ADVERTISEMENT

ವಾಚಕರ ವಾಣಿ: ಈ ಕಡೆಗಣನೆ ಖಂಡನಾರ್ಹ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 19:31 IST
Last Updated 12 ಜನವರಿ 2023, 19:31 IST

ಬರಹಗಾರ್ತಿ ಸಾರಾ ಅಬೂಬಕ್ಕರ್ ಅವರು ನಿಧನ ಹೊಂದಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸರಿಯಾದ ಗೌರವ ಸಲ್ಲಿಸದೆ ಕಡೆಗಣಿಸಿರುವುದು ಖೇದಕರ ಹಾಗೂ ಖಂಡನೀಯ. ಸಾರಾ ಅಬೂಬಕ್ಕರ್ ಪ್ರಖ್ಯಾತ ಕತೆಗಾರರು, ಬರಹಗಾರರು ಎಂಬಲ್ಲಿಗೆ ಅವರ ಪ್ರಾಮುಖ್ಯತೆ ಮುಗಿಯುವುದಿಲ್ಲ. ಕ‌ರ್ನಾಟಕದ ಮುಸ್ಲಿಂ ಸಮುದಾಯವು ಕನ್ನಡದಲ್ಲಿ ಸಾಹಿತ್ಯ ಕೃಷಿ ನಡೆಸುವುದೇ ಅಪರೂಪವಾಗಿದ್ದ ಕಾಲಘಟ್ಟದಲ್ಲಿ ಆ ಸಮುದಾಯದ ಹೆಣ್ಣು ಮಗಳು ಕನ್ನಡ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದದ್ದು, ಸಮಾಜದ ಕಂದಾಚಾರ, ತನ್ನದೇ ಸಮುದಾಯದ ಹೆಣ್ಣು ಮಕ್ಕಳ ಸಂಕಟಗಳನ್ನು ಕತೆಯಾಗಿಸಿದ್ದು ಸಣ್ಣ ಸಾಧನೆಯೇನೂ ಅಲ್ಲ. ಅಂತಹ ಬರವಣಿಗೆಗಳ ಕಾರಣಕ್ಕೆ ಅವರು ಎದುರಿಸಿದ ದಾಳಿ, ದಬ್ಬಾಳಿಕೆಗಳೂ ಸಣ್ಣವಲ್ಲ.

ಇಂತಹ ಗಣ್ಯ ಬರಹಗಾರ್ತಿ, ಲೇಖಕಿ ಅಗಲಿದಾಗ ಸಹಜವಾಗಿಯೇ ಅವರಿಗೆ ಸರ್ಕಾರಿ ಗೌರವ ಸಲ್ಲಬೇಕಿತ್ತು. ಸರ್ಕಾರದ, ಜಿಲ್ಲಾಡಳಿತದ ಪ್ರತಿನಿಧಿಗಳು ಅಧಿಕೃತ ಗೌರವ ಸಲ್ಲಿಸಲಿಲ್ಲ. ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ, ಶಾಸಕರು ನಗರದಲ್ಲೇ ಇದ್ದರೂ ಅಂತಿಮ ದರ್ಶನ ಪಡೆಯಲಿಲ್ಲ. ಇದು ನಮಗೆಲ್ಲಾ ಅಪಾರ ನೋವು ತಂದಿದೆ. ಈ ಕಡೆಗಣನೆ ಆಕಸ್ಮಿಕ ಆಗಿರಲಾರದು, ಸರ್ಕಾರವು ಪ್ರಗತಿಪರ, ಜಾತ್ಯತೀತ ವಿಚಾರಗಳು, ಸಾಹಿತಿ, ಬುದ್ಧಿಜೀವಿಗಳ ಕುರಿತು ಇತ್ತೀಚೆಗೆ ಹೊಂದಿರುವ ಅಸಹಿಷ್ಣು ಧೋರಣೆ, ಕೋಮುವಾದಿ ದೃಷ್ಟಿಕೋನದ ಭಾಗವಾದ ನಿಲುವೇ ಆಗಿದೆ ಎಂಬಂತೆ ತೋರುತ್ತದೆ. ಈ ಧೋರಣೆ ಆಘಾತಕಾರಿಯಾಗಿದ್ದು, ಕ‌ನ್ನಡ ನಾಡಿನ ವಿಶಾಲ, ಉದಾರ ಪ್ರಜ್ಞೆಗೆ ವಿರುದ್ಧವಾಗಿದೆ, ನಾವಿದ‌‌ನ್ನು ಬಲವಾಗಿ ಖಂಡಿಸುತ್ತೇವೆ.

-ಬಿ.ಎಂ.ರೋಹಿಣಿ, ಪ್ರೊ. ನರೇಂದ್ರ ನಾಯಕ್, ಟಿ.ಆರ್.ಭಟ್, ಚಂದ್ರಕಲಾ ನಂದಾವರ, ಪ್ರೊ. ಚಂದ್ರ ಪೂಜಾರಿ, ಪ್ರೊ. ಪಟ್ಟಾಭಿರಾಮ ಸೋಮಯಾಜಿ, ಎಂ.ದೇವದಾಸ್, ಬಿ.ಎಂ.ಹನೀಫ್, ವಾಸುದೇವ ಉಚ್ಚಿಲ, ಡಾ. ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಗುಲಾಬಿ ಬಿಳಿಮಲೆ, ಪ್ರೊ. ಕೆ.ರಾಜೇಂದ್ರ ಉಡುಪ, ಮೋಹನ್ ಪಿ.ವಿ., ಐ.ಕೆ.ಬೊಳುವಾರು, ಯಶವಂತ ಮರೋಳಿ, ಮುನೀರ್ ಕಾಟಿಪಳ್ಳ, ಡಾ. ಕೃಷ್ಣಪ್ಪ ಕೊಂಚಾಡಿ, ಶ್ರೀನಿವಾಸ ಕಾರ್ಕಳ‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.