ADVERTISEMENT

ಲಿಪಿ ಸುಧಾರಣೆಯ ಚರ್ಚೆ ಗೌರವಿಸಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 19:31 IST
Last Updated 3 ಫೆಬ್ರುವರಿ 2022, 19:31 IST

ಕನ್ನಡದಲ್ಲಿ ಲಿಪಿ ಸುಧಾರಣೆಯ ಬಗ್ಗೆ ಚರ್ಚೆ ನಡೆಯುತ್ತಿರುವುದು ಸರಿಯಷ್ಟೆ. ಕನ್ನಡದ ಸಹಜ ಲಯದಲ್ಲಿ ಅಂತೆಯೇ ತಮಿಳು, ತೆಲುಗು, ಮಲಯಾಳಂ ಮೊದಲಾದ ದ್ರಾವಿಡ ಭಾಷೆಗಳಲ್ಲಿ ಮಹಾಪ್ರಾಣ ಅಕ್ಷರಗಳು ಇಲ್ಲ. ಕಾಲ್ಡವೆರ್‌ರಿಂದ ಹಿಡಿದು ಶಂಕರ ಬಟ್‌ ಅವರವರೆಗೆ ಎಲ್ಲಾ ಭಾಷಾ ವಿಜ್ಞಾನಿಗಳು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅವರು ಮಾಡಿರುವ ತಪ್ಪೆಂದರೆ, ಶಂಕರ ಬಟ್ ಅವರನ್ನು ಹೊರತುಪಡಿಸಿ ಉಳಿದವರು ತಮ್ಮ ಬರಹಗಳಲ್ಲಿ ಅವುಗಳನ್ನು ಬಳಸಿರುವುದು.

ಆಡುಭಾಷೆಗೂ ಬರಹದ ಭಾಷೆಗೂ ವ್ಯತ್ಯಾಸವಾಗುತ್ತದೆ ಎಂಬುದು ನಿಜ. ಆದರೆ ವ್ಯತ್ಯಾಸ ತುಂಬಾ ದೂರ ಹೋಗಬಾರದು. ಸತ್ಯ ಏನೆಂದರೆ, ಕನ್ನಡದ ಈಗಿನ ಬರಹದ ಭಾಷೆ ಆಡುಭಾಷೆಗೆ ತುಂಬಾ ದೂರ ಇದೆ. ಹಾಗಂತ ಮಹಾಪ್ರಾಣ ಅಕ್ಷರಗಳನ್ನು ಅಂತೆಯೇ ಷ ಋ ಅಕ್ಷರಗಳನ್ನು ಏಕಾಏಕಿ ಬಿಟ್ಟು ಬರೆಯಲು ಸಾಧ್ಯವಿಲ್ಲ. ಬದಲಾಗಿ ಎರಡು ರೂಪಗಳನ್ನು ಮೊದಲಿಗೆ ಒಪ್ಪಿಕೊಳ್ಳಬೇಕಿದೆ. ಉದಾಹರಣೆಗೆ, ಅಭಿಮಾನ- ಅಬಿಮಾನ, ಲಾಭ- ಲಾಬ ಹೀಗೆ. ಈಗಾಗಲೇ ಕಥೆ- ಕತೆ, ಘಂಟೆ- ಗಂಟೆ ಈ ಎರಡು ರೂಪಗಳನ್ನು ಒಪ್ಪಿಕೊಂಡಿದ್ದೇವೆ. ಮಹಾಪ್ರಾಣ ಅಕ್ಷರಗಳನ್ನು ಬಿಟ್ಟು ಬರೆದಾಕ್ಷಣ ಸಂಸ್ಕೃತ ಪದಗಳನ್ನು ತ್ಯಜಿಸಿದ್ದೇವೆ ಎಂದರ್ಥವಲ್ಲ. ಬದಲಾಗಿ ಕನ್ನಡದ ಜಾಯಮಾನಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದ್ದೇವೆ ಎಂದರ್ಥ. ಬ್ರಿಟಿಷರು ಬೆಂಗಳೂರು (Bengaluru) ಎಂಬ ಪದವನ್ನು Banglore ಎಂದು, ಶಿವಮೊಗ್ಗ (Shivamogga) ಎಂಬ ಪದವನ್ನು Shimoga ಎಂದೇ ಹೇಳುತ್ತಿದ್ದರು ಹಾಗೆಯೇ ಬರೆಯುತ್ತಿದ್ದರು. ಹೀಗೆ ಅವರ ಆಡಳಿತ ಕಾಲದಲ್ಲಿ ಬದಲಾದ ಪದಗಳನ್ನು ನಾವು ಆ ಹಿನ್ನೆಲೆಯಲ್ಲಿಯೇ ನೋಡಬೇಕು. ಭಾಷೆಯ ನಿಜವಾದ ರೂಪವನ್ನು ಜನರು ಆಡುವ ಮಾತಿನಲ್ಲಿ ಮಾತ್ರ ನೋಡಬಹುದು. ಇದು ಎಷ್ಟು ಸಹಜ ಎಂದರೆ, ಹೊಸದಾಗಿ ಮಕ್ಕಳಿಗೆ ಕಲಿಸುವಾಗ ಸುಧಾರಿತ ಲಿಪಿಯಲ್ಲಿ ಕಲಿಸಿದರೆ ಮೀನು ನೀರಿನಲ್ಲಿ ಈಜಿದಷ್ಟು ಸುಲಭವಾಗುತ್ತದೆ.

ಗಿರೀಶ್ ಮತ್ತೇರ,ಹನುಮಂತ ದೇವರ ಕಣಿವೆ, ಹೊಳಲ್ಕೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.