ADVERTISEMENT

ರೈತರ ಮಾತು ಕೇಳಿ, ಅದು ದೇವರ ಮಾತು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 19:31 IST
Last Updated 14 ಡಿಸೆಂಬರ್ 2020, 19:31 IST

ಅಯ್ಯೋ ಸಾಕು, ಇಲ್ಲಿಗೇ ನಿಲ್ಲಿಸೋಣ. ರೈತರೇ ‘ಬೇಡ, ಇದು ಅನ್ಯಾಯ’ ಎಂದ ಮೇಲೆ ಯಾಕಿದೆಲ್ಲ? ಭೂಮಿಹಿತ ಅವರಿಗಿಂತ ಹೆಚ್ಚು ಗೊತ್ತಿರುವುದಾದರೂ ಯಾರಿಗೆ? ರೈತರ ಬೊಬ್ಬೆ ಕೇಳುವುದಿಲ್ಲವೇ? ಅವರ ಒಳಿತು ಅವರಿಗೆ ತಿಳಿದಷ್ಟು ರೈತರಲ್ಲದವರಿಗೆ ತಿಳಿದಿರುವುದೇ? ನಮಗಾದರೂ ಯಾಕೆ ಅಂತಹ ಹಟ? ಮಣ್ಣು ಕೇವಲ ಮಣ್ಣಲ್ಲ, ಭೂಮಿ ಕೇವಲ ಭೂಮಿ ಅಲ್ಲ. ಅಧಿಕಾರ ಇದ್ದ ಮಾತ್ರಕ್ಕೆ ಯಾರೂ ಸರ್ವಜ್ಞರಲ್ಲ. ರೈತದ್ರೋಹ– ಭೂಮಿದ್ರೋಹ; ಮಾಡದಿರೋಣ ಅದನ್ನು.

ರೈತರನ್ನು ಬಳಲಿಸದಿರೋಣ. ಲಕ್ಷಾಂತರ ರೈತರು ಸಾಮೂಹಿಕವಾಗಿ ‘ಬೇಡ’ ಎಂದ ಮೇಲೆ ವಿಷಯ ಮುಗಿಯಿತು. ಮತ್ತೆ ಮುಂದುವರಿಯುವ ಮಾತೇ ಚರ್ಚೆಯೇ ಖಟಮ್ಮ ಖೈದಾಗಬೇಕು. ಒಮ್ಮೆಯೇ ಒಮ್ಮೆ, ಮಾನಸಿಕವಾಗಿ ರೈತರಾಗಿ, ತಾಯಿಯಾಗಿ, ಅವರ ಕಣ್ಣಲ್ಲಿ ನೋಡಿದರೆ ಸಾಕು, ರೈತರು ವಿರೋಧಿಸುತ್ತಿರುವ ಕಾನೂನಿನ ಅಪದ್ಧ ಅನಾಹುತ ಗೋಚರವಾಗುತ್ತದೆ.

ತಿಳಿದೂ ತಪ್ಪು ಮಾಡುವ ಮಹಾಮೂರ್ಖತನಕ್ಕೆ ಬಲಿಯಾಗದಿರೋಣ. ಭೂಮಿಯನ್ನು ಅವಮಾನಿಸದಿರೋಣ. ಅದು ತಿರುಗಿಬಿದ್ದರೆ ಉಳಿವೆಂಬುದೇ ಇಲ್ಲ.

ADVERTISEMENT

ಕಾನೂನುಗಳು ಎಂದೂ ದೇಶ ಕೊಲ್ಲುವ ಕಾಯಿಲೆಗಳಾಗಬಾರದು. ರೈತರನ್ನು ಅಲಕ್ಷಿಸಿ ಏನು, ಮುಂದೆ ಸಿಮೆಂಟು ತಿನ್ನುವುದೇ? ರೈತನೆಂಬವ ಭೂಮಿ ಮೇಲಿನ ಬದುಕಿನ ಹೃದಯ ಇದ್ದಂತೆ. ಹೋಗಿ ಹೋಗಿ ರೈತಪ್ರಾಣವನ್ನೇ ಪಣಕ್ಕೊಡ್ಡುವುದೆಂದರೆ! ಈ ನೆಲದ ಎಲ್ಲವೂ- ಬದುಕು, ಸಂಸ್ಕೃತಿ ವೇದ ವೇದಾಂತ ಚಿಂತನೆ, ಸಾಹಿತ್ಯ, ಸಂಗೀತ, ನಾಟಕ ಮುಂತಾಗಿ ಸಕಲಾತಿ ಸಕಲವೂ ನಿಂತಿದ್ದರೆ ಆ ಎಲ್ಲದರ ಮೂಲದಲ್ಲಿ ರೈತ ಜೀವಂತ ಇದ್ದಾನೆ. ಆತ ಸೋತನೆಂದರೆ ಎಲ್ಲವೂ ಸಮಾಧಿಯಾಗುತ್ತವೆ. ಎಚ್ಚರಾಗಿ, ರೈತರ ಮಾತು ಕೇಳೋಣ. ಅದು ದೇವರ ಮಾತು. ಮರೆಯದಿರೋಣ.

–ವೈದೇಹಿ, ಮಣಿಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.