ADVERTISEMENT

ವಾಚಕರ ವಾಣಿ: 1 ಆಗಸ್ಟ್ 2025

ವಾಚಕರ ವಾಣಿ
Published 31 ಜುಲೈ 2025, 23:32 IST
Last Updated 31 ಜುಲೈ 2025, 23:32 IST
   

ಅತಿರೇಕದ ಅಭಿಮಾನ ತರವಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ. ರಮ್ಯಾ ಅವರಂಥ ಸೆಲೆಬ್ರಿಟಿಗೂ ಕೆಟ್ಟದ್ದಾಗಿ ಸಂದೇಶ ಕಳುಹಿಸುತ್ತಾರೆಂದರೆ, ಸಾಮಾನ್ಯ ಹೆಣ್ಣುಮಕ್ಕಳ ಕಥೆ ಏನಾಗಬೇಡ? ತಮ್ಮ ಮೆಚ್ಚಿನ ನಟನ ಮೇಲಿರುವ ಅಭಿಮಾನವನ್ನು ಈ ಬಗೆಯಲ್ಲಿ ವ್ಯಕ್ತಪಡಿಸುವುದು ಸರಿಯಲ್ಲ. ಇಂತಹ ಅತಿರೇಕದ ಅಭಿಮಾನವೇ ಪ್ರಾಣಕ್ಕೆ ಅಪಾಯವಾಗಿ ಪರಿಣಮಿಸುವುದುಂಟು. ಒಬ್ಬರ ಮೇಲಿನ ಅಭಿಮಾನ ಇನ್ನೊಬ್ಬರಿಗೆ ತೊಂದರೆಯಾಗದಂತೆ ಎಚ್ಚರವಹಿಸುವುದು ಅಗತ್ಯ.

– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ರೈಲ್ವೆ ಯೋಜನೆಗಳ ಸುತ್ತಮುತ್ತ

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಕರ್ನಾಟಕದ ರೈಲ್ವೆ ಯೋಜನೆಗಳ ‘ಆಮೆನಡಿಗೆ’ಯ ಬಗ್ಗೆ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ (ಪ್ರ.ವಾ., ಜುಲೈ 31). ‘ಶೂನ್ಯ ಪ್ರಗತಿ’ ದಾಖಲಿಸಿರುವ ನಾಲ್ಕು ಯೋಜನೆಗಳು ಸೇರಿ 8,280 ಎಕರೆ ಭೂಸ್ವಾಧೀನ ಬಾಕಿಯಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಈ ಯೋಜನೆಗಳು ಪೂರ್ಣಗೊಳ್ಳಲು ಇನ್ನೆಷ್ಟು ದಶಕಗಳು ಬೇಕಾಗಬಹುದೊ?

ADVERTISEMENT

ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯ ಸರ್ಕಾರದಿಂದ ರೈಲ್ವೆ ಯೋಜನೆಗೆ ಬೇಕಾದ ಭೂಮಿ ನೀಡಿಕೆ ಹಾಗೂ ಯೋಜನಾ ವೆಚ್ಚದಲ್ಲಿ ಶೇ 50ರಷ್ಟು ಅನುದಾನ ಒದಗಿಸಿ, ಇನ್ನುಳಿದ ಅನುದಾನವನ್ನು ರೈಲ್ವೆ ಸಚಿವಾಲಯದಿಂದ ಭರಿಸಿ ಯೋಜನೆ ಪೂರ್ಣಗೊಳಿಸುವ ಕುರಿತು ಒಪ್ಪಂದ ಮಾಡಿಕೊಂಡರು. ಈ ಒಪ್ಪಂದವೇ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಮುಳುವಾದಂತಾಗಿದೆ.

ರಾಜ್ಯದ ಖಜಾನೆಯಲ್ಲಿರುವ ಹಣ ಭಾಗ್ಯವಂತರಿಗೇ ಸಾಕಾಗುತ್ತಿಲ್ಲ. ಇನ್ನು ರೈಲ್ವೆ ಯೋಜನೆಗಳಿಗೆ ಅನುದಾನ ನೀಡುವುದು ಸಾಧ್ಯವೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಸ್.ಎಂ. ಕೃಷ್ಣ ಅವರು ಮಾಡಿಕೊಂಡಿದ್ದ ಒಪ್ಪಂದವನ್ನು ಹಿಂಪಡೆದು, ರೈಲ್ವೆ ಸಚಿವಾಲಯವೇ ಸಂಪೂರ್ಣ ವೆಚ್ಚ ಭರಿಸಿ ಯೋಜನೆಗಳನ್ನು ಪೂರ್ಣಗೊಳಿಸುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕಿದೆ.

– ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು

‘ಮನೆ ಮನೆಗೆ ಪೊಲೀಸ್’ ಶ್ಲಾಘನೀಯ

ಗೃಹ ಸಚಿವ ಜಿ. ಪರಮೇಶ್ವರ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರ ಸೂಚನೆ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಡಿ ‘ಮನೆ ಮನೆಗೆ ಪೊಲೀಸ್’ ಎಂಬ ವಿನೂತನಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಶ್ಲಾಘನೀಯ. ಉತ್ತಮ ಸಮಾಜ ನಿರ್ಮಾಣದ ಆಶಯಕ್ಕೆ ಈ ಕಾರ್ಯಕ್ರಮ ಪೂರಕವಾಗಿದೆ.

ಪೊಲೀಸ್ ಠಾಣೆ ಹಾಗೂ ಪೊಲೀಸರೆಂದರೆ ಸಾರ್ವಜನಿಕರು ಭಯಪಡುವುದೇ ಹೆಚ್ಚು. ಪೊಲೀಸರೆಂದರೆ ಸದಾಕಾಲವೂ ಜನರ ಹಿತರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಿಂತಿರುವ ರಕ್ಷಣಾ ಪಡೆ ಎಂಬ ಆತ್ಮಸ್ಥೈರ್ಯ ತುಂಬುತ್ತಿರುವುದು ಒಳ್ಳೆಯ ಬೆಳವಣಿಗೆ. ಜನಸಾಮಾನ್ಯರು ಮತ್ತು ಪೊಲೀಸರ ನಡುವಿನ ಬಾಂಧವ್ಯ ಉತ್ತಮವಾಗಿದ್ದರೆ, ಕಾನೂನುಬಾಹಿರಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ.

–ಪವನ್ ಜಯರಾಂ, ಚಾಮರಾಜನಗರ

ಉದ್ಯೋಗ ಸೃಷ್ಟಿ ಮರೀಚಿಕೆ

ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತವು ಅಗ್ರಸ್ಥಾನದಲ್ಲಿದೆ.ಆದರೆ, ಜನಸಂಖ್ಯೆ ಏರಿಕೆಗೆ ಅನುಗುಣವಾಗಿ ಉದ್ಯೋಗ ಸೃಷ್ಟಿಸುವ ಕೆಲಸಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಕೇವಲ ಚುನಾವಣೆ ವೇಳೆ ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಕೋಟಿ ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂಬ ಸುಳ್ಳು ಆಶ್ವಾಸನೆ ನೀಡುವುದಕ್ಕಷ್ಟೇ ಆಳುವ ವರ್ಗ ಸೀಮಿತವಾಗಬಾರದು. ಉದ್ಯೋಗ ಕಸಿಯುವ ಕಾರ್ಯ ಎಲ್ಲ ಕ್ಷೇತ್ರದಲ್ಲೂ ನಡೆಯುತ್ತಿದೆ. ಮಾನವ ಸಂಪನ್ಮೂಲದ ಸದ್ಬಳಕೆಯ ಕೆಲಸವಂತೂ ನಡೆಯುತ್ತಿಲ್ಲ.

–ಸುರೇಶ್ ಎಸ್., ವಡಗಲಪುರ

ಕಸ ವಿಲೇವಾರಿ: ವೈಜ್ಞಾನಿಕ ಕ್ರಮ ರೂಪಿಸಿ

ನಗರ ಪ್ರದೇಶಗಳಲ್ಲಿ ಕಸವನ್ನು ಮೂಲದಲ್ಲೇ ಹಸಿ ಕಸ ಮತ್ತು ಒಣ ಕಸವಾಗಿ ವಿಂಗಡಿಸಿ ನೀಡಬೇಕೆಂದು ನಗರ ಸ್ಥಳೀಯ ಸಂಸ್ಥೆಗಳಿಂದ ಧ್ವನಿವರ್ಧಕದ ಮೂಲಕ ಹೇಳಲಾಗುತ್ತದೆ. ಆದರೆ, ನಾವು ಕಸವನ್ನು ವಿಂಗಡಿಸಿ ವಾಹನಕ್ಕೆ ನೀಡಿದರೂ ಪೌರ ಕಾರ್ಮಿಕರು ಅದನ್ನು ಒಂದೆಡೆ ಸುರಿದುಕೊಳ್ಳುತ್ತಾರೆ. ಕಸ ಸಂಗ್ರಹಕ್ಕೆ ವೈಜ್ಞಾನಿಕ ವಿಧಾನ ರೂಪಿಸಿ, ಶಾಶ್ವತ ಪರಿಹಾರ ರೂಪಿಸಲು ರಾಜ್ಯ ಸರ್ಕಾರ ಮುಂದಾಗಬೇಕಿದೆ. ಹಸಿ ಕಸ ಮತ್ತು ಒಣ ಕಸಕ್ಕೆ ಪ್ರತ್ಯೇಕವಾಗಿ ವಾಹನಗಳನ್ನು ಒದಗಿಸುವುದು ಉತ್ತಮ.

–ಸುನಿಲ್ ಟಿ.ಪಿ., ಮಳವಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.