ADVERTISEMENT

ರೈತರ ಶ್ರಮ ಗೌರವಿಸಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 19:31 IST
Last Updated 29 ಏಪ್ರಿಲ್ 2022, 19:31 IST

ರಾಗಿ ಖರೀದಿ ನೋಂದಣಿಗೆ ಸರತಿಯಲ್ಲಿ ನಿಂತಿದ್ದ ರೈತರ ಮೇಲೆ ಲಾಠಿಪ್ರಹಾರ ನಡೆಸಿ ಪರಿಸ್ಥಿತಿ ಹದ್ದುಬಸ್ತಿಗೆ ತಂದದ್ದನ್ನು (ಪ್ರ.ವಾ., ಏ. 28) ತಿಳಿದು ಕಸಿವಿಸಿಯಾಯಿತು. ಬೆಳೆಯುವ ರೈತರ ಕಷ್ಟ ಅರಿತ ಯಾವ ಅಧಿಕಾರಿಗಳೂ ಇಂತಹ ಕಿರುಕುಳವನ್ನು ನೀಡಲಾರರು. ದನಕರುಗಳನ್ನು ಬಿಟ್ಟು, ಹಳ್ಳಿಯಿಂದ ತಾಲ್ಲೂಕು ಕೇಂದ್ರಕ್ಕೆ ಬರುವ ರೈತನಿಗೆ ಸಂಜೆಯ ಮುನ್ನ ಹಿಂದಿರುಗುವ ಜರೂರಿರುತ್ತದೆ. ನೋಂದಣಿ ಪ್ರಕ್ರಿಯೆಯನ್ನು ಒಂದು ತಿಂಗಳು ವಿಸ್ತರಿಸಿದರೆ, ಸರ್ಕಾರದ ಉಗ್ರಾಣಗಳು ಎಲ್ಲಿಯಾದರೂ ಓಡಿಹೋಗುವುವೇ? ಒಂದು ಬೆಳೆಯನ್ನು ಕೊಳ್ಳಲು ನೋಂದಣಿ ಅವಶ್ಯಕತೆ ಇರುವುದು ಸರ್ಕಾರದ ಉಗ್ರಾಣವನ್ನು ವ್ಯವಸ್ಥಿತವಾಗಿ ನಿರ್ವಹಿಸುವುದಕ್ಕೇ ವಿನಾ ಇನ್ನಾವ ಘನಕಾರ್ಯಕ್ಕೂ ಅಲ್ಲ. ಅನುಕೂಲದ ದೃಷ್ಟಿಯಿಂದ ನೋಂದಣಿಯನ್ನು ಜನವರಿಯಿಂದಲೇ ಆರಂಭಿಸಬಹುದು. ಇದಕ್ಕೆ ಬೇಕಿರುವುದು ಒಬ್ಬ ಕಂಪ್ಯೂಟರ್ ಆಪರೇಟರ್ ಮಾತ್ರ.

ಎಕರೆಗೆ ಇಂತಿಷ್ಟು ನೀವು ಹೊತ್ತು ತರಬಹುದು, ಇಂತಹ ದಿನ ಬನ್ನಿ ಎನ್ನುವ ಕೇವಲ ಎರಡು ವಾಕ್ಯಗಳ ಮಾಹಿತಿಯಷ್ಟೇ ನೋಂದಣಿಯ ಬಂಡವಾಳ. ಮೊದಲಿಗೆ, ರಾಗಿ ಖರೀದಿ ಈ ವರ್ಷ ಇಲ್ಲ ಎಂಬ ವದಂತಿಯನ್ನು ಅಧಿಕಾರಿಗಳು ಹಬ್ಬಿಸಿದ್ದರು. ನಂತರದಲ್ಲಿ ಅನೇಕ ಸಚಿವರು, ಶಾಸಕರು ಬಹಳಷ್ಟು ಪ್ರಚಾರ ಪಡೆದ ನಂತರ, ರಾಗಿ ಖರೀದಿಯನ್ನು ಇನ್ನೇನು ಪೂರ್ವಮುಂಗಾರಿನ ಹೊಸ್ತಿಲಲ್ಲಿ ಕೊಳ್ಳಲು ಸರ್ಕಾರ ಮುಂದಾಗಿದೆ. ರಾಗಿಬೆಳೆ ಆರ್ಥಿಕವಾಗಿ ಆದಾಯದ ಬೆಳೆಯಲ್ಲ. ಆದರೂ ಬಯಲುಸೀಮೆಯ ಪ್ರಮುಖ ಬೆಳೆ ಅದು. ರಾಗಿಒಕ್ಕಲು ಬಲುತ್ರಾಸದ ಕಸುಬು. ಹುಲ್ಲಿನ ದೃಷ್ಟಿಯಿಂದ ರೈತರು ರಾಗಿಯನ್ನು ನೆಚ್ಚುತ್ತಾರೆ. ಇಷ್ಟೆಲ್ಲಾ ಶ್ರಮವನ್ನು ಗೌರವಿಸಬೇಕಾದದ್ದು ಸರ್ಕಾರದ ಜವಾಬ್ದಾರಿ. ಅದಕ್ಕೆ ಮಾಡಬೇಕಾದ ಮೂಲಕರ್ತವ್ಯ ರೈತರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು.

ಶಾಂತರಾಜು ಎಸ್. ಮಳವಳ್ಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.