ವಾಚಕರ ವಾಣಿ
ತಾತ್ಕಾಲಿಕ ಸಿಬ್ಬಂದಿಗೆ ಸಂಬಳ ಬೇಡವೆ?
ಹಂಪಿ ಕನ್ನಡ ವಿ.ವಿಗೆ ₹2 ಕೋಟಿ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗಷ್ಟೇ ಈ ಅನುದಾನ ಬಳಸಲು ಸೂಚಿಸಲಾಗಿದೆಯೆಂಬ ಸುದ್ದಿ ಓದಿ ಆಘಾತವಾಯಿತು. 17 ತಿಂಗಳಿನಿಂದ ತಾತ್ಕಾಲಿಕ ಸಿಬ್ಬಂದಿಗೆ ಸಂಬಳ ನೀಡಿಲ್ಲ. ತಾತ್ಕಾಲಿಕ ಹುದ್ದೆಗಳಲ್ಲಿ ದುಡಿಯುವವರಿಗೆ ಅನ್ನ, ನೀರು, ಬಟ್ಟೆಯ ಅವಶ್ಯಕತೆ ಇಲ್ಲವೇ? ಅವರು ಮನುಷ್ಯರಲ್ಲವೇ? ವಿಶ್ವವಿದ್ಯಾಲಯದ ಕುಲಪತಿ ಹಾಗೂ ಸಿಂಡಿಕೇಟ್ ಸದಸ್ಯರು, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ತಾತ್ಕಾಲಿಕ ಸಿಬ್ಬಂದಿಗೆ ನಿಯಮಿತವಾಗಿ ಸಂಬಳ ಕೊಡಿಸುವ ಪ್ರಯತ್ನ ಮಾಡಬೇಕಿದೆ.
⇒ಯಲ್ಲಪ್ಪ ಟಿ. ಗಲಗ್ಕರ್, ದೇವದುರ್ಗ
ಸಕ್ಕರೆ ಲಾಬಿಗೆ ಸರ್ಕಾರ ಮಣಿಯದಿರಲಿ
ಕಬ್ಬಿಗೆ ವೈಜ್ಞಾನಿಕ ಬೆಲೆ ಮತ್ತು ಕಾರ್ಖಾನೆಗಳಿಂದ ಬರಬೇಕಿದ್ದ ಬಾಕಿ ಹಣಕ್ಕೆ ಒತ್ತಾಯಿಸಿ 1984ರಲ್ಲಿ ಮೊದಲ ಬಾರಿಗೆ ಸರ್ಕಾರದ ಜೊತೆಗೆ, ಅಂದಿನ ರೈತ ಸಂಘದ ನಾಯಕರು ಮಾತುಕತೆ ನಡೆಸಿದ್ದರು. ಮಾತುಕತೆ ವಿಫಲಗೊಂಡಾಗ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ 14 ದಿನ ಚಳವಳಿ ನಡೆಸಿದರು. ಕಬ್ಬಿನ ಉತ್ಪನ್ನ ಸಕ್ಕರೆ ಮಾತ್ರವಲ್ಲದೆ, ಉಪ ಉತ್ಪನ್ನಗಳಲ್ಲಿ ಇರುವ ಲಾಭದ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು. ಈಗ ಆ ಉತ್ಪನ್ನಗಳಲ್ಲಿ ವಿದ್ಯುತ್ ಉತ್ಪಾದನೆಯೂ ಸೇರಿದೆ. ಆಗ ರಾಜಕಾರಣಿಗಳಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಇರಲಿಲ್ಲ. ಈಗ ಎಲ್ಲಾ ಪಕ್ಷದಲ್ಲೂ ಕಾರ್ಖಾನೆಗಳ ಮಾಲೀಕರಿದ್ದಾರೆ. ಹಾಗಾಗಿ, ಅಷ್ಟು ಸುಲಭವಾಗಿ ರೈತರ ಪರವಾಗಿ ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಕಡಿಮೆ. ಚಳವಳಿ ಅಹಿಂಸಾತ್ಮಕವಾಗಿರಲಿ. ಶಿಸ್ತು, ಸಂಯಮ ಇಲ್ಲದಿದ್ದರೆ ಚಳವಳಿಯನ್ನು ಸರ್ಕಾರ ಸುಲಭವಾಗಿ ಹತ್ತಿಕ್ಕುತ್ತದೆ.
⇒ಅತ್ತಿಹಳ್ಳಿ ದೇವರಾಜ್, ಬೆಂಗಳೂರು
ಜಾತಿ ಪ್ರಮಾಣಪತ್ರ ವಿತರಣೆಯ ಕಗ್ಗಂಟು
ಸಮಾಜ ಕಲ್ಯಾಣ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಹಾಗೂ ಕಂದಾಯ ಇಲಾಖೆ ನಡುವೆ ಸಮನ್ವಯ ಇಲ್ಲ. ಇದರಿಂದ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಅನ್ವಯ ‘ಪ್ರವರ್ಗವಾರು’ ಜಾತಿ ಪ್ರಮಾಣಪತ್ರ ವಿತರಣೆಯು ಕಗ್ಗಂಟಾಗಿದೆ. ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಒಬ್ಬರ ಮೇಲೊಬ್ಬರು ಜವಾಬ್ದಾರಿ ಹೊತ್ತುಹಾಕುತ್ತಾ, ತಂತ್ರಾಂಶ ಇನ್ನೂ ರೂಪಿಸಿಲ್ಲ ಎಂಬ ಸಬೂಬು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಪರಿಶಿಷ್ಟ ಜಾತಿಯ ಲಕ್ಷಾಂತರ ಬಡ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಇದು ಸರ್ಕಾರದ ಅಸಡ್ಡೆ ಮತ್ತು ಇಚ್ಛಾಶಕ್ತಿ ಕೊರತೆಗೆ ಕನ್ನಡಿ ಹಿಡಿದಿದೆ. ಈ ಮೂರೂ ಇಲಾಖೆಗಳಲ್ಲಿ ತಂತ್ರಾಂಶ ಅಭಿವೃದ್ಧಿ ಆಗುವವರೆಗೆ ನೇಮಕಾತಿ, ಉನ್ನತ ಶಿಕ್ಷಣ ಪ್ರವೇಶಾತಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡುವುದು ಸಮಂಜಸ.
⇒ಡಿ. ಪ್ರಸನ್ನಕುಮಾರ್, ಬೆಂಗಳೂರು
ಕ್ರಿಕೆಟ್ ಸಾಧಕಿಯರಿಗೆ ಪ್ರೀತಿಯ ಸಲಾಂ
‘ಛಲಗಾತಿಯರು’ ಈ ಬಾರಿ ತಮ್ಮ ಛಲದಿಂದ ಏಕದಿನ ಮಹಿಳಾ ಕ್ರಿಕೆಟ್ ವಿಶ್ವಕಪ್ ಭಾರತದ ಮಡಿಲು ಸೇರುವಂತೆ ಮಾಡಿದ್ದಾರೆ. ದೇಶದ ಎಲ್ಲಾ ಮೂಲೆಗಳನ್ನು ಪ್ರತಿನಿಧಿಸುವ ಈ ಪ್ರತಿಭೆಗಳಿಗೆ ಸೂಕ್ತ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಈ ಪಟ್ಟಿಯಲ್ಲಿ ಕರ್ನಾಟಕದ ಒಬ್ಬರೂ ಇಲ್ಲದಿರುವುದು ಬೇಸರದ ಸಂಗತಿ. ಈ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ನಿಗಾವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಕ್ರಿಕೆಟ್‌ಗೆ ಸೂಕ್ತ ಪರಿಸರ ಕಲ್ಪಿಸಿ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಬೇಕಿದೆ.
⇒ವಾಸಣ್ಣ, ಧಾರವಾಡ
ಶಿಕ್ಷಣದ ರಾಷ್ಟ್ರೀಕರಣಕ್ಕೆ ಆದ್ಯತೆ ನೀಡಿ
ರಾಜ್ಯದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗಿಂತ ಖಾಸಗಿ ಕಾಲೇಜುಗಳು ಅಧಿಕವಾಗಿರುವುದು ಆಘಾತಕಾರಿ. ಇದರಿಂದ ಸರ್ಕಾರಿ ಕಾಲೇಜುಗಳು ವಿದ್ಯಾರ್ಥಿಗಳ ಕೊರತೆ ಎದುರಿಸುವಂತಾಗಿದೆ. ಇದು ಶಿಕ್ಷಣ ಕ್ಷೇತ್ರ ಒಳಗೊಂಡಂತೆ ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣದ ಮುನ್ಸೂಚನೆಯಂತಿದೆ. ಪ್ರಭಾವಿಗಳು ಮತ್ತು ರಾಜಕಾರಣಿಗಳ ಒಡೆತನದಲ್ಲಿ ಖಾಸಗಿ ಕಾಲೇಜುಗಳಿವೆ. ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ಸರ್ಕಾರಿ ಕಾಲೇಜುಗಳನ್ನು ಮುಚ್ಚಲಾಗುತ್ತಿದೆ. ಈ ಬೆಳವಣಿಗೆಯು ಭವಿಷ್ಯದಲ್ಲಿ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಶಿಕ್ಷಣ ಉಳ್ಳವರು ಸ್ವತ್ತಾಗುವ ಅಪಾಯವಿದೆ. ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವುದೇ ಇದಕ್ಕಿರುವ ಪರಿಹಾರ.
⇒ಮಹೇಶ್ ಕೂದುವಳ್ಳಿ, ಚಿಕ್ಕಮಗಳೂರು
ಸಾರ್ವಜನಿಕ ಆಸ್ತಿ ರಕ್ಷಣೆ ಎಲ್ಲರ ಹೊಣೆ
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅನುಮೋದನೆ ಇಲ್ಲದ ಕಟ್ಟಡಗಳ ನಿರ್ಮಾಣ ಹೆಚ್ಚುತ್ತಿದೆ. ಸರ್ಕಾರಿ ಆಸ್ತಿಗಳ ಒತ್ತುವರಿ ಉಲ್ಬಣಿಸಿದೆ. ಸರ್ಕಾರಿ ಶಾಲೆಗಳ ಆವರಣ ಮತ್ತು ಕಟ್ಟಡಗಳು ಪುಂಡರ ಅಡ್ಡೆಯಾಗಿವೆ. ಈ ಸಮಸ್ಯೆಗಳ ಬಗ್ಗೆ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಕಂಡೂಕಾಣದಂತೆ ಇರುತ್ತಾರೆ. ಅವರು ಮತದಾರರ ಮರ್ಜಿಗೆ ಒಳಪಟ್ಟಿರುವುದೇ ಇದಕ್ಕೆ ಕಾರಣ. ಸಾರ್ವಜನಿಕ ಆಸ್ತಿ ರಕ್ಷಣೆ ವಿಷಯದಲ್ಲಿ ಪಿಡಿಒಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಆಸ್ತಿ ರಕ್ಷಣೆಯು ಎಲ್ಲರ ಹೊಣೆಯಾಗಬೇಕಿದೆ.
⇒ಮಲ್ಲಿಕಾರ್ಜುನ, ಸುರಧೇನುಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.