ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 0:33 IST
Last Updated 5 ಫೆಬ್ರುವರಿ 2025, 0:33 IST
   

ಅತ್ಯಾಚಾರ ಪ್ರಕರಣ: ಕಟ್ಟುನಿಟ್ಟಾಗಿ ಪರಿಗಣಿಸಿ

ರಾಜ್ಯದಲ್ಲಿ ಐದು ವರ್ಷಗಳಲ್ಲಿ 2,803 ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಪ್ರಕರಣಗಳು ವರದಿಯಾಗಿದ್ದು, ಇವುಗಳ ಪೈಕಿ 75 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ವರದಿಯಾಗಿದೆ (ಪ್ರ.ವಾ., ಫೆ. 4). ಅಂದರೆ ಶೇಕಡ 3ರಿಂದ 4ರಷ್ಟು ಪ್ರಕರಣಗಳಲ್ಲಿ ಮಾತ್ರ ಆರೋಪ ಸಾಬೀತಾಗಿದೆ ಎಂದಾಯಿತು. ಸಾಕ್ಷ್ಯಾಧಾರಗಳ ಕೊರತೆ, ಸುಳ್ಳು ಪ್ರಕರಣ, ತನಿಖೆ ಹಾಗೂ ವಿಚಾರಣೆ ವಿಳಂಬದಿಂದ 1,932 ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆಯಾಗಿರುವುದಾಗಿ ವರದಿ ವಿವರಿಸಿದೆ. ಆದರೆ ಈ ಕಾರಣಗಳಿಗಿಂತಲೂ ಹೆಚ್ಚಾಗಿ ಹಣ, ರಾಜಕೀಯ ಪ್ರಭಾವ, ಪೊಲೀಸರು ಎಫ್‌ಐಆರ್ ಹಂತದಲ್ಲಿಯೇ ಪ್ರಕರಣವನ್ನು ದುರ್ಬಲಗೊಳಿಸುವುದು, ಪೊಲೀಸ್ ಠಾಣೆಗಳಲ್ಲೇ ನಡೆಯುವಂತಹ ರಾಜಿಸಂಧಾನ... ಇಂತಹ ಹತ್ತಾರು ಅಂಶಗಳು ಸೇರಿರುತ್ತವೆ.

ಗ್ರಾಮಾಂತರ ಪ್ರದೇಶದ ಪಂಚಾಯಿತಿ ಕಟ್ಟೆಗಳಲ್ಲಿ ಅತ್ಯಾಚಾರ ಆರೋಪಿಗೆ ದಂಡ ವಿಧಿಸುವ ಮೂಲಕ ಪ್ರಕರಣವನ್ನು ಸಮಾಪ್ತಿಗೊಳಿಸಿದಂತಹ ನಿದರ್ಶನಗಳೂ ಇವೆ. ಹೀಗಾಗಿ, ಅರ್ಧದಷ್ಟು ಪ್ರಕರಣಗಳು ದಾಖಲಾಗದೆ ತೆರೆಮರೆಯಲ್ಲೇ ಇತ್ಯರ್ಥಗೊಳ್ಳುತ್ತವೆ. ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗದ ವಿನಾ ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸುವುದು ಕಷ್ಟಕರ.

- ಬೂಕನಕೆರೆ ವಿಜೇಂದ್ರ, ಮೈಸೂರು

ADVERTISEMENT

ಸಹೋದರ ಸಂಬಂಧ: ಪಾಂಡವರ ಅಮೂಲ್ಯ ಮಾದರಿ

ಮಧ್ಯಪ್ರದೇಶದಲ್ಲಿ ತಂದೆಯ ಅಂತ್ಯಕ್ರಿಯೆಯನ್ನು ಯಾರು ನೆರವೇರಿಸಬೇಕು ಎಂಬ ವಿಚಾರವಾಗಿ ಸಹೋದರರ ನಡುವೆ ಜಗಳ ನಡೆದು, ಮೃತದೇಹವನ್ನು ಕತ್ತರಿಸಿ ಅರ್ಧ ಭಾಗವನ್ನು ತನಗೆ ಕೊಡುವಂತೆ, ಸಹೋದರರ ಪೈಕಿ ಒಬ್ಬ ಪಟ್ಟುಹಿಡಿದದ್ದಾಗಿ ವರದಿಯಾಗಿದೆ (ಪ್ರ.ವಾ., ಫೆ. 4). ತಂದೆಯ ಮೃತದೇಹದಲ್ಲಿ ಪಾಲು ಕೇಳುವ ಮಕ್ಕಳ ಅಮಾನವೀಯ ಹಟ ಓದಿ ಹೃದಯ ಒಡೆದಂತಾಯಿತು. ತಂದೆಯ ಅಂತ್ಯಸಂಸ್ಕಾರ ನಡೆಸುವ ವಿಚಾರದಲ್ಲಿ ಹೀಗೆ ಹಟ ಹಿಡಿದದ್ದು ದುರದೃಷ್ಟಕರ. ಊರಿನವರ ಮಧ್ಯಸ್ಥಿಕೆಯ ಪರಿಣಾಮವಾಗಿ ದುರುಳ ಸಹೋದರರ ಹಟ ಸಾಧನೆಯಾಗಲಿಲ್ಲ ಎಂಬುದು ಬೇರೆ ಮಾತು. ತಂದೆ– ತಾಯಿ ಕಷ್ಟ-ನಷ್ಟ ಅನುಭವಿಸಿ ತಮ್ಮ ಮಕ್ಕಳನ್ನು ಸಾಕಿ ಸಲಹುತ್ತಾರೆ. ಆದರೆ ಮಕ್ಕಳಲ್ಲಿ ಇಂತಹ ರಾಕ್ಷಸಿ ಪ್ರವೃತ್ತಿ ಮೂಡುವುದಾದರೂ ಹೇಗೆ ಎಂದು ಆಶ್ಚರ್ಯವಾಗುತ್ತದೆ. ಶೈಕ್ಷಣಿಕ ಫಲಿತಾಂಶ ಹೆಚ್ಚಳದ ಬಗ್ಗೆ ಶಾಲೆಗಳ ಮೇಲೆ ಸದಾ ಒತ್ತಡ ಹೆಚ್ಚಾಗುತ್ತಿದೆಯೇ ವಿನಾ ನೈತಿಕ ಮೌಲ್ಯವನ್ನು ಹೆಚ್ಚಿಸುವ ವಿಷಯವನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.

ವೃದ್ಧಾಪ್ಯದಲ್ಲಿ ಮಕ್ಕಳೊಂದಿಗೆ ಹೊಂದಿಕೊಂಡು ಬದುಕುವ ಸಹನೆಯನ್ನು ವಯೋವೃದ್ಧ ತಂದೆ– ತಾಯಿ ಮೈಗೂಡಿಸಿಕೊಳ್ಳುವುದು ಅಗತ್ಯವಾದರೂ ಮಕ್ಕಳು ನಾನು ತಾನು ಎಂದು ಪೈಪೋಟಿ, ಈರ್ಷ್ಯೆಗೆ ಬಿದ್ದರೆ ಹೆತ್ತವರ ಬದುಕು ನರಕವಾಗುತ್ತದೆ. ‘ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು’ ಎಂಬ ಗಾದೆ ಸರಿ ಇರಬಹುದು. ಆದರೂ ನಮ್ಮಲ್ಲಿ ಲಕ್ಷಾಂತರ ಕುಟುಂಬಗಳು ಇಂದಿಗೂ‌ ಒಗ್ಗಟ್ಟಿನಿಂದ ಮಾದರಿಯಾಗಿ ಬದುಕುತ್ತಿವೆ. ಪರಸ್ಪರ ನಂಬಿಕೆ, ಸಹಕಾರದಿಂದ ಬದುಕುತ್ತಾ ತಪ್ಪುಗ್ರಹಿಕೆಗಳನ್ನು ತ್ಯಜಿಸುವುದರಿಂದ ಸಹೋದರ ಸಂಬಂಧ ಅಜರಾಮರವಾಗಿರುತ್ತದೆ. ಪಾಂಡವರು ಇದಕ್ಕೆ ಅಮೂಲ್ಯ ಮಾದರಿಯಾಗಿ ನಿಲ್ಲುತ್ತಾರೆ. ದಶರಥನ ಮಕ್ಕಳ ಮನೆಯಲ್ಲಿ ಸ್ವಾರ್ಥದ ಕಿಡಿ ಹೊತ್ತಿದ್ದರೂ ಸಹೋದರ ವಾತ್ಸಲ್ಯ ಮಾತ್ರ ಕಿಂಚಿತ್ತೂ ಕಡಿಮೆಯಾಗಲಿಲ್ಲ. ನಮ್ಮ ಸಂಸ್ಕೃತಿಯ ಸಾರ ಬದುಕಿನ ದಾರಿದೀಪವಾಗಲಿ.⇒

-ತಿರುಪತಿ ನಾಯಕ್, ಕಲಬುರಗಿ

ಗುರು–ವಿರಕ್ತರು ಒಂದಾದರೆ ಸಮಸ್ಯೆಗೆ ಪರಿಹಾರ

ಕೂಡಲಸಂಗಮದಲ್ಲಿ ನಡೆದ ಹಂಡೆವಜೀರ ಸಮಾಜದ ಸಮಾವೇಶದಲ್ಲಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ‘ವೀರಶೈವದಿಂದ ಲಿಂಗಾಯತ, ಲಿಂಗಾಯತದಿಂದ ವೀರಶೈವ ತೆಗೆದರೆ ಸಮಾಜಕ್ಕೆ ನಷ್ಟ. ಭಿನ್ನಾಭಿಪ್ರಾಯ ಬಿಟ್ಟು ಒಗ್ಗೂಡಿ ನಡೆದರೆ ಸಮಾಜಕ್ಕೆ ಭವಿಷ್ಯವಿದೆ. ಧರ್ಮವನ್ನು ಒಡೆಯುವ ಕಾರ್ಯವನ್ನು ಯಾರೂ ಮಾಡಬಾರದು’ ಎಂದು ಹೇಳಿದರೆ, ಸಚಿವ ಶಿವಾನಂದ ಪಾಟೀಲ ‘ಗುರು—ವಿರಕ್ತರಲ್ಲಿ ಭಿನ್ನಾಭಿಪ್ರಾಯವಿದೆ. ವೀರಶೈವ– ಲಿಂಗಾಯತರು ಒಗ್ಗಟ್ಟಾದರೆ ದೇಶವನ್ನೇ ಆಳುತ್ತೇವೆ’ ಎಂದಿದ್ದಾರೆ (ಪ್ರ.ವಾ., ಫೆ. 3). ಈ ಧರ್ಮದಲ್ಲಿನ ಕೆಲವು ಸಮಸ್ಯೆಗಳು ಬಗೆಹರಿಯದ ವಿನಾ ಸಮಾಜ ಒಂದುಗೂಡುವುದು ಕನಸಿನ ಮಾತು. ಗುರು–ವಿರಕ್ತರು ಒಂದಾದರೆ ಸಮಾಜ ಒಗ್ಗೂಡುತ್ತದೆ. ಸಮಾನಮನಸ್ಕ ಗುರು–ವಿರಕ್ತರು ಒಂದು ಕಡೆ ಸೇರಿ ಈ ಸಂಬಂಧ ಚರ್ಚಿಸಿ ತೀರ್ಮಾನಕ್ಕೆ ಬರಬೇಕು.⇒

-ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ

ಬಿಪಿಎಲ್‌ ಪಡಿತರ ಚೀಟಿ: ಬದಲಾಗಲಿ ಮಾನದಂಡ

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. ಬಿಪಿಎಲ್‌ ಪಡಿತರ ಚೀಟಿದಾರರಿಗೆ ಸರ್ಕಾರ ನೀಡುವ ಸವಲತ್ತುಗಳನ್ನು ಪಡೆದುಕೊಳ್ಳಲು ಅರ್ಹರಲ್ಲದವರು ಸಹ ವಾಮಮಾರ್ಗದಲ್ಲಿ ಬಿಪಿಎಲ್‌ ಪಡಿತರ ಚೀಟಿ ಮಾಡಿಸಿಕೊಂಡಿರುತ್ತಾರೆ. ಆದರೆ ಅವರಿಗೆ ಪಡಿತರ ಧಾನ್ಯದ ಅವಶ್ಯಕತೆ ಇರುವುದಿಲ್ಲ. ತಮಗೆ ಬೇಡವಾದ ಪಡಿತರ ಧಾನ್ಯಗಳನ್ನು ಅವರು ಮಾರಿಕೊಳ್ಳುತ್ತಾರೆ. ಇದರಿಂದಾಗಿ, ಮಧ್ಯವರ್ತಿಗಳಿಗೆ ಲಾಭ, ಸರ್ಕಾರಕ್ಕೆ ನಷ್ಟ. ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟವಾಗುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ.

ಪಡಿತರ ಅಕ್ಕಿಗೆ ಪಾಲಿಶ್‌ ಮಾಡಿಸಿ ಉತ್ತಮ ದರ್ಜೆಯ ಅಕ್ಕಿಯೆಂದು ಬಿಂಬಿಸಿ ಪಕ್ಕದ ರಾಜ್ಯಗಳಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ. ಅನರ್ಹ ಬಿಪಿಎಲ್‌ ಪಡಿತರ ಚೀಟಿಗಳನ್ನು ಗುರುತಿಸಿ ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ಆಮೆಗತಿಯಲ್ಲಿ ಸಾಗಿದೆ. ಬಿಪಿಎಲ್‌ ಪಡಿತರ ಚೀಟಿ ಪಡೆದುಕೊಳ್ಳಲು ಪ್ರಸ್ತುತ ಇರುವ ಮಾನದಂಡಗಳನ್ನು ಪರಿಷ್ಕರಿಸಿ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕು.

-ಜಿ.ನಾಗೇಂದ್ರ ಕಾವೂರು, ಸಂಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.