ADVERTISEMENT

ಮೈ ಮನ ಪೋಣಿಸುವ ಸೂಜಿದಾರ

​ಪ್ರಜಾವಾಣಿ ವಾರ್ತೆ
Published 15 ಮೇ 2019, 15:58 IST
Last Updated 15 ಮೇ 2019, 15:58 IST

ಕನ್ನಡದಲ್ಲಿ ಇತ್ತೀಚೆಗೆ ಸದಭಿರುಚಿಯ ಚಲನಚಿತ್ರಗಳು ಬರುತ್ತಿರುವುದು ಆಶಾದಾಯಕವಾದ ಬೆಳವಣಿಗೆ. ರಂಗಭೂಮಿಯ ಹಿನ್ನೆಲೆಯಿಂದ ಬಂದವರು, ವಿದ್ಯಾರ್ಥಿಗಳು, ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಪ್ರಯೋಗಾತ್ಮಕವಾದ, ಸದಭಿರುಚಿಯ ಕಲಾತ್ಮಕ ಚಿತ್ರಗಳನ್ನು ನಿರ್ಮಿಸುತ್ತಿದ್ದು, ಅನ್ಯರು ಕನ್ನಡ ಚಿತ್ರರಂಗದತ್ತ ನೋಡುವಂತಾಗಿದೆ. ಇತ್ತೀಚೆಗೆ ತೆರೆಕಂಡ ‘ಸೂಜಿದಾರ’ ಸದಭಿರುಚಿಯ ಕಲಾಸಕ್ತರನ್ನು ಸೆಳೆಯುವಂಥದ್ದು. ರಂಗಭೂಮಿಯಿಂದ ಬಂದಿರುವ ಯುವ ನಿರ್ದೇಶಕ ಮೌನೇಶ್ ಬಡಿಗೇರರು ಚಿತ್ರದಲ್ಲಿ ಸಮಕಾಲೀನ ಸಂಗತಿಗಳನ್ನು ಕಥನದ ವಸ್ತುವನ್ನಾಗಿ ತೆಗೆದುಕೊಂಡು ನಿರ್ವಹಿಸಿರುವ ರೀತಿ ಪ್ರಶಂಸಾರ್ಹ. ಲವ್ ಜಿಹಾದ್, ಮತಾಂಧತೆಯಂಥ ವಸ್ತುಗಳನ್ನು ತೆಗೆದುಕೊಂಡು ಎಲ್ಲಿಯೂ ಸಂಘರ್ಷಕ್ಕೆ ಎಡೆಮಾಡಿಕೊಡದೆ, ಜನರ ಮೈ ಮನವನ್ನು ಮಾನವೀಯ ನೆಲೆಯಲ್ಲಿ ಸೃಜನಾತ್ಮಕವಾಗಿ ಪೋಣಿಸಿರುವುದು ಅಭಿನಂದನೀಯ.

ಈ ಚಿತ್ರದಲ್ಲಿ ನಟಿ ಹರಿಪ್ರಿಯಾ ಅವರ ನಟನೆ ಪ್ರಶಂಸಾರ್ಹವಾದುದು. ಆದರೆ ಅವರು ‘ಸೂಜಿದಾರ’ದ ಬಗೆಗೆ ಆಕ್ಷೇಪ ಎತ್ತಿರುವುದು (ಪ್ರ.ವಾ., ಮೇ 15) ಆಶ್ಚರ್ಯಕರವಾಗಿದೆ. ಇದೊಂದು ಕಮರ್ಷಿಯಲ್ ಮಸಾಲೆ ಚಿತ್ರವಾಗಿರಬೇಕಿತ್ತು ಎಂದು ಅವರು ಆಶಿಸಿದಂತಿದೆ. ನಾಯಕಪ್ರಧಾನವಾದ ಚಿತ್ರಗಳೇ ಹೆಚ್ಚಾಗಿರುವ ಈ ಸಂದರ್ಭದಲ್ಲಿ, ಹೆಣ್ಣಿನ ದನಿಯೊಂದನ್ನು ಪ್ರಧಾನ ನೆಲೆಯಲ್ಲಿ ‘ಸೂಜಿದಾರ’ವಾಗಿಸಿರುವ ನಿರ್ದೇಶಕರ ಕಲಾವಂತಿಕೆಯನ್ನು ಗಮನಿಸದಿರುವುದು ವಿಷಾದನೀಯ. ಇನ್ನಾದರೂ ಹರಿಪ್ರಿಯಾ ಅವರು ಚಲನಚಿತ್ರದ ಸಾಮಾಜಿಕ ಕಾಳಜಿಯನ್ನು ಅರ್ಥ ಮಾಡಿಕೊಳ್ಳಲಿ. ಸಾಮಾಜಿಕ ಬದ್ಧತೆಯುಳ್ಳ ಸದಭಿರುಚಿಯ ಕಲಾಸಕ್ತರು ಇಂಥ ಚಲನಚಿತ್ರವನ್ನು ನೋಡಿ ಪ್ರೋತ್ಸಾಹಿಸಲಿ.

ಡಾ. ರುದ್ರೇಶ್ ಅದರಂಗಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.