ಸಾಂದರ್ಭಿಕ ಚಿತ್ರ
ನೌಕರರಲ್ಲಿ ಇರಲಿ ಮಾನವೀಯತೆ
ಸಾರಿಗೆ ನಿಗಮದ ಬಸ್‌ನಲ್ಲಿ ಮಂಗಳೂರಿನಿಂದ ಕುಣಿಗಲ್‌ಗೆ ಪಾರ್ಸಲ್ ಒಂದನ್ನು ಕಳಿಸುವುದಿತ್ತು. ಅದಕ್ಕೆ ಒಂದು ಬಸ್‌ನ ಚಾಲಕ ₹ 500 ಕೊಡಬೇಕಾಗುತ್ತದೆ ಎಂದು ಹೇಳಿದರು. ನಾವು ಬೇಡವೆಂದು ಮತ್ತೊಂದು ಬಸ್‌ನಲ್ಲಿ ವಿಚಾರಿಸಿದೆವು. ಅವರು ₹ 400 ಕೇಳಿದರು. ನಾವು ಕಳಿಸಬೇಕಿದ್ದ ಪಾರ್ಸಲ್‌ನಲ್ಲಿನ ವಸ್ತುವಿನ ಬೆಲೆಯೇ ₹ 500 ಆಗಿರಲಿಲ್ಲ. ಅವರು ನಮ್ಮ ಪಾರ್ಸಲ್ ಅನ್ನು ಹೆಗಲ ಮೇಲೇನೂ ಇಟ್ಟುಕೊಂಡು ಹೋಗುವುದಿಲ್ಲ. ಹಾಗಿದ್ದರೂ ಇಷ್ಟೊಂದು ಹಣವನ್ನು ಕೇಳುವುದೇಕೆ ಎಂದು ನನಗೆ ಆಶ್ಚರ್ಯವಾಯಿತು.
ಈ ಬಗ್ಗೆ ಅವರನ್ನು ಕೇಳಿದಾಗ, ‘ಇದರಲ್ಲಿ 150 ರೂಪಾಯಿಯನ್ನು ಸರ್ಕಾರಕ್ಕೇ ಕೊಡಬೇಕಾಗುತ್ತದೆ’ ಎಂಬ ಉತ್ತರ ಬಂದಿತು! ಹಿಂದೆ ಒಂದು ಹಕ್ಕಿಯ ಕಾಲಿಗೆ ಓಲೆ ಕಟ್ಟಿದರೂ ನಿಸ್ವಾರ್ಥವಾಗಿ ಅದನ್ನು ಮನೆತನಕ ತಲುಪಿಸುತ್ತಿತ್ತು. ಆದರೆ ಈಗ ಕಾಲ ಎಷ್ಟು ಬದಲಾಗಿದೆ? ಸರ್ಕಾರ ನೌಕರಿ ನೀಡುವಾಗ ಬರೀ ವಿದ್ಯಾರ್ಹತೆಯನ್ನು ನೋಡದೆ ಮಾನವೀಯತೆಯನ್ನೂ ಪರಿಶೀಲಿಸಬೇಕೆಂಬುದು ನನ್ನ ಮನವಿ.
-ಸುಮನ್, ಮಂಗಳೂರು
****
ವಿರೋಧ ಪಕ್ಷಗಳ ನಾಯಕರಿಗೂ ಸಿಗಲಿ ಆದ್ಯತೆ
ಕೇಂದ್ರ ಸರ್ಕಾರದ ನೀತಿ ಆಯೋಗದ ಸಭೆಯಲ್ಲಿ ಇತ್ತೀಚೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೈಕ್ ಬಂದ್ ಮಾಡಿದ್ದು ನಿಜವೇ ಆಗಿದ್ದರೆ ಅದು ಸಮಂಜಸವಲ್ಲ. ಆಯಾ ರಾಜ್ಯಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ಸಲಹೆ, ಸೂಚನೆ ಮತ್ತು ಪ್ರಸಕ್ತ ವರ್ಷದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳು, ಅದಕ್ಕೆ ಬೇಕಾದ ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದ ಸಭೆ ಅದಾಗಿತ್ತು. ಹೀಗಾಗಿ, ವಿಷಯ ಮಂಡನೆಗೆ ಮುಖ್ಯಮಂತ್ರಿಗಳಿಗೆ ಬೇಕಾದ ಸಮಯ ಕೊಡಬೇಕಾದದ್ದು ಸಭಾ ಆಯೋಜಕರ ಪ್ರಾಥಮಿಕ ಕರ್ತವ್ಯ. ಎನ್‌ಡಿಎ ಮೈತ್ರಿಕೂಟದ ಪಾಲುದಾರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಇಪ್ಪತ್ತು ನಿಮಿಷಕ್ಕೂ ಹೆಚ್ಚಿನ ಸಮಯ ಕೊಟ್ಟು, ಮಮತಾ ಅವರಿಗೆ ಐದು ನಿಮಿಷ ನಿಗದಿ ಮಾಡಿದ್ದು ತಾರತಮ್ಯದಿಂದ ಕೂಡಿದ ನಡೆ ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ.
ಇತ್ತೀಚೆಗೆ ನಡೆದ ಲೋಕಸಭೆ ಕಲಾಪದಲ್ಲೂ ವಿರೋಧ ಪಕ್ಷಗಳ ನಾಯಕರ ಮೈಕ್ ಬಂದ್ ಮಾಡಿದ್ದನ್ನು ಈ ಪ್ರಕರಣ ನೆನಪಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷಕ್ಕೆ ಇರುವಷ್ಟೇ ಪ್ರಾಮುಖ್ಯ ವಿರೋಧ ಪಕ್ಷಗಳಿಗೂ ಇರುತ್ತದೆ ಮತ್ತು ಅವರ ಭಾವನೆಗಳಿಗೂ ಬೆಲೆ ಕೊಟ್ಟಾಗಲೇ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಮರೆಯಬಾರದು.
-ಶಾಂತಕುಮಾರ್, ಸರ್ಜಾಪುರ
****
ನಮ್ಮೊಳಗಿನ ಶಾಂತಿಗಾಗಿ...
ಧ್ಯಾನದ ಮಹತ್ವ ಕುರಿತ ಸಾಹಿತಿ ದೊಡ್ಡರಂಗೇಗೌಡ ಅವರ ಲೇಖನವನ್ನು (ಸಂಗತ, ಜುಲೈ 26) ಓದಿದಾಗ, ನಾವು ಪ್ರೌಢಶಾಲೆಯಲ್ಲಿದ್ದಾಗ ನಮ್ಮ ಉಪಾಧ್ಯಾಯರು ಹೇಳಿದ ಮಾತು ನೆನಪಿಗೆ ಬಂದಿತು. ಶಾಲೆಯ ಹೊರಗೆ ಒಮ್ಮೆ ಧ್ವನಿವರ್ಧಕದಲ್ಲಿ ಜೋರಾಗಿ ಸಿನಿಮಾ ಹಾಡುಗಳು ಕೇಳಿಬರುತ್ತಿದ್ದವು. ಇದರಿಂದ ಅವರಿಗೆ ಪಾಠ ಮಾಡಲು ತೊಂದರೆ ಆಗುತ್ತಿತ್ತು. ಆದರೆ ಅವರು ಅಸಹಾಯಕರಾಗಿದ್ದರು. ಆಗ ಅವರು ‘ಹೊರಗಿನ ಗಲಾಟೆಯ ಕಡೆ ಗಮನ ಕೊಡಬೇಡಿ, ಪಾಠದ ಕಡೆ ಗಮನ ಕೊಡಿ. ಆಗ ಆ ಸದ್ದು ಕೇಳಿಸುವುದಿಲ್ಲ. ಪ್ರಾಪಂಚಿಕತೆಯಲ್ಲಿ ನಾವಿರಬೇಕು, ಆದರೆ ನಮ್ಮಲ್ಲಿ ಪ್ರಾಪಂಚಿಕತೆ ಇರಬಾರದು’ ಎಂದು ಹೇಳುತ್ತಿದ್ದರು.
ಈ ಮಾತಿನಲ್ಲಿ ಅದೆಂತಹ ಅಗಾಧವಾದ ಅರ್ಥವಿದೆ. ಧ್ಯಾನ ಮಾಡಲು ಹಿಮಾಲಯಕ್ಕೇ ಹೋಗಬೇಕಾಗಿಲ್ಲ. ನಾವು ಮಾಡುವ ಕೆಲಸ ಕಾರ್ಯಗಳನ್ನು ತನ್ಮಯದಿಂದ ಮಾಡಿದರೆ ಅದೇ ಧ್ಯಾನ. ಬೆಳಗಿನ ವಾಯುವಿಹಾರವನ್ನು ಏಕಾಂಗಿಯಾಗಿ ಮಾಡುತ್ತಿದ್ದರೆ, ಆಗೇನಾದರೂ ಏಕಾಗ್ರತೆಯಿಂದ ಯೋಚಿಸುತ್ತಿದ್ದರೆ, ಅದೇ ಧ್ಯಾನ. ಆಗ ಎಷ್ಟೋ ಆವಿಷ್ಕಾರಗಳು, ಜ್ಞಾನೋದಯ ಸಾಧ್ಯ. ಧ್ಯಾನ ಮಾಡಲು ನಾವು ನಮ್ಮ ಸುತ್ತಮುತ್ತ ಮೌನವನ್ನು ಹುಡುಕುವ ಬದಲು, ನಮ್ಮೊಳಗೆ ಮೌನಶಾಂತಿ ಇರುವಂತೆ ನೋಡಿಕೊಂಡರೆ ಸಾಕು. ಧ್ಯಾನಕ್ಕೆ ತಕ್ಕ ಪರಿಸರ ನಿರ್ಮಾಣವಾಗುತ್ತದೆ. ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಎಷ್ಟು ಹೊತ್ತು ಬೇಕಾದರೂ ಧ್ಯಾನ ಮಾಡಬಹುದು. ಆದರೆ ಮನಸ್ಸಿನ ತುಂಬಾ ಗಲಾಟೆ, ಗಲಿಬಿಲಿ, ದುಗುಡ, ದುಮ್ಮಾನವನ್ನು ಇಟ್ಟುಕೊಂಡು ಯಾವ ಹಿಮಾಲಯಕ್ಕೆ ಹೋದರೂ ಪ್ರಯೋಜನವಿಲ್ಲ.
-ಟಿ.ವಿ.ಬಿ.ರಾಜನ್, ಬೆಂಗಳೂರು
****
ಕೆಲಸದ ಅವಧಿ ವಿಸ್ತರಣೆ ಸಲ್ಲ
ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ಉದ್ಯೋಗಿಗಳಿಗೆ ದುಡಿಮೆಯ ಅವಧಿಯನ್ನು ದಿನಕ್ಕೆ 14 ಗಂಟೆಗೆ ವಿಸ್ತರಿಸಬೇಕು ಎಂದು ಉದ್ಯಮಿಗಳು ರಾಜ್ಯ ಸರ್ಕಾರದ ಮುಂದೆ ಇರಿಸಿರುವ ಪ್ರಸ್ತಾವವು ಅಸಹಜವಾಗಿದೆ. 14 ಗಂಟೆಗಳ ಕಾಲ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರ ಸಾಧಕ– ಬಾಧಕಗಳನ್ನು ಅರಿತು ಸರ್ಕಾರ ಈ ಕುರಿತು ನಿರ್ಧಾರ ಕೈಗೊಳ್ಳುವುದು ಒಳಿತು. ಈಗಾಗಲೇ ಅನಿಯಂತ್ರಿತ ಕಾರ್ಯದೊತ್ತಡಕ್ಕೆ ಒಳಗಾಗಿ ಹಲವು ಉದ್ಯೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಐ.ಟಿ. ಉದ್ಯೋಗಿಗಳ ಕೆಲಸದ ಸಮಯದ ಬಗ್ಗೆ ಯೋಚಿಸುವವರು, ಅವರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಚಿಂತನೆ ನಡೆಸದೇ ಇರುವುದು ವಿಷಾದನೀಯ. ಖಾಸಗಿ ವಲಯದಲ್ಲಿ ಸರ್ಕಾರ ಜಾರಿಗೊಳಿಸಿರುವ ಎಷ್ಟು ನಿಯಮಗಳನ್ನು ಕಂಪನಿಗಳು ಅನುಸರಿಸುತ್ತಿವೆ? ಈ ಬಗ್ಗೆ ಸರ್ಕಾರ ಪರಿಶೀಲಿಸಬೇಕಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಬಗೆಯ ತೊಳಲಾಟಗಳನ್ನು ಅನುಭವಿಸುತ್ತಿರುವ ಉದ್ಯೋಗಿಗಳಿಗೆ ಸರ್ಕಾರದ ತುರ್ತು ಮಧ್ಯಸ್ಥಿಕೆಯ ಅಗತ್ಯವಿದೆ. ಅವರ ಯೋಗಕ್ಷೇಮ ಹಾಗೂ ಆರೋಗ್ಯಕ್ಕೆ ಅನುಗುಣವಾಗಿ ಸರ್ಕಾರ ನಿಯಮಾವಳಿಗಳನ್ನು ರೂಪಿಸಬೇಕು.
-ಮಹೇಶ್ ಸಿ.ಎಚ್., ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.