ADVERTISEMENT

ದೇಗುಲ ಪ್ರವೇಶ: ಸಂಪ್ರದಾಯ ಹೆಚ್ಚಲ್ಲ...

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 19:42 IST
Last Updated 23 ಅಕ್ಟೋಬರ್ 2018, 19:42 IST

‘ಸಂವಿಧಾನಕ್ಕಿಂತ ಸಂಪ್ರದಾಯ ಹೆಚ್ಚೇ?’ (ಚರ್ಚೆ, ಪ್ರ.ವಾ., ಅ. 23), ಎಂಬ ಬರಹಕ್ಕೆ ಈ ಪ್ರತಿಕ್ರಿಯೆ.

ಖಂಡಿತವಾಗಿ ಸಂಪ್ರದಾಯ ಹೆಚ್ಚಲ್ಲ! ಆದರೆ, ದೇಗುಲ ಪ್ರವೇಶಕ್ಕೆ ಲಿಂಗಭೇದ, ವಯೋಭೇದವಿಲ್ಲವೆಂಬ ಸಂವಿಧಾನದ ಹಕ್ಕನ್ನು ಸುಪ್ರೀಂ ಕೋರ್ಟ್‌ ತೀರ್ಪು ಎತ್ತಿಹಿಡಿದಿದೆಯೇ ಹೊರತು, ಸಂಪ್ರದಾಯವನ್ನು ಮುರಿದೇ ತೀರಬೇಕೆಂಬ ಹಟ ತೀರ್ಪಿನಲ್ಲಿಲ್ಲ.

ಸುಮಾರು 30- 35 ವರ್ಷಗಳ ಹಿಂದೆ ಶಬರಿಮಲೆಯ ಬಗ್ಗೆಯಾಗಲೀ, ಅಲ್ಲಿ ಅಯ್ಯಪ್ಪನೆಂಬ ಸ್ವಾಮಿಯ ನೆಲೆ ಇರುವ ಬಗ್ಗೆಯಾಗಲೀ ಈ ಭಾಗದ ಜನರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಪರಿಚಯವಾದ ಮೇಲೂ, ನಾರಿಯರಿರಲಿ, ಎಲ್ಲಾ ಪುರುಷರು ಈ ಸಾಹಸಯಾತ್ರೆ ಕೈಗೊಳ್ಳುತ್ತಿರಲಿಲ್ಲ. ಯಾತ್ರೆಯಿಂದಾಗಿ ಎಷ್ಟು ಮಂದಿಗೆ ಸ್ವರ್ಗ ಪ್ರಾಪ್ತಿಯಾಗಿದೆಯೋ ಗೊತ್ತಿಲ್ಲ. ಆದರೆ ಅಯ್ಯಪ್ಪ ಮಾಲೆ ಹಾಕಿದವರು ಕಠಿಣ ನಿಷ್ಠೆ ಪಾಲಿಸುತ್ತಿದ್ದುದನ್ನು ಕಂಡಿದ್ದೇನೆ. ಇದು ತಾತ್ಕಾಲಿಕವಾಗಿಯಾದರೂ ಶಿಸ್ತು- ಸಂಯಮದ ಸಂಕೇತವಾಗಿತ್ತೆನ್ನುವುದಂತೂ ನಿಜ. ಈಗ ಅಂತಹ ಜೀವನ ಮೌಲ್ಯವೇನೂ ಶಬರಿಮಲೆ ಯಾತ್ರೆಯಲ್ಲಿ ಉಳಿದಿಲ್ಲ. ಶಬರಿಮಲೆ ಯಾತ್ರೆಯಷ್ಟೇ ಅಲ್ಲ, ಇಂದಿನ ಯಾವುದೇ ಹಬ್ಬ, ವ್ರತ, ಸಂಪ್ರದಾಯಗಳಲ್ಲೂ ಹಿಂದಿನ ಶ್ರದ್ಧಾನಿಷ್ಠೆಗಳು ಉಳಿದಿಲ್ಲ.

ADVERTISEMENT

ಕಾಶಿ, ರಾಮೇಶ್ವರ, ಬದರಿ, ಕೇದಾರ ಯಾತ್ರೆಗಳೂ ಇಂದು ಮೋಜಿನ ಪ್ರವಾಸಗಳಾಗಿವೆ. 50 ವರ್ಷ ಹಿಂದಿನ ಸ್ಥಿತಿಗೆ ಹೋಲಿಸಿದರೆ ಹಜ್ ಯಾತ್ರೆ ಸಹ ಇಂದು ಬಹಳಷ್ಟು ಜನರ ಕೈಗೆಟುಕುವಂತಾಗಿದೆ. ತೀರ್ಥಯಾತ್ರೆಯೇ ಬೇರೆ; ಮೋಜಿನ ಪ್ರವಾಸವೇ ಬೇರೆ.

ಆಚರಣೆಗಳ ಪಾರಮಾರ್ಥಿಕ ಮೌಲ್ಯ ಉಳಿಯಬೇಕಾದರೆ ಸಂಪ್ರದಾಯ, ಶಾಸ್ತ್ರದ ವಿಧಿ- ವಿಧಾನಗಳನ್ನು ಲೋಪವಿಲ್ಲದೆ ಪಾಲಿಸಬೇಕು. ಇದಕ್ಕೆ ಆತ್ಮ ಸಂಯಮ ಅತ್ಯವಶ್ಯಕವಾಗಿ ಬೇಕಾಗುತ್ತದೆ. ಅದಿಲ್ಲದ ಯಾವುದೇ ಲೌಕಿಕ ವ್ಯವಹಾರಗಳಿಗೆ ಸಂವಿಧಾನ, ಕಾನೂನು ಮತ್ತು ನ್ಯಾಯಾಂಗದ ನಿರ್ಣಯಗಳು ಅನ್ವಯವಾಗಬೇಕಾಗುತ್ತವೆ.

–ಆರ್.ಕೆ. ದಿವಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.