ADVERTISEMENT

ಎಎಪಿ ಮಾದರಿ ಆಸಕ್ತಿಕರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 19:31 IST
Last Updated 26 ಏಪ್ರಿಲ್ 2022, 19:31 IST

ದೆಹಲಿಯಲ್ಲಿ ಈ ವರ್ಷ 4 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದು ಸರ್ಕಾರಿ ಶಾಲೆಗಳಿಗೆ ಸೇರಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇತ್ತೀಚೆಗೆ ಹೇಳಿದ್ದಾರೆ (ಪ್ರ.ವಾ., ಏ. 22). ಸರ್ಕಾರಿ ಶಾಲೆಗಳನ್ನು ಉಳಿಸಲು ಹೆಣಗಾಡುತ್ತಿರುವ ಕರ್ನಾಟಕ ಸರ್ಕಾರವು ಎಎಪಿಯ ಈ ಮಾದರಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಅದರಿಂದೇನಾದರೂ ಸ್ಫೂರ್ತಿ, ಪ್ರೇರಣೆ ಪಡೆಯಬಹುದೇ ಎಂದು ಚಿಂತಿಸಬೇಕು. ಗುಣಕ್ಕೆ ನಾವು ಮತ್ಸರ ಪಡಬೇಕಾಗಿಲ್ಲ.

ಇತ್ತೀಚಿನ ದಶಕಗಳಲ್ಲಿ, ನಮ್ಮನ್ನಾಳುತ್ತ ಬಂದಿರುವ ಎಲ್ಲ ಪಕ್ಷಗಳ ನೇತೃತ್ವದ ಸರ್ಕಾರಗಳೂ ಶಿಕ್ಷಣ ಕ್ಷೇತ್ರವನ್ನು ಮಾಫಿಯಾಗಳ ಕೈಗೊಪ್ಪಿಸಿ, ತಮ್ಮ ಹೊಣೆಗಾರಿಕೆಯಿಂದ ಪಲಾಯನ ಮಾಡುತ್ತ ಬಂದಿವೆ. ಇದರಿಂದಾಗಿ, ಇಂದು ಶಿಕ್ಷಣವು ಮೇಲ್ಮಧ್ಯಮ ವರ್ಗದವರ ಕೈಗೂ ಎಟಕುತ್ತಿಲ್ಲ. ಹೀಗಾಗಿ ತಂದೆ-ತಾಯಿ ದುಡಿದಿದ್ದರಲ್ಲಿ ಬಹುಪಾಲನ್ನೆಲ್ಲ ಮಗುವಿನ ಸ್ಕೂಲ್ ಸೀಟನ್ನು ಗಿಟ್ಟಿಸಿಕೊಳ್ಳುವುದಕ್ಕೇ ಸುರಿಯಬೇಕಾಗಿದೆ. ಆದರೆ, ಲಕ್ಷಗಟ್ಟಲೆ ಹಣ ಕೊಟ್ಟು ಶಾಲೆಗೆ ಸೇರಿಸಿದರೂ ಹೆಚ್ಚಿನ ಶಾಲೆಗಳಲ್ಲಿ ಬೋಧನೆ, ಕಲಿಕೆಯ ಗುಣಮಟ್ಟ ಪಾತಾಳ ಕಂಡಿವೆ. ಇದರ ಜತೆಗೆ, ಪೂರಾ ವ್ಯಾವಹಾರಿಕ ಆಗಿರುವ ಇದೇ ಶಿಕ್ಷಣ ವ್ಯವಸ್ಥೆಯು ಸಮಾಜದಲ್ಲಿ ಕಂದಕಗಳನ್ನು ಸೃಷ್ಟಿಸುತ್ತಿದೆ. ಇದು, ತಂತ್ರಜ್ಞಾನ ಸೃಷ್ಟಿಸುತ್ತಿರುವ ‘ಡಿಜಿಟಲ್ ಡಿವೈಡ್’ಗಿಂತಲೂ ಹೆಚ್ಚು ಅಪಾಯಕಾರಿ! ಸರ್ಕಾರಿ ಶಾಲೆಗಳನ್ನು ಉಳಿಸದಿದ್ದರೆ ಆರೋಗ್ಯಪೂರ್ಣ ಸಮಾಜವಂತೂ ಕನಸಿನ ಮಾತೇ ಸರಿ. ಆದ್ದರಿಂದ, ರಾಜ್ಯ ಸರ್ಕಾರವು ‘ನವ ಕರ್ನಾಟಕ’ ನಿರ್ಮಾಣದ ಘೋಷಣೆಯನ್ನು ನನಸಾಗಿಸಲು ಮೊದಲು ಸರ್ಕಾರಿ ಶಾಲೆಗಳನ್ನು ಉಳಿಸಿ, ಏಕರೂಪದ ಶಿಕ್ಷಣ ವ್ಯವಸ್ಥೆ ಯನ್ನು ತರಬೇಕಾಗಿದೆ.

⇒ಬಿ.ಎಸ್.ಜಯಪ್ರಕಾಶ ನಾರಾಯಣ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.