ADVERTISEMENT

ಮುಗ್ಧ ಮನಸ್ಸನ್ನು ಗಾಸಿಗೊಳಿಸುವುದೇಕೆ?

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 17:18 IST
Last Updated 13 ಜನವರಿ 2020, 17:18 IST

ಮಕ್ಕಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ, ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಅವರ ಅಸಹಾಯಕತೆಯನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಗೀಳು ಹೆಚ್ಚುತ್ತಲೇ ಇದೆ. ಮಕ್ಕಳಲ್ಲಿ ಅಡಗಿದ ಪ್ರತಿಭೆಯನ್ನು ಅನಾವರಣಗೊಳಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಅವರಲ್ಲಿರುವ ಋಣಾತ್ಮಕ ಅಂಶಗಳನ್ನು ಅಣಕಿಸುವಂತೆ ವಿಡಿಯೊ ಮಾಡಿ ಹರಿಯಬಿಡುವುದು ಸರಿಯಲ್ಲ.

ಬಾಲ್ಯದಲ್ಲಿ ಕೆಲವು ಮಕ್ಕಳು ಅತಿಯಾಗಿ ಚೂಟಿಯಾಗಿದ್ದರೆ ಕೆಲವು ಮಕ್ಕಳು ನಿಧಾನಗತಿಯಲ್ಲಿ ಕಲಿಯುತ್ತಾರೆ. ಅಕ್ಷರಗಳನ್ನು ತಿರುವು ಮುರುವಾಗಿ ಓದುವುದು/ಬರೆಯುವುದು, ಉಗ್ಗುವಿಕೆ ಸಾಮಾನ್ಯ. ಕೆಲವು ಮಕ್ಕಳು ಶಾಲೆಯ ಭಯ, ಹಿಂಜರಿಕೆಯ ಕಾರಣಗಳಿಂದಲೂ ತಪ್ಪು ಮಾಡುತ್ತಾರೆ. ಶಿಕ್ಷಕರು ಇಂತಹ ಮಕ್ಕಳನ್ನು ಗುರುತಿಸಿ ಅದನ್ನು ತಿದ್ದಬೇಕು. ಆದರೆ ಮಕ್ಕಳು ಮಾಡುವ ತಪ್ಪುಗಳನ್ನು ಅವರು ಸೆರೆಹಿಡಿದು ಮನರಂಜನೆಗೆ ಉಪಯೋಗಿಸಿಕೊಳ್ಳುವುದು ಆತಂಕಕಾರಿ ಬೆಳವಣಿಗೆ.

ಇದರಿಂದ ಮಕ್ಕಳ ಮನಸ್ಸು ಗಾಸಿಗೊಳ್ಳುತ್ತದೆ. ತಮಗಾದ ಅವಮಾನದಿಂದ ಅವರು ಕುಗ್ಗಿ ಹೋಗುತ್ತಾರೆ. ತಮ್ಮ ಸಹಪಾಠಿಗಳ ಲೇವಡಿಗೆ, ಅಣಕಗಳಿಗೆ ಈಡಾಗಿ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಹೀಗೆ ಮಕ್ಕಳ ಮುಗ್ಧ ಮನಸ್ಸನ್ನು ಗಾಸಿಗೊಳಿಸುವಂತಹ ವಿಡಿಯೊಗಳನ್ನು ನಾವು ವೀಕ್ಷಿಸಿ, ನಕ್ಕು ಮುಂದೆ ಹೋಗುತ್ತೇವೆ, ಇಲ್ಲವೇ ಹಂಚಿಕೊಳ್ಳುತ್ತೇವೆ. ಇದರ ಬದಲು, ವಿಡಿಯೊ ಹರಿಯಬಿಟ್ಟವರ ವಿರುದ್ಧ ಧ್ವನಿ ಎತ್ತಿದಾಗ ಇಂತಹ ಘಟನೆಗಳಿಗೆ ತಡೆ ಬೀಳುತ್ತದೆ.

ADVERTISEMENT


ಗೌರಿ ಚಂದ್ರಕೇಸರಿ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.