ADVERTISEMENT

ವಾಚಕರ ವಾಣಿ: ಶ್ರೇಯಕ್ಕೆ ಜಗ್ಗಾಟ; ಜನರ ವಿಶ್ವಾಸಕ್ಕೆ ಚ್ಯುತಿ

ಪ್ರಜಾವಾಣಿ ವಿಶೇಷ
Published 28 ಡಿಸೆಂಬರ್ 2025, 22:49 IST
Last Updated 28 ಡಿಸೆಂಬರ್ 2025, 22:49 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಶ್ರೇಯಕ್ಕೆ ಜಗ್ಗಾಟ; ಜನರ ವಿಶ್ವಾಸಕ್ಕೆ ಚ್ಯುತಿ

ಫಾಕ್ಸ್‌ಕಾನ್‌ ಕಂಪನಿಯ ಹೂಡಿಕೆಗೆ ಸಂಬಂಧಿಸಿದಂತೆ ರಾಜಕೀಯ ಲಾಭ ಪಡೆಯಲು ನಡೆಯುತ್ತಿರುವ ಪೈಪೋಟಿ ಜನರ ಬುದ್ಧಿಮತ್ತೆಗೆ ಮಾಡುವ ಅವಮಾನ. ಉದ್ಯೋಗ ಸೃಷ್ಟಿಯಂತಹ ಗಂಭೀರ ವಿಷಯವೂ ಪಕ್ಷಗಳ ಸ್ವಪ್ರಚಾರಕ್ಕೆ ವೇದಿಕೆಯಾಗಿರುವುದು ಹೇಸಿಗೆ ಹುಟ್ಟಿಸುವಂತಿದೆ. ಯುವಜನರ ಭವಿಷ್ಯ ರೂಪಿಸಬೇಕಾದ ವಿಷಯವು ಅಸಹ್ಯ ಜಗಳಕ್ಕೆ ಕಾರಣವಾಗಿರುವುದು ನೋವುಂಟುಮಾಡುತ್ತದೆ. ರಾಜ್ಯ ಸರ್ಕಾರದ ಸಹಕಾರವಿಲ್ಲದೆ ಕೈಗಾರಿಕೆ ಬಾರದು; ಕೇಂದ್ರ ಸರ್ಕಾರದ ನೀತಿಗಳಿಲ್ಲದೆ ಜಾಗತಿಕ ಕಂಪನಿಗಳು ಬರುವುದಿಲ್ಲ ಎಂಬ ಸರಳ ಸತ್ಯವನ್ನು ಮರೆಮಾಚುವುದು ಸರಿಯೆ? ಅಭಿವೃದ್ಧಿಯು ಪಕ್ಷದ ಬಾವುಟವಾಗದೆ ಜನರ ಬದುಕಿನ ಆಶಯವಾಗಬೇಕು. ಒಬ್ಬರ ಸಾಧನೆಯನ್ನು ಮತ್ತೊಬ್ಬರು ನುಂಗಿಕೊಳ್ಳುವ ರಾಜಕೀಯ ವರ್ತನೆ ಜನಸಾಮಾನ್ಯರ ವಿಶ್ವಾಸಕ್ಕೆ ಚ್ಯುತಿ ತರುತ್ತದೆ.

ADVERTISEMENT

⇒ಶಂಕರ ವಡ್ಡರ, ಗದಗ 

‘ಗ್ಯಾರಂಟಿ’ ಮಮಕಾರ: ಶಾಲೆ ಬಗ್ಗೆ ತಾತ್ಸಾರ

ಸರ್ಕಾರಿ ಶಾಲೆಗಳಿಂದಷ್ಟೇ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಉಳಿವು ಸಾಧ್ಯ. ಈಗಿರುವ ಪಾಠ ಆಧಾರಿತ ಮೌಲ್ಯಮಾಪನ, ಎಫ್‌ಎಲ್‌ಎನ್‌, ನಲಿ–ಕಲಿ, ಸ್ಯಾಟ್ಸ್‌, ಎಚ್‌ಆರ್‌ಎಂಎಸ್‌, ಬಿಎಲ್‌ಒ ಮುಂತಾದ ಹೊರೆಗಳನ್ನು ಸ್ಥಗಿತಗೊಳಿಸಿ, ಮಕ್ಕಳಿಗೆ ಬೋಧನೆ ಮಾಡಲಷ್ಟೇ ಶಿಕ್ಷಕರನ್ನು ಸೀಮಿತಗೊಳಿಸಿದರೆ ಶೈಕ್ಷಣಿಕ ಪ್ರಗತಿ ಸಾಧ್ಯ. 20 ವರ್ಷಗಳ ಹಿಂದೆ ಮೊಟ್ಟೆ, ಬಾಳೆಹಣ್ಣು, ರಾಗಿಗಂಜಿ, ಶೂ, ಸಾಕ್ಸ್, ಕೆನೆಭರಿತ ಹಾಲು ಯಾವುದೂ ಇರಲಿಲ್ಲ. ಆಗ ಮಕ್ಕಳು ಹೆಚ್ಚು ಆರೋಗ್ಯವಾಗಿದ್ದರು. ಈಗ ಇವೆಲ್ಲ ಕೊಟ್ಟರೂ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಕೇವಲ ವರ್ಣರಂಜಿತ ಯೋಜನೆಗಳಿಂದ ಸರ್ಕಾರಿ ಶಾಲೆ ಉಳಿಸಲು ಸಾಧ್ಯವಿಲ್ಲ. ಅವುಗಳ ಗುಣಮಟ್ಟ ಸುಧಾರಿಸುವುದು ಬರೀ ಸರ್ಕಾರದ ಜವಾಬ್ದಾರಿಯಲ್ಲ, ಅದು ಸಮುದಾಯದ ಸಹಭಾಗಿತ್ವವನ್ನೂ ಬಯಸುತ್ತದೆ. ಸರ್ಕಾರದಿಂದ ಉಚಿತವಾಗಿ ನೀಡುವ ಎಲ್ಲವನ್ನೂ ಸ್ವೀಕರಿಸುವ ಪೋಷಕರು, ಮಕ್ಕಳನ್ನು ಸಂಪೂರ್ಣ ಉಚಿತವಾಗಿರುವ ಸರ್ಕಾರಿ ಶಾಲೆಗೆ ಸೇರಿಸಲು ಹಿಂಜರಿಯುತ್ತಿರುವುದು ವಿಪರ್ಯಾಸ. 

⇒ಕಲ್ಲನಗೌಡ ಬಿರಾದಾರ, ವಿಜಯಪುರ

ಶಾಲಾ ವಾರ್ಷಿಕೋತ್ಸವ ಕಡ್ಡಾಯವಾಗಲಿ

ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಶಾಲಾ ವಾರ್ಷಿಕೋತ್ಸವ ಅಗತ್ಯ. ಹಿಂದೆ ಸಂಜೆ ಆರು ಗಂಟೆಯಿಂದ ಬೆಳಗಿನ ಸೂರ್ಯೋದಯದವರೆಗೂ ಶಾಲಾ ವಾರ್ಷಿಕೋತ್ಸವ ನಡೆಯುತ್ತಿದ್ದವು. ಪ್ರಸ್ತುತ ಕೆಲವು ಶಾಲೆಗಳಲ್ಲಿ ವಾರ್ಷಿಕ ಉತ್ಸವಗಳೇ ನಡೆಯುತ್ತಿಲ್ಲ. ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳ ಹಬ್ಬವಾಗಿ ವಾರ್ಷಿಕೋತ್ಸವವನ್ನು ಕಡ್ಡಾಯವಾಗಿ ಆಚರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸುತ್ತೋಲೆ ಹೊರಡಿಸಬೇಕಿದೆ.

⇒ಎಸ್.ಎನ್. ಅಮೃತ, ಪುತ್ತೂರು

ಪಹಣಿ ಅವಾಂತರ: ಅನ್ನದಾತರು ಕಕ್ಕಾಬಿಕ್ಕಿ

2017–18ರಲ್ಲಿ ರಾಜ್ಯ ಸರ್ಕಾರ ರೈತರ ಹೊಲಗಳಿಗೆ ಹೊಸದಾಗಿ ಪೋಡಿ ಮಾಡುವುದಾಗಿ ಘೋಷಿಸಿತ್ತು. ಬಳಿಕ ಮೂರ್ನಾಲ್ಕು ವರ್ಷ ಕಾಲಹರಣ ಮಾಡಿತು. ಈ ಸಂದರ್ಭದಲ್ಲಿ ಹಣಕಾಸಿನ ಅವಶ್ಯಕತೆ ಇರುವವರು ತಮ್ಮ ಜಮೀನನ್ನು ಮಾರಾಟ ಮಾಡಿದ್ದಾರೆ. ಆಗ ಕಂದಾಯ ಇಲಾಖೆಯ ನೌಕರರು ಹಲವಾರು ವರ್ಷಗಳ ಹಿಂದೆಯೇ ಹಿಸ್ಸೆ ಮಾಡಲಾದ  ಜಮೀನುಗಳನ್ನು ಒಂದೇ ಸರ್ವೆ ನಂಬರ್ ಅಡಿ ತೋರಿಸಿ ಅದರ ಭಾಗವನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಇದರ ಪರಿಣಾಮ, ಒಂದು ಕಾಲದಲ್ಲಿ ಕೂಡು ಕುಟುಂಬದ ಚಿಕ್ಕಪ್ಪ, ದೊಡ್ಡಪ್ಪರ ಹೆಸರು, ಅವರು ಯಾರಿಗಾದರೂ ಮಾರಾಟ ಮಾಡಿದ್ದರೆ ಅವರು ಹೆಸರುಗಳೂ ಪಹಣಿಯಲ್ಲಿ ಕಾಣಿಸಿಕೊಳ್ಳುತ್ತಿವೆ.

ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ತಹಶೀಲ್ದಾರ್ ಕಚೇರಿ ಸಿಬ್ಬಂದಿಯ ಅವಾಂತರವೇ ಇದಕ್ಕೆ ಕಾರಣ. ಇದನ್ನು ಸರಿಪಡಿಸಿ‌ಕೊಡಲು ತಹಶೀಲ್ದಾರ್ ಕಚೇರಿಗೆ ವಿನಂತಿಸಿದರೆ, ಅದಕ್ಕೆ ಹತ್ತಾರು ದಾಖಲೆ ತರಲು ಹೇಳುತ್ತಾರೆ. ಇಲಾಖೆಯ ಈ ತಪ್ಪಿಗೆ ಹೊಣೆ ಯಾರದು? 

⇒ಶಿವಶರಣಪ್ಪ ರಾ. ಬಿರಾದಾರ, ಹಿರೇಬೇವನೂರ 

ದಿನಪತ್ರಿಕೆ ಓದಿನಿಂದ ಮಕ್ಕಳ ಜ್ಞಾನ ವೃದ್ಧಿ

ಉತ್ತರ ಪ್ರದೇಶ ಸರ್ಕಾರವು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿರುವುದು ಒಳ್ಳೆಯ ನಿರ್ಧಾರ. ದಿನಪತ್ರಿಕೆ ಓದುವುದರಿಂದ ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಉತ್ತೇಜಿಸಿದಂತಾಗುತ್ತದೆ; ಜೊತೆಗೆ ಮೊಬೈಲ್‌, ಟಿ.ವಿ. ವೀಕ್ಷಣೆಯ ಗೀಳನ್ನು ತಪ್ಪಿಸಿದಂತಾಗುತ್ತದೆ. ವಿದ್ಯಾರ್ಥಿ ಗಳಿಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅರಿವು ಮೂಡಲಿದೆ. ಸಾಮಾನ್ಯ ಜ್ಞಾನ, ಶಬ್ದ ಭಂಡಾರವೂ ಹೆಚ್ಚಲಿದೆ. ಕರ್ನಾಟಕ ಸರ್ಕಾರವೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಬೇಕಿದೆ.

⇒ಬಸಪ್ಪ ಎಸ್. ಮುಳ್ಳೂರ, ಹಲಗತ್ತಿ

ಸಾಮಾಜಿಕ ಭದ್ರತೆ ಬೇರುಗಳು ಸಡಿಲ

‘ಉನ್ನಾವೊ: ನ್ಯಾಯಕ್ಕೇ ಅಗ್ನಿಪರೀಕ್ಷೆ!’ ಲೇಖನ (ಲೇ: ನೇಮಿಚಂದ್ರ, ಪ್ರ.ವಾ., ಡಿ. 26) ಓದಿದಾಗ ಮಕ್ಕಳ ಭವಿಷ್ಯದ ಕುರಿತು ಭಯದ ಭಾವನೆ
ಮೂಡಿತು. ನಿರ್ಭಯವಾಗಿ ಉತ್ತಮ ಸಾಮಾಜಿಕ ವ್ಯಕ್ತಿತ್ವ ರೂಪಿಸಿಕೊಳ್ಳು ವುದು ಬದುಕಿನ ಗುರಿ. ಆದರೆ, ಇಂತಹ ಅತಂತ್ರ ಪರಿಸ್ಥಿತಿಯಿಂದ ಸಾಮಾಜಿಕ ಭದ್ರತೆಯ ಭಾವನೆ ಮೂಡಿಸಲು ಸಾಧ್ಯವೆ? ದುಷ್ಟರು ಅಧಿಕಾರ
ದಲ್ಲಿದ್ದು ದುರ್ವರ್ತನೆ ತೋರುತ್ತಿರುವಾಗ ಸಭ್ಯರು, ಸುಸಂಸ್ಕೃತರು ಸುಮ್ಮನಿದ್ದರೆ ಹೇಗೆ? ನಾವು ಇನ್ನು ಮುಂದಾದರೂ ನಾಗರಿಕ ಸಮಾಜ
ಕಟ್ಟಲು ಪ್ರಜ್ಞಾವಂತರಾಗಿ ಪ್ರಜಾತಂತ್ರ ಮೌಲ್ಯಗಳ ಅಡಿ ಕಾರ್ಯಪ್ರವೃತ್ತ ರಾಗದಿದ್ದರೆ ಇನ್ನೆಲ್ಲಿಯ ಪ್ರಜಾಪ್ರಭುತ್ವ? ಇನ್ನೆಲ್ಲಿಯ ಬದುಕುವ ಹಕ್ಕು? 

 ಮಾದಪ್ಪ ಎಸ್. ಕಠಾರಿ, ವಿಜಯಪುರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.