ADVERTISEMENT

ವಾಚಕರ ವಾಣಿ: ಸೋಮವಾರ, ಮಾರ್ಚ್ 13, 2023

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 22:40 IST
Last Updated 12 ಮಾರ್ಚ್ 2023, 22:40 IST

ಕಾಳ್ಗಿಚ್ಚು ತಡೆ: ಹೆಲಿಕಾಪ್ಟರ್‌ ಒದಗಿಸಿ
ಬಿರುಬಿಸಿಲಿನ ಈ ಕಾಲದಲ್ಲಿ ಒಂದು ಕಿಡಿ ಕಾಡಿಗೆ ಬಿದ್ದರೂ ಸಾಕು ಕಾಡಿಗೆ ಕಾಡೇ ಹೊತ್ತಿ ಉರಿಯುತ್ತದೆ. ಮೊನ್ನೆ ನಮ್ಮ ಪಕ್ಕದ ಗ್ರಾಮದ (ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು) ಕಾಡಿಗೆ ಬೆಂಕಿ ಬಿದ್ದು 50 ಎಕರೆಗಿಂತಲೂ ಹೆಚ್ಚು ಕಾಡು ನಾಶವಾಯಿತು. ಅರಣ್ಯ ಸಿಬ್ಬಂದಿ, ಊರವರು ಎಷ್ಟು ಪ್ರಯತ್ನಪಟ್ಟರೂ ನಂದಿಸಲು ಸಾಧ್ಯವಾಗಲಿಲ್ಲ.

ಈ ವರ್ಷ ಬೇಸಿಗೆ ಹಿಂದಿನ ವರ್ಷಕ್ಕಿಂತ ತೀವ್ರವಾಗಿದೆ. ಇದು ಹೀಗೇ ಮುಂದುವರಿದರೆ ಕಾಡಿಗೆ ಕಿಚ್ಚು ದೊಡ್ಡ ಪ್ರಮಾಣದಲ್ಲಿ ಬೀಳುವುದರಲ್ಲಿ ಸಂಶಯವಿಲ್ಲ. ಆಗ ಅದನ್ನು ಕೆಳಗಿನಿಂದ ನಿಲ್ಲಿಸುವುದು ಕಷ್ಟ. ಹೆಲಿಕಾಪ್ಟರ್ ಇದ್ದರೆ ಮೇಲಿನಿಂದ ನೀರು ಹನಿಸಿ ಬೆಂಕಿಯನ್ನು ಸುಲಭವಾಗಿ ನಂದಿಸಬಹುದು. ಪ್ರಧಾನಿಯವರು ಕೊಡಗು ಜಿಲ್ಲೆಗೊಂದು ಹೆಲಿಕಾಪ್ಟರ್ ಒದಗಿಸಿ, ಕಾಡಿನ ಬೆಂಕಿ ಆರಿಸಲು ನೆರವಾಗಬೇಕು. ಇರುವ ಕಾಡುಗಳನ್ನಾದರೂ ಉಳಿಸೋಣ.
–ಸಹನಾ ಕಾಂತಬೈಲು, ಬಾಲಂಬಿ, ಮಡಿಕೇರಿ

***

ADVERTISEMENT

ಬಹು ಕ್ಷೇತ್ರಗಳಲ್ಲಿ ಸ್ಪರ್ಧೆ: ತಿದ್ದುಪಡಿ ಅಗತ್ಯ
ಸಂಸತ್ತು ಅಥವಾ ವಿಧಾನಸಭೆಗೆ ಆಯ್ಕೆಯಾಗಲು ಬಯಸುವವರು ಒಂದಕ್ಕಿಂತ ಹೆಚ್ಚು ಮತಕ್ಷೇತ್ರಗಳಲ್ಲಿ ಮತ್ತು ರಾಷ್ಟ್ರದ ಯಾವುದೇ ರಾಜ್ಯದಿಂದ ಸ್ಪರ್ಧಿಸಲು ಅವಕಾಶವಿದೆ. ಹೀಗೆ ಒಂದಕ್ಕಿಂತ ಹೆಚ್ಚು ಮತಕ್ಷೇತ್ರಗಳಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಒಂದು ಕ್ಷೇತ್ರವನ್ನಷ್ಟೇ ಉಳಿಸಿಕೊಂಡು ಉಳಿದೆಡೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕಾಗುವುದರಿಂದ, ತೆರವಾಗುವ ಆ ಸ್ಥಾನಗಳಿಗೆ ಉಪಚುನಾವಣೆ ನಡೆಸಬೇಕಾಗುತ್ತದೆ. ಇದರಿಂದ ಸರ್ಕಾರದ ಮೇಲೆ ಅನಗತ್ಯ ವೆಚ್ಚದ ಭಾರ. ಉಪಚುನಾವಣೆಗೆ ಅಭ್ಯರ್ಥಿಗಳು ಅಧಿಕ ವೆಚ್ಚ ಮಾಡಬೇಕಾಗುತ್ತದೆ. ಇದನ್ನೆಲ್ಲ ತಪ್ಪಿಸಲು ಆಯಾ ಮತಕ್ಷೇತ್ರದವರು ಒಂದೇ ಮತಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶವಾಗುವಂತೆ ಕಾನೂನಿಗೆ ಸೂಕ್ತ ತಿದ್ದುಪಡಿ ಮಾಡುವುದು ಸೂಕ್ತ.
–ಬಸವರಾಜ ಹುಡೇದಗಡ್ಡಿ, ಬೆಂಗಳೂರು

***

ಆಕ್ಷೇಪ ತಪ್ಪಲ್ಲ, ಕ್ರಮ ತಪ್ಪು
ಮತ ನೀಡಿದ ಸದಸ್ಯ, ಆಯ್ಕೆಯಾದವರನ್ನು ಪ್ರಶ್ನಿಸುವುದು, ಆಕ್ಷೇಪಿಸುವುದು ತಪ್ಪಲ್ಲ. ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ, ಆಯ್ಕೆಯಾಗಿ ಹುದ್ದೆ ಅಲಂಕರಿಸಿದ ವ್ಯಕ್ತಿ, ಆಕ್ಷೇಪ ಒಡ್ಡಿದ ಸದಸ್ಯರ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳುವುದು ಖಂಡಿತ ತಪ್ಪು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅವ್ಯವಸ್ಥೆಯನ್ನು ಪ್ರಶ್ನಿಸಿದ್ದ ಚಂದನ ವಾಹಿನಿ ಕಾರ್ಯಕ್ರಮ ಮುಖ್ಯಸ್ಥೆ ನಿರ್ಮಲಾ ಎಲಿಗಾರ್‌ ಅವರ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಅಮಾನತು ಮಾಡಿರುವ ಕ್ರಮ ಸಾಧುವಲ್ಲ. ಬೇರೆ ಕ್ಷೇತ್ರದಲ್ಲಾದರೆ ‘ಅಪ್ರಬುದ್ಧತೆ’ ಎಂದು ಪರಿಗಣಿಸಬಹುದಿತ್ತೇನೊ. ಆದರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ, ಅದೂ ಕನ್ನಡ ನಾಡಿನ ಸಾಕ್ಷಿಪ್ರಜ್ಞೆ ಎಂದೆನಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂಥವೆಲ್ಲ ನಡೆಯಲೇಬಾರದು. ಸಾಹಿತ್ಯ ಲೋಕದ ಹಿರಿಯರು ತಕ್ಷಣವೇ ಈ ಅಪಸವ್ಯವನ್ನು ತಿದ್ದಿ ಸರಿಪಡಿಸಿ, ಮುಂದೆ ಇಂಥವು ಸಂಭವಿಸದಂತೆ ತಾಕೀತು ಮಾಡಬೇಕಿದೆ.
–ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ

***

ಅಂದಿನ ಅಸಮಾಧಾನಕ್ಕೆ ಇಂದು ಶಾಂತಿ?
ಹಿಂದೊಮ್ಮೆ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಒಂದೇ ಒಂದು ಮತದ ಕೊರತೆಯಿಂದ ಬಿದ್ದುಹೋದಾಗ, ಸಂಸದರಾಗಿದ್ದ ಅಂಬರೀಷ್‌ ಅವರು ‘ಅಯ್ಯೋ ಇದು ನನಗೆ ಮೊದಲೇ ಗೊತ್ತಿದ್ದರೆ ನಾನೇ ಬೆಂಬಲ ನೀಡುತ್ತಿದ್ದೆ’ ಎಂದಿದ್ದರು. ಪಾಪ, ಅಂದು ಅಂಬರೀಷ್‌ ಅವರ ಮನಸ್ಸಿನಲ್ಲಿ ಉಂಟಾಗಿದ್ದ ಅಸಮಾಧಾನ ಹಾಗೂ ಅಶಾಂತಿಗೆ ಈಗ ಅವರ ಪತ್ನಿಯು ಬಿಜೆಪಿಗೆ ಘೋಷಿಸಿರುವ ಬೆಂಬಲವು ಸಮಾಧಾನ ತಂದಿರಬಹುದು. ಇದರಿಂದ ಅಂಬರೀಷ್‌ ಅವರ ಆತ್ಮಕ್ಕೆ ಶಾಂತಿ ದೊರೆಯಬಹುದೇನೊ?!
–ಜೆ.ಬಿ.ಮಂಜುನಾಥ, ಪಾಂಡವಪುರ

***

ಸದ್ಯಕ್ಕೆ ನಮಗಿರುವ ದಾರಿ...
ರಾಜಕೀಯ ಪಕ್ಷಗಳು ಮತದಾರರಿಗೆ ನೀಡುವ ಸೀರೆ, ಕುಕ್ಕರ್ ಅನ್ನು ಸುಡಿ, ಬೀದಿಗೆ ಬಿಸಾಡಿ ಎಂದು ಬೂಕನಕೆರೆ ವಿಜೇಂದ್ರ ಹೇಳಿದ್ದಾರೆ (ವಾ.ವಾ., ಮಾರ್ಚ್ 11). ಆದರೆ ಹೀಗೆ ಮಾಡುವುದರಿಂದ ಪರಿಸರ ಮಾಲಿನ್ಯ ಉಂಟಾಗುವುದಿಲ್ಲವೇ? ಸೀರೆ, ಕುಕ್ಕರ್ ಉತ್ಪಾದನೆಯ ಹಿಂದೆ ನಮ್ಮ ದೇಶದ ಸಂಪತ್ತು ಅಡಗಿದೆ. ಅದು ಸುಟ್ಟು ಬೂದಿಯಾಗಬಾರದು. ಆದ್ದರಿಂದ ರಾಜಕೀಯ ಪಕ್ಷಗಳು ಅಂಥ ಆಮಿಷ ನೀಡಲು ಬಂದಾಗ ಅದನ್ನು ನೀವು ನಯವಾಗಿ ನಿರಾಕರಿಸಬೇಕು. ಅವರು ಒತ್ತಾಯದಿಂದ ನೀಡಿದರೆ, ಅದನ್ನು ನೀವು ಬಳಸುವ ಬದಲು ಅಸಹಾಯಕರಿಗೆ ಕೊಡಿ. ಆದರೆ ನೀವು ಮಾತ್ರ ಮತ ಚಲಾಯಿಸುವಾಗ ಅವರ ಹಂಗಿಗೆ ಒಳಗಾಗದೆ, ಹುಷಾರಾಗಿ ಯೋಚಿಸಿ, ಕೋಮುವಾದಿ ಅಲ್ಲದ, ಲಾಭಾಕಾಂಕ್ಷಿ ಅಲ್ಲದ, ಜನಪರ, ಜನಸ್ನೇಹಿಯಾದ ಅಭ್ಯರ್ಥಿಗೆ ಮತ ಹಾಕಿರಿ.
–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

***

ಆ ಸ್ಥಾನ ತುಂಬಬಲ್ಲವರಾರು?
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಅವರ ಸಾವು ಆಘಾತಕಾರಿ. ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಅಪಾರ ಜನಪ್ರಿಯರಾಗಿದ್ದ ಅವರು ಲೋಕಸಭೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಗಮನ ಸೆಳೆಯುತ್ತಿದ್ದರು. ತಮ್ಮ ಸಂಸದ ನಿಧಿಯನ್ನು ಶೇ 100ರಷ್ಟು ಬಳಸಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಈ ಮೂಲಕ ‘ಅತ್ಯುತ್ತಮ ಸಂಸದ’ ಎಂಬ ಬಿರುದನ್ನೂ ಗಳಿಸಿದ್ದರು. ಹೀಗಿದ್ದರೂ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಗುರುಗಳಾದ ಶ್ರೀನಿವಾಸ ಪ್ರಸಾದ್ ಅವರ ವಿರುದ್ಧವೇ ಸ್ಪರ್ಧಿಸಿ ಸೋಲು ಅನುಭವಿಸಿದ್ದು ಅವರಿಗೆ ಮತ್ತು ಅವರ ಅಭಿಮಾನಿಗಳಿಗೆ ಆಘಾತ ನೀಡಿತ್ತು.

ಈಗ ಧ್ರುವನಾರಾಯಣ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕ್ಷೇತ್ರ ಸಂಚಾರ ಮಾಡುತ್ತಿದ್ದರು. ಇಂತಹ ಒತ್ತಡವೂ ಅವರ ಸಾವಿಗೆ ಪೂರಕವಾಗಿರಬಹುದು. ಅಜಾತಶತ್ರುವಾಗಿದ್ದ ಅವರ ಸಾವು ಚಾಮರಾಜನಗರ ಜಿಲ್ಲೆಗೆ ತುಂಬಲಾರದ ನಷ್ಟವೇ ಸರಿ. ಈ ಸ್ಥಾನವನ್ನು ತುಂಬಬಲ್ಲ ವ್ಯಕ್ತಿಗಳು ಯಾರು ಎನ್ನುವುದನ್ನು ಕಾಲವೇ ತಿಳಿಸಬೇಕು.
–ಮುಳ್ಳೂರು ಪ್ರಕಾಶ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.