ADVERTISEMENT

ಸ್ವಾಮೀಜಿ ಅಧ್ಯಯನದಲ್ಲಿ ತೊಡಗಬೇಕು

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 20:15 IST
Last Updated 15 ಜುಲೈ 2019, 20:15 IST

‘ಮಾತು ಕೇಳದ ಮಗಳ ಕೈ, ಕಾಲು ಮುರಿಯಿರಿ’ ಎಂದು ಕೊರಟಗೆರೆ ತಾಲ್ಲೂಕು ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಪೋಷಕರಿಗೆ ನೀಡಿರುವ ಸಲಹೆ ದಂಗಾಗಿಸುವಂತಿದೆ. ಇದು, ಮಾರ್ಗದರ್ಶಕ ಸ್ಥಾನದಲ್ಲಿರುವ ಸ್ವಾಮೀಜಿ ನೀಡುವಂತಹ ಹೇಳಿಕೆ ಅಲ್ಲ. ಈ ಹೇಳಿಕೆ, ಮಹಿಳೆಯರ ಗೌರವಕ್ಕೆ ಧಕ್ಕೆ ತರುವುದರ ಜೊತೆಗೆ ಸ್ವಾಮೀಜಿಯ ಕೀಳುಮಟ್ಟದ ಹಾಗೂ ನಿಮ್ನ ದರ್ಜೆಯ ಬೌದ್ಧಿಕ ಮಟ್ಟವನ್ನು ತೋರಿಸುತ್ತದೆ. ಮಹಿಳೆ ಯಾರಿಗೂ ಕಮ್ಮಿಯಿಲ್ಲದಂತೆ, ಅನೇಕ ಕ್ಷೇತ್ರಗಳಲ್ಲಿ ಪುರುಷನನ್ನೂ ಮೀರಿ ಬೆಳೆಯುತ್ತಿದ್ದಾಳೆ. ಲಾರಿ ಚಾಲಕ ವೃತ್ತಿಯಿಂದ ಬಾಹ್ಯಾಕಾಶ ಯಾನ ಕೈಗೊಳ್ಳುವವರೆಗೂ ಮುಂದಿದ್ದಾಳೆ. ಹೀಗಿರುವಾಗ, ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಷ್ಟು ವಿವೇಚನೆ ನಮ್ಮ ಹೆಣ್ಣುಮಕ್ಕಳಲ್ಲಿ ಇಲ್ಲವೇ?

ಸ್ವತಂತ್ರ ಚಿಂತನೆ, ಸ್ವತಂತ್ರ ವ್ಯಕ್ತಿತ್ವ, ಸದೃಢ ಭವಿಷ್ಯ ರೂಪಿಸಿಕೊಳ್ಳಲು ಪ್ರೇರೇಪಿಸಬೇಕಾದ ಸ್ವಾಮೀಜಿ, ಹೆಣ್ಣುಮಕ್ಕಳ ಆಯ್ಕೆ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮಾತನಾಡಿರುವುದು ಖಂಡನೀಯ. ಕೈ, ಕಾಲು ಮುರಿದು ಕೂರಿಸಿದಾಗ, ಅಂಗವೈಕಲ್ಯದ ಕಾರಣಕ್ಕೆ ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಎಂದು ಸಂಬಂಧಿಗಳಿಗೆ ಕಾರಣ ಹೇಳಬಹುದು ಎಂದಿರುವ ಸ್ವಾಮೀಜಿ, ಅಂಗವಿಕಲರನ್ನೂ ಅವಮಾನಿಸಿದ್ದಾರೆ. ಇಂಥ ಧೋರಣೆಯು ಆರೋಗ್ಯಪೂರ್ಣ, ಲಿಂಗ ಸಮಾನ ಸಮಾಜ ನಿರ್ಮಾಣಕ್ಕೂ ವಿರುದ್ಧವಾಗಿದೆ. ಸ್ವಾಮೀಜಿ ತಕ್ಷಣ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, ಅಧ್ಯಯನದಲ್ಲಿ ತೊಡಗಿ, ತಮ್ಮ ಮಾನಸಿಕ ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಒಳಿತು.

– ಸುಘೋಷ ಎಸ್. ನಿಗಳೆ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.