ವಾಚಕರ ವಾಣಿ
8,450 ಪ್ರಶ್ನೆ: ಮಕ್ಕಳ ಸೃಜನಶೀಲತೆಗೆ ಪೆಟ್ಟು
ಇತ್ತೀಚೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತಮ ಫಲಿತಾಂಶಕ್ಕೆಂದು 8,450 ಪ್ರಶ್ನೆಗಳಿರುವ ‘ಪ್ರಶ್ನೆಕೋಶ’ವನ್ನು ಸಿದ್ಧಪಡಿಸಿದೆ. ವಾರ್ಷಿಕ ಪರೀಕ್ಷೆಯಲ್ಲಿ ಈ ಪ್ರಶ್ನೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಶ್ನೆಗಳು ಬರುವುದಿಲ್ಲವೆಂಬುದು ಇದರ ವಿಶೇಷ. ಪರೀಕ್ಷೆಗೆ 75 ದಿನ
ಗಳಿರುವಾಗ ಈ ರೀತಿಯ ಹೊಸ ಪ್ರಯೋಗ ಮಾಡಲು ಹೊರಟಿರುವುದು ಮಕ್ಕಳ
ಸೃಜನಶೀಲತೆಗೆ ಪೆಟ್ಟು ನೀಡಲಿದೆ. ವಿದ್ಯಾರ್ಥಿಗಳ ವಿಷಯ ಜ್ಞಾನಕ್ಕಿಂತ ನೆನಪಿನ ಶಕ್ತಿಗೆ ಆದ್ಯತೆ ನೀಡಿದಂತಾಗುತ್ತದೆ. ಪ್ರಶ್ನೆಕೋಶದಲ್ಲಿನ ಪ್ರಶ್ನೆಗಳಿಗೆ ಮಾತ್ರ ಪ್ರಾಮುಖ್ಯತೆ ನೀಡುವುದರಿಂದ ಕಂಠಪಾಠಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಇದರಿಂದ ಭವಿಷ್ಯದ ಸವಾಲು ಎದುರಿಸುವ ಮಕ್ಕಳ ಆಲೋಚನಾತ್ಮಕ, ವಿಶ್ಲೇಷಣಾತ್ಮಕ ಅಂಶವು ಕಡೆಗಣಿಸಲ್ಪಡುತ್ತದೆ. ಇಂತಹ ಹೊಸ ಪ್ರಯೋಗದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವೇನೋ ಹೆಚ್ಚಾಗಬಹುದು. ಆದರೆ, ಮಕ್ಕಳ ಪ್ರತಿಭೆಗೆ ಧಕ್ಕೆಯಾಗಲಿದೆ.
⇒ಸುರೇಂದ್ರ ಪೈ, ಭಟ್ಕಳ
ರಿಪಬ್ಲಿಕ್ ಬಳ್ಳಾರಿ: ಸರ್ಕಾರಗಳಿಗೆ ಸವಾಲು
ಕಳೆದೆರಡು ದಶಕಗಳಿಂದ ಬಳ್ಳಾರಿಯ ರಾಜಕಾರಣವು ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರಗಳ ದಿಕ್ಕನ್ನು ಕಕ್ಕಾಬಿಕ್ಕಿಯಾಗಿಸಿದೆ. ಬಳ್ಳಾರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಪಡಿಸಲು ಅಧಿಕಾರದ ಚುಕ್ಕಾಣಿ ಹಿಡಿಯುವ ಸರ್ಕಾರಗಳು ತಿಣುಕಾಡುತ್ತವೆ. ಈ ರಾಜಕೀಯ ಪ್ರಲಾಪವು ಉನ್ನತ ಅಧಿಕಾರಿಗಳಿಗೂ ನುಂಗಲಾರದ ಬಿಸಿತುಪ್ಪವಾಗಿದೆ. ಬಳ್ಳಾರಿಯ ಅಭಿವೃದ್ಧಿಗೂ, ಅಲ್ಲಿರುವವರ ಸಂಪತ್ತಿಗೂ ಬಹಳ ವ್ಯತ್ಯಾಸವಿದೆ. ಅಭಿವೃದ್ಧಿ ಮಾಡಲು ರಾಜಕಾರಣ ಒಳ್ಳೆಯದು. ಆದರೆ, ರಾಜಕಾರಣಿಗಳು ಒಳ್ಳೆಯವರಲ್ಲ ಎಂಬ ಮಾತು ದಿಟವಾಗಿದೆ.
⇒ಗಾದಿಲಿಂಗಪ್ಪ, ಕುರುಗೋಡು
ವ್ಯಾವಹಾರಿಕ ಶಿಕ್ಷಣ ಸಮಾಜಕ್ಕೆ ಅಪಾಯ
ಶಿಕ್ಷಣ ಜ್ಞಾನದ ಬೆಳಕು. ಅದು ನಮ್ಮನ್ನು ಅಜ್ಞಾನದ ಕತ್ತಲೆಯಿಂದ ಹೊರತಂದು, ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಸಮಾಜದ ಬೆಳವಣಿಗೆ ಮತ್ತು ದೇಶದ ಅಭಿವೃದ್ಧಿಗೆ ನೆರವಾಗುತ್ತದೆ. ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನೂ ಬೆಳೆಸುತ್ತದೆ. ಇದು ಕೇವಲ ಶಾಲೆಗಳಲ್ಲಿ ಕಲಿಯುವುದಲ್ಲ; ಬದಲಿಗೆ ಜೀವನಪೂರ್ತಿ ಸಾಗುವ ಒಂದು ಪ್ರಕ್ರಿಯೆ. ಶಿಕ್ಷಣವು ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರ. ಆದರೆ, ಬದಲಾಗುತ್ತಿರುವ ರಾಜಕೀಯ ವಿದ್ಯಮಾನಗಳಿಂದ ಶಿಕ್ಷಣ ಕೇವಲ ವ್ಯಾವಹಾರಿಕವಾಗಿದೆ. ಶಿಕ್ಷಣಕ್ಕಿಂತ ವಿನಯ, ವಿನಮ್ರತೆ, ಉತ್ತಮ ವ್ಯಕ್ತಿತ್ವ ಹೊಂದಿದವರು ಉತ್ತಮರು ಎನ್ನುವ ಕಾಲವೂ ಇತ್ತು. ಪ್ರಸ್ತುತ ಕಲಿಕೆಯು ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗದೆ ನೈತಿಕ ಮೌಲ್ಯವನ್ನು ಬಿತ್ತಬೇಕಿದೆ.
⇒ಶೇಖರ್ ಕೆ., ಕೋಳೂರು
ಸಾವಿನ ಪರಿಹಾರದಲ್ಲೂ ರಾಜಕೀಯ
ಪ್ರಸ್ತುತ ಸಾವಿನ ಪರಿಹಾರಕ್ಕೆ ಧರ್ಮ ಮತ್ತು ರಾಜಕೀಯ ಮೆತ್ತಿಕೊಂಡಿದೆ. ರಾಜಕೀಯ ಅಥವಾ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ಸಂಭವಿಸುವ ಸಾವುಗಳಿಗೆ ಲಕ್ಷದಿಂದ ಕೋಟಿ ರೂಪಾಯಿವರೆಗೂ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಸಿಗುತ್ತದೆ. ಆದರೆ, ಆಕಸ್ಮಿಕ ಸಾವು ಅಥವಾ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಿಗುವ ಪರಿಹಾರ ಮೊತ್ತ ಅತ್ಯಲ್ಪ. ಆಪ್ತೇಷ್ಟರು ಮರಣ ಹೊಂದಿದಾಗ ಸೃಷ್ಟಿಯಾಗುವ ಶೂನ್ಯವನ್ನು ಸಹಿಸಿಕೊಳ್ಳುವುದು ಕಷ್ಟಕರ. ಆಗಿದ್ದರೆ ಸಾವು ಅಸಹಜವೇ? ಜೀವನದ ಭಾಗವಾಗಿ ಸಾವನ್ನು ಅನುಸಂಧಾನಿಸದಿರುವುದೇ ಅಸಹಜ. ಹಾಗಾಗಿ, ಪರಿಹಾರ ವಿತರಣೆಯಲ್ಲಿ ತಾರತಮ್ಯ ಸಲ್ಲದು.
⇒ರಾಹುಲ್ ಎಸ್.ಎಚ್., ಧಾರವಾಡ
ಧರ್ಮಸ್ಥಳಕ್ಕೆ ರೈಲು ಮಾರ್ಗ ಅಳವಡಿಸಿ
ಬೆಂಗಳೂರು, ಹಾಸನ, ಸಕಲೇಶಪುರ, ಕುಕ್ಕೆ ಸುಬ್ರಮಣ್ಯ ಮಾರ್ಗವಾಗಿ ಧರ್ಮಸ್ಥಳಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬಸ್ಸನ್ನೇ ನೆಚ್ಚಿಕೊಂಡು ಭೇಟಿ ನೀಡುತ್ತಿರುವುದು ಸರಿಯಷ್ಟೆ. ಆದರೆ, ಸುಬ್ರಮಣ್ಯ ರಸ್ತೆ ತನಕವಷ್ಟೆ ರೈಲಿನ ಸೌಕರ್ಯವಿದ್ದು, ಮುಂದುವರಿದು ಮಂಗಳೂರು ಮಾರ್ಗವಾಗಿ ರೈಲು ಉಡುಪಿ, ಮೂಕಾಂಬಿಕಾ ರಸ್ತೆ, ಮುರುಡೇಶ್ವರ ಹಾಗೂ ಗೋಕರ್ಣದ ಮೂಲಕ ಕಾರವಾರ ತಲಪುತ್ತದೆ. ಸುಬ್ರಮಣ್ಯ ರಸ್ತೆಯಿಂದ ಧರ್ಮಸ್ಥಳಕ್ಕೆ 54 ಕಿ.ಮೀ. ದೂರವಿದೆ. ಭಾರತೀಯ ರೈಲ್ವೆ ಇಲಾಖೆಯು ಸುಬ್ರಮಣ್ಯ ರಸ್ತೆಯಿಂದ ಧರ್ಮಸ್ಥಳಕ್ಕೆ ಹೊಸ ರೈಲು ಮಾರ್ಗ ಅಳವಡಿಸಿದರೆ ಬೆಂಗಳೂರು ಹಾಗೂ ಇತರ ಊರುಗಳಿಂದ ಬರುವ ಸಾವಿರಾರು ಭಕ್ತರಿಗೆ ಅನುಕೂಲವಾಗಲಿದೆ.
⇒ಬೆಂ.ಮು. ಮಾರುತಿ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.