ADVERTISEMENT

ಸಾಮೂಹಿಕ ನಾಶಕ್ಕೆ ನೂಕಿಕೊಳ್ಳುವ ಪರಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 19:30 IST
Last Updated 31 ಜನವರಿ 2021, 19:30 IST

ರಾಜ್ಯದಲ್ಲಿ ವ್ಯಾಪಕವಾಗಿ ಬೇರೂರಿರುವ ಅಕ್ರಮ ಗಣಿಗಾರಿಕೆಯು ಉಂಟುಮಾಡುತ್ತಿರುವ ಭಾರಿ ಅನಾಹುತಗಳನ್ನು ಸಂಪಾದಕೀಯ (ಪ್ರ.ವಾ., ಜ. 30) ಹಾಗೂ ‘ಒಳನೋಟ’ (ಪ್ರ.ವಾ., ಜ. 31) ಎಳೆಎಳೆಯಾಗಿ ತೆರೆದಿಟ್ಟಿವೆ.

ಕಲ್ಲು, ಗ್ರಾನೈಟ್, ಕೆಂಪುಗಲ್ಲು, ಮರಳು ಇತ್ಯಾದಿಗಳಿಗಾಗಿ ಅಕ್ರಮ ಕ್ವಾರಿಗಳು ಆರಂಭವಾಗಿ ಎರಡು ದಶಕಗಳೇ ಸಂದಿವೆ. ಇದೀಗ ಅದು ಪರಾಕಾಷ್ಠೆಗೆ ತಲುಪುತ್ತಿದೆಯಷ್ಟೆ. ಜನಜೀವನದ ಆರೋಗ್ಯ, ಕೃಷಿಯ ಉತ್ಪಾದನೆ, ಅರಣ್ಯ ಹಾಗೂ ಪರಿಸರದ ಸುರಕ್ಷತೆ- ಇವೆಲ್ಲವನ್ನೂ ಧಿಕ್ಕರಿಸಿ, ಕಾನೂನುಗಳನ್ನೆಲ್ಲ ಮುರಿಯುತ್ತ ಸಾಗಿರುವ ಉದ್ಯಮವಿದು. ಮಲೆನಾಡು ಹಾಗೂ ಕರಾವಳಿಯ ತುಂಬೆಲ್ಲ ಗಣಿಗಾಯಗಳನ್ನು ಸೃಷ್ಟಿಸಿ, ಅಂತರ್ಜಲ ಬತ್ತಿಸಿ, ವನ್ಯಜೀವಿ ಆವಾಸಸ್ಥಾನ ಕಾಡುಗಳನ್ನು ಛಿದ್ರ ಮಾಡಿ, ತೊರೆ-ಹಳ್ಳಗಳನ್ನು ಒಣಗಿಸಿ, ಗೋಮಾಳ-ಕೆರೆಗಳನ್ನು ಬರಡಾಗಿಸಿ, ಪರಿಸರ
ಸಮತೋಲನವನ್ನೇ ದೂಳೆಬ್ಬಿಸುತ್ತಿವೆ!

ಯಾವುದೋ ಪುಟ್ಟ ಕಂದಾಯ ಭೂಮಿಯಲ್ಲಿ ಅನುಮತಿ ಪಡೆದು, ಅದರ ಹತ್ತುಪಟ್ಟು ಸುತ್ತಲಿನ ಕೃಷಿ ಜಮೀನು ಹಾಗೂ ಕಾಡನ್ನು ಅತಿಕ್ರಮಿಸಿ ನಡೆಸುವ ‘ಅಧಿಕೃತ’ ಗಣಿಗಾರಿಕೆಗಳಂತೂ ಮೊದಲೇ ಇವೆ. ಒಪ್ಪಿಗೆಯಿರುವ ಕ್ರಷರ್‌ಗಳಿಗೆ ಎಲ್ಲಿಂದ ಕಲ್ಲು ಪೂರೈಕೆಯಾಗುತ್ತದೆ ಎಂಬುದನ್ನು ನೋಡದಷ್ಟು ಕುರುಡುತನ ಆಡಳಿತ ವ್ಯವಸ್ಥೆಯದ್ದು. ಕನಿಷ್ಠಕೂಲಿ ಪಡೆದು ಕೆಲಸ ಮಾಡುವ ಕೆಲವೇ ಜನ ಕೂಲಿಗಳಿಂದ ನಡೆಸಬಹುದಾದ ಈ ಕ್ವಾರಿಗಳಿಂದ ಉದ್ಯೋಗ ಸೃಷ್ಟಿಯೂ ಆಗುತ್ತಿಲ್ಲ. ಸರ್ಕಾರಕ್ಕೆ ತೆರಿಗೆ-ರಾಯಧನವೂ ದೊರೆಯುತ್ತಿಲ್ಲ. ಕೇವಲ ಕಾಂಕ್ರೀಟ್ ಕಾಮಗಾರಿಗಳೇ ಅಭಿವೃದ್ಧಿ ಎಂಬ ಬೃಹತ್ ಸುಳ್ಳಿನ ಬಲೂನು ಉಬ್ಬಿಸಿ, ಅದರ ನೆರಳಲ್ಲಿ ನಡೆಸುತ್ತಿರುವ ಹಣ ಗಳಿಕೆಯ ಆಟವಿದು. ಎಲ್ಲ ತಿಳಿದೂ ಭವಿಷ್ಯದಲ್ಲಿನ ಸಾಮೂಹಿಕ ನಾಶಕ್ಕೆ ನಮ್ಮನ್ನು ನಾವೇ ನೂಕಿಕೊಳ್ಳುತ್ತಿರುವ ಈ ವಿಪರ್ಯಾಸದಿಂದ ಹೊರಬರುವುದು ಯಾವಾಗ?

ADVERTISEMENT

ಡಾ. ಕೇಶವ ಎಚ್. ಕೊರ್ಸೆ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.