ADVERTISEMENT

ರಾಜ್ಯ ಭಾಷೆಯ ಕಲಿಕೆ ಕಡ್ಡಾಯವಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಜುಲೈ 2021, 19:30 IST
Last Updated 12 ಜುಲೈ 2021, 19:30 IST

1956ರಲ್ಲಿ ಕರ್ನಾಟಕ ರಾಜ್ಯ (ವಿಶಾಲ ಮೈಸೂರು ರಾಜ್ಯ) ರಚನೆಯಾದಾಗ ರಾಜ್ಯಪಾಲರಾದವರು ಜಯ ಚಾಮರಾಜೇಂದ್ರ ಒಡೆಯರು. ಅವರನ್ನು ಹೊರತುಪಡಿಸಿದರೆ ಆನಂತರದ ರಾಜ್ಯಪಾಲರಾಗಿ ಬಂದವರೆಲ್ಲ ಪರ ಪ್ರಾಂತದವರು. ಕನಿಷ್ಠ ಕನ್ನಡ ಬಲ್ಲವರು ನಮ್ಮ ರಾಜ್ಯಪಾಲರಾಗಲಿಲ್ಲ. ಅವರಲ್ಲಿ ಗಿರಿ, ರಮಾದೇವಿ ಬಿಟ್ಟರೆ ಇನ್ನಾರೂ ಕನ್ನಡ ಕಲಿಯುವ ಪ್ರಯತ್ನವನ್ನೂ ಮಾಡಲಿಲ್ಲ. ಇದು ಪ್ರಜಾಪ್ರಭುತ್ವದ ದೊಡ್ಡ ಅಣಕ.

ಅದೇ ರಾಜ್ಯದವರು ರಾಜ್ಯಪಾಲರಾದರೆ ಅವರು ಪಕ್ಷಪಾತ ಮಾಡಬಹುದು ಎಂಬ ಉದ್ದೇಶದಿಂದ ಬೇರೆ
ರಾಜ್ಯದವರನ್ನು ರಾಜ್ಯಪಾಲರನ್ನಾಗಿ ಕಳುಹಿಸಲಾಗುತ್ತಿದೆ, ಜತೆಗೆ ರಾಷ್ಟ್ರದ ಭಾವೈಕ್ಯವನ್ನು ಬೆಸೆಯಲು ಸಹಕಾರಿ ಎಂದು ಹೇಳಲಾಯಿತು. ಅದೇನೇ ಇರಲಿ, ರಾಜ್ಯಪಾಲರು ಸ್ಥಳೀಯ ಜನರ ಭಾವನೆಗೆ ಸ್ಪಂದಿಸುತ್ತಿಲ್ಲ, ಭಾಷೆ- ಸಂಸ್ಕೃತಿಯನ್ನು ಅರಿಯುವ ಗೋಜಿಗೆ ಹೋಗುತ್ತಿಲ್ಲ. ನಿರ್ಗಮಿಸಿದ ವಜುಭಾಯಿ ವಾಲಾ ಅವರು 7 ವರ್ಷಗಳ ಸುದೀರ್ಘ ಅವಧಿ ರಾಜ್ಯಪಾಲರಾಗಿದ್ದರೂ ಒಂದಕ್ಷರ ಕನ್ನಡ ಕಲಿಯಲಿಲ್ಲ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ಹಿಂದಿಯಲ್ಲೇ ಮಾತನಾಡಿ ‘ತಮ್ಮತನ’ದಿಂದ ಮೆರೆದರು. ಆಗ ವಿರೋಧ ಪಕ್ಷದವರೂ ವಿರೋಧಿಸಲಿಲ್ಲ. ‘ವಾಲ ತಮ್ಮ ವಜನ್’ (ತೂಕ) ಉಳಿಸಿಕೊಂಡರು. ಆದರೆ ಕನ್ನಡವನ್ನು ಗಾಳಿಗೆ ತೂರಿದರು. ಈಗ ಗೆಹ್ಲೋತ್ ಬಂದಿದ್ದಾರೆ. ಅವರಿಗೂ ಕನ್ನಡ ಕಲಿಯುವ ಅಗತ್ಯ ಬರುವುದಿಲ್ಲ. ಪುಣ್ಯಕೋಟಿಗಳಾದ ಕನ್ನಡಿಗರು ಇದನ್ನೂ ಸಹಿಸಿಕೊಳ್ಳುತ್ತೇವೆ.

ಭಾಷಾನ್ವಯ ರಾಜ್ಯಗಳ ರಚನೆಯನ್ನು ಸಂವಿಧಾನ ಒಪ್ಪಿದೆ. ಕನ್ನಡವನ್ನು ಆಡಳಿತ ಭಾಷೆ ಎಂದು ಕರ್ನಾಟಕ ಘೋಷಿಸಿದೆ. ಆದರೆ, ರಾಜ್ಯದ ಮೊದಲ ಪ್ರಜೆ ರಾಜ್ಯಪಾಲರಿಗೆ ಕನ್ನಡ ಜ್ಞಾನದ ಅಗತ್ಯವಿಲ್ಲ! ರಾಜ್ಯಪಾಲರಾಗಿ ಬರುವವರು ಕನಿಷ್ಠ ತಾವು ನೇಮಕವಾದ ರಾಜ್ಯದ ಭಾಷೆಯನ್ನು ಕಲಿಯುವ ಸೌಜನ್ಯ ತೋರದಿರುವುದರಿಂದ ರಾಜ್ಯಪಾಲರಿಗೆ ರಾಜ್ಯಭಾಷೆಯ ಕಲಿಕೆಯನ್ನು ಕಡ್ಡಾಯಗೊಳಿಸಿ ಕಲಿಸುವ ವ್ಯವಸ್ಥೆಯಾಗಬೇಕು.

ADVERTISEMENT

- ರಾ.ನಂ.ಚಂದ್ರಶೇಖರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.