ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 18 ಫೆಬ್ರುವರಿ 2026, 23:30 IST
Last Updated 18 ಫೆಬ್ರುವರಿ 2026, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಅಕ್ರಮಗಳಿಗೆ ಗಣಿ ಇಲಾಖೆಯ ಕುರುಡು

ಕಳೆದ ಒಂದೂವರೆ ದಶಕದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯ ವಿಚಾರ ಸದ್ದು ಮಾಡಿರಲಿಲ್ಲ. ಇತ್ತೀಚೆಗೆ, ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ) ಗಣಿಯಲ್ಲೇ ಅಕ್ರಮ ನಡೆದಿರುವುದು, ಸದ್ಯ ಅಸ್ತಿತ್ವದಲ್ಲಿರುವ ಕಾನೂನು, ನೀತಿ–ನಿಯಮಾವಳಿಗಳನ್ನೇ ಪ್ರಶ್ನೆ ಮಾಡುವಂತಿದೆ. ರಾಜ್ಯ, ಹೊರರಾಜ್ಯದ ಪ್ರಭಾವಿಗಳ ಕಾರ್ಖಾನೆಗಳಿಗೆ ಅದಿರು ಹೋಗಿರುವುದನ್ನು ಪೊಲೀಸ್‌ ಇಲಾಖೆಯೂ ಕ್ಷಿಪ್ರಗತಿಯಲ್ಲಿ ಪತ್ತೆ ಹಚ್ಚಿದೆ. ಅರಣ್ಯ ಇಲಾಖೆ ಕೂಡ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಇಲ್ಲಿ ಎದ್ದು ಕಾಣುತ್ತಿರುವುದು ಗಣಿ ಇಲಾಖೆಯ ಅದಕ್ಷತೆ. ಈ ಪ್ರಕರಣ ನೇರವಾಗಿ ಗಣಿ ಇಲಾಖೆಗೆ ಸಂಬಂಧಿಸಿದ್ದಾದರೂ, ಗಣಿ ಇಲಾಖೆ ಒಂದು ಪಿಸಿಆರ್‌ ದಾಖಲಿಸಿದ್ದು ಬಿಟ್ಟರೆ ಈವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಗಣಿ ಇಲಾಖೆ ಎಷ್ಟು ಮೈಮರೆಯುತ್ತದೆಯೋ ಬಳ್ಳಾರಿಯ ಸಂಪತ್ತು ಅಷ್ಟೂ ಕರಗುತ್ತದೆ ಎಂಬುದನ್ನು ಸರ್ಕಾರ ಮನಗಾಣಬೇಕು.

ADVERTISEMENT

-ಶ್ರೀಶೈಲ ಆಲದಳ್ಳಿ, ಸಂಡೂರು

ಪಟ್ಟದ ಪಗಡೆಯಾಟ; ಬಡಪಾಯಿ ಕೂಸು

ರಾಜ್ಯ ಸರ್ಕಾರ ಇನ್ನೂ ಕಂಟಕದಿಂದ ಪಾರಾದಂತೆ ಕಾಣಿಸುತ್ತಿಲ್ಲ. ಸಿದ್ದರಾಮಯ್ಯ
ಅವರು ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಹೇಳಿಕೆಗಳನ್ನು ಮಾಧ್ಯಮ
ದವರ ಮುಂದೆ ನೀಡುತ್ತಿದ್ದರೂ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಟ್ಟದ ಪಗಡೆಯಾಟ ನಿಲ್ಲಿಸುತ್ತಿಲ್ಲ. ಈ ಇಬ್ಬರು ನಾಯಕರ ಕುರ್ಚಿ ಕಿತ್ತಾಟ
ದಲ್ಲಿ ರಾಜ್ಯ ಅಭಿವೃದ್ಧಿ ಕಾಣದೆ ಬಸವಳಿದಿದೆ. ಈಗ ಎಲ್ಲರ ಚಿತ್ತ ಮತ್ತೆ ಬಜೆಟ್ ಮೇಲಿದೆ. ಗಂಡ ಹೆಂಡಿರ ಜಗಳದ ನಡುವೆ ಕೂಸು ಬಡವಾದಂತೆ ಇಬ್ಬರು ನಾಯಕರ ಕಿತ್ತಾಟ ಆಯವ್ಯಯದ ಮೇಲೆ ಪರಿಣಾಮ ಬೀರುವಂತಾಗಬಾರದು. ಈ ಮುಸುಕಿನ ಗುದ್ದಾಟ ಆದಷ್ಟು ಬೇಗ ಕೊನೆಗೊಳ್ಳುವುದು ರಾಜ್ಯದ ಹಿತದೃಷ್ಟಿಯಿಂದ ಅಗತ್ಯ.

ನಾಗಾರ್ಜುನ ಹೊಸಮನಿ, ಕಲಬುರಗಿ


ಸ್ಮಾರಕ ಸಂರಕ್ಷಣೆ ಆದ್ಯತೆ ವಿಷಯವಾಗಲಿ

ಐತಿಹಾಸಿಕ ಸ್ಮಾರಕಗಳ ಶಿಲ್ಪಕಲಾ ಕೌಶಲ್ಯಕ್ಕೆ ಕರ್ನಾಟಕ ಹೆಸರಾಗಿದೆ. ನಮ್ಮ ಹಿಂದಿನ
ಅರಸರು, ಶಿಲ್ಪಕಲಾವಿದರು ಗುಡಿ, ಕೋಟೆ, ರಾಜಧಾನಿಗಳನ್ನು ಕಟ್ಟಿ ನಮಗೆ
ಬಳುವಳಿಯಾಗಿ ಉಳಿಸಿ ಹೋಗಿದ್ದಾರೆ. ಯಾವುದೇ ರಾಜ್ಯದ ಗರ್ವಕ್ಕೆ ಕಾರಣ ಆಗಬಹುದಾದ ಈ ಅಮೂಲ್ಯ ಸ್ಮಾರಕಗಳು ಅವನತಿ ಹೊಂದುತ್ತಿವೆ. ಇವನ್ನು ಕಾಪಾಡುವತ್ತ ನಮ್ಮ ಗಮನವು ಹರಿಯಬೇಕು. ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಶಿಲ್ಪಕಲಾ ಅಕಾಡೆಮಿಯು ಗಮನಹರಿಸಬೇಕು. ಶ್ರವಣಬೆಳಗೊಳ, ಬೇಲೂರು, ಹಳೆಬೀಡು, ಹಂಪಿ, ವಿಜಾಪುರ, ಬೀದರ್‌, ಮುಂತಾದ ಕಡೆಗಳಲ್ಲಿನ ಚಾರಿತ್ರಿಕ ಸ್ಮಾರಕಗಳು ನಾಡಿಗೆ ಹೆಮ್ಮೆ ತರುವಂತಿವೆ. ಅವುಗಳ ಸ್ಥಿತಿಗತಿ ಬಗ್ಗೆ ಅಕಾಡೆಮಿ ಅಧ್ಯಯನ ನಡೆಸಿ ಸರ್ಕಾರದ ಗಮನಸೆಳೆಯಲಿ. ಸ್ಮಾರಕಗಳ ಸಂರಕ್ಷಣೆಯಲ್ಲಿ ಜನಸಾಮಾನ್ಯರೂ ಸ್ವಯಂ ಪ್ರೇರಣೆಯಿಂದ ಭಾಗಿಯಾಗಲಿ.

-ಮಾಲತಿ ಪಟ್ಟಣಶೆಟ್ಟಿ, ಧಾರವಾಡ 

ಸೌಹಾರ್ದ ಪಸರಿಸಲಿ, ರಕ್ಷಣಾವೆಚ್ಚ ತಗ್ಗಲಿ

ಭಾರತ ಸರ್ಕಾರವು ಫ್ರಾನ್ಸ್ ದೇಶದಿಂದ ಖರೀದಿಸುತ್ತಿರುವ ರಫೇಲ್ ಯುದ್ಧ ವಿಮಾನಕ್ಕೆ ತಗಲುತ್ತಿರುವ ವೆಚ್ಚವು ಭಾರತದ ದೊಡ್ಡ ರಾಜ್ಯಗಳ ಜನಸಾಮಾನ್ಯರ ವಾರ್ಷಿಕ ಬಜೆಟ್ ಗಾತ್ರಕ್ಕೆ ಸವಾಲು ಎಸೆಯುವಂತಿದೆ. ಸಮಾಜದಲ್ಲಿ ಆರ್ಥಿಕ ಸಮಸ್ಯೆಗಳು ಹಾಗೂ ಸಾಮಾಜಿಕ ತಾರತಮ್ಯ ಹಾಗೆಯೇ ಉಳಿದಿದೆ. ಹಾಗಾಗಿ, ಆಂತರಿಕ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ನೆರೆ ರಾಷ್ಟ್ರಗಳೊಂದಿಗೆ ಶಾಂತಿ, ಸ್ನೇಹ, ಸಹೋದರತ್ವ ಸಂಪಾದಿಸಿ ರಕ್ಷಣಾವೆಚ್ಚ ತಗ್ಗಿಸಿ, ಆ ಹಣವನ್ನು ಸಾರ್ವಜನಿಕ ಸಂಚಾರ ವ್ಯವಸ್ಥೆ ಬಲಪಡಿಸಲು ಸರ್ಕಾರ ಬಳಸಲಿ.

-ಪ್ರಶಾಂತ್ ಕೆ.ಸಿ., ಚಾಮರಾಜನಗರ

ಹಂಪಿ ಉತ್ಸವ: ಅದೇ ರಾಗ, ಅದೇ ಹಾಡು

ಹಂಪಿ ಉತ್ಸವ ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಆದರೆ, ಮತ್ತದೇ ಹಳೆಯ ಮುಖಗಳ ಮೂಲಕ ಉತ್ಸವ ಬೇಸರ ತರಿಸಿತು. ವಿಜಯ್ ಪ್ರಕಾಶ್, ಅರ್ಜುನ್‌ ಜನ್ಯ, ಅನುಶ್ರೀ ಮುಂತಾದವರನ್ನು ಹೊರತುಪಡಿಸಿ ಉತ್ಸವ ನಡೆಸಲು ಸಾಧ್ಯವಿಲ್ಲವೆ? ಕೋಟಿಗಟ್ಟಲೆ ಹಣ ಖರ್ಚು ಮಾಡುವ ಉತ್ಸವ ಹೊಸ ಪ್ರತಿಭೆಗಳನ್ನು ಯಾಕೆ ಒಳಗೊಳ್ಳುವುದಿಲ್ಲ? ಒಂದೇ ಬಗೆಯ ಹಾಡು–ಸಂಗೀತ, ಒಂದೇ ಬಗೆಯ ನೃತ್ಯ, ಏಕತಾನತೆಯ ನಿರೂಪಣೆಯಿಂದ ಹಂಪಿ ಉತ್ಸವ ಜೀವಂತಿಕೆ ಕಳೆದುಕೊಳ್ಳುತ್ತಿದೆ. ಉತ್ಸವವನ್ನು ಸೃಜನಶೀಲಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಇಲ್ಲದೆ ಹೋದಲ್ಲಿ ಹಂಪಿ ಉತ್ಸವದ ನೆಪದಲ್ಲಿ ಒಂದಷ್ಟು ಜನರನ್ನು ಪೋಷಿಸುವ ಕೆಲಸವಷ್ಟೇ ನಡೆಯುತ್ತದೆ.

-ಜಂಬೂಗೌಡ, ಹಂಪಿ

ಕೆಎಂಎಫ್: ವಿವೇಚನೆಯಿಂದ ಗೌರವ

ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಸಂಬಂಧಿಸಿದ ವಿಮರ್ಶೆ
ಗಳಿಗೆ ‘ಕೆಎಂಎಫ್‌’ ಕಿವುಡಾದಂತೆ ನಡೆದುಕೊಳ್ಳುತ್ತಿದೆ. ಗ್ರಾಹಕರು ಹಾಗೂ ವೈದ್ಯರೂ ಸೇರಿದಂತೆ ಹಲವರು ನಂದಿನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಅಭಿಪ್ರಾಯಗಳ ಬಗ್ಗೆ ಸ್ಪಷ್ಟನೆ ಕೊಡುವುದು, ಗೊಂದಲ ಪರಿಹರಿಸುವುದು ಕೆಎಂಎಫ್‌ ಕರ್ತವ್ಯ. ಆದರೆ, ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದವರ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳು
ತ್ತೇವೆ ಎಂದು ಕೆಎಂಎಫ್‌ ಬೆದರಿಸುತ್ತಿದೆ. ತಾವು ಖರೀದಿಸಿ ಬಳಸುವ ಉತ್ಪನ್ನ
ಗಳ ಬಗ್ಗೆ ಮಾತನಾಡುವಷ್ಟು, ಸ್ವತಂತ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಷ್ಟು ಸ್ವಾತಂತ್ರ್ಯ ಗ್ರಾಹಕರಿಗಿಲ್ಲವೆ? ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ ಗ್ರಾಹಕರನ್ನು ವಿವೇಚನೆಯಿಂದ ಗೆಲ್ಲಬೇಕೇ ಹೊರತು, ಅಧಿಕಾರದ ದರ್ಪದಿಂದ ಅಲ್ಲ ಎಂಬುದನ್ನು ಸಂಸ್ಥೆಯ ಆಡಳಿತವರ್ಗ ತಿಳಿಯಬೇಕು.

- ದಿವಾಕರ್ ಡಿ., ಕೆ ಹೊನ್ನಲಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.