ADVERTISEMENT

ವಾಚಕರ ವಾಣಿ: ವಾಸ್ತವದಿಂದ ದೂರವಾದ ‘ಆತ್ಮಾವಲೋಕನ’

ಪ್ರಜಾವಾಣಿ ವಿಶೇಷ
Published 11 ಜೂನ್ 2023, 19:29 IST
Last Updated 11 ಜೂನ್ 2023, 19:29 IST

ವಾಸ್ತವದಿಂದ ದೂರವಾದ ‘ಆತ್ಮಾವಲೋಕನ’

ವಿಧಾನಸಭಾ ಚುನಾವಣೆಯಲ್ಲಿನ ಸೋಲಿಗೆ ಬಿಜೆಪಿ ನಡೆಸಿದ ಆತ್ಮಾವಲೋಕನ ಸಭೆಯಲ್ಲಿ ಬಹುತೇಕ ಎಲ್ಲ ನಾಯಕರು ಕಾಂಗ್ರೆಸ್‌ನ ಗ್ಯಾರಂಟಿಗಳೇ ಪಕ್ಷದ ಸೋಲಿಗೆ ಕಾರಣ ಎಂದು ಹೇಳಿರುವುದಾಗಿ ವರದಿಯಾಗಿದೆ. ವಾಸ್ತವವಾಗಿ ಇದು ಶುದ್ಧ ಸುಳ್ಳು. ಗ್ಯಾರಂಟಿಗಳಿಂದ ಸ್ವಲ್ಪಮಟ್ಟಿಗೆ ಕಾಂಗ್ರೆಸ್‌ಗೆ ಲಾಭವಾಗಿರಬಹುದು. ಆದರೆ ಮುಖ್ಯವಾಗಿ, ಮಿತಿಮೀರಿದ ಭ್ರಷ್ಟಾಚಾರ, ಕೆಲವು ಮಂತ್ರಿಗಳ ದುರಹಂಕಾರದ ವರ್ತನೆ, ಆಗಿನ ಮುಖ್ಯಮಂತ್ರಿಯವರ ದುರ್ಬಲ ನಾಯಕತ್ವ, ಮೋದಿ ಅವರೊಬ್ಬರನ್ನೇ ನಂಬಿ ನಡೆಸಿದ ರೋಡ್ ಷೋ, ಸಾರ್ವಜನಿಕ ಸಭೆಗೆ ಸೇರುತ್ತಿದ್ದ ಜನರನ್ನು ನೋಡಿ, ಅವೆಲ್ಲವೂ ಮತಗಳಾಗಿ ಪರಿವರ್ತನೆಯಾಗುತ್ತವೆ ಎಂದು ತಪ್ಪಾಗಿ ಭಾವಿಸಿದ್ದು, ದೇಶದ ಪ್ರಧಾನಿಯೊಬ್ಬರನ್ನು ಹತ್ತಿರದಿಂದ ನೋಡುವ ಕುತೂಹಲದಿಂದ ಜನ ಬರುತ್ತಿದ್ದಾರೆ ಎಂಬುದನ್ನು ನಾಯಕರು ಗ್ರಹಿಸದೇ ಹೋದದ್ದು, ವ್ಯವಸ್ಥಿತ ರೀತಿಯಲ್ಲಿ ಚುನಾವಣಾ ಪ್ರಚಾರ ಮಾಡಲು ವಿಫಲರಾದದ್ದು, ಮುಖ್ಯವಾಗಿ ಬಡ ಮತ್ತು ತಳಸಮುದಾಯದವರ ಅತೃಪ್ತಿಯ ಅಲೆ... ಇಂತಹ ವಾಸ್ತವಗಳನ್ನು ಬಿಟ್ಟು ಬೇರೆಲ್ಲಾ ಕಾರಣಗಳು ಮುನ್ನೆಲೆಗೆ ಬಂದಿವೆ.

–ಬೂಕನಕೆರೆ ವಿಜೇಂದ್ರ, ಮೈಸೂರು

ADVERTISEMENT

ಗದ್ದಲ ಸಲ್ಲ, ಸೌಹಾರ್ದದ ನಡೆ ಇರಲಿ

ರಾಜ್ಯ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ಭಾನುವಾರ ಮಧ್ಯಾಹ್ನದಿಂದ ಅಧಿಕೃತವಾಗಿ ಆರಂಭವಾಗಿದೆ. ಈ ಸಂದರ್ಭದಲ್ಲಿ ಕೆಲ ಕಾಲ ಸಾರಿಗೆ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಸಣ್ಣಪುಟ್ಟ ಗದ್ದಲ ನಡೆಯುತ್ತಿದ್ದುದು ಕಂಡುಬಂತು. ಸರಿಯಾದ ಮಾಹಿತಿ ಕೊರತೆಯೋ ಮತ್ತೆ ಇನ್ನೇನೋ ಕಾರಣಕ್ಕೆ ಹೀಗೆ ಗದ್ದಲ ಆಗಿರಬಹುದು. ಫಲಾನುಭವಿಗಳು ಮತ್ತು ಸಿಬ್ಬಂದಿ ವರ್ಗ ಸೌಹಾರ್ದದಿಂದ ನಡೆದುಕೊಳ್ಳುವುದು ವಿಹಿತ. 

––ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ಬೇಕಾಗಿದೆ ದೂರಗಾಮಿ ಆಡಳಿತಾತ್ಮಕ ಸ್ಪಷ್ಟತೆ

ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಸೇವೆಯ ಲಾಭ ಸಿಗಬೇಕಾದರೆ ಕರಾವಳಿ ಜಿಲ್ಲೆಗಳಲ್ಲಿ ಸರ್ಕಾರಿ ಸಾರಿಗೆ ವ್ಯವಸ್ಥೆ ಬಲಗೊಳ್ಳಬೇಕೆಂಬ ಕೂಗು ಎದ್ದಿರುವುದನ್ನು ಗಮನಿಸಿದರೆ, ರಾಜ್ಯ ಸರ್ಕಾರಕ್ಕೆ ತಾನು ತೆಗೆದುಕೊಂಡಿರುವ ‘ಕ್ರಾಂತಿಕಾರಿ’ ನಿರ್ಧಾರಗಳ ಪೂರ್ಣ ಪರಿಣಾಮಗಳ ಅರಿವು ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಹಲವು ಹಳ್ಳಿಗಳಿಗೆ ಸೇವೆ ಒದಗಿಸುವುದು ದಶಕಗಳಿಂದಲೂ ಸರ್ಕಾರಿ ಬಸ್ಸುಗಳಿಗೆ ಸಾಧ್ಯವಾಗಿಲ್ಲ. ಅಂಥ ಕಡೆಗಳಲ್ಲೆಲ್ಲ ಸಹಕಾರ ಸಾರಿಗೆ ಮತ್ತು ಖಾಸಗಿ ಬಸ್ ಸರ್ವಿಸ್ ಕಂಪನಿಗಳು ಉತ್ತಮ ಸೇವೆ ಕೊಡುತ್ತಾ ಬಂದಿವೆ. ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣವನ್ನು ಉಚಿತವಾಗಿಸಿ, ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿರುವ ಖಾಸಗಿ ಬಸ್‌ ಕಂಪನಿಗಳ ಅಸ್ತಿತ್ವಕ್ಕೆ ಸವಾಲು ಹಾಕಿರುವ ಸರ್ಕಾರದ ಕ್ರಮದಿಂದ ಇನ್ನು ಯಾವ ಯಾವ ರೀತಿಯ ಸಮಸ್ಯೆಗಳು ಬರುತ್ತವೋ ಗೊತ್ತಿಲ್ಲ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಮಕ್ಕಳು ಮತ್ತು ವೃದ್ಧರ ಆಹಾರ‌ ಹಾಗೂ ಎಲ್ಲರ ಆರೋಗ್ಯದಂತಹ ಕ್ಷೇತ್ರಗಳು ಉಚಿತ ಸೇವೆಗೆ ಅರ್ಹ. ಆದರೆ, ಅಧಿಕಾರಸ್ಥರು ಸರ್ಕಾರಿ ಶಾಲೆಗಳು ಮತ್ತು ಆರೋಗ್ಯ ಸೇವೆಯನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಖಾಸಗಿ ಶಾಲಾ ಕಾಲೇಜುಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಆದರೆ ಶಿಕ್ಷಣ ದುಬಾರಿಯಾಗಿದೆ. ಸರ್ಕಾರಿ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಸಾಯಲು ಬಿಟ್ಟ ರಾಜಕಾರಣಿಗಳೇ ಮಕ್ಕಳ ಶಿಕ್ಷಣವನ್ನು ತಮ್ಮ ಕಿಸೆ ತುಂಬಿಸಿಕೊಳ್ಳುವ ಖಾಸಗಿ ಉದ್ಯಮವನ್ನಾಗಿಸಿಕೊಂಡಿದ್ದಾರೆ. ಕೆಲವನ್ನು ಹೊರತುಪಡಿಸಿ ಬಹುತೇಕ ಖಾಸಗಿ ಶಾಲೆ ಮತ್ತು ಆಸ್ಪತ್ರೆಗಳೊಂದಿಗೆ ಗುಣಮಟ್ಟದಲ್ಲಿ ಸ್ಪರ್ಧೆ ಒಡ್ಡುವುದು ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗಳಿಗೆ ಇಂದಿಗೂ ಸಾಧ್ಯವಾಗಿಲ್ಲ.

ಸರ್ಕಾರಿ ಬಸ್‌ ಸೇವೆ ಇಲ್ಲದಿರುವ ಕಡೆ ಖಾಸಗಿಯವರು ಅದನ್ನು ಒದಗಿಸುತ್ತಿದ್ದಾರೆ. ಈಗ ‘ಮಹಿಳೆಯರಿಗೆ ಉಚಿತ’ ಎನ್ನುವ ನೀತಿಯು ಖಾಸಗಿ ಸಾಮಾನ್ಯ ಸಾರಿಗೆ ವ್ಯವಸ್ಥೆಯ ಮೇಲೆ ಪರೋಕ್ಷವಾಗಿ ಒತ್ತಡ ಹೇರುತ್ತದೆ. ಯಾವುದರಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತ ಅರ್ಹರಿಗೆ ಸಿಗುವ ಸೇವೆಗಳನ್ನು ಹಕ್ಕಿನ ರೂಪದಲ್ಲಿ ತಲುಪಿಸಬೇಕೆಂಬ ನೈತಿಕ ಮತ್ತು ದೂರಗಾಮಿ ಆಡಳಿತಾತ್ಮಕ ಸ್ಪಷ್ಟತೆ ಸರ್ಕಾರಕ್ಕೆ ಇಲ್ಲದಿರುವುದು ಉಚಿತ ಗ್ಯಾರಂಟಿಗಳ ಮೂಲಭೂತ ಸಮಸ್ಯೆ ಎಂದೇ ಹೇಳಬೇಕಾಗುತ್ತದೆ.

–ಶ್ರೀಕಂಠ, ಬೆಂಗಳೂರು

ಕಸಾಪ ನಿಲುವು ಎತ್ತ ಸಾಗಿದೆ?

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಈ ಸಂಸ್ಥೆಯ ನೇತೃತ್ವ ವಹಿಸುವುದೇ ಒಂದು ದೊಡ್ಡ ಗೌರವ. ಕಾಲಕಾಲಕ್ಕೆ ಅನೇಕ ಮಹನೀಯರು ಆ ಗೌರವ ಪಡೆದಿದ್ದಾರೆ ಹಾಗೂ ತಮ್ಮ ವಿದ್ವತ್ತಿನ ಪ್ರತಿಭೆಯನ್ನು ಬಳಸಿ ಮುನ್ನಡೆಸುವ ಕೆಲಸ ಮಾಡಿದ್ದಾರೆ. 

ಜಿ.ನಾರಾಯಣ ಮತ್ತು ಹಂಪನಾ ಅವರು ಅಧ್ಯಕ್ಷರಾಗಿದ್ದಾಗ ಕಸಾಪ ಅಂಗಳದಲ್ಲಿ ಸದಾಕಾಲವೂ ಹಬ್ಬದ ವಾತಾವರಣ ಇತ್ತು. ಸಲಹೆ ಸೂಚನೆಗಳನ್ನು ನೀಡುವ ಹಾಗೂ ಪಡೆಯುವವರಿಗೆ ಕಸಾಪ ಬಾಗಿಲು ಸದಾ ತೆರೆದಿತ್ತು. ಸಮ್ಮೇಳನಕ್ಕಷ್ಟೇ ಮಹತ್ವ ಕೊಡದೆ, ನಾಡಿನ ಬೇರೆ ಬೇರೆ ಕಡೆಗಳಲ್ಲಿ ಸಾಹಿತ್ಯ ಕಮ್ಮಟಗಳು, ಗೋಷ್ಠಿಗಳು ನಡೆಯುತ್ತಿದ್ದವು. ಈಗ ಕಸಾಪ ನಿಲುವು ಎತ್ತ ಸಾಗುತ್ತಿದೆ?

ಅಧಿಕಾರಶಾಹಿ ಸಂಸ್ಥೆಯಾಗಿ ರೂಪಾಂತರ ಹೊಂದಿದೆ ಎಂಬುದು, ಮೊದಲಿನಿಂದಲೂ ಕಸಾಪ ಜೊತೆಯಲ್ಲಿ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ಅನೇಕ ಸಂಘ ಸಂಸ್ಥೆಗಳ ಆರೋಪ. ಅಧ್ಯಕ್ಷರಿಗೆ ಅವರನ್ನೆಲ್ಲಾ ಕರೆದು ಕೂಡಿಸಿ ಅವರ ಅಹವಾಲನ್ನು ಕೇಳಿ ಬಗೆಹರಿಸಬಹುದಾದ ಹಿರಿತನವಿದೆ. ನಾಡು ನುಡಿ ಮತ್ತು ಕಸಾಪ ಹಿತದೃಷ್ಟಿಯಿಂದ ಅದರ ಅಗತ್ಯವೂ ಇದೆ. ಮಾತಿನಲ್ಲೇ ಬಗೆಹರಿಸಬಹುದಾದ ಈ ಸಂಗತಿಯನ್ನು ಲಘುವಾಗಿ ಪರಿಗಣಿಸಿ, ಕನ್ನಡದ ಹಿತಚಿಂತಕರಿಂದಲೇ ಸೋಮವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲು ಬಿಟ್ಟಿರುವುದು ಎಷ್ಟು ಸರಿ?

–ತಾ.ಸಿ.ತಿಮ್ಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.