ವಾಚಕರ ವಾಣಿ
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಸರ್ಕಾರಕ್ಕೆ ಮನಸ್ಸಿಲ್ಲ. ಪರಿಶಿಷ್ಟ ಜಾತಿಯ ಒಳಮೀಸಲಾತಿ ಗೊಂದಲವನ್ನು ಮುಂದಿಟ್ಟುಕೊಂಡು ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ. ಈ ಧೋರಣೆ ಖಂಡಿಸಿ ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಮತ್ತೆ ಹೋರಾಟಕ್ಕಿಳಿದಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನವರಲ್ಲಿ ಬಡ ರೈತರು, ಕೂಲಿ ಕಾರ್ಮಿಕರ ಮಕ್ಕಳು.
ಮಕ್ಕಳ ಕನಸಿಗಾಗಿ ಬಡ ಕುಟುಂಬಗಳು ಸಾಲ ಮಾಡಿ, ಮಾಸಿಕ ಏಳೆಂಟು ಸಾವಿರ ರೂಪಾಯಿ ವೆಚ್ಚವನ್ನು ಭರಿಸುತ್ತಿವೆ. ನೇಮಕಾತಿ ವಿಳಂಬದಿಂದ ಉದ್ಯೋಗಾಕಾಂಕ್ಷಿಗಳು ನಿರಾಸೆ ಮತ್ತು ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗವು ಕೇವಲ ಕೆಲಸವಲ್ಲ; ಅದು ಬಡ ಕುಟುಂಬಗಳ ಭವಿಷ್ಯ ಮತ್ತು ಗೌರವ. ಆಳುವ ವರ್ಗಕ್ಕೆ ಈ ಸತ್ಯದ ಅರಿವಾಗಬೇಕಿದೆ.
⇒ಸಿದ್ದು ಮೃದೊಳಲು, ಶಿವಮೊಗ್ಗ
ತುಮಕೂರು ಜಿಲ್ಲೆಯ ದೇವರಾಯನದುರ್ಗಕ್ಕೆ ರೋಪ್ ವೇ ಅಳವಡಿಕೆಗೆ ಜನಪ್ರತಿನಿಧಿಗಳು ಮುಂದಾಗಿರುವುದು ಅಪ್ರಸ್ತುತ ಹಾಗೂ ಅರ್ಥಹೀನ. ಪುರಾಣ ಪ್ರಸಿದ್ಧ ದೇವರಾಯನದುರ್ಗದ ಕೆಳಗಿನ ಬೆಟ್ಟದಲ್ಲಿ ಭೋಗಾನರಸಿಂಹಸ್ವಾಮಿ ಮತ್ತು ಮೇಲಿನ ಬೆಟ್ಟದಲ್ಲಿ ಯೋಗಾನರಸಿಂಹಸ್ವಾಮಿ ದೇವಾಲಯವಿದೆ. ಕೆಳಗಿನ ಬೆಟ್ಟಕ್ಕೆ ಸುವ್ಯವಸ್ಥಿತ ರಸ್ತೆ ಸೌಲಭ್ಯವಿದೆ. ದೇವಾಲಯದ ಬಾಗಿಲಿನವರೆಗೆ ವಾಹನದಲ್ಲೇ ತೆರಳಬಹುದಾಗಿದೆ. ಇಲ್ಲಿಂದ ಮೇಲಿನ ಬೆಟ್ಟದ ಅರ್ಧಭಾಗದವರೆಗೂ ಸುಸಜ್ಜಿತ ರಸ್ತೆಯಿದೆ. ಅಲ್ಲಿಯವರೆಗೂ ವಾಹನದಲ್ಲಿ ಆರಾಮವಾಗಿ ತಲಪಬಹುದಾಗಿದೆ. ಇನ್ನು ಅಲ್ಲಿಂದ ಮೇಲಕ್ಕೆ ದೇವಾಲಯದವರೆಗೆ ಮಾತ್ರ ಸುವ್ಯವಸ್ಥಿತ ಮೆಟ್ಟಿಲುಗಳನ್ನು ಹತ್ತಬೇಕಾಗಿದೆಯಷ್ಟೇ. ಇದು ದೇವರಾಯನದುರ್ಗದ ವಾಸ್ತವ ಚಿತ್ರಣ. ಪರಿಸ್ಥಿತಿ ಹೀಗಿದ್ದರೂ ಇಲ್ಲಿಗೆ ರೋಪ್ ವೇ ನಿರ್ಮಿಸಲು ತುದಿಗಾಲಲ್ಲಿ ನಿಂತಿರುವುದು ಅತಾರ್ಕಿಕ. ಈ ಕ್ಷೇತ್ರವು ಯಾತ್ರಾಸ್ಥಳವಾಗಿ ಉಳಿಯಬೇಕೇ ವಿನಾ ಮೋಜು–ಮಸ್ತಿಯ ತಾಣವಾಗಬಾರದು.
⇒ಆರ್.ಎಸ್. ಅಯ್ಯರ್, ತುಮಕೂರು
ಟಿ.ಎಸ್. ವೆಂಕಣ್ಣಯ್ಯನವರು ಚಿತ್ರದುರ್ಗ ಜಿಲ್ಲೆಯ ತಳುಕು ಗ್ರಾಮದವರು. ಮೈಸೂರು ವಿ.ವಿ.ಯ ಮೊದಲ ಕನ್ನಡ ಪ್ರೊಫೆಸರ್ ಆಗಿದ್ದವರು. ಪಾಂಡಿತ್ಯ, ಮಾನವೀಯತೆ, ಜಾತ್ಯತೀತ ಮನೋಭಾವ, ಶಿಷ್ಯ ವಾತ್ಸಲ್ಯಕ್ಕೆ ಹೆಸರಾಗಿದ್ದವರು. ಇಂಗ್ಲಿಷ್ ವಾತಾವರಣ ದಟ್ಟವಾಗಿದ್ದ ಕಾಲದಲ್ಲಿ ಕನ್ನಡವನ್ನು ಅದರೆಲ್ಲ ಜೀವಂತಿಕೆ
ಯಲ್ಲಿ ದಕ್ಷತೆಯಿಂದ ಕಟ್ಟಿ ಬೆಳೆಸಿದವರು. ವೆಂಕಣ್ಣಯ್ಯನವರ ಪ್ರಭಾವಳಿಯಲ್ಲಿ ರೂಪುಗೊಂಡವರು ಮಹಾಕವಿ ಕುವೆಂಪು. ಈ ಗುರು–ಶಿಷ್ಯ ಸಂಬಂಧ ಅಸದೃಶ ವಾದುದು. ಅವರ ಸೋದರ ತ.ಸು. ಶಾಮರಾಯರದ್ದೂ ಅದೇ ಎತ್ತರದ ವ್ಯಕ್ತಿತ್ವ. ಅವರ ಶಿಷ್ಯ ಪ್ರೀತಿ ಅನನ್ಯ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು, ಮತಿನ್ನೆಷ್ಟೋ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು ಈ ಗುರುವಿನ ತಂಪು ನೆರಳಿನಡಿ. ಇಂತಹ ಅಪೂರ್ವ ಸಾಂಸ್ಕೃತಿಕ ಚೈತನ್ಯಗಳನ್ನು ಚಿತ್ರದುರ್ಗದ ಸಾಂಸ್ಕೃತಿಕ ಲೋಕ ಮರೆತೇ ಬಿಟ್ಟಿದೆ. ಈ ಆದರ್ಶ ಗುರುಗಳ ಹೆಸರಿನಲ್ಲಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕಿದೆ.
⇒ಚಂದ್ರಶೇಖರ ತಾಳ್ಯ, ಹೊಳಲ್ಕೆರೆ
ರಂಗಭೂಮಿ ಶಿಕ್ಷಕರ ನೇಮಕಾತಿಯನ್ನು ಪರಿಗಣಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭರವಸೆಯು ಬಾಯಿ ಮಾತಿನ ಹೇಳಿಕೆಯಾಗದಿರಲಿ. ಶಿಕ್ಷಣ ಸಚಿವರು ಹನ್ನೊಂದು ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತೇವೆಂದು ಹಲವು ತಿಂಗಳಿನಿಂದ ಹೇಳುತ್ತಿದ್ದಾರೆ. ಅದು ಕಾರ್ಯರೂಪಕ್ಕೆ ಬರುತ್ತದೆಯೇ ಎನ್ನುವ ಅನುಮಾನ ಕಾಡುತ್ತಿದೆ. ಇದರಲ್ಲಿ ರಂಗಶಿಕ್ಷಕರೆಷ್ಟು ಎಂಬ ಅಧಿಕೃತ ಮಾಹಿತಿಯ ಅಗತ್ಯವಿದೆ. ಏಕೆಂದರೆ, ಈಗ ‘ವಿಶೇಷ ಶಿಕ್ಷಕರು’ ಎನ್ನುವ ಹುದ್ದೆಯಿದೆ. ಅದರಲ್ಲಿ ರಂಗಶಿಕ್ಷಕರು, ಸಂಗೀತ ಶಿಕ್ಷಕರು ಮುಂತಾದವರು ಬರುತ್ತಾರೆ. ನೇಮಕಾತಿ ಮಾಡಿಕೊಳ್ಳುವಾಗ ನಿರ್ದಿಷ್ಟವಾಗಿ ‘ರಂಗಶಿಕ್ಷಕರು’ ಎಂದೇ ಪರಿಗಣಿಸಬೇಕು. ರಂಗಶಿಕ್ಷಣವನ್ನು ವ್ಯಾಸಂಗ ಕ್ರಮವಾಗಿ ರೂಪಿಸುವ ಮಹತ್ವ ಮತ್ತು ಅಗತ್ಯವನ್ನು ಸರ್ಕಾರ ಅರಿತುಕೊಳ್ಳಬೇಕಿದೆ.
⇒ಬಿ. ಶ್ರೀಪಾದ ಭಟ್, ಬೆಂಗಳೂರು
ಬೆಂಗಳೂರಿನ ಪರಪ್ಪನ ಅಗ್ರಹಾರದ ಕಾರಾಗೃಹವು ಪ್ರತಿದಿನ ಸುದ್ದಿಯಾಗುತ್ತಿದೆ. ವಾರದಲ್ಲಿ ನಾಲ್ಕೈದು ಬಾರಿ ದಾಳಿ ನಡೆಸಿ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡರೂ ಮತ್ತೆ ಮತ್ತೆ ಪತ್ತೆಯಾಗುತ್ತಲೇ ಇರುತ್ತವೆ. ಆದರೂ, ಕಾರಾಗೃಹವು ಅಲ್ಲಾವುದ್ದೀನನ ಅದ್ಭುತ ದೀಪದಂತೆ ವರ್ತಿಸುತ್ತಿರುವುದು ಅಚ್ಚರಿದಾಯಕ. ಇದು ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ನಿದರ್ಶನ. ಯಾವುದೇ ಒತ್ತಡಕ್ಕೆ ಸಿಲುಕದೆ ನ್ಯಾಯವಾಗಿ ಕಾರ್ಯ ನಿರ್ವಹಿಸುವ ಶುದ್ಧಹಸ್ತದ ಅಧಿಕಾರಿಗಳನ್ನು ಕಾರಾಗೃಹಕ್ಕೆ ನಿಯೋಜಿಸಬೇಕಿದೆ. ಆಗಷ್ಟೇ ಇಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು.
⇒ಬಾಲಕೃಷ್ಣ ಎಂ.ಆರ್., ಬೆಂಗಳೂರು
ಮಕ್ಕಳಿಗೆ ಮೊಬೈಲ್ ಬಳಕೆ ನಿರ್ಬಂಧ ಕುರಿತಂತೆ ಸರ್ಕಾರದ ಚಿಂತನೆ ಸ್ವಾಗತಾರ್ಹ. ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವುದರಿಂದ ಧನಾತ್ಮಕ ಬೆಳವಣಿಗೆಯಾಗಲಿದೆ. ಇದಕ್ಕೆ ಪೂರಕವಾಗಿ ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡುವ ಕುರಿತಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳಲ್ಲಿನ ಮೊಬೈಲ್ ಬಳಕೆ ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ನೀಡಿದ ನನ್ನ ಜಾಗೃತಿ ಅಭಿಯಾನಕ್ಕೆ ಸರ್ಕಾರದ ಕಾನೂನಿನ ಕ್ರಮದ ಚಿಂತನೆ ಸಮಾಧಾನ ತಂದಿದೆ.
ದೇವನೂರು ಅಚ್ಯುತರಾವ್, ಸಾಗರ