ದೇಶ (ಗುಣಮಟ್ಟದ ಚಿತ್ರಗಳು, ಅರ್ಥಪೂರ್ಣ ಕಾರ್ಯಕ್ರಮ) ಸಾಧನೆ ಕಷ್ಟಸಾಧ್ಯ. ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಹಿಂದಿಗಿಂತ ಹೆಚ್ಚು ಹಣ ನೀಡಲಾಗಿತ್ತು. ಆದರೆ ಮೊದಲ ದಿನ ಸರಿಯಾಗಿ ನಡೆಯಲಿಲ್ಲ. ಬೇರೆ ಕಾರಣಕ್ಕೆ ಅದು ವಿವಾದಾಸ್ಪದವೂ ಆಯಿತು. ಚಲನಚಿತ್ರೋತ್ಸವಕ್ಕೆ ಒಂದು ಕೋಟಿ ಹೆಚ್ಚು ನೀಡಬಹುದು, ಉದ್ಘಾಟನೆಗೆ ಹೆಚ್ಚು ವೆಚ್ಚ ಮಾಡಲೂಬಹುದು- ಆದರೆ ಪಾರದರ್ಶಕವಾಗಿ ನಡೆಸದಿದ್ದರೆ ಆರೋಪಗಳು ಬರುವ ಸಂಭವ ಹೆಚ್ಚು. ಅಂತರರಾಷ್ಟ್ರೀಯ ಮಾನ್ಯತೆ, ಧನಸಹಾಯಕ್ಕಿಂತ ಎಲ್ಲರನ್ನೂ ಒಳಗೊಂಡ ಚಿತ್ರೋತ್ಸವ ನಡೆಸುವುದು ಮುಖ್ಯವಾಗಬೇಕು. ಹಲವರ ಅಭಿಪ್ರಾಯದಂತೆ ಡೈರಕ್ಟರೇಟ್ ಒಂದನ್ನು ಸ್ಥಾಪಿಸಿ ಈ ಚಿತ್ರೋತ್ಸವದ ಆಯೋಜನೆಯನ್ನು ಅದಕ್ಕೆ ವಹಿಸಬೇಕು (ಅಕಾಡೆಮಿ, ಸಚಿವ ಅಥವಾ ವಾರ್ತಾ ಇಲಾಖೆ ನಿರ್ದೇಶಕರಿಗೆ ಅಲ್ಲ). ಆರ್ಟಿಸ್ಟಿಕ್ ಡೈರೆಕ್ಟರ್ ಈ ಬಗೆಗೆ ಗಟ್ಟಿ ನಿಲುವು ತಾಳುತ್ತಾರೆಯೇ?
–ಎಚ್.ಎಸ್.ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT