ADVERTISEMENT

ನೌಕರರಿಗೇಕೆ ಹಿಂಸೆ?

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 19:45 IST
Last Updated 24 ಫೆಬ್ರುವರಿ 2020, 19:45 IST

ರಾಜ್ಯ ಸರ್ಕಾರವು ತನ್ನ ಪತ್ರಾಂಕಿತ ಅಧಿಕಾರಿಗಳಿಗೆ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ವಿದ್ಯುನ್ಮಾನ ರೂಪದಲ್ಲಿ ಸಲ್ಲಿಸಲು ಆದೇಶಿಸಿದೆ. ಇದು ಶ್ಲಾಘನೀಯವಾದರೂ ಪೂರ್ವಭಾವಿಯಾಗಿ ಎಲ್ಲ ತಯಾರಿ ಮಾಡಿಕೊಂಡು ನಂತರ ಹೀಗೆ ಆದೇಶಿಸಿದರೆ ಅನನುಕೂಲ, ತೊಂದರೆಗಳು ಉಂಟಾಗುವುದಿಲ್ಲ. ಜಾಲತಾಣವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸಹಾಯವಾಣಿಗೆ ಕರೆ ಮಾಡಿದರೆ ‘ಕಾರ್ಯನಿರತವಾಗಿದೆ’ ಎಂಬ ಸಿದ್ಧ ಉತ್ತರವೇ ಇಡೀ ದಿನ ಕೇಳಿಬರುತ್ತದೆ! ಇ– ಮೇಲ್‍ನಲ್ಲಿ ಕಳಿಸಿದ ದೂರುಗಳಿಗೆ ತಾಂತ್ರಿಕ ಪರಿಣತಿಯುಳ್ಳ ಒಬ್ಬರ ದೂರವಾಣಿ ಸಂಖ್ಯೆ ಕಳಿಸಿ, ಸಂಪರ್ಕಿಸಲು ತಿಳಿಸಲಾಗುತ್ತದೆ. ಅವರಿಗೆ ಕರೆ ಮಾಡಿದರೆ ಸ್ವೀಕರಿಸುವುದೇ ಇಲ್ಲ. ಕಳೆದ 3-4 ತಿಂಗಳುಗಳಿಂದ ಇದು ಹೀಗೇ ನಡೆದಿದೆ.

ಬಹಳಷ್ಟು ಅಧಿಕಾರಿಗಳು ತಮ್ಮ ವಾರ್ಷಿಕ ವರದಿಯನ್ನು ನಮೂದಿಸಲು ಇನ್ನೂ ಸಾಧ್ಯವಾಗಿಲ್ಲ. ವಿಪರ್ಯಾಸವೆಂದರೆ ‘ನಿಮ್ಮ ಕಾರ್ಯನಿರ್ವಹಣಾ ವರದಿ ಸಲ್ಲಿಕೆಯಾಗಿಲ್ಲ. ಇದರಿಂದ ನಿಮಗೆ ಬಡ್ತಿಯಲ್ಲಿ ತೊಂದರೆಯಾಗಬಹುದು’ ಎಂಬ ಬೆದರಿಕೆ ರೂಪದ ಸಂದೇಶಗಳನ್ನು ಕೂಡ ಇ ಆಫೀಸ್ ಯೋಜನಾ ಘಟಕದಿಂದ ರವಾನಿಸಲಾಗುತ್ತಿದೆ. ಈ ಹಿಂದೆ ಎಚ್‍ಆರ್‌ಎಂಎಸ್ ವ್ಯವಸ್ಥೆಯನ್ನು ಜಾರಿಗೊಳಿಸಿದಾಗಲೂ ಇಂತಹುದೇ ಸಮಸ್ಯೆಗಳುಂಟಾಗಿದ್ದವು. ವಿಜ್ಞಾನ–ತಂತ್ರಜ್ಞಾನದ ಬಳಕೆ ಉತ್ತೇಜಿಸುವುದು, ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಅಪೇಕ್ಷಣೀಯವಾದರೂ ಅತಿಯಾದ ಆತುರ ಅನಪೇಕ್ಷಣೀಯ. ಸಂಬಂಧಿಸಿದ ಉನ್ನತಾಧಿಕಾರಿಗಳು ನೌಕರರನ್ನು ಹೀಗೆ ಪರೋಕ್ಷವಾಗಿ ಹಿಂಸಿಸುವ ಬದಲು, ಜಾಲತಾಣವು ಸಮರ್ಪಕವಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ನೋಡಿಕೊಂಡಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ.
-ಚಂದ್ರಕಾಂತ್‌,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT