ADVERTISEMENT

ವಾಚಕರ ವಾಣಿ: ಕೂಲಿಕಾರರ ಮಧ್ಯೆ ಜಾತಿ ತರದಿರಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 6 ಜೂನ್ 2021, 19:31 IST
Last Updated 6 ಜೂನ್ 2021, 19:31 IST

ಮೇ ಎರಡನೇ ವಾರದಲ್ಲಿ ಸರ್ಕಾರವು ಲಾಕ್‌ಡೌನ್ ಘೋಷಿಸಿದಾಗ, ದೂರದೂರುಗಳಿಗೆ ಕೆಲಸಕ್ಕಾಗಿ ವಲಸೆ ಹೋಗಿದ್ದವರು ರಾತ್ರೋರಾತ್ರಿ ಸಿಕ್ಕ ಸಿಕ್ಕ ಬಸ್, ಟೆಂಪೊ, ಲಾರಿಗಳನ್ನು ಹತ್ತಿ ಊರುಗಳಿಗೆ ಬಂದಿಳಿದರು. ಇತ್ತ ಉದ್ಯೋಗ ಖಾತರಿಯ ಹಣ ಯಾತಕ್ಕೋ ಜಮಾ ಆಗಿಲ್ಲವೆಂದು ಮನೆಮಂದಿಯ ಚಿಂತೆ. ಕೆಲಸ ಮಾಡಿದ 15 ದಿನಗಳಲ್ಲಿ ಖಾತೆಗೆ ಜಮಾ ಆಗಬೇಕಾಗಿದ್ದ ಕೂಲಿ ಹಣ ಇನ್ನೂ ಬಂದಿಲ್ಲ.

ವಿಚಾರ ಮಾಡಿ ನೋಡಿದಾಗ ಕೆಲವರಿಗೆ ಜಮಾ ಆಗುತ್ತಿದೆ. ಕೆಲವರಿಗೆ ಇಲ್ಲ. ಮತ್ತೂ ಕೂಲಂಕಷವಾಗಿ ವಿಚಾರ ಮಾಡಿದಾಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಹಣ ಜಮಾ ಆಗುತ್ತಿಲ್ಲ, ಸಾಮಾನ್ಯ ವರ್ಗದವರಿಗೆ ಆಗುತ್ತಿದೆ ಎಂದಾಗ ಸಖೇದಾಶ್ಚರ್ಯ.

ತಾಲ್ಲೂಕು, ಜಿಲ್ಲೆ, ಕಡೆಗೆ ರಾಜ್ಯ ಮಟ್ಟದವರೆಗೆ ವಿಚಾರಿಸಿದರೂ ಒಂದೇ ಉತ್ತರ– ಮೇಲಿಂದ ಬಂದಿದೇರೀ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗಗಳ ಕೂಲಿಕಾರರ ಪಟ್ಟಿಯನ್ನು ಬೇರೆ ಬೇರೆ ಮಾಡಬೇಕೆಂದು ಆದೇಶವಾಗಿದೆ ಎಂದು. ಯಾತಕ್ಕೆ, ಏನು ಒಂದೂ ಸಮಜಾಯಿಷಿ ಇಲ್ಲ. ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣ ಹಾಕಲು ಆರಂಭಿಸಿ 12 ವರ್ಷಗಳೇ ಉರುಳಿದ್ದರೂ ಇನ್ನೂವರೆಗೆ 15 ದಿನಗಳಲ್ಲಿ ಪಗಾರ ಹಾಕುವುದು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.

ADVERTISEMENT

ಈ ಸಮಸ್ಯೆಗೆ ಪರಿಹಾರ ಹುಡುಕುವುದರ ಬದಲು, ಹೊಸ ಸಮಸ್ಯೆ ಸೃಷ್ಟಿ ಮಾಡಹೊರಟಿದ್ದು ವಿಷಾದನೀಯ. ಉದ್ಯೋಗ ಖಾತರಿ ಕೂಲಿ ಹಣ ವರ್ಗಾವಣೆಯ ವಿಚಾರದಲ್ಲಿ ಸರ್ಕಾರದ ಆಟ ಈಗಿನದಲ್ಲ. 15 ವರ್ಷಗಳಿಂದಲೂ ಕೂಲಿ ಕೊಡುವ ವ್ಯವಸ್ಥೆಯಲ್ಲಿ ಪದೇಪದೇ ಬದಲಾವಣೆ. ಮೊದಲು ಕೈಯಲ್ಲೇ ಹಣ ಕೊಟ್ಟರು, ನಂತರ ಚೆಕ್ ಕೊಟ್ಟರು, ನಂತರ ಖಾತೆಗಳಿಗೆ ಜಮಾ ಮಾಡಲು ಆರಂಭಿಸಿದರು. ಎಲ್ಲ ಡಿಜಿಟಲೀಕರಣ ವಾಗಿದ್ದರೂ ಕೆಲಸ ಮಾಡಿದ 15 ದಿನಗಳಲ್ಲಿ ಕೂಲಿ ತಲುಪಿಸುವುದು ಇನ್ನೂವರೆಗೆ ಸರ್ಕಾರಕ್ಕೆ ಆಗುತ್ತಿಲ್ಲ. ಒಮ್ಮೆ ಜಿಲ್ಲಾ ಪಂಚಾಯಿತಿಯಿಂದ ಹಣ ಬರುವುದೆಂದರು, ಇನ್ನೊಮ್ಮೆ ರಾಜ್ಯದ ಖಜಾನೆಯಿಂದ ಎಂದರು, ಈಗ ದಿಲ್ಲಿಯಿಂದ ನೇರವಾಗಿ ಕೂಲಿಕಾರರ ಖಾತೆಗೆ ಎನ್ನುತ್ತಾರೆ. ಆದರೆ ಯಾವುದೇ ಹೊಸ ಬದಲಾವಣೆ ದಿಲ್ಲಿಯಿಂದ ಹಳ್ಳಿಯ ಪಂಚಾಯಿತಿಗಳ ಕಂಪ್ಯೂಟರಿಗೆ ಮುಟ್ಟುವ ವೇಳೆಗೆ ಅನೇಕ ತಿಂಗಳುಗಳೇ ಉರುಳಿ, ಕೂಲಿಕಾರರು ಹಣ ಬರುತ್ತದೆಂದು ಕಾಯುತ್ತ ಕುಳಿತಿರಬೇಕು. ಈಗ ಹೊಸದೊಂದು ಬದಲಾವಣೆ. ಬದಲಾವಣೆಯ ಕಾರಣಕ್ಕಾಗಿ ಮತ್ತೆ ಕೂಲಿಕಾರರು ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ.

ಹತ್ತು ವರ್ಷಗಳ ಮೇಲಾಯಿತು, ಉದ್ಯೋಗ ಖಾತರಿಯಲ್ಲಿ ಹಳ್ಳಿಯ ಜನರೆಲ್ಲ ಒಟ್ಟಾಗಿ ದುಡಿಯುತ್ತಾರೆ. ಅಲ್ಲೇ ಹತ್ತಿರ ಹತ್ತಿರ ಕುಳಿತು ಊಟ ಮಾಡುತ್ತಾರೆ. ಕೆಲಸ ಮುಗಿದಿದ್ದರೆ ಚೌಕಾಬಾರ, ಪಗಡೆ ಮುಂತಾದ ಆಟಗಳನ್ನೂ ಆಡುತ್ತಾರೆ. ಕ್ರಮೇಣವಾಗಿ ಜಾತಿಗಳ ಬೇಲಿಯನ್ನೂ ಮುರಿಯುವ ದಿನಗಳು ಹತ್ತಿರ ಬಂದಿದ್ದವು. ಹೀಗಿರುವಾಗ ಸರ್ಕಾರವು ಯಾವುದೇ ಕಾರಣ ಕೊಡದೆ, ಜಾತಿವಾರು ಎಫ್.ಟಿ.ಒ ಮಾಡುತ್ತಿರುವುದು, ಒಂದೊಂದು ಜಾತಿಯವರಿಗೆ ಒಂದೊಂದು ಸಾರಿ ಸಂಬಳ ಕೊಡುವ ಹೊಸ ನೀತಿಯು ಕೂಲಿಕಾರರಲ್ಲಿ ಜಾತಿ ಮನೋಭಾವವನ್ನು ಮತ್ತೊಮ್ಮೆ ಗಟ್ಟಿಮಾಡಿದಂತೆ ಆಗುವುದಿಲ್ಲವೇ?⇒

–ಶಾರದಾ ಗೋಪಾಲ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.