ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 22:30 IST
Last Updated 24 ಜುಲೈ 2025, 22:30 IST
   

ವಿನಾಶಕಾರಿ ಯೋಜನೆ: ಎಚ್ಚರ ಬೇಕು

‘ಶರಾವತಿ ಪಂಪ್ಡ್‌ ಸ್ಟೋರೇಜ್‌ ಪ್ರಾಜೆಕ್ಟ್‌’ ಅವೈಜ್ಞಾನಿಕವಾದುದು. ಲಕ್ಷೋಪಲಕ್ಷ ಮರಗಳು ಹನನವಾಗುವಂಥದ್ದು. ಅಪರೂಪದ ಸಿಂಹಬಾಲದ ಸಿಂಗಳೀಕಗಳು ಇರುವ ಅಭಯಾರಣ್ಯವನ್ನು ಮುಳುಗಿಸುವಂಥದ್ದು. ಇದೆಲ್ಲ ಗೊತ್ತಿದ್ದರೂ ಅದಕ್ಕೆ ‘ರಾಷ್ಟ್ರೀಯ ವನ್ಯಜೀವಿ ಮಂಡಳಿ’ಯು ಷರತ್ತುಬದ್ಧ ಒಪ್ಪಿಗೆಯನ್ನು ಸೂಚಿಸಿರುವುದು ವಿಷಾದನೀಯ. 

ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಅವಧಿ ಮುಗಿದು ನಾಲ್ಕೂವರೆ ವರ್ಷಗಳಾದವು. ಈಗ ಅಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳೇ ಇಲ್ಲ. ಯೋಜನೆಯಿಂದ ಶರಾವತಿಯ ಕೆಳ ಹರಿವು ಇಲ್ಲದೇ ಅತಿಹೆಚ್ಚು ಬಾಧೆ ಅನುಭವಿಸುವವರು ಉತ್ತರ ಕನ್ನಡದ ಕರಾವಳಿ ಸಮೀಪದ ಹಳ್ಳಿಗರು. ಜನಾಭಿಪ್ರಾಯ ವ್ಯಕ್ತಪಡಿಸಬೇಕಾದ ಜನಪ್ರತಿನಿಧಿಗಳೇ ಎರಡೂ ಜಿಲ್ಲೆಗಳಲ್ಲಿ ಇಲ್ಲದಿರುವಾಗ ವಿನಾಶಕಾರಿ ಯೋಜನೆಯನ್ನು ಸರ್ಕಾರ ಕೈಗೊಳ್ಳುವುದು ಸರಿಯೇ?

ADVERTISEMENT

-ಶಾರದಾ ಗೋಪಾಲ, ಮಮತಾ ರೈ, ಸರೋಜಾ ಪ್ರಕಾಶ, ಡಿ.ಕೆ. ಮಹೇಶ ಕುಮಾರ, ಧಾರವಾಡ

ಒತ್ತಾಯ ಮಾಡುವುದು ಸರಿಯೇ?

ಕನ್ನಡ ಸಾಹಿತ್ಯ ಪರಿಷತ್ತು ವಾರ್ಷಿಕ ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಆಹ್ವಾನಿಸಿದೆ. ಪ್ರಶಸ್ತಿಗಾಗಿ ಪುಸ್ತಕಗಳನ್ನು ಆಯ್ಕೆ ಮಾಡಲು ಕಳಿಸುವವರು ಪರಿಷತ್ತಿನ ಸದಸ್ಯ
ರಾಗಿರಬೇಕು ಅಥವಾ ಸದಸ್ಯತ್ವ ಪಡೆದುಕೊಂಡು ನಂತರ ಸಲ್ಲಿಸಬೇಕು ಎಂದು ಹೇಳಿದೆ (ಪ್ರ.ವಾ., ಜುಲೈ 23). ದತ್ತಿ ಪ್ರಶಸ್ತಿಗೆ ಪುಸ್ತಕ ಸಲ್ಲಿಸುವವರು ಕಸಾಪ ಸದಸ್ಯರಾಗಿರಬೇಕೆಂದು ದತ್ತಿ ಇಟ್ಟಿರುವವರು ಅಥವಾ ಆ ಕಾಲದ ಕಸಾಪ ಕಾರ್ಯಕಾರಿ ಸಮಿತಿ ನಿರ್ಣಯ ಮಾಡಿದೆಯೆ?

ಒಂದು ಸಂಸ್ಥೆಗೆ ಸದಸ್ಯರಾಗುವವರು ಆ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಇಷ್ಟಪಟ್ಟು, ಒಪ್ಪಿಕೊಂಡು ಸದಸ್ಯರಾಗುತ್ತಾರೆ. ಆ ರೀತಿಯ ಪ್ರೀತಿ ಇದ್ದವರು ಈಗಾಗಲೇ ಕಸಾಪ ಸದಸ್ಯರಾಗಿದ್ದಾರೆ ಮತ್ತು ಮುಂದೆಯೂ ಆಗುತ್ತಾರೆ. ಆದರೆ, ಪುಸ್ತಕ ಸಲ್ಲಿಸುವಾಗಲೇ ಸದಸ್ಯರಾಗಿರಬೇಕೆಂಬ ನಿಯಮ ಹೇರುವುದು ಸರಿಯೇ?

-ಈ. ಬಸವರಾಜು, ಬೆಂಗಳೂರು

ಉಪ ಪಂಗಡದ ನೋವು ಆಲಿಸುವಿರಾ?

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ವೀರಶೈವ– ಲಿಂಗಾಯತ ಉಪ ಪಂಗಡಗಳು ಏಕರೂಪದ ಹೆಸರು ಬರೆಸುವಂತೆ ಗಣ್ಯರು ಕರೆ ನೀಡಿದ್ದಾರೆ. ಬಲಾಢ್ಯ ಪಂಗಡಗಳ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆಯಾದಾಗ ಅವರಿಗೆ ಉಪ ಪಂಗಡಗಳು ನೆನಪಾಗುತ್ತವೆ. ಈ ಗಣ್ಯರು ಯಾವಾಗಲಾದರೂ ಸಮುದಾಯದ ಕಷ್ಟ–ಸುಖ ವಿಚಾರಿಸಿದ್ದಾರೆಯೇ? ಲಿಂಗಾಯತ ಹೊಲೆಯರು, ಲಿಂಗಾಯತ ಕುರುಬ, ಲಿಂಗಾಯತ ಕ್ಷೌರಿಕ, ಲಿಂಗಾಯತ ಮಡಿವಾಳ, ಲಿಂಗಾಯತ ಬೋವಿ, ಲಿಂಗಾಯತ ಭಜಂತ್ರಿ, ಲಿಂಗಾಯತ ಸಮಗಾರ, ಲಿಂಗಾಯತ ಕುಂಬಾರ– ಹೀಗೆ ನೂರಕ್ಕೂ ಹೆಚ್ಚು ಉಪ ಪಂಗಡಗಳೊಂದಿಗೆ ಸಂಬಂಧವನ್ನು ಬೆಳೆಸಿದ್ದಾರೆಯೇ?

-ಸಿ. ರುದ್ರಪ್ಪ, ಬೆಂಗಳೂರು 

ಕಾಡು–ನಾಡಿನ ಅರಿವಿಲ್ಲದ ಆದೇಶ

‘ಕಾಡಿಗೆ ಜಾನುವಾರು ಬಿಡುವಂತಿಲ್ಲ’ (ಪ್ರ.ವಾ., ಜುಲೈ 23) ಎಂಬ ಅರಣ್ಯ ಸಚಿವರ ಆದೇಶ ಆಶ್ಚರ್ಯ ತರಿಸುವಂತಿದೆ. ಜಾನುವಾರು ಸಾಕುವವರು ಶ್ರೀಸಾಮಾನ್ಯರು. ಹಸಿವು ಮತ್ತು ಭೂಮಿಯ ಅಂತಃಸತ್ವ ಅರಿತ ಇವರು ಯಾವುದೇ ತಕ್ಷಣದ ಲಾಭವನ್ನು ನಿರೀಕ್ಷಿಸಿದವರಲ್ಲ. ದನ–ಕರುಗಳ ಉತ್ಪನ್ನಗಳಿಂದ ಜೀವನ ನಿರ್ವಹಣೆ ಮಾಡುವವರು. ಕಡಿಮೆ ಭೂಮಿ ಹೊಂದಿದ ಇವರು ಜಾನುವಾರುಗಳ ಮೇವಿಗೆ ಬಹುಪಾಲು ಕಾಡನ್ನು ನಂಬಿದವರು. ಕಾಡನ್ನು ನಾಶಮಾಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವ, ಕಳ್ಳದಂಧೆ ಮಾಡುವ, ಉಳ್ಳವರ

ಮತ್ತು ಅಧಿಕಾರಶಾಹಿಗಳ ಜೊತೆ ಶಾಮೀಲಾಗಿ ಧ್ವಂಸ ಮಾಡುವಂತಹ ಯಾವುದೇ ಹೊಣೆಗೇಡಿತನ ಜಾನುವಾರು ಸಾಕುವವರಲ್ಲಿ ಇಲ್ಲ. ಸಚಿವರ ಆದೇಶವು ಕಾಡಿನ ಜೊತೆಗೆ ನಂಟನ್ನು ಹೊಂದಿದ ಸ್ಥಳೀಯರನ್ನು ಹೊರಗಿಡುವ ಹುನ್ನಾರವಷ್ಟೇ.

-ಅಣ್ಣಪ್ಪ ಎನ್. ಮಳೀಮಠ್, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.