ಶಿಕ್ಷಕರ ವರ್ಗಾವಣೆ: ಫಲಿತಾಂಶಕ್ಕೆ ಪೆಟ್ಟು
ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಕೆಲವು ಶಾಲೆಗಳಲ್ಲಿ ಇಬ್ಬರು, ಮೂವರು ಶಿಕ್ಷಕರು ವರ್ಗಾವಣೆ ಪಡೆದಿದ್ದಾರೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಾಲೆಯಿಂದ ಶಿಕ್ಷಕರು ಬಿಡುಗಡೆಯಾಗುವುದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ವರ್ಗಾವಣೆ ಪಡೆದವರನ್ನು ಶೈಕ್ಷಣಿಕ ವರ್ಷದ ಕೊನೆಯವರೆಗೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗಳಲ್ಲಿಯೇ ಸರ್ಕಾರ ಉಳಿಸಬೇಕು.
– ಸಿದ್ದೇಶ್ ಅಶೋಕ ಚನ್ನಳ್ಳಿ, ಹಿರೇಕೆರೂರು
******
ಹೋರಾಟದಲ್ಲೇ ಅನ್ನದಾತರು ಹೈರಾಣು
ರೈತರು ಸೌಲಭ್ಯ ಪಡೆಯಲು ಪ್ರತಿ ಬಾರಿಯೂ ಬೀದಿಗೆ ಇಳಿಯಬೇಕಿರುವುದು ದುರದೃಷ್ಟಕರ. ಕಬ್ಬು ಬೆಲೆ ಏರಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ ವಾರದ ನಂತರ ಸರ್ಕಾರ ಬೆಲೆ ಘೋಷಿಸಿದೆ. ಆ ದರವೂ ರೈತರು ಮಂಡಿಸಿದ ಬೇಡಿಕೆಗೆ ಅನುಗುಣವಾಗಿಲ್ಲ. ರಾಜಕಾರಣಿಗಳಿಗೆ ದೈನಂದಿನ ಖರ್ಚುಗಳಿರುತ್ತವೆ ಎಂದಾದರೆ ರೈತರಿಗೂ ಇರುತ್ತವಲ್ಲವೆ? ಕಬ್ಬು ಬೆಳೆಯಲು ಒಂದು ವರ್ಷ ಬೇಕು. ಅದರ ಮಾರಾಟದಿಂದ ಬರುವ ಹಣವೇ ರೈತ ಕುಟುಂಬವೊಂದರ ಆದಾಯದ ಮೂಲ. ರಾಜಕಾರಣಿಗಳಿಗೆ ಇರುವಂತೆ ರೈತರಿಗೆ ಪರ್ಯಾಯ ಆದಾಯದ ಮೂಲಗಳಿಲ್ಲ.
– ಸಂತೋಷ ಪೂಜಾರಿ, ವಿಜಯಪುರ
******
ಮೊಬೈಲ್ ಪಕ್ಕಕ್ಕಿಡಿ; ಪುಸ್ತಕ ಹಿಡಿಯಿರಿ
ಚಿಣ್ಣರಿಂದ ಹಿಡಿದು ಹಿರಿಯರವರೆಗೂ ಮೊಬೈಲ್ ಗೀಳು ಅಂಟಿಕೊಂಡಿದೆ. ಇದನ್ನು ಬಿಡಿಸಲು ‘ಮೊಬೈಲ್ ಬಿಡಿ; ಪುಸ್ತಕ ಹಿಡಿ’ ಅಭಿಯಾನ ಆರಂಭಿಸಬೇಕಿದೆ. ಪೋಷಕರು ಓದುವ ಅಭಿರುಚಿ ಬೆಳೆಸಿಕೊಂಡರೆ, ಮಕ್ಕಳಲ್ಲೂ ಓದುವ ಅಭ್ಯಾಸ ಬೆಳೆಯುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದಾಗಿ ಮಕ್ಕಳ ಆಟ, ಹಿರಿಯರ ಜೊತೆ ಒಡನಾಟ ಕಡಿಮೆಯಾಗಿದೆ. ಪುಸ್ತಕ ಓದುವ ಅಭಿಯಾನವು ಮನೆಗಳಿಗಷ್ಟೆ ಸೀಮಿತವಾಗಬಾರದು. ಈ ಅಭಿಯಾನದಲ್ಲಿ ಶಿಕ್ಷಕರೂ ಭಾಗಿಯಾಗಬೇಕಿದೆ.
– ಬಸವರಾಜ ರಾ. ಅಗಸರ, ಚಿಕ್ಕಸಿಂದಗಿ ಬಂದಾಳ
******
ಪದವೀಧರರ ಮತಪಟ್ಟಿಯ ಗೊಂದಲ
ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಅರ್ಹ ಪದವೀಧರರು ಪ್ರತಿ ಚುನಾವಣೆಗೂ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ಇದರಿಂದ ಮತದಾರರ ಪಟ್ಟಿಯಲ್ಲಿ ಎಲ್ಲ ಪದವೀಧರರು ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ. ಒಮ್ಮೆ ನೋಂದಣಿಯಾದ ಮತದಾರರನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಚುನಾವಣಾ ಹೊತ್ತಿನಲ್ಲಿ ಮತದಾರರ ಪಟ್ಟಿ ಪರಿಷ್ಕರಿಸುವ ಸಂದರ್ಭದಲ್ಲಿ ಹೊಸದಾಗಿ ಸೇರ್ಪಡೆ ಮಾಡಿಕೊಳ್ಳುವ ನಿಯಮವನ್ನು ಜಾರಿಗೊಳಿಸಿದರೆ, ಪದವೀಧರ ಮತಕ್ಷೇತ್ರದ ಮತಪಟ್ಟಿ ಬೆಳೆಯುತ್ತದೆ. ಪ್ರತಿ ಬಾರಿಯೂ ನೋಂದಣಿ ಮಾಡಿಕೊಳ್ಳುವ ಅನಿವಾರ್ಯತೆ ಇರುವುದರಿಂದ, ನೋಂದಣಿಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ.
– ಲಕ್ಷ್ಮೀಕಾಂತರಾಜು ಎಂ.ಜಿ., ಗುಬ್ಬಿ
******
ಹಾಜರಿಗೆ ಆಧಾರ್: ಜಿಪಿಎಸ್ ಅಳವಡಿಸಿ
ಕಾಲೇಜು ಶಿಕ್ಷಣ ಇಲಾಖೆಯು ಅಧ್ಯಾಪಕರು, ಸಿಬ್ಬಂದಿಗೆ ‘ಆಧಾರ್’ ಹಾಜರಾತಿ ಪರಿಚಯಿಸಲು ಮುಂದಾಗಿದೆ. ಯುಜಿಸಿ ಸಂಬಳ ಪಡೆದು ಸರಿಯಾಗಿ ಕೆಲಸ ಮಾಡದ ಅಧ್ಯಾಪಕರಿಗೆ ಇದು ಬಿಸಿತುಪ್ಪವಾಗಲಿದೆ. ಆದಾಗ್ಯೂ, ಸರ್ಕಾರ ಚಾಪೆಯ ಕೆಳಗೆ ತೂರಿದರೆ, ಅಧ್ಯಾಪಕರು ರಂಗೋಲಿ ಕೆಳಗೆ ತೂರುವಷ್ಟು ಚತುರರು. ಹಾಗಾಗಿ, ಮೊಬೈಲ್ ಆ್ಯಪ್ ಮೂಲಕ ಲಾಗಿನ್ ಆಗಿ ಹಾಜರಾಗುವ ಪದ್ಧತಿಯಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಸಿದರೆ ಒಳ್ಳೆಯದು. ಇದರಿಂದ ಕಾಲೇಜಿಗೆ ಹಾಜರಾಗಿ ಹೊರಗಡೆ ಬೇರೆ ಕೆಲಸಗಳಲ್ಲಿ ತೊಡಗಿದವರನ್ನು ಪತ್ತೆಹಚ್ಚುವುದು ಸುಲಭ.
– ಮನೋಜಕುಮಾರ್ ಎಸ್., ಚಳ್ಳಕೆರೆ
******
‘ಕಲ್ಯಾಣ’ ಬಸ್: ಯುಪಿಐ ಸೌಲಭ್ಯ ಬೇಕು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಬಸ್‌ಗಳಲ್ಲಿ ಯುಪಿಐ ಸೌಲಭ್ಯ ಒದಗಿಸಿರುವುದು ಒಳ್ಳೆಯದು. ಇದರಿಂದ ಚಿಲ್ಲರೆ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಆದರೆ, ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಈ ವ್ಯವಸ್ಥೆ ಇಲ್ಲ. ಹಾಗಾಗಿ, ಪ್ರಯಾಣಿಕರು ಹಾಗೂ ನಿರ್ವಾಹಕರಿಗೆ ಚಿಲ್ಲರೆ ಬವಣೆ ಇನ್ನೂ ತಪ್ಪಿಲ್ಲ. ಈ ಬಸ್‌ಗಳಲ್ಲೂ ತ್ವರಿತವಾಗಿ ಯುಪಿಐ ಸೌಲಭ್ಯ ಒದಗಿಸಬೇಕಿದೆ.
– ಜ್ಞಾನೇಶ್ವರ ಕೆ.ಬಿ., ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.