ADVERTISEMENT

ಶ್ರಮದ ಕೆಲಸ: ವಿಚಾರವಂತರು ಚಿಂತಿಸಲಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 19:30 IST
Last Updated 5 ಏಪ್ರಿಲ್ 2021, 19:30 IST

‘ಪುರುಷರು– ಸ್ತ್ರೀಯರ ನಡುವೆ ವೇತನ ತಾರತಮ್ಯ ಏಕೆ?’ ಎಂದು ಲೇಖಕಿ ಎಚ್.ಎಸ್.ಅನುಪಮ ಕೇಳಿದ್ದಾರೆ (ಪ್ರ.ವಾ., ಮಾರ್ಚ್ 29). ಖಂಡಿತ ಇಂತಹ ತಾರತಮ್ಯ ಇರಬಾರದು. ನನಗೆ ತಿಳಿದಂತೆ ಶಿಕ್ಷಕ ವೃತ್ತಿಯಲ್ಲಿ, ಎಂಜಿನಿಯರಿಂಗ್‌ನಲ್ಲಿ ಈ ತರಹ ತಾರತಮ್ಯ ಇಲ್ಲ. ಆದರೆ ಅನುಪಮ ಅವರು ‘ಕೂಲಿ ಕೆಲಸದವರಲ್ಲೂ ಅದು ಇರಬಾರದು, ಇದು ಅನ್ಯಾಯ’ ಎಂದಿದ್ದಾರೆ. ಇದು ಏಕೆ ಹೀಗೆ ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬಂದು, ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿರುವ ಒಂದು ಜಾಗಕ್ಕೆ ಹೋಗಿ ನೋಡಿದೆ.

ಅಲ್ಲಿ ಏಳೆಂಟು ಪುರುಷರು ಮತ್ತು ಮೂರ್ನಾಲ್ಕು ಸ್ತ್ರೀಯರು ಕೆಲಸ ಮಾಡುತ್ತಿದ್ದರು. ದಿನಕ್ಕೆ ಪುರುಷರಿಗೆ
₹ 600, ಸ್ತ್ರೀಯರಿಗೆ ₹ 500 ಕೂಲಿ ಎಂದು ತಿಳಿಯಿತು. ಏಕೆ ಈ ತಾರತಮ್ಯ ಎಂದು ಅಲ್ಲೇ ಇದ್ದ ಕಟ್ಟಡ ಕಂಟ್ರಾಕ್ಟರ್‌ ನನ್ನು ಕೇಳಿದ್ದಕ್ಕೆ ಅವರು ‘ನೀವು ಹೇಳಿದಂತೆ ಮಾಡಿದರೆ ನಾವು ಪಾಪರ್ ಆಗ್ತೀವಿ. ನೀವೇ ನೋಡಿ ಅವರ ಕೆಲಸಗಳನ್ನು’ ಎಂದರು. ಸ್ವಲ್ಪ ಹೊತ್ತು ಅಲ್ಲೇ ಕುಳಿತು ಅವರ ಕೆಲಸವನ್ನು ವೀಕ್ಷಿಸಿದೆ. ಅವರು ಕಾಂಕ್ರೀಟ್ ಸಾಗಿಸುತ್ತಿದ್ದರು. ಪುರುಷರು ಎರಡೂವರೆ ಸೆನಕೆ ಬಾಂಡ್ಲಿಯಲ್ಲಿ ಹಾಕಿಸಿಕೊಂಡರೆ, ಸ್ತ್ರೀಯರು ಒಂದೂವರೆ ಸೆನಕೆ ಮಾತ್ರ. ಏಣಿ ಮೇಲೆ ಹತ್ತಿ ಬಾಂಡ್ಲಿ ಅಂದಿಸುವ ಕೆಲಸ ಪುರುಷನಿಗೆ ಮಾತ್ರ. ಆಗ ನನಗೆ ಅನಿಸಿತು, ಇಂತಹ ಶ್ರಮಪೂರಿತ ಕೆಲಸಗಳನ್ನು ಪುರುಷರ ಸಮನಾಗಿ ಸ್ತ್ರೀಯರು ಮಾಡಲಾರರು. ಭಗವಂತನು ಈ ಸೃಷ್ಟಿಯಲ್ಲಿ ಇಂತಹ ತಾರತಮ್ಯ ಏಕೆ ಮಾಡಿಹನೋ ತಿಳಿಯದು.

ಶ್ರಮವಹಿಸಿ ಮಾಡುವ ಕೆಲಸಗಳಿಗೆ ಸ್ತ್ರೀಯರಿಗಿಂತ ಪುರುಷರಿಗೆ ಹೆಚ್ಚು ವೇತನ ಕೊಡುವುದು ಸಹಜವಾಗಿದೆ. ವಿಚಾರವಾದಿಗಳು ಈ ಕುರಿತು ವಿಚಾರ ಮಾಡಬೇಕು.

ADVERTISEMENT

ಜಿ.ಎಚ್.ವೆಂಕಟೇಶ್ ಮೂರ್ತಿ, ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.