ADVERTISEMENT

ವಾಚಕರ ವಾಣಿ: ಭೂಕುಸಿತ ತಡೆ: ಕಟ್ಟುನಿಟ್ಟಿನ ನೀತಿ ಜಾರಿಯಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 22 ಜೂನ್ 2021, 19:45 IST
Last Updated 22 ಜೂನ್ 2021, 19:45 IST

ರಾಜ್ಯದ ಪಶ್ಚಿಮಘಟ್ಟದ ಜಿಲ್ಲೆಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಸತತವಾಗಿ ಘಟಿಸುತ್ತಿರುವ ಭೂಕುಸಿತದ ಕುರಿತಾಗಿನ ಸಕಾಲಿಕ ಸಂಪಾದಕೀಯಕ್ಕೆ (ಪ್ರ.ವಾ., ಜೂನ್ 22) ಕೃತಜ್ಞತೆಗಳು. ಹಲವು ಒಳನೋಟಗಳಿರುವ ಈ ಬರಹವು ಸರ್ಕಾರ ಹಾಗೂ ಜನರನ್ನು ಎಚ್ಚರಿಸಲಿ ಎಂದು ಹಾರೈಕೆ. ಎರಡು ಬಗೆಯಲ್ಲಿ ಈಗ ಕಾರ್ಯೋನ್ಮುಖ ವಾಗುವ ಅವಶ್ಯಕತೆಯಿದೆ.

ಒಂದನೆಯದು, ಇಲ್ಲಿನ ಪರಿಸರಕ್ಕೆ ಈಗಾಗಲೇ ಆಗಿರುವ ಗಾಸಿಯನ್ನು ಸರಿಪಡಿಸುವ ಕಾರ್ಯ. ಪರ್ವತಶ್ರೇಣಿ, ಕಾಡು, ಗೋಮಾಳ, ನದಿತಪ್ಪಲು, ಕೃಷಿಭೂಮಿ- ಎಲ್ಲೆಡೆಯ ಪರಿಸರವನ್ನು ಪುನಶ್ಚೇತನಗೊಳಿಸುವ ಸೂಕ್ತ ಕಾರ್ಯನೀತಿ ಜಾರಿಯಾಗಬೇಕಿದೆ. ಇದು ಸರ್ಕಾರ ಹಾಗೂ ನಾಗರಿಕ ಸಮಾಜವು ಜಂಟಿಯಾಗಿ ಹಲವು ಹಂತಗಳಲ್ಲಿ ಸಾಧಿಸಬೇಕಾದ ಸವಾಲು. ಎರಡನೆಯದು, ಭವಿಷ್ಯದಲ್ಲಿ ಈ ಅಪಾಯಗಳನ್ನು ತಡೆಗಟ್ಟುವ ಉದ್ದೇಶದ ಸೂಕ್ತ ‘ನೆಲ-ಜಲ ಬಳಕೆ ನೀತಿ’ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು. ಕೃಷಿ, ವಸತಿಪ್ರದೇಶ, ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ, ಪರಿಸರದ ಸೂಕ್ಷ್ಮತೆಯನ್ನು ಪುರಸ್ಕರಿಸುವ ಶಿಸ್ತಿನ ಚೌಕಟ್ಟಾಗಬೇಕು ಅದು.

ಇವೆರಡೂ ಸಾಧ್ಯವಾದರೆ ಮಾತ್ರ ಪಶ್ಚಿಮಘಟ್ಟ ಪ್ರದೇಶವನ್ನು ಸಂರಕ್ಷಿಸಿಕೊಳ್ಳಲು ಸಾಧ್ಯವಾದೀತು. ಇಲ್ಲವಾದಲ್ಲಿ, ಸಹ್ಯಾದ್ರಿ ತಪ್ಪಲಿನ ಹಾಗೂ ಕರಾವಳಿಯ ಲಕ್ಷಾಂತರ ಕುಟುಂಬಗಳ ಬದುಕು ಇನ್ನೂ ದುಸ್ತರವಾಗಲಿದೆ. ಜೊತೆಗೆ, ಅಲ್ಲಿಯೇ ಹುಟ್ಟಿ ಹರಿಯುವ ನದಿಗಳ ನೀರನ್ನೇ ನಂಬಿರುವ ನಾಡಿನ ಅಸಂಖ್ಯ ಜನರ ಬದುಕು ಮತ್ತಷ್ಟು ಹೈರಾಣಾಗಲಿದೆ. ಎಲ್ಲರಲ್ಲಿ ಈ ವಿವೇಕ ಮೂಡಲಿ ಎಂದು ಆಶಿಸೋಣ.

ADVERTISEMENT

- ಡಾ. ಕೇಶವ ಎಚ್. ಕೊರ್ಸೆ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.