ADVERTISEMENT

ವಾಚಕರ ವಾಣಿ: ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಕೆಗೆ ವಿಘ್ನ

ಪ್ರಜಾವಾಣಿ ವಿಶೇಷ
Published 1 ಜನವರಿ 2026, 0:40 IST
Last Updated 1 ಜನವರಿ 2026, 0:40 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಕೆಗೆ ವಿಘ್ನ 

ಪರಿಶಿಷ್ಟ ಜಾತಿಯ ಬಡ ವಿದ್ಯಾರ್ಥಿಗಳು ಮೆಟ್ರಿಕ್‌ನಂತರದ ವಿದ್ಯಾರ್ಥಿ ವೇತನಕ್ಕೆ ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈ ಪೋರ್ಟಲ್‌ನಲ್ಲಿ ಲಾಗಿನ್ ಆದರೆ, ಕೆಇಎಗೆ ಸಂಬಂಧಿಸಿದ ಯಾವುದೇ ಮಾಹಿತಿ ಲಭ್ಯವಿಲ್ಲವೆಂದು ತೋರಿಸುತ್ತಿದೆ. ಹಾಗಾಗಿ, ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿವೇತನ ಅವಲಂಬಿಸಿ ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ತಕ್ಷಣವೇ ತಾಂತ್ರಿಕ ದೋಷ ಸರಿಪಡಿಸಲು ಕೆಇಎ ಮತ್ತು ಸಮಾಜ ಕಲ್ಯಾಣ ಇಲಾಖೆ ಮುಂದಾಗಬೇಕಿದೆ.

ADVERTISEMENT

⇒ಆರ್. ಕುಮಾರ್, ಬೆಂಗಳೂರು

ಓದುವ ಸಂಸ್ಕೃತಿಗೆ ಸರ್ಕಾರದಿಂದ ಪೆಟ್ಟು

ಸರ್ಕಾರವು ಕಳೆದ ನಾಲ್ಕು ವರ್ಷದಿಂದ ಸಾರ್ವಜನಿಕ ಗ್ರಂಥಾಲಯಗಳಿಗೆ ಹೊಸ ಪುಸ್ತಕಗಳನ್ನಾಗಲೀ, ಮರುಮುದ್ರಿತ ಕೃತಿಗಳನ್ನಾಗಲೀ ಖರೀದಿಸುತ್ತಿಲ್ಲ. ಆದರೆ, ಪ್ರತಿವರ್ಷವೂ ಗ್ರಂಥಾಲಯ ಸೆಸ್ ಸಂಗ್ರಹಿಸುತ್ತಿದೆ. ಈ ಹಣದಲ್ಲಿ ಕಡ್ಡಾಯವಾಗಿ ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸಬೇಕಿದೆ. ಕೈಯಲ್ಲಿ ಸ್ವಲ್ಪ ಹಣವಿರುವ ಒಂದಿಷ್ಟು ಮಂದಿ ಪುಸ್ತಕಗಳನ್ನು ಕೊಂಡು ಓದುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಗುವವರು, ಜ್ಞಾನಾರ್ಜನೆಗೆ ಓದುವವರು, ಸಾಹಿತ್ಯಾಸಕ್ತರು, ಪುಸ್ತಕ ಕೊಳ್ಳಲು ಸಾಧ್ಯವಾಗದ ಓದಿನ ಹಸಿವು ಉಳ್ಳವರು... ಇವರೆಲ್ಲರೂ ಸಾರ್ವಜನಿಕ ಗ್ರಂಥಾಲಯವನ್ನೇ ನಂಬಿರುತ್ತಾರೆ. ಹೊಸ ಆವಿಷ್ಕಾರ, ಪ್ರಚಲಿತ ವಿದ್ಯಮಾನ, ಹೊಸ ಕಥೆ, ಕಾದಂಬರಿಗಳ ಓದಿನಿಂದ ಅವರೆಲ್ಲ ವಂಚಿತರಾಗುತ್ತಿ ದ್ದಾರೆ. ಇದಕ್ಕೆಲ್ಲ ಸರ್ಕಾರವೇ ನೇರ ಕಾರಣ.

⇒ವಿಶಾಲಾಕ್ಷಿ ಶರ್ಮಾ, ಬೆಂಗಳೂರು

ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ದೊರೆಯಲಿ

ದೆಹಲಿಯ ವಾಯು ಗುಣಮಟ್ಟವು ಸುಧಾರಣೆ ಕಂಡರೂ ಕಳಪೆ ಸ್ಥಿತಿಯಲ್ಲಿಯೇ ಇದೆ. ಈ ಪರಿಸ್ಥಿತಿಯು ಇಡೀ ದೇಶದ ತುಂಬೆಲ್ಲ ಹರಡುವ ಸಮಯ ದೂರವಿಲ್ಲ. ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್‌ ಅನ್ನು ಹೀರಿಕೊಳ್ಳುವಲ್ಲಿ ಗಿಡ–ಮರಗಳು ಹಾಗೂ ಅರಣ್ಯದ ಪಾತ್ರ ಹಿರಿದು. ಆದರೆ, ಅಭಿವೃದ್ಧಿ ಹೆಸರಿನಲ್ಲಿ ರಸ್ತೆ, ಕಾರ್ಖಾನೆ ನಿರ್ಮಾಣ, ಗಣಿಗಾರಿಕೆ ಹೆಚ್ಚುತ್ತಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಪರಿಸರ ಸಂರಕ್ಷಣೆಗೆ ಸರ್ಕಾರಗಳು ಅಗತ್ಯ ಕ್ರಮಕೈಗೊಳ್ಳಬೇಕಿದೆ. ಈಗಾಗಲೇ, ದೇಶದಲ್ಲಿ ಜಾರಿಯಲ್ಲಿರುವ ಹಸಿರು ಭಾರತ ಮಿಷನ್, ನಗರ ಅರಣ್ಯ ಯೋಜನೆ, ತಾಯಿಯ ಹೆಸರಿನಲ್ಲಿ ಒಂದು ಮರ ಯೋಜನೆಗಳಿಗೆ ಮತ್ತಷ್ಟು ಒತ್ತು ನೀಡಬೇಕಿದೆ. ಅರಣ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ.

⇒ಪ್ರಸನ್ನ ಶಿವಾಜಿ ನಾಯಕ, ಜಮಖಂಡಿ

ಅಶ್ಲೀಲ ಶೈಲಿ ಗೀತೆಗಳಿಗೆ ಕಡಿವಾಣ ಹಾಕಿ

ಉತ್ತರ ಕರ್ನಾಟಕದಲ್ಲಿ ಜಾನಪದದ ಹೆಸರಿನಲ್ಲಿ ಅಶ್ಲೀಲ ಗೀತೆಗಳನ್ನು ರಚಿಸಿ ಹಾಡುವ ಹಾವಳಿ ಹೆಚ್ಚುತ್ತಿದೆ. ಸಾರ್ವಜನಿಕ ಸಮಾವೇಶ, ಧಾರ್ಮಿಕ ಕಾರ್ಯಕ್ರಮ, ಉತ್ಸವ, ಜಾತ್ರೆ ಹಾಗೂ ರಸಮಂಜರಿಗಳಲ್ಲಿ ಇವುಗಳನ್ನು ಹಾಡುವುದು ಸಾಮಾನ್ಯ ವಾಗಿದೆ. ಈ ಬೆಳವಣಿಗೆಯು ಮಹಿಳೆಯರು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅಭಿರುಚಿಹೀನ ಗೀತೆ ಗಳನ್ನು ಪ್ರಸ್ತುತಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಟ್ರ್ಯಾಕ್ಟರ್‌ ಗಳಲ್ಲಿ ಬಳಸುವ ಧ್ವನಿವರ್ಧಕಗಳ ಕರ್ಕಶ ಶಬ್ದದ ತಡೆಗೂ ನಿಯಮಾವಳಿ ರೂಪಿಸಿ.

⇒ಬಿ.ಎಸ್. ಮುಳ್ಳೂರ, ರಾಮದುರ್ಗ

ಮಾದಕ ವಸ್ತುಗಳಿಂದ ಬಾಳು ಹಾಳು

ದೇಶದ ಭವಿಷ್ಯವಾದ ಯುವಜನಾಂಗ ಸಾಗುತ್ತಿರುವ ಹಾದಿಯು ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ಯುವಜನರು ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಓದಿ ತಂದೆ–ತಾಯಿ ಇರಿಸಿಕೊಂಡಿರುವ ನಂಬಿಕೆ ಉಳಿಸಿಕೊಳ್ಳುವ ದಿಸೆಯಲ್ಲಿ ಹೆಜ್ಜೆ ಇಡುತ್ತಿಲ್ಲ. ಡ್ರಗ್ಸ್, ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ದಾಸರಾಗುತ್ತಿರುವುದು ನೋವಿನ ಸಂಗತಿ. ಮಾದಕ ವಸ್ತುಗಳನ್ನು ತಯಾರಿಸುವವರು, ಪೂರೈಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿರುವುದು ಪೊಲೀಸರ ಜವಾಬ್ದಾರಿ. ಆದರೆ, ಕೆಲವು ಅಧಿಕಾರಿಗಳೇ ಪೆಡ್ಲರ್‌ಗಳ ಜೊತೆಗೆ ಕೈಜೋಡಿಸಿರುವುದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. 

⇒ಚಂದ್ರಕುಮಾರ್ ಡಿ., ಬೆಂಗಳೂರು 

ಸ್ಕಾಲರ್‌ಶಿಪ್‌ ವಿಳಂಬದಿಂದ ಪರದಾಟ

ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಆದರೆ, ಸರ್ಕಾರ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿ ವೇತನದ ಹಣವನ್ನು ಬಿಡುಗಡೆ ಮಾಡಿಲ್ಲ. ಪದವಿ ಮುಗಿದ ತಕ್ಷಣ ಸ್ನಾತಕೋತ್ತರ ಪದವಿ ಪಡೆಯುವ ಆಸೆ ಎಲ್ಲರಲ್ಲಿಯೂ ಇರುತ್ತದೆ. ಬಡ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ ನಂಬಿಕೊಂಡಿರುತ್ತಾರೆ. ಸಕಾಲದಲ್ಲಿ ಹಣ ಬಿಡುಗಡೆ ಮಾಡದಿದ್ದರೆ ಉನ್ನತ ಶಿಕ್ಷಣ ಪಡೆಯಬೇಕೆಂಬ ಅವರ ಆಶಯಕ್ಕೆ ಪೆಟ್ಟು ಬೀಳಲಿದೆ. 

⇒ಸಾಗರ್ ಗೌಡ ದರೂರ್, ಬಳ್ಳಾರಿ 

ಹೊಸತೆಂಬುದು

ಎದೆಯ ಮಾತುಗಳು
ಹಾಡುಗಳಾಗಿ
ಎದುರಿನವರ ಮನ ತಾಕಲಿ
ಹಳೆಯ ಹೊಸತರ ನಡುವೆ
ನಮ್ಮತನ ಒಲವ ಬಂಧ
ಸದಾ ಕಾಯಲಿ
ಜಾತಿ ಭಾಷೆ ಧರ್ಮ ದೈವ
ಅವುಗಳ ಪಾಡಿಗೆ ಅವು
ಆರಾಮಾಗಿ ಇರಲಿ
ಮನುಜ ಮನುಜನ ನಡುವೆ
ಪ್ರೀತಿ ಸೇತುವೆ ಮೂಡಲಿ
ಹೊಸತೆಂಬ ಹೃದಯ ಭಾಷೆ
ಮನ ಮನ ಬೆಸೆಯಲಿ

–ಸಂತೆಬೆನ್ನೂರು ಫೈಜ್ನಟ್ರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.