ಮೆಟ್ರೊ ಸುರಕ್ಷತೆ: ಚೆನ್ನೈ ಮಾದರಿಯಾಗಲಿ
ಬೆಂಗಳೂರಿನಲ್ಲಿ ಮೆಟ್ರೊ ರೈಲಿನ ಹಳಿ ಮೇಲೆ ಹಾರಿ ಜೀವ ಕಳೆದುಕೊಳ್ಳಲು ಪ್ರಯತ್ನಿಸುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇನ್ನು ಕೆಲವರು ಎದುರಿನ ಪ್ಲ್ಯಾಟ್‌ಫಾರಂಗೆ ಹೋಗಲು ಅರಿವಿಲ್ಲದೆ ಮೆಟ್ರೊ
ಹಳಿಯ ಮೇಲೆ ಇಳಿದಿರುವ ಉದಾಹರಣೆಗಳೂ ಇವೆ. ಇದರಿಂದ ಕೆಲ ಅಮೂಲ್ಯ ಜೀವಗಳು ಹೋದರೂ ಅಲ್ಲಿನ ಕೆಲಸಗಾರರ ಸಮಯಪ್ರಜ್ಞೆಯಿಂದ ಹಲವರ ಜೀವಗಳು ಉಳಿದಿವೆ. ಬೆಳೆಯುತ್ತಿರುವ ನಗರದ ಜನದಟ್ಟಣೆಯ ಜತೆಗೆ ಕೆಲವು ನಿಲ್ದಾಣಗಳಲ್ಲಿ ಪ್ರತಿನಿತ್ಯ ಮೆಟ್ರೊ ಹತ್ತಿಳಿಯಲು ಉಂಟಾಗುವ ನೂಕುನುಗ್ಗಲು ಕೂಡ ಪ್ಲ್ಯಾಟ್‌ಫಾರಂನಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಸುತ್ತಿದೆ.
ಬೆಂಗಳೂರಿನ ಬಹುಪಾಲು ಮೆಟ್ರೊ ನಿಲ್ದಾಣಗಳಲ್ಲಿ ತೆರೆದ ಪ್ಲ್ಯಾಟ್‌ಫಾರಂಗಳಿವೆ. ಮೆಜೆಸ್ಟಿಕ್‌ನಲ್ಲಿ ಹಳಿಗಳತ್ತ ಹೋಗದಂತೆ ಸ್ಟೀಲ್ ಕಂಬಿಗಳ ತಡೆಯನ್ನು ಹಾಕಿದ್ದರೂ ಅದು ದಾಟಲಾಗದಷ್ಟು ಎತ್ತರಕ್ಕೇನೂ ಇಲ್ಲ. ಮಿಕ್ಕ ಕಡೆ ಅಡೆತಡೆಯಿಲ್ಲದ ಕಾರಣ ಕಾವಲುಗಾರರು ಜನರನ್ನು ಹಿಂದಕ್ಕೆ ಕಳಿಸಲು ಕಿರುಚುತ್ತಲೋ ಸೀಟಿ ಊದುತ್ತಲೋ ಇರಬೇಕಾಗುತ್ತದೆ. ಇದೆಲ್ಲಕ್ಕೂ ನಮ್ಮ ಪಕ್ಕದಲ್ಲಿರುವ ಚೆನ್ನೈ ಮೆಟ್ರೊ ಅನುಸರಿಸಿರುವ ಮಾರ್ಗಗಳು ಪರಿಹಾರ ಆಗಬಲ್ಲವು. ಅಲ್ಲಿನ ಮೆಟ್ರೊ ಪ್ಲ್ಯಾಟ್‌ಫಾರಂಗಳು ತೆರೆಯುವ ಗಾಜಿನ ಬಾಗಿಲುಗಳಿಂದ ಮುಚ್ಚಿದ್ದು, ರೈಲು ಬಂದು ನಿಂತಾಗ ಅದರ ಬಾಗಿಲಿನೊಂದಿಗೆ ಮಾತ್ರ ತೆರೆದುಕೊಳ್ಳುತ್ತವೆ. ರೈಲಿನ ಓಡಾಟ ಇಲ್ಲದ ಸಮಯದಲ್ಲಿ ಹಳಿಗಳ ಹತ್ತಿರ ಹೋಗುವ, ಹಳಿಗಳ ಮೇಲೆ ಜಿಗಿಯುವ ಅಥವಾ ದಾಟುವ ಅವಕಾಶವೇ ಇಲ್ಲವಾಗಿದೆ. ಮೆಟ್ರೊ ಅಧಿಕಾರಿಗಳು ಮತ್ತು ಸರ್ಕಾರ ಇತ್ತ ಗಮನಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.
⇒ಹೇಮಂತ್ ಲಿಂಗಪ್ಪ, ತುಮಕೂರು
ಊಳಿಗಮಾನ್ಯ ಮನಃಸ್ಥಿತಿ ನೆನಪಿಸಿದ ಅಮಾನುಷ ಶಿಕ್ಷೆ
ವಿಜಯಪುರದ ಗಾಂಧಿನಗರ ಸರಹದ್ದಿಗೆ ಸೇರಿದ ಇಟ್ಟಿಗೆ ಭಟ್ಟಿಯೊಂದರಲ್ಲಿ ಕಾರ್ಮಿಕರ ಮೇಲೆ ನಡೆದಿರುವ ಕ್ರೂರ ಹಲ್ಲೆ ಮಾನವೀಯತೆಗೆ ಎಸೆದ ಸವಾಲಾಗಿದೆ. ಬಡ ಹಾಗೂ ಶೋಷಿತ ಸಮುದಾಯಕ್ಕೆ ಸೇರಿದ ಈ ಕಾರ್ಮಿಕರ ಮೇಲಿನ ದಬ್ಬಾಳಿಕೆ ಮತ್ತು ಅವರಿಗೆ ಮಾಲೀಕರು ಕೊಟ್ಟ ಅಮಾನುಷವಾದ ಶಿಕ್ಷೆಯು ಮಧ್ಯಕಾಲೀನ ಯುಗದ ಊಳಿಗ ಮಾನ್ಯ ಪದ್ಧತಿಯನ್ನು ನೆನಪಿಸುತ್ತದೆ. ಇದು, ಇಡೀ ನಾಡಿನ ಸಾಕ್ಷಿಪ್ರಜ್ಞೆಗೆ ಮಾಡಿದ ಅವಮಾನ. ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾದ ಈ ಕ್ರೂರ ಹಿಂಸೆಯ ದೃಶ್ಯಗಳನ್ನು ನೋಡಿದವರು ಮಮ್ಮಲಮರುಗಿ ತಲೆತಗ್ಗಿಸಿದ್ದಾರೆ.
ಈ ಮಾಲೀಕರಿಗೆ ರಾಜಕೀಯ ಮುಖಂಡರ ಬೆಂಬಲವಿರುವ ಸಾಧ್ಯತೆಯಿದೆ. ಸರ್ಕಾರ ಯಾರ ಮುಲಾಜಿಗೂ ಒಳಗಾಗದೆ ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ವಿಜಯಪುರ ಪೊಲೀಸರ ಮೇಲೆ ಯಾವುದೇ ಒತ್ತಡ ಬರದಂತೆ ನೋಡಿಕೊಂಡು, ತಾನು ಬಡವರು ಮತ್ತು ಶೋಷಿತರ ಪರವಾಗಿ ಇರುವುದನ್ನು ರುಜುವಾತು ಮಾಡಬೇಕು. ಈ ಮೂಲಕ ರಾಜ್ಯದ ಬೇರಾವ ಪ್ರದೇಶದಲ್ಲೂ ಇಂತಹ ರಾಕ್ಷಸೀ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಬೇಕು. ಗಾಂಧಿನಗರ ಪ್ರದೇಶದಲ್ಲೇ ಈ ಹೀನಾತಿಹೀನ ಪ್ರಕರಣ ನಡೆದಿರುವುದು ಎಂತಹ ವ್ಯಂಗ್ಯ?
ಮೋದೂರು ಮಹೇಶಾರಾಧ್ಯ, ಹುಣಸೂರು
ಮಕ್ಕಳಿಂದ ವಾಹನ ಚಾಲನೆ: ಗಂಭೀರವಾಗಿ ಪರಿಗಣಿಸಿ
ಇತ್ತೀಚಿನ ದಿನಗಳಲ್ಲಿ ಮಹಾನಗರಗಳಲ್ಲಷ್ಟೇ ಅಲ್ಲದೆ ಸಣ್ಣ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶ ಗಳಲ್ಲಿ ಕೂಡ ಚಿಕ್ಕ ಮಕ್ಕಳು ವಾಹನ ಚಾಲನೆ ಮಾಡುವುದು ಹೆಚ್ಚಾಗುತ್ತಿದೆ. ಬೈಕ್, ಸ್ಕೂಟರ್‌ಗಳಷ್ಟೇ ಅಲ್ಲದೆ ಕಾರು, ಟ್ರ್ಯಾಕ್ಟರ್‌ಗಳನ್ನೂ ಅತಿ ವೇಗವಾಗಿ ಓಡಿಸಿಕೊಂಡು ಹೋಗುವುದು ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವಂತಹ ಪ್ರವೃತ್ತಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಯಾಕೆಂದರೆ ಇದು ಬರೀ ಅಪಘಾತಗಳಿಂದ ಆಗಬಹುದಾದ ಸಾವು ನೋವಿಗೆ ಸಂಬಂಧಪಟ್ಟ ವಿಷಯವಷ್ಟೇ ಅಲ್ಲ. ಮನಃಶಾಸ್ತ್ರೀಯ ಹಿನ್ನೆಲೆಯಲ್ಲಿ ಹೇಳುವುದಾದರೆ, ಭಾವಿ ನಾಗರಿಕರು ಬಾಲ್ಯದಲ್ಲಿಯೇ ಕಾನೂನು ಉಲ್ಲಂಘನೆ ಪ್ರವೃತ್ತಿ ಬೆಳೆಸಿಕೊಂಡರೆ, ಮುಂದಿನ ಜೀವನದಲ್ಲಿ ಅಪರಾಧಿಗಳಾಗಿಯೋ ಸಮಾಜಘಾತುಕ ಶಕ್ತಿಗಳಾಗಿಯೋ ಬೆಳೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ, ಸರ್ಕಾರ ಈ ಪ್ರವೃತ್ತಿಯನ್ನು ತಡೆಯುವ ದಿಸೆಯಲ್ಲಿ ಮಕ್ಕಳಿಗಷ್ಟೇ ಅಲ್ಲದೆ ಅವರ ಪಾಲಕರಿಗೂ ಸ್ಥಳದಲ್ಲಿಯೇ ದಂಡ ವಿಧಿಸುವ ಹಾಗೂ ಅವರ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕಿದೆ.
ಭೀಮನಗೌಡ ಕಾಶಿರೆಡ್ಡಿ, ಬೆಂಗಳೂರು
ಚರ್ಚೆ ಆಗಬೇಕಿರುವುದು ಯಾವ ಕೊಲೆ ಬಗ್ಗೆ?!
‘ಮಹಾತ್ಮ ಗಾಂಧಿ ಹತ್ಯೆಯಲ್ಲಿ ಜವಾಹರಲಾಲ್ ನೆಹರೂ ಅವರ ಕೈವಾಡವಿತ್ತು ಎಂಬ ಅನುಮಾನವಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿರುವುದಾಗಿ ವರದಿಯಾಗಿದೆ. ಗಾಂಧಿಯವರನ್ನು ಯಾರು ಕೊಂದರೆಂಬುದು ಇಡೀ ಜಗತ್ತಿಗೇ ಗೊತ್ತಿದೆ. ಆ ಚರ್ಚೆ ಈಗ ಅಪ್ರಸ್ತುತ. ಈಗ ಚರ್ಚೆ ಆಗಬೇಕಾಗಿರುವುದು ಗಾಂಧಿಯವರ ತತ್ವ, ಸಿದ್ಧಾಂತಗಳ ಕೊಲೆಯಾಗುತ್ತಿರುವ ಬಗ್ಗೆ! ಅವರ ದೈಹಿಕ ಅಂತ್ಯಕ್ಕಿಂತ ಅವರ ಸಿದ್ಧಾಂತಗಳ ಮೇಲೆ ನಡೆಯುತ್ತಿರುವ ದಾಳಿ ತುಂಬಾ ಅಪಾಯಕಾರಿ.
ಭ್ರಷ್ಟಾಚಾರ, ಅಧಿಕಾರಕ್ಕಾಗಿ ಕಚ್ಚಾಟ, ಮಹಿಳೆಯರು, ದೀನ ದಲಿತರು, ಅಲ್ಪಸಂಖ್ಯಾತರಂತಹವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಇಂದು ಮೇಲುಗೈ ಸಾಧಿಸುತ್ತಿರುವುದು ನಿಜಕ್ಕೂ ಗಾಂಧಿಯವರನ್ನು ದಿನಾಲೂ ಕೊಲ್ಲುವ ಪ್ರಕ್ರಿಯೆಯಾಗಿದೆ. ಇದಕ್ಕೆ ಯಾವ ರಾಜಕೀಯ ಪಕ್ಷವೂ ಹೊರತಾಗಿಲ್ಲ. ಈ ಬಗ್ಗೆ ಇಂದು ವ್ಯಾಪಕವಾಗಿ ಪ್ರಾಮಾಣಿಕವಾದ ಚರ್ಚೆಯಾಗಬೇಕಾಗಿದೆ. ಗಾಂಧೀಜಿ ಏನಾದರೂ ಇಂದು ಬದುಕಿದ್ದರೆ ಇಂತಹ ಅಮಾನವೀಯ ಪ್ರಕರಣಗಳನ್ನು ನೋಡಲಾರದೆ ಅವರಾಗಿಯೇ ತಮ್ಮ ಬದುಕಿನ ಅಂತ್ಯವನ್ನು ಕಂಡುಕೊಳ್ಳುತ್ತಿದ್ದರೇನೊ. ಸರಿದಾರಿಗೆ ಬರಲಾಗದಷ್ಟು ದೂರ ನಾವು ಅಡ್ಡದಾರಿಯಲ್ಲಿ ಸಾಗಿದ್ದೇವೆ. ಈ ಬಗ್ಗೆ ಚಿಂತನೆಗಳು ನಡೆಯಬೇಕಾದ ತುರ್ತಿದೆ.
-ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.