ADVERTISEMENT

ಭಟ್ಟಂಗಿಗಳ ಭದ್ರಕೋಟೆಯಲ್ಲಿ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 18:34 IST
Last Updated 24 ನವೆಂಬರ್ 2020, 18:34 IST

ಕೋಟ್ಯಂತರ ಜನರ ಬೆಂಬಲವಿರುವ ಕಾಂಗ್ರೆಸ್ ಪಕ್ಷ ಇಂದು ನಾಯಕತ್ವದ ಮುಂದಾಳುತನದ ಕೊರತೆಯಿಂದ ಕೊರಗುತ್ತಿದೆ. ದುರಂತವೆಂದರೆ, ನಾಯಕತ್ವವು ಹೊಗಳುಭಟ್ಟರ ಭದ್ರಕೋಟೆ ಯಲ್ಲಿ ಮಕಾಡೆ ಮಲಗಿದೆ. ಸೈದ್ಧಾಂತಿಕವಾಗಿ ದೃಢ ನಿಲುವು ಹೊಂದಿರುವ ಮತ್ತು ಪಕ್ಷವನ್ನು ಬಲಪಡಿಸಬೇಕು ಎನ್ನುವ ಹಂಬಲವುಳ್ಳ ಹಿರಿಯ ನಾಯಕರನ್ನು ನೇಪಥ್ಯಕ್ಕೆ ತಳ್ಳಲಾಗುತ್ತಿದೆ. ಸೋನಿಯಾ ಗಾಂಧಿ ಅವರ ಬಗ್ಗೆ ಗೌರವವಿದ್ದರೂ ರಾಹುಲ್ ಗಾಂಧಿ ಅವರ ಅಪ್ರಬುದ್ಧತೆಯ ಬಗ್ಗೆ ಕನಿಕರವಿದೆ.

ಹಿಂದೆಯೂ ಇಂದಿರಾ ಗಾಂಧಿಯವರ ಕುರಿತು ಮೆಚ್ಚುಗೆಯ ಮಾತಾಡುತ್ತಿದ್ದ ಹಿರಿಯರು, ಪುತ್ರ ಸಂಜಯ್ ಗಾಂಧಿಯವರ ವರಸೆಗಳಿಗೆ ಬೇಸರಿಸುತ್ತಿದ್ದರು. ಈಗ ರಾಹುಲ್‌ ಸುತ್ತ ಇರುವ, ರಾಜಕೀಯ ಅರಿಯದ ಅಪ್ರಬುದ್ಧರೇ ಪಕ್ಷದ ಇಂದಿನ ದುಃಸ್ಥಿತಿಗೆ ಕಾರಣ. ಇದನ್ನು ಮನವರಿಕೆ ಮಾಡಿಕೊಡುವಷ್ಟು ಧೈರ್ಯ ಹೊಗಳುಭಟ್ಟಂಗಿಗಳಿಗೆ ಇಲ್ಲ. ಜೊತೆಗೆ, ಭಟ್ಟಂಗಿಗಳಿಗೆ ರಾಹುಲ್ ಅವರೇ ಆಸರೆ.

ಸೋನಿಯಾ ಅವರೂ ಇದೀಗ ಇಂಥವರ ಹಿಡಿತದಲ್ಲಿದ್ದಾರೆ. ಪಕ್ಷದಲ್ಲಿನ ದೌರ್ಬಲ್ಯವನ್ನು ಒಪ್ಪಿಕೊಳ್ಳಲು ಸೋನಿಯಾ ಮತ್ತು ರಾಹುಲ್ ತಯಾರಿಲ್ಲದಿರುವುದು ದುರದೃಷ್ಟಕರ. ಬಿಜೆಪಿಯ ಹೊಡೆತವನ್ನು ತಡೆದು ‘ಸೇಡಿಗೆ ಸೇಡು’, ‘ಏಟಿಗೆ ಎದಿರೇಟು’ ಎನ್ನುವ ನಾಯಕತ್ವ ಈಗ ಬೇಕಾಗಿದೆ. ಪಕ್ಷ ಬಡಕಲಾದರೂ ಸರಿ, ರಾಹುಲ್ ಇರಬೇಕು ಎನ್ನುವವರ ಹಿಡಿತ ಹೋಗದಿದ್ದರೆ ಕಾಂಗ್ರೆಸ್ ಇನ್ನೂ ಹೀನಾಯ ಸ್ಥಿತಿ ತಲುಪುವುದರಲ್ಲಿ ಅನುಮಾನವಿಲ್ಲ.

ADVERTISEMENT

-ಪಿ.ಸಿ.ಕೇಶವ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.