ADVERTISEMENT

ವಾಚಕರ ವಾಣಿ | ಎಚ್‍ಐವಿ: ಲೈಂಗಿಕ ಕಾರ್ಯಕರ್ತೆಯರ ಹೊಣೆ ಯಾರದು?

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 19:34 IST
Last Updated 24 ಅಕ್ಟೋಬರ್ 2021, 19:34 IST

‘ಎಚ್‍ಐವಿ ಸೋಂಕಿತ ಲೈಂಗಿಕ ಕಾರ್ಯಕರ್ತೆಯನ್ನು ಮುಕ್ತವಾಗಿರಲು ಬಿಟ್ಟರೆ ಸಮಾಜಕ್ಕೆ ಹೆಚ್ಚಿನ ಅಪಾಯ’ ಎಂಬ ನೆಲೆಯಲ್ಲಿ, ಆಕೆಯನ್ನು ಬಂಧಿಸಿ, ಎರಡು ವರ್ಷಗಳ ಕಾಲ ಬಂಧನದಲ್ಲಿಡಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯವೊಂದು ಆದೇಶ ನೀಡಿತ್ತು. ಮುಂಬೈನ ದಿಂಡೋಶಿ ಸೆಷನ್ಸ್ ನ್ಯಾಯಾಲಯ ಇತ್ತೀಚೆಗೆ ಈ ಆದೇಶವನ್ನು ಎತ್ತಿ ಹಿಡಿದಿದೆ.

ರಾಜ್ಯದಲ್ಲಿ ಎಚ್‍ಐವಿ ಸೋಂಕಿತರಾಗಿದ್ದೂ ವೇಶ್ಯಾವಾಟಿಕೆಯಲ್ಲಿ ನಿರಂತರವಾಗಿ ತೊಡಗಿರುವ 8000ದಷ್ಟು ಲೈಂಗಿಕ ಕಾರ್ಯಕರ್ತೆಯರು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ನೋಂದಾಯಿತರಾಗಿದ್ದಾರೆ ಎಂಬುದು ಈ ಹಿನ್ನೆಲೆಯಲ್ಲಿ ಅತ್ಯಂತ ಆತಂಕಕಾರಿಯಾದುದು. ಇವರಲ್ಲಿ 2,257 ಮಂದಿ ಮಾತ್ರ ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದು, ಮಿಕ್ಕವರು ಚಿಕಿತ್ಸೆಯಿಂದ ಹೊರಗಿದ್ದಾರೆ! ಇವರ ಬದುಕಷ್ಟೇ ಅಲ್ಲ ತನ್ಮೂಲಕ ಸಮಾಜದ ಸ್ವಾಸ್ಥ್ಯವನ್ನೂ ಈಗಾಗಲೇ ಅಪಾಯಕ್ಕೆ ಒಡ್ಡಲಾಗಿದೆ.

‘ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ವರದಿ- 2017’ರಲ್ಲಿ ಈ ಅಂಶ ದಾಖಲಾಗಿದೆ. ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ಕಾಂಡೋಂ ಹಂಚಿಕೆ ಜಾಲದಡಿ ನೋಂದಣಿಯಾಗಿರುವ ಲಕ್ಷದಷ್ಟು ಲೈಂಗಿಕ ಕಾರ್ಯಕರ್ತೆಯರಲ್ಲಿ ಎಚ್‍ಐವಿ ಸೋಂಕಿತರಲ್ಲದೆ ನೂರಾರು ಬಾಲಕಿಯರು, ಮೂರು ಸಾವಿರದಷ್ಟು ಅಂಗವಿಕಲರು, ಅಪಹರಣ, ಕಳ್ಳಸಾಗಣೆ, ಅತ್ಯಾಚಾರ, ಬಾಲ್ಯವಿವಾಹದಂತಹ ವಿಷಮ ಪರಿಸ್ಥಿತಿಗೆ ಸಿಕ್ಕಿ ಅನಿವಾರ್ಯವಾಗಿ ವೇಶ್ಯಾವಾಟಿಕೆಗೆ ನೂಕಲ್ಪಟ್ಟವರೂ ಇದ್ದಾರೆ. ಇಂತಹ ಹೆಚ್ಚಿನ ದಮನಿತರು, ಈ ವಿಷವರ್ತುಲದಿಂದ ಹೊರಬರಲು ಕಾತರದಿಂದ ಕಾಯುತ್ತಿದ್ದಾರೆ. ಇವರನ್ನು ಪ್ರಥಮ ಆದ್ಯತೆಯಾಗಿ ಪುನರ್ವಸತಿಗೊಳಿಸುವ ಮೂಲಕ ಅವರ ಆರೋಗ್ಯವನ್ನೂ ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡಬೇಕೆಂದು ವರದಿಯು ಶಿಫಾರಸು ಮಾಡಿದೆ. ಆದರೆ ಸರ್ಕಾರ ವರದಿಯನ್ನು ನಿರ್ಲಕ್ಷಿಸಿ, ಮೂಲೆಗುಂಪಾಗಿಸಿದೆ.

ADVERTISEMENT

ಹೀಗಾಗಿ ಎಚ್‍ಐವಿ ಸೋಂಕಿತ ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವುದಕ್ಕಿಂತ, ಅವರ ಮತ್ತು ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರದ ನೇತೃತ್ವದಲ್ಲಿ ಮಂಡಳಿಯು ಜವಾಬ್ದಾರಿ ತೆಗೆದುಕೊಂಡು, ತಕ್ಷಣವೇ ಇವರೆಲ್ಲರ ಮನವೊಲಿಸಿ ವೇಶ್ಯಾವಾಟಿಕೆಯಿಂದ ಹೊರತಂದು ಸಶಕ್ತ ಪುನರ್ವಸತಿ ಕಲ್ಪಿಸುವುದು ಅತ್ಯಂತ ಮಾನವೀಯ ಪರಿಹಾರವಾಗುತ್ತದೆ. ಇಲ್ಲವಾದಲ್ಲಿ ಇವರನ್ನು ನೋಂದಾಯಿಸಿಕೊಂಡು ಕಾಂಡೋಂ ಹಂಚಿ, ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿರುವ ಮಂಡಳಿಯು ಈ ಅಪರಾಧದ ಹೊಣೆ ಹೊರಬೇಕಾಗುತ್ತದೆ.
-ರೂಪ ಹಾಸನ,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.