ADVERTISEMENT

ವಾಚಕರ ವಾಣಿ: ಮಂಗಳವಾರ, ಮೇ 9, 2023

​ಪ್ರಜಾವಾಣಿ ವಾರ್ತೆ
Published 8 ಮೇ 2023, 19:33 IST
Last Updated 8 ಮೇ 2023, 19:33 IST
   

ಶಿಕ್ಷಣಕ್ಕಾಗಿ ವಲಸೆ ತರವೇ?

ಕರ್ನಾಟಕದಲ್ಲಿ ಪಠ್ಯಕ್ರಮದ ಬೋಧನೆ ಎಲ್ಲರಿಗೂ ಸಮಾನವಾದ ರೀತಿಯಲ್ಲಿ ನಡೆಯುತ್ತಿದೆ. ಆದರೂ ಪರೀಕ್ಷೆಯ ಫಲಿತಾಂಶದಲ್ಲಿ ಮಾತ್ರ ಧಾರವಾಡ, ಬೆಂಗಳೂರು, ಕರಾವಳಿ ಭಾಗದ ಜಿಲ್ಲೆಗಳೇ ಸಾಮಾನ್ಯವಾಗಿ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಿರುವುದಕ್ಕೆ ಕಾರಣ ಏನೆಂಬುದು ತಿಳಿಯುವುದಿಲ್ಲ. ಉತ್ತರ ಕರ್ನಾಟಕ ಯಾವಾಗಲೂ ಶಿಕ್ಷಣದಲ್ಲಿ ಕಡಿಮೆ ಸಾಧನೆಯನ್ನು ದಾಖಲಿಸುತ್ತದೆ. ಅದರಲ್ಲೂ ಯಾದಗಿರಿ ಪ್ರತ್ಯೇಕ ಜಿಲ್ಲೆಯಾದಾಗಿನಿಂದಲೂ ಕೊನೆಯ ಸ್ಥಾನದಿಂದ ಮೇಲೆ ಬಂದಿಲ್ಲ. ಇದನ್ನು ನೋಡಿದರೆ, ರಾಜ್ಯದಲ್ಲಿ ಬೋಧನಾ ಕ್ರಮ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆಯೇ ಎನ್ನುವ ಅನುಮಾನ ಮೂಡುತ್ತದೆ ಅಥವಾ ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳಿಗೆ ಸರಿಯಾಗಿ ಶಿಕ್ಷಣವನ್ನು ನೀಡುತ್ತಿಲ್ಲವೇ? ಒಟ್ಟಿನಲ್ಲಿ, ಇಲ್ಲಿನ ಮಕ್ಕಳನ್ನು ಪೋಷಕರು ಪೂರ್ವ ಮತ್ತು ದಕ್ಷಿಣ ಭಾಗದ ಕಡೆ ಶಿಕ್ಷಣಕ್ಕಾಗಿ ವಲಸೆ ಕಳುಹಿಸುವಂತಹ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ.
–ಭೀಮಣ್ಣ ಹತ್ತಿಕುಣಿ, ಯಾದಗಿರಿ

ಪ್ರವಾಸಿ ತಾಣಕ್ಕೆ ನಿರ್ಬಂಧ ಸಲ್ಲ
ವಿಧಾನಸಭೆ ಚುನಾವಣೆ ಪ್ರಯುಕ್ತ ಇದೇ 10ರಂದು ಕೆಲ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳಿಗೆ ರಜೆ ಘೋಷಣೆ ಮಾಡಿದ್ದು, ಇನ್ನು ಕೆಲ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಪ್ರವೇಶ ನೀಡುವುದಕ್ಕೆ ನಿರ್ಬಂಧ ಹೇರಿದ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹೀಗೆ ನಿರ್ಬಂಧ ಹೇರುವ ಬದಲು, ಮತದಾನ ಮಾಡಿದ ನಾಗರಿಕರಿಗೆ ಪ್ರವೇಶ ನೀಡಿದರೆ ಒಳಿತು. ಇದರಿಂದ ಸಣ್ಣಪುಟ್ಟ ವ್ಯಾಪಾರಿಗಳು, ಸಾರಿಗೆ, ಆಟೊ ಚಾಲಕರಿಗೆ ಅನುಕೂಲವಾಗುತ್ತದೆ. ಪ್ರವಾಸಿಗರ ಮನ ತಣಿಯುತ್ತದೆ. ಪ್ರವಾಸೋದ್ಯಮ ಇಲಾಖೆಯು ಆರ್ಥಿಕವಾಗಿ ಚೇತರಿಕೆಯಲ್ಲಿ ಇರುವುದಲ್ಲದೆ ಕಡ್ಡಾಯವಾಗಿ ಮತದಾನ ಕೂಡ ಆಗುತ್ತದೆ.
–ಎ.ಎಸ್.ಮಕಾನದಾರ, ಗದಗ

ADVERTISEMENT

ಭೋಗ್ಯಕ್ಕೆ ಒಪ್ಪಿಸಿಕೊಳ್ಳುವ ಪ್ರಕ್ರಿಯೆ...

ಅಂತೂ ಇಂತೂ ಚುನಾವಣೆಯ ಭರಾಟೆ ಕೊನೆಗೊಂಡಿದೆ. ಎಲ್ಲ ರಾಜಕೀಯ ಪಕ್ಷಗಳ ಚಿತ್ತ ಮತದಾನದತ್ತ. ಶನಿವಾರ ಮಧ್ಯಾಹ್ನ ಫಲಿತಾಂಶ. ದೇವರಾಜ ಅರಸು ‘ಅದೃಶ್ಯ ಮತದಾರ’ ಎಂಬ ಮಾತು ಹೇಳುತ್ತಿದ್ದರು. ಈ ಮತದಾರ ಪ್ರಭುವಿನ ಒಲವು ಯಾರತ್ತ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಇದು ಸಾರ್ವಕಾಲಿಕ ಸತ್ಯ. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಂತೆ, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಅಂದರೆ, ನಾವು ಮತದಾನ ಮಾಡಿ ಐದು ವರ್ಷಗಳ ಕಾಲ ಈ ರಾಜಕೀಯ ಪಕ್ಷಗಳಿಗೆ ನಮ್ಮನ್ನು ನಾವು ಭೋಗ್ಯಕ್ಕೆ ಒಪ್ಪಿಸಿಕೊಳ್ಳುವ ಒಂದು ಪ್ರಕ್ರಿಯೆ ಅಷ್ಟೇ. 
–ಮುರುಗೇಶ್ ಹನಗೋಡಿಮಠ, ಹುಬ್ಬಳ್ಳಿ 

ಮತಕ್ಕಾಗಿ ಪ್ರಚೋದನೆ: ತರಬೇಕು ತಹಬಂದಿಗೆ

ಚುನಾವಣೆ ಹತ್ತಿರ ಬಂದಾಗ ಕಾತರವೂ ಜಾಸ್ತಿಯಾಗುತ್ತಾ ಹೋಗುವುದು ಸಹಜ. ಚುನಾವಣೆಯ ದಿನ ಬೂತ್‌ಗಳ ಬಳಿ ಕುಳಿತು, ಸ್ಥಳಕ್ಕೆ ಬರುವ ಪ್ರತಿಯೊಬ್ಬ ಮತದಾರನಿಗೂ ಯಾವ ಬೂತ್‌ಗೆ ಹೋಗಬೇಕು ಎಂದು ತಿಳಿಸಿ, ಅವರ ಹೆಸರಿನ ಚೀಟಿಯನ್ನು ಕೊಡಲು ಯುವಕರು ಕಾರ್ಯಪ್ರವೃತ್ತರಾಗಿರುತ್ತಾರೆ. ಆದರೆ ಅವರು ಅಷ್ಟನ್ನೇ ಮಾಡದೆ, ಬಂದ ಮತದಾರನಿಗೆ ಮಾತ್ರ ಕೇಳುವಂತೆ, ತಾನು ಕೆಲಸ ಮಾಡುತ್ತಿರುವ ತನ್ನ ಪಕ್ಷದ ಚಿಹ್ನೆಗೇ ಆದ್ಯತೆ ಕೊಟ್ಟು ಮತ ಚಲಾಯಿಸುವಂತೆ ಪ್ರಚೋದಿಸುತ್ತಾರೆ. ಇದನ್ನು ಆದಷ್ಟು ತಹಬಂದಿಗೆ ತರಲೇಬೇಕು. ಅಲ್ಲದೆ ತಕ್ಷಣವೇ ಅಂತಹವರನ್ನು ಹತ್ತಿರದಲ್ಲೇ ಇರುವ ಪೊಲೀಸರಿಗೆ ಹಿಡಿದುಕೊಡಬೇಕು. ಇದರಿಂದ ಮತದಾರ ತನ್ನ ಇಚ್ಛೆಯ ಅನುಸಾರ ನಡೆದುಕೊಳ್ಳಲು ಸಾಧ್ಯವಾಗುತ್ತದೆ.

–ಬಾಲಕೃಷ್ಣ ಎಂ.ಆರ್., ಬೆಂಗಳೂರು

ಈಗಲಾದರೂ ನ್ಯಾಯ ಸಿಗಲಿ

ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಹಾಗೂ ಸಂಸದ ಬ್ರಿಜ್ ಭೂಷಣ್‌ ಶರಣ್ ಸಿಂಗ್‌ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರಮುಖ ಕುಸ್ತಿಪಟುಗಳು ಕೆಲ ದಿನಗಳಿಂದ ಧರಣಿ ನಡೆಸುತ್ತಿದ್ದರೂ ಇಲ್ಲಿಯವರೆಗೂ ಆಳುವ ಪಕ್ಷದ ಯಾವೊಬ್ಬ ಪ್ರತಿನಿಧಿಯೂ ಅಲ್ಲಿಗೆ ಭೇಟಿ ನೀಡಿಲ್ಲ. ಚಿನ್ನ ಗೆದ್ದು ಬಂದಾಗ ಸನ್ಮಾನಿಸುವ ಪ್ರತಿನಿಧಿಗಳಿಂದಲೇ ತದನಂತರ ಕ್ರೀಡಾಪಟುಗಳು ಕಿರುಕುಳಕ್ಕೆ ಒಳಗಾಗುತ್ತಿರುವ ಸಂದರ್ಭ ಭಾರತದಲ್ಲಿ ಮಾತ್ರ ಇದೆ ಎಂದು ಎನ್ನಿಸುತ್ತದೆ. ಭಾರತಕ್ಕೆ ಚಿನ್ನ ತಂದುಕೊಟ್ಟ ‌ಕ್ರೀಡಾಪಟುಗಳಿಗೇ ನ್ಯಾಯ ಒದಗಿಸದ ಸರ್ಕಾರ ಇನ್ನು ಜನಸಾಮಾನ್ಯರಿಗೆ ಹೇಗೆ ರಕ್ಷಣೆ ಒದಗಿಸುತ್ತದೆ ಎನ್ನುವ ಪ್ರಶ್ನೆ ಮೂಡುತ್ತದೆ. ಸರ್ಕಾರ ಈಗಲಾದರೂ ಸಂತ್ರಸ್ತರಿಗೆ ಸೂಕ್ತ ನ್ಯಾಯ ಒದಗಿಸಲು ಮುಂದಾಗಲಿ.

–ಮಲ್ಲಿಕಾರ್ಜುನ ಕೊಳ್ಳುರ, ಕಲಬುರಗಿ 

ಮನ ಗೆದ್ದ ಗಜಗಾಂಭೀರ್ಯದ ನಡಿಗೆ

ಚಿನ್ನದ ಅಂಬಾರಿ ಹೊರುತ್ತಿದ್ದ ಬಲರಾಮ ಇನ್ನಿಲ್ಲ ಎಂಬ ಶೀರ್ಷಿಕೆ ಕಂಡಕೂಡಲೆ (ಪ್ರ.ವಾ., ಮೇ 8) ಬೇಸರವಾಯಿತು. ಜೊತೆಗೆ ಅದು ಕೆಲವು ದಿನಗಳಿಂದ ಅನಾರೋಗ್ಯದ ಕಾರಣದಿಂದ ಆಹಾರವನ್ನು ತ್ಯಜಿಸಿ ಭಾನುವಾರ ಕೊನೆಯುಸಿರೆಳೆಯಿತು ಎಂದು ತಿಳಿದಾಗ ತೀವ್ರ ದುಃಖವಾಯಿತು. ಚಿನ್ನದ ಅಂಬಾರಿಯಲ್ಲಿನ ತಾಯಿ ಚಾಮುಂಡೇಶ್ವರಿಯ ಮೂರ್ತಿಯನ್ನು ತನ್ನದೇ ಗಜಗಾಂಭೀರ್ಯ ನಡಿಗೆಯಿಂದ ಹೊತ್ತು ಸಾಗುತ್ತಿದ್ದ ದೃಶ್ಯವನ್ನು ಖುದ್ದಾಗಿ ಮೈಸೂರಿನಲ್ಲೇ ವೀಕ್ಷಿಸಿ ಕಣ್ಣು ತುಂಬಿಕೊಂಡವರಲ್ಲಿ ನಾನೂ ಒಬ್ಬ. ಅಲ್ಲದೆ ದೃಶ್ಯ ಮಾಧ್ಯಮಗಳ ಮೂಲಕವೂ ಹಲವರು ಅದನ್ನು ಕಂಡು, ಮೆಚ್ಚಿ ತಮ್ಮ ಮನದಲ್ಲಿ ಸ್ಥಾನ ಕೊಟ್ಟಿದ್ದಾರೆ. ತಾಯಿ ಚಾಮುಂಡೇಶ್ವರಿ ಆತನ ಆತ್ಮಕ್ಕೆ ಶಾಂತಿ ನೀಡಲಿ.

–ರವಿಕಿರಣ್ ಶೇಖರ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.