ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 22:30 IST
Last Updated 25 ಡಿಸೆಂಬರ್ 2025, 22:30 IST
   

ಆತ್ಮಸಾಕ್ಷಿಯನ್ನು ನುಂಗಿದ ಜಾತೀಯತೆ

ಮರ್ಯಾದೆಗೇಡು ಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಜಾತಿ ಹೆಸರಿನಲ್ಲಿ ಜನರ ಸ್ವಾಭಿಮಾನ, ಪ್ರೀತಿ, ಒಡನಾಟಕ್ಕೆ ಕಪ್ಪುಚುಕ್ಕೆ ಇಡುವ ಕೆಲಸವನ್ನು ಸ್ವತಃ ಕುಟುಂಬದವರೇ ಮಾಡುತ್ತಿದ್ದಾರೆ. ಮಕ್ಕಳ ಪ್ರೀತಿಗೆ ಅವಕಾಶ ನೀಡದ ಇವರು ಅವರ ಜೀವನದ ಬಗ್ಗೆ ಯಾವ ರೀತಿಯ ಕಾಳಜಿವಹಿಸುತ್ತಾರೆ? ಸ್ವಯಂ ಆಲೋಚನೆಗೆ ಸ್ಥಳ ಇರದ ಸಮಾಜ ಎಷ್ಟೇ ಆಧುನಿಕವಾಗಿ ಮುಂದುವರಿ
ದರೂ ಮೌಢ್ಯತೆ, ಅಸಮಾನತೆ, ಅಗೌರವ, ಜಾತೀಯತೆಯಿಂದ ತುಂಬಿಕೊಂಡಿದೆ. ಭಾರತ ಸ್ವತಂತ್ರವಾಗಿ ಸಂವಿಧಾನ ಹೊಂದಿ ಸರ್ವಜನ ಸಮಾನರು ಎಂಬ ತತ್ತ್ವ
ಅಳವಡಿಸಿಕೊಂಡಿದ್ದರೂ ಮಕ್ಕಳ ಪ್ರೀತಿ ವಿಷಯದಲ್ಲಿ ಪೋಷಕರ ನಡವಳಿಕೆ ಅಸಹನೀಯವಾಗುತ್ತಿದೆ. ಮರ್ಯಾದೆಗೇಡು ಹೆಸರಿನಲ್ಲಿ ಅಮಾಯಕ ಪ್ರೇಮಿ
ಗಳನ್ನು ದೂರ ಮಾಡುವುದಲ್ಲದೆ ಜೀವ ತೆಗೆಯುವುದು ಅತಿಕ್ರೂರ ಕೃತ್ಯ. ಇಂತಹ ಪ್ರಕರಣಗಳು ಭವಿಷ್ಯದಲ್ಲಿ ನಡೆಯದಂತೆ ಸರ್ಕಾರ ಕಠಿಣ ಕಾನೂನು ರೂಪಿಸಲಿ.

⇒ಶ್ರೀಧರ ವಂದಾಲ, ಬೆಳಗಾವಿ 

ADVERTISEMENT

ಕಣ್ಣುಕುಕ್ಕುವ ‘ಮೆಟ್ರೊ’ ಜಾಹೀರಾತು

ಯಾವುದೇ ವ್ಯವಹಾರ ಚಟುವಟಿಕೆಯ ಆರಂಭದ ಮೊದಲ ಮೆಟ್ಟಿಲು ಜಾಹೀರಾತು ಆಗಿದೆ. ಇತ್ತೀಚೆಗೆ ಜಾಹೀರಾತು ಎಂಬುದು ಸಾರ್ವಜನಿಕ ಆಸ್ತಿಗಳಾದ ಸರ್ಕಾರಿ ಬಸ್‌ಗಳು ಮತ್ತು ‘ನಮ್ಮ ಮೆಟ್ರೊ’ವನ್ನು ಆಕ್ರಮಿಸಿಕೊಂಡಿದೆ. ಮೆಟ್ರೊ ಮಾರ್ಗ ಸೂಚಕವಾಗಿ ರೈಲಿನ ಬೋಗಿಗಳಿಗೆ ನೇರಳೆ, ಹಸಿರು, ಹಳದಿ ಬಣ್ಣ ಬಳಿದಿರುವುದು ಸರಿ. ಇದು ಪ್ರಯಾಣಿಕರಿಗೂ ಸಹಕಾರಿಯಾಗಲಿದೆ. ಆದರೆ, ಅವುಗಳ ಮೇಲ್ಮೈ ತುಂಬಾ ಜಾಹೀರಾತಿನ ಸ್ಟಿಕ್ಕರ್‌ ಅಂಟಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ಬರುವ ಜನರು ಮೆಟ್ರೊ ರೈಲಿನ ಸಂಚಾರದಲ್ಲಿ ಪಾರದರ್ಶಕ ಕಿಟಕಿಗಳ ಮೂಲಕ ಉದ್ಯಾನನಗರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಸದ್ಯ ಈ ಸೌಭಾಗ್ಯವನ್ನು ಕಿತ್ತಿಕೊಂಡಂತಾಗಿದೆ. ಸರ್ಕಾರಿ ಸೇವೆಯು ಈ ಮಟ್ಟಿಗೆ ವ್ಯಾವಹಾರಿಕಗೊಂಡಿರುವುದು ಅಸಹ್ಯ ಹುಟ್ಟಿಸುತ್ತದೆ.

⇒ಮಲ್ಲಿಕಾರ್ಜುನ್ ತೇಲಿ ಗೋಠೆ, ಜಮಖಂಡಿ


ವನ್ಯಜೀವಿ ಸಂಘರ್ಷ: ಪರಿಹಾರ ಹುಡುಕಿ

ವನ್ಯಜೀವಿಗಳು ಕಾಡು ಬಿಟ್ಟು ನಾಡಿನತ್ತ ಮುಖ ಮಾಡಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಕಾಡಂಚಿನ ಗ್ರಾಮಗಳಲ್ಲಿ ಆಗಾಗ ಕಾಣಿಸುತ್ತಿದ್ದ ಪ್ರಾಣಿಗಳು ಜನರ ನಡುವೆ ಬರುತ್ತಿರುವುದು ನಮ್ಮ ವ್ಯವಸ್ಥೆಯನ್ನು ಅಣುಕಿಸಿದಂತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗೆಗಿನ ನೈಜ ಕಾರಣ ಕುರಿತು ಅಧ್ಯಯನ ಮಾಡಬೇಕಿದೆ. ಜೊತೆಗೆ, ಆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಬೇಕಿದೆ. ಇಲ್ಲವಾದರೆ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಿಸುವ ದಿನಗಳು ದೂರವಿಲ್ಲ.

⇒ಹರವೆ ಸಂಗಣ್ಣ ಪ್ರಕಾಶ್, ಚಾಮರಾಜನಗರ  

ಪಿಂಚಣಿದಾರರ ಬಗ್ಗೆ ಅನಾದರ ಸರಿಯಲ್ಲ

ಅರೆಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಇಪಿಎಸ್–95 ಯೋಜನೆಯ ಪಿಂಚಣಿದಾರರಿಗೆ ಮಾಸಿಕ ಕನಿಷ್ಠ ₹1 ಸಾವಿರ ಪಿಂಚಣಿ ನೀಡಲಾಗುತ್ತಿದೆ. ಇಷ್ಟು ಕಡಿಮೆ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು 70 ವರ್ಷಕ್ಕೂ ಮೇಲ್ಪಟ್ಟವರೇ ಆಗಿದ್ದಾರೆ. ಈ ಅಲ್ಪಮೊತ್ತದ ಪಿಂಚಣಿಯಲ್ಲಿ ಜೀವನ ನಿರ್ವಹಣೆ ತುಂಬಾ ದುಸ್ತರವಾಗಿದೆ. ಕೇಂದ್ರ ಸರ್ಕಾರವು 2014ರಲ್ಲಿ ಕನಿಷ್ಠ ಪಿಂಚಣಿ ಏರಿಸಿತ್ತು. 11 ವರ್ಷ ಕಳೆದರೂ ಪಿಂಚಣಿ ಮೊತ್ತ ಹೆಚ್ಚಿಸಿಲ್ಲ. ಪ್ರಸ್ತುತ ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿ ಬೀದಿನಾಯಿಯ ನಿರ್ವಹಣೆಗಾಗಿ ತಿಂಗಳಿಗೆ ₹3,035 ವೆಚ್ಚ ಮಾಡಲು ನಗರ ಪಾಲಿಕೆಗಳು ನಿರ್ಧರಿಸಿವೆ. ಕೇಂದ್ರ ಸರ್ಕಾರ ಮತ್ತು ಅಧಿಕಾರಿಗಳು, ಬೀದಿನಾಯಿಗಳ ಬಗ್ಗೆ ತೋರುತ್ತಿರುವ ಕಾಳಜಿಯನ್ನು ಪಿಂಚಣಿದಾರರ ಮೇಲೂ ತೋರಬೇಕಲ್ಲವೆ?

⇒ಎಲ್. ಚಿನ್ನಪ್ಪ, ಬೆಂಗಳೂರು

ರಸ್ತೆ ಮೇಲೆ ಒಕ್ಕಣೆ: ಅಪಾಯಕ್ಕೆ ಆಹ್ವಾನ

ರೈತರು ಇತ್ತೀಚೆಗೆ ವಾಹನ ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆ ಮಧ್ಯದಲ್ಲಿಯೇ ಒಕ್ಕಣೆ ಮಾಡುವ ಸುಲಭ ಮಾರ್ಗ ಕಂಡುಕೊಂಡಿದ್ದಾರೆ. ದ್ವಿಚಕ್ರ ವಾಹನ ಸವಾರರು, ವಾಹನ ಸವಾರರು ಸಂಚರಿಸುವುದೇ ಕಷ್ಟಕರವಾಗಿದೆ. ಇದರಿಂದ ರಸ್ತೆ ಅಪಘಾತಗಳು ಹೆಚ್ಚಾಗಿದ್ದು, ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆಬದಿಯಲ್ಲಿಯೇ ಭತ್ತ, ರಾಗಿ ಹಾಗೂ ಹುರುಳಿ ಸೇರಿ ಇತರ ಧಾನ್ಯಗಳ ಬಣವೆ ಹಾಕುವುದು ಉಂಟು. ಗ್ರಾಮ ಪಂಚಾಯಿತಿ ಆಡಳಿತಗಳು ಮತ್ತು ಸ್ಥಳೀಯ ಪೊಲೀಸರು ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ರೈತರಿಗೆ ಈ ಬಗ್ಗೆ ಅರಿವು ಮೂಡಿಸಬೇಕಿದೆ. ರಾಜ್ಯ ಸರ್ಕಾರವೂ ಈ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿ ಪ್ರಕಟಿಸಬೇಕಿದೆ. 

⇒ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಅಶ್ಲೀಲ ಗೀತೆಗಳಿಗೆ ಕಡಿವಾಣ ಅಗತ್ಯ

ಉತ್ತರ ಕರ್ನಾಟಕದ ಕೆಲವು ಊರುಗಳಲ್ಲಿ ಇತ್ತೀಚೆಗೆ ಜಾನಪದೀಯ ದಾಟಿಯಲ್ಲಿ ಅಶ್ಲೀಲವಾದ ಗೀತೆಗಳನ್ನು ರಚಿಸಿ ಹಾಡುವುದು ಅವ್ಯಾಹತವಾಗಿದೆ. ಹಾಡುಗಾರರು ಮತ್ತು ನೃತ್ಯಗಾರರ ತಂಡಗಳೂ ಹುಟ್ಟಿಕೊಂಡಿವೆ. ಯೂಟ್ಯೂಬ್‌ನಲ್ಲಿ ಈ ಮಾದರಿಯ ಸಾಹಿತ್ಯ ಮತ್ತು ನೃತ್ಯದ ವಿಡಿಯೊ ತುಣುಕುಗಳು ಕಾಣಸಿಗುತ್ತವೆ. ಚಿಕ್ಕಮಕ್ಕಳು ಈ ಅಶ್ಲೀಲ ಗೀತೆಗಳನ್ನು ಹಾಡುತ್ತಿರುವುದು ದುರದೃಷ್ಟಕರ. ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಯುವಕರು ಇದರ ಮೋಡಿಗೆ ಸಿಲುಕುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಮೃದ್ಧವಾದ ಕಲೆ, ಸಂಸ್ಕೃತಿ ಹಾಸುಹೊಕ್ಕಾಗಿದೆ. ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಅಶ್ಲೀಲ ಗೀತೆಗಳ ರಚನೆಗೆ ಕಡಿವಾಣ ಹಾಕಬೇಕಿದೆ.

- ಜಯವೀರ ಎ.ಕೆ. ಖೇಮಲಾಪುರ, ರಾಯಬಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.