ADVERTISEMENT

ಕಬ್ಬಿನ ತೂಕ: ಯಂತ್ರ ಸ್ಥಾಪಿಸಿ, ಶೋಷಣೆ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 20:00 IST
Last Updated 30 ಅಕ್ಟೋಬರ್ 2022, 20:00 IST

ಬೆಳಗಾವಿಯು ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆಯಾಗಿದೆ. ಮಹಾರಾಷ್ಟ್ರದ ಕೆಲವು ಸಕ್ಕರೆ ಕಾರ್ಖಾನೆಗಳಿಗೂ ಇಲ್ಲಿಂದ ಕಬ್ಬು ಹೋಗುತ್ತದೆ. ಈಗ ಕಬ್ಬು ಅರೆಯುವ ಹಂಗಾಮು. ಪ್ರತೀ ಟನ್ ಕಬ್ಬಿಗೆ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ಪ್ರತಿವರ್ಷ ಸಭೆಗಳು ಜರುಗುತ್ತವೆ. ಆದರೆ ರೈತರಿಗೆ ಹೆಚ್ಚಿನ ಪ್ರಯೋಜನವೇನೂ ಆಗುವುದಿಲ್ಲ. ಏಕೆಂದರೆ ಸಕ್ಕರೆ ಕಾರ್ಖಾನೆಗಳ ಮಾಲೀಕರೆಲ್ಲ ಪ್ರಭಾವಿ
ರಾಜಕಾರಣಿಗಳೇ.

ಮೊನ್ನೆ ಅಥಣಿ ತಾಲ್ಲೂಕಿನ ನಮ್ಮ ಗ್ರಾಮಕ್ಕೆ ಹೋದಾಗ, ಕೆಲವು ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಳಿಸಲಾಗುವ ಕಬ್ಬಿನ ತೂಕದಲ್ಲಿ ವ್ಯತ್ಯಾಸ ಆಗುವ ಬಗ್ಗೆ ಹೇಳಿದರು. ರೈತರು ಖಾಸಗಿಯಾಗಿ ಮಾಡಿಸುವ ತೂಕಕ್ಕೂ ಕಾರ್ಖಾನೆಗಳಲ್ಲಿ
ಮಾಡಲಾಗುವ ತೂಕಕ್ಕೂ ಪ್ರತೀ ಟ್ರ್ಯಾಕ್ಟರ್‌ಗೆ ಒಂದು ಟನ್‌ನಿಂದ ಎರಡು ಟನ್‌ಗಳಷ್ಟು ವ್ಯತ್ಯಾಸ ಬರುವುದಾಗಿ ಹೇಳಿದರು. ಈ ಕುರಿತು ಆಕ್ಷೇಪಿಸಿದರೆ ಕಾರ್ಖಾನೆಗಳು ಗಮನ ನೀಡುವುದಿಲ್ಲ ಎಂದು ಹೇಳಲಾಗಿದೆ. ಇದು ನಡೆಯುತ್ತಲೇ ಬಂದಿದ್ದು ಈ ರೀತಿ ನಿತ್ಯ ದೊರಕುವ ಅಪಾರ ಬಿಟ್ಟಿ ಕಬ್ಬಿನಿಂದಲೇ ಕಾರ್ಖಾನೆಗಳ ಮಾಲೀಕರು ಕುಬೇರರಾಗುತ್ತಾ ಹೋಗುತ್ತಿದ್ದಾರೆ ಎಂಬುದು ಹಲವರ ಅಭಿಪ್ರಾಯ. ಕೆಲವೊಂದು ಕಾರ್ಖಾನೆಗಳಲ್ಲಿ ಮಾತ್ರ ಪ್ರಾಮಾಣಿಕ ಮಾಪನಗಳು ಇರುವ ಬಗ್ಗೆಯೂ ಹೇಳಿದರು.

ಒಂದು ಕಡೆ ಕಬ್ಬಿಗೆ ಯೋಗ್ಯ ದರ ನೀಡದಿರುವುದು ಮತ್ತು ಕಬ್ಬು ಪೂರೈಸಿದ ಬಳಿಕ ರೈತರಿಗೆ ಸಕಾಲದಲ್ಲಿ ಹಣ ಪಾವತಿಸದಿರುವುದು, ಮತ್ತೊಂದು ಕಡೆ ಕಬ್ಬಿನ ತೂಕದಲ್ಲಿ ಮೋಸ, ರೈತರ ಶೋಷಣೆಗೆ ಹಲವಾರು ಮುಖಗಳು. ಸರ್ಕಾರ ಈ ಕುರಿತು ಗಮನಹರಿಸಿ, ಕಾರ್ಖಾನೆಗಳ ತೂಕದ ಯಂತ್ರಗಳಲ್ಲದೆ ಪ್ರತೀ ಕಾರ್ಖಾನೆಯ ವ್ಯಾಪ್ತಿಯಲ್ಲಿ ರೈತರ ಸ್ವಾಮ್ಯದ ಅಥವಾ ಸಹಕಾರಿ ಸಂಘಗಳ ಸ್ವಾಮ್ಯದ ತೂಕದ ಯಂತ್ರಗಳನ್ನು ಸ್ಥಾಪಿಸುವ ಮೂಲಕ ಕಾರ್ಖಾನೆಗಳಿಂದ ಆಗುತ್ತಿರುವ ಶೋಷಣೆಯನ್ನು ತಪ್ಪಿಸಬೇಕು.

ADVERTISEMENT

-ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.