ವನ್ಯಜೀವಿ ಸಂಘರ್ಷ: ಪರಿಹಾರ ಮರೀಚಿಕೆ
ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ತಾರಕಕ್ಕೇರಿದೆ. ರೈತರು, ಕೃಷಿ ಕಾರ್ಮಿಕರು ಅಥವಾ ಕಾಡುಪ್ರಾಣಿಗಳ ಬಲಿಯೊಂದಿಗೆ ಈ ಸಂಘರ್ಷ ಕೊನೆಯಾಗುತ್ತಿದೆ. ಇತ್ತೀಚೆಗೆ ಶೃಂಗೇರಿ ತಾಲ್ಲೂಕಿನಲ್ಲಿ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟಿದ್ದಾರೆ. ಇಂತಹ ಅನಾಹುತ ಸಂಭವಿಸಿದ ವೇಳೆ ಅರಣ್ಯ ಇಲಾಖೆಯು ಆನೆ ಸೆರೆಹಿಡಿದು ಸ್ಥಳಾಂತರಿಸುತ್ತದೆ. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಿ ಕಣ್ಣೊರೆಸುವ ತಂತ್ರ ಅನುಸರಿಸುತ್ತದೆ. ಆದರೆ, ಆನೆಗಳ ಉಪಟಳಕ್ಕೆ ನೈಜ ಕಾರಣ ಹುಡುಕಿ ಪರಿಹಾರ ಸೂತ್ರ ರೂಪಿಸಲು ಮುಂದಾಗುವುದಿಲ್ಲ. ಇದರಿಂದ ಕಾಡಂಚಿನಲ್ಲಿ ಕೃಷಿಕರ ಸಂಖ್ಯೆ ಕಡಿಮೆಯಾಗಿದೆ. ವನ್ಯಜೀವಿಗಳ ಸಂಘರ್ಷ ಮುಂದುವರಿದರೆ ಕೃಷಿ ಮಾಡುವವರ ಸಂಖ್ಯೆ ಕ್ಷೀಣಿಸುವುದರಲ್ಲಿ ಅನುಮಾನವಿಲ್ಲ.
⇒ಸಚಿನ್ ಹೊಳೆಹದ್ದು, ಶೃಂಗೇರಿ
ಕೂತು ತಿಂದರೆ ಕುಡಿಕೆ ಹಣವೂ ಸಾಲದು
ಕೆ.ಪಿ. ಕೃಷ್ಣನ್ ನೇತೃತ್ವದ ಸಂಪನ್ಮೂಲ ಕ್ರೋಡೀಕರಣ ಸಮಿತಿಯು ಸಾರ್ವಜನಿಕ ಆಸ್ತಿ ಮಾರಾಟ ಮಾಡಿ ತೆರಿಗೆಯೇತರ ಆದಾಯ ಹೆಚ್ಚಿಸುವ ಕುರಿತಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ಎಲ್ಲವನ್ನೂ ಮಾರಿದ ಮೇಲೆ ಏನು ಉಳಿಯುತ್ತದೆ? ಎಲ್ಲವೂ ಬಂಡವಾಳಶಾಹಿಗಳ ಕೈಗೆ ಹೋದ ಮೇಲೆ ಸರ್ಕಾರದ ಪ್ರತಿನಿಧಿಗಳ ಅವಶ್ಯಕತೆಯಾದರೂ ಇರುತ್ತದೆಯೆ? ನಮ್ಮದು ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಸಂಪನ್ಮೂಲ ಹಂಚಿಕೆಯಾದರಷ್ಟೆ ಶಾಂತಿ. ಕೆಲವರ ಬಳಿಯಷ್ಟೆ ಹಣ ಸಂಚಯವಾದರೆ ಅದು ಸಂಘರ್ಷಕ್ಕೆ ಮೂಲವಾಗುತ್ತದಲ್ಲವೆ?
⇒ಪ್ರಶಾಂತ್ ಕೆ.ಸಿ., ಚಾಮರಾಜನಗರ
ಮೌಲಿಕ ಸಿನಿಮಾ: ಪ್ರೇಕ್ಷಕರ ನಿರಾಸಕ್ತಿ
ಕನ್ನಡದಲ್ಲಿ ಅಲ್ಲೊಂದು ಇಲ್ಲೊಂದು ಸದಭಿರುಚಿಯ ಸಿನಿಮಾ ಬಂದರೂ ಯಾರ ಗಮನಕ್ಕೂ ಬಾರದೆ, ಕಣ್ಮರೆಯಾಗಿ ಹೋಗುವುದು ದುರಂತವೇ ಸರಿ. ಉದಾಹರಣೆಗೆ, ಇತ್ತೀಚೆಗೆ ತೆರೆಕಂಡ ‘ಏಳುಮಲೆ’ ಸಿನಿಮಾ. ಅಪರೂಪದ ವಸ್ತುನಿಷ್ಠ, ಮಾನವೀಯ ನೆಲೆಯಲ್ಲಿ ಎಲ್ಲೂ ಅಶ್ಲೀಲತೆಗೆ ಇಂಬು ಕೊಡದೆ ಎದೆ ಕಂಪಿಸುವಂತೆ ಸೃಜಿಸಲ್ಪಟ್ಟ ಚಿತ್ರ. ಆದರೂ, ಧಾರವಾಡದಂಥ ಜಿಲ್ಲಾ ಕೇಂದ್ರದ ಮಲ್ಟಿಪ್ಲೆಕ್ಸ್ ಪರದೆಯಲ್ಲಿ ದಿನಕ್ಕೊಂದೇ ಪ್ರದರ್ಶನದಂತೆ ನಾಲ್ಕೈದು ದಿನದಲ್ಲೇ ಕಣ್ಮರೆಯಾಯಿತು! ಇಂದಿನ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಬರೀ ಭ್ರಮೆ, ಮೂಢನಂಬಿಕೆ, ಊಹಾತೀತ ಪೌರಾಣಿಕ ಕಟ್ಟು–ಕಥೆಗಳನ್ನೇ ಎದೆಗೊತ್ತಿಕೊಳ್ಳುತ್ತಿದ್ದಾರೆ. ಹೀಗಾಗಿ, ಬೇಸಿಗೆಯ ಮಳೆಯಂತೆ ಬರುವ, ಕೆಲವೇ ಒಳ್ಳೆಯ ಸಿನಿಮಾಗಳು ಹತ್ತರಲ್ಲಿ ಹನ್ನೊಂದಾಗಿ ಕಾಣದಂತಾಗುತ್ತವೆ.
⇒ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ
‘ಜನತಂತ್ರದ ರಕ್ಷಕ’ನ ಅಮಾನವೀಯತೆ
ತಪ್ಪು ಮಾಡದಿದ್ದರೂ ಅಮೆರಿಕದ ಜೈಲಿನಲ್ಲಿ 43 ವರ್ಷ ಕಳೆದ ಭಾರತ ಮೂಲದ ಸುಬ್ರಹ್ಮಣ್ಯ ವೇದಂ ಅವರ ಕಥೆ ಓದಿ ವೇದನೆಯಾಯಿತು. ಪ್ರಜಾಪ್ರಭುತ್ವದ ಪರಿಪಾಲಕ ಎಂದು ಜಗತ್ತಿನ ದೊಡ್ಡಣ್ಣನಂತೆ ಬೀಗುವ ಅಮೆರಿಕ ಅದೆಷ್ಟು ತಾರತಮ್ಯ ಮನಃಸ್ಥಿತಿ ಹೊಂದಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ವೇದಂ ಅವರು, ಕಾನೂನು ಹೋರಾಟ ಮಾಡುತ್ತಲೇ ತುಂಬು ಯೌವನವನ್ನು ಸೆರೆಮನೆಯಲ್ಲಿ ಕಂಬಿಗಳ ಹಿಂದೆ ಕಳೆದಿದ್ದಾರೆ. ಇದು ಅಮೆರಿಕ ಎಸಗಿರುವ ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಲ್ಲವೇ? ವಲಸಿಗರ ಕುರಿತು ಅಮಾನವೀಯವಾಗಿ ವರ್ತಿಸುತ್ತಿರುವ ಅಮೆರಿಕಕ್ಕೆ ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಮೂಗುದಾರ ಹಾಕಬೇಕಿದೆ.
⇒ಬಿ.ಆರ್. ಅಣ್ಣಾಸಾಗರ, ಸೇಡಂ
ರೈತರ ನೆರವಿಗೆ ಸರ್ಕಾರ ಸ್ಪಂದಿಸಲಿ
ಕಬ್ಬು ಬೆಳೆಗಾರರು ಸರ್ಕಾರಕ್ಕೆ ಮತ್ತೆರಡು ದಿನ ಗಡುವು ನೀಡಿರುವ ಸುದ್ದಿ ಓದಿ ಮನಸ್ಸಿಗೆ ನೋವಾಯಿತು. ಬೆಳಗಾವಿಯಲ್ಲಿ ರೈತರು ಹೋರಾಟ ಮಾಡುತ್ತಿರುವುದು ಸರಿಯಷ್ಟೇ. ಆದರೆ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಈವರೆಗಿನ ಎಲ್ಲ ಸರ್ಕಾರಗಳೂ ಹಿಂಜರಿದಿವೆ. ಚುನಾವಣೆಗೆ ಮುಂಚೆ ರೈತರ ಪರವಾಗಿ ನಾವಿದ್ದೇವೆ ಎಂದು ರಾಜಕಾರಣಿಗಳು ಘೋಷಿಸುತ್ತಾರೆ. ಗೆದ್ದ ನಂತರ ನೀಡಿದ್ದ ಭರವಸೆಗಳನ್ನು ಮರೆಯುತ್ತಾರೆ. ಎಲ್ಲರಿಗೂ ಆಹಾರ ಬೇಕು. ಹಾಗೆಯೇ ಆಹಾರ ಪದಾರ್ಥಗಳನ್ನು ಬೆಳೆಯುವ ರೈತನ ಕಾಳಜಿ ಎಲ್ಲರದ್ದಾಗಬೇಕಿದೆ. ಅನ್ನದಾತ ಉಳಿಯದಿದ್ದರೆ ನಮಗೆ ಅನ್ನ ಸಿಗುವುದಾದರೂ ಹೇಗೆ?
⇒ಕುಂದೂರು ಮಂಜಪ್ಪ, ಹೊಳೆ ಸಿರಿಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.