ಸಾಧಕ ಕ್ರೀಡಾಪಟುಗಳು ಲಂಡನ್ ಒಲಿಂಪಿಕ್ಸ್‌ನಿಂದ ತವರಿಗೆ ಆಗಮಿಸಿದ ಮೇಲೆ ಮಾಧ್ಯಮಗಳು ಪೈಪೋಟಿಗೆ ಬಿದ್ದವರಂತೆ ಅವರ ಬಗ್ಗೆ ವರದಿ ಮಾಡುತ್ತಿವೆ. ಈ ಸಾಧಕರನ್ನು ಹಾಡಿ ಕೊಂಡಾಡುತ್ತಿವೆ. ಅವರ ಪ್ರತಿ ಹೆಜ್ಜೆಗಳನ್ನು ಹಿಂಬಾಲಿಸುತ್ತಿವೆ. ಅವರಲ್ಲಿ ವಿಜಯ್ ಕುಮಾರ್, ಸೈನಾ ನೆಹ್ವಾಲ್, ಸುಶೀಲ್ ಕುಮಾರ್, ಯೋಗೀಶ್ವರ್ ದತ್, ಗಗನ್ ನಾರಂಗ್ ಮತ್ತು ಎಂ.ಸಿ.ಮೇರಿ ಕೋಮ್ ನೆಚ್ಚಿನ ತಾರೆಗಳು ಎನಿಸಿಬಿಟ್ಟಿದ್ದಾರೆ.
ಒಬ್ಬ ಕ್ರೀಡಾಪಟುವಾಗಿ ನಾನು ಕೂಡ ಈ ಕ್ರೀಡಾ ಮೇಳವನ್ನು ತುಂಬಾ ಕುತೂಹಲದಿಂದ ಗಮನಿಸಿದೆ. ಅದು ಯಾವುದೇ ಕ್ರೀಡೆ ಇರಲಿ, ನಮ್ಮ ದೇಶದ ಕ್ರೀಡಾಪಟುಗಳು ಗೆದ್ದಾಗ ತುಂಬಾ ಖುಷಿಯಾಗುತ್ತದೆ. ಹಾಗೇ, ಈ ಪ್ರತಿಭಾವಂತ ಕ್ರೀಡಾಪಟುಗಳ ಮನದಲ್ಲೇನಿದೆ? ಅವರ ಅನುಭವ ಹೇಗಿತ್ತು? ಎಂಬುದನ್ನು ತಿಳಿದುಕೊಳ್ಳುವ ಸಹಜ ಕುತೂಹಲ ಎಲ್ಲರಿಗೂ ಇರುತ್ತದೆ.
ಟ್ಯುನಿಷಿಯ ಹಾಗೂ ಪೋಲೆಂಡ್ ಸ್ಪರ್ಧಿಗಳ ವಿರುದ್ಧದ ಪೈಪೋಟಿ ವೇಳೆ ಬಾಕ್ಸರ್ ಮೇರಿಗೆ ತುಂಬಾ ಬೆಂಬಲ ಸಿಕ್ಕಿತಂತೆ. `ಮೇರಿ ಕೋಮ್, ಮೇರಿ ಕೋಮ್~ ಹಾಗೂ `ಇಂಡಿಯಾ, ಇಂಡಿಯಾ~ ಎಂದು ಕ್ರೀಡಾ ಗ್ರಾಮದ ಎಕ್ಸೆಲ್ ಅರೆನಾದಲ್ಲಿ ಸೇರಿದ್ದ ಅಭಿಮಾನಿಗಳು ಕೂಗಿದ್ದು ಅವರಿಗೆ ಮತ್ತಷ್ಟು ಸ್ಫೂರ್ತಿ ನೀಡಿತಂತೆ.
ಇಂತಹ ಸಂಗತಿಗಳು ನಮ್ಮೆಲ್ಲರ ಕ್ರೀಡಾ ಜೀವನದಲ್ಲಿ ಹಲವು ಬಾರಿ ಮಹತ್ವದ ಪಾತ್ರ ನಿಭಾಯಿಸಿರುತ್ತವೆ. ಆದರೆ ಗ್ರೇಟ್ ಬ್ರಿಟನ್‌ನ ನಿಕೋಲಾ ಆ್ಯಡಮ್ಸ ವಿರುದ್ಧ ಹೋರಾಡುವಾಗ ಪರಿಸ್ಥಿತಿ ಎಷ್ಟೊಂದು ಭಿನ್ನವಾಗಿತ್ತು ಎಂಬುದರ ಬಗ್ಗೆಯೂ ಮೇರಿ ಮಾತನಾಡಿದ್ದಾರೆ. ಏಕೆಂದರೆ ಸೆಮಿಫೈನಲ್ ಬೌಟ್ ವೇಳೆ ಅರೆನಾದ ಎಲ್ಲಾ ಕುರ್ಚಿಗಳನ್ನು ಆಕ್ರಮಿಸಿಕೊಂಡಿದ್ದವರು ಸ್ಥಳೀಯ ಅಭಿಮಾನಿಗಳು. ಅವರೆಲ್ಲರ ಬೆಂಬಲವಿದ್ದದ್ದು ಸ್ಥಳೀಯ ಬಾಕ್ಸರ್ ಆ್ಯಡಮ್ಸಗೆ.
ಇಂತಹ ದೊಡ್ಡ ಪೈಪೋಟಿ ವೇಳೆ ಪ್ರೇಕ್ಷಕರ ಬೆಂಬಲ ಎಷ್ಟು ಮುಖ್ಯ ಎಂಬುದು ಒಬ್ಬ ಕ್ರೀಡಾಪಟುವಾಗಿ ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ರಿಂಗ್‌ನೊಳಗೆ ನಿಕೋಲಾ ಇಡುತ್ತಿದ್ದ ಪ್ರತಿ ಹೆಜ್ಜೆಗೆ ಪ್ರೇಕ್ಷಕರಿಂದ ಅದ್ಭುತ ಬೆಂಬಲ ಸಿಗುತಿತ್ತು. ಮೇರಿಗೆ ಪಂಚ್ ಮಾಡಿದಾಗಲೆಲ್ಲಾ ಅದು ಮತ್ತಷ್ಟು ಹೆಚ್ಚಾಗುತ್ತಿತ್ತು.
ಇದೆಲ್ಲಾ ಗೊತ್ತಿದ್ದ ಮೇರಿ ಅದಕ್ಕೆ ಸೂಕ್ತವಾಗಿ ಸಿದ್ಧತೆ ನಡೆಸಿದ್ದರು ಎಂಬುದು ನನ್ನ ಭಾವನೆ. ಆದರೆ ಸ್ಥಳೀಯ ಬಾಕ್ಸರ್ ನಿಕೋಲಾಗೆ ಪಂಚ್ ಮಾಡಿದಾಗಲೆಲ್ಲಾ ಪ್ರೇಕ್ಷಕರು ಮೇರಿ ಅವರನ್ನು ಅಣಕಿಸುತ್ತಿದ್ದರು. ಈ ಪೈಪೋಟಿಯಲ್ಲಿ ಮೇರಿ ಸೋಲು ಕಂಡರು.
ಪ್ರೇಕ್ಷಕರ ಬೆಂಬಲ ಎಷ್ಟು ಮುಖ್ಯ ಎಂಬುದನ್ನು ಒಬ್ಬ ಕ್ರೀಡಾಪಟುವಾಗಿ ನಾನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ. ಅಭಿಮಾನಿಗಳ ಬೆಂಬಲ ಮತ್ತಷ್ಟು ಸ್ಫೂರ್ತಿ ತುಂಬಬಲ್ಲದು. ಎದುರಾಳಿಯ ಏಟಿಗೆ ದಿಟ್ಟ ತಿರುಗೇಟು ನೀಡಲು ಪ್ರೇರಣೆ ಆಗಬಲ್ಲದು. ಬಾಕ್ಸಿಂಗ್‌ನಲ್ಲಿ ಇದರ ಅಗತ್ಯ ತುಂಬಾ ಇದೆ.
ಏಕೆಂದರೆ ಬಾಕ್ಸಿಂಗ್ ಕೇವಲ ದೈಹಿಕ ಹೋರಾಟ ಮಾತ್ರವಲ್ಲ; ಮನಸ್ಸಿನ ಹೋರಾಟ ಕೂಡ. ಪ್ರೇಕ್ಷಕರ ಬೆಂಬಲ ಆ ಮನಸ್ಸನ್ನು ಪ್ರೇರೇಪಿಸುತ್ತದೆ. ಆ್ಯಡಮ್ಸ ವಿರುದ್ಧದ ಹೋರಾಟದ ವೇಳೆ ಮೇರಿಗೆ ಆ ರೀತಿಯ ಬೆಂಬಲ ಸಿಕ್ಕಿದ್ದರೆ ಫಲಿತಾಂಶವೇ ಬೇರೆ ಆಗಿರುತ್ತಿತ್ತು.
2010ರ ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದ್ದಕ್ಕೆ ಸ್ಥಳೀಯ ಪ್ರೇಕ್ಷಕರು ನೀಡಿದ್ದ ಭಾರಿ ಬೆಂಬಲ ಕೂಡ ಒಂದು ಕಾರಣ. ಆಗ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಕ್ರೀಡಾಪಟುಗಳನ್ನು ಹುರಿದುಂಬಿಸುತ್ತಿದ್ದರು.
ಆದರೆ ಟೆನ್ವಿಕ್ ಸಂಸ್ಥೆಯು ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಶೇಕಡಾ 86ಕ್ಕೂ ಹೆಚ್ಚು ಭಾರತದ ಕ್ರೀಡಾಪಟುಗಳು ಪ್ರೇಕ್ಷಕರ ಬೆಂಬಲ ಇರಲೇಬೇಕು ಹಾಗೂ ರಾಷ್ಟ್ರಗೀತೆ ನುಡಿಸುತ್ತಿರಬೇಕು ಎಂದಿರುವುದನ್ನು ನಾನು ಪೂರ್ಣವಾಗಿ ಒಪ್ಪಲಾರೆ.ಬೇರೆ ದೇಶಗಳಲ್ಲಿ `ಜನ ಗಣ ಮನ~ ನುಡಿಸಿದಾಗ ನಮ್ಮೆಲ್ಲರ ಮನಸ್ಸು ಖಂಡಿತ ಹೆಚ್ಚು ಉಲ್ಲಸಿತವಾಗುತ್ತದೆ.
ತ್ರಿವರ್ಣ ಧ್ವಜದ ಹಾರಾಟ ನಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಅದಕ್ಕಿಂತ ಹೆಚ್ಚಾಗಿ ಸತತ ಅಭ್ಯಾಸ, ಕಠಿಣ ಪ್ರಯತ್ನ, ಉತ್ತಮ ತಂತ್ರ ಹಾಗೂ ಸಿದ್ಧತೆ ನಡೆಸುವುದು ಒಬ್ಬ ಕ್ರೀಡಾಪಟುವಿನ ಯಶಸ್ಸಿನ ಗುಟ್ಟುಗಳು. ಹಾಗೇ, ಕ್ರೀಡಾಪಟುಗಳ ಗೆಲುವಿಗೆ ಹಾಗೂ ಅವರ ಸಾಧನೆಗೆ ಭಾವನಾತ್ಮಕ ಮತ್ತು ಮಾನಸಿಕ ಬೆಂಬಲವೂ ಅಷ್ಟೇ ಮುಖ್ಯ. ಆದರೆ ಯಾವುದೇ ರೀತಿಯಲ್ಲಿ ಸಿಗುವ ಬೆಂಬಲಕ್ಕೆ ಸದಾ ಸ್ವಾಗತ.
ಇಂತಹ ಆಸಕ್ತಿಕರ ವಿಷಯವೊಂದನ್ನು ಸೈನಾ ನೆಹ್ವಾಲ್ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಗೆದ್ದಾಗ ಮಾಧ್ಯಮಗಳಿಂದ ಸಿಗುವ ಗೌರವ, ಮನ್ನಣೆ, ಹೊಗಳಿಕೆ, ಪ್ರಚಾರ, ಮೆಚ್ಚುಗೆಯ ಮಾತುಗಳು ಒಬ್ಬ ಕ್ರೀಡಾಪಟುವನ್ನು ಎಷ್ಟೊಂದು ಸಂತೋಷದಲ್ಲಿ ಮುಳುಗಿಸಬಲ್ಲದು ಎಂಬುದರ ಬಗ್ಗೆ ಅವರು ಮಾತನಾಡಿದ್ದಾರೆ.
ಆದರೆ ಅದು ಕೆಲವೊಮ್ಮೆ ತದ್ವಿರುದ್ಧವಾಗಿದ್ದೂ ಇದೆ. ಕೆಲ ಟೂರ್ನಿಗಳಲ್ಲಿ ಗೆದ್ದಾಗ ಅದು ಸುದ್ದಿಯೇ ಆಗುವುದಿಲ್ಲ. ಅದು ತುಂಬಾ ನೋವುಂಟು ಮಾಡುತ್ತದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಆದರೆ ಕ್ರಿಕೆಟಿಗರಿಗೆ ಇಂತಹ ಸಂದರ್ಭ ಬರುವುದು ತೀರಾ ಕಡಿಮೆ. ಏಕೆಂದರೆ ಕ್ರಿಕೆಟ್ ಆಟಗಾರರಿಗೆ ಹೆಚ್ಚು ಪ್ರಚಾರವಿರುತ್ತದೆ, ಅಷ್ಟೇ ಟೀಕೆಯೂ ಎದುರಾಗುತ್ತದೆ.
ಇದಕ್ಕೆ ಉರ್ದುವಿನಲ್ಲಿ `ನುಖ್ತಾಚೀನಿ~ (ತಪ್ಪನ್ನು ಹುಡುಕುವುದು) ಎನ್ನುತ್ತಾರೆ. ಈ ಎರಡೂ ಸಮಯದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಯಾವುದೇ ಕ್ರೀಡೆಗೆ ಹಾಗೂ ಕ್ರೀಡಾಪಟುವಿನ ಜೀವನಕ್ಕೆ ಒಳ್ಳೆಯದಲ್ಲ.
ಕ್ರೀಡಾಪಟುಗಳಿಗೆ ಅಗತ್ಯವಿರುವುದು ಸಕಾರಾತ್ಮಕ ಟೀಕೆಗಳು ಹಾಗೂ ತಮ್ಮ ಬೆಳವಣಿಗೆಗೆ ಪೂರಕವಾಗುವ ಅಂಶಗಳು. ಅದು ಮಾಧ್ಯಮಗಳಿಂದ ಇರಬಹುದು ಅಥವಾ ಅಭಿಮಾನಿಗಳಿಂದ ಆಗಿರಬಹುದು. ಭಾರತೀಯ ಕ್ರೀಡಾಭಿಮಾನಿಗಳ ಅಪಾರ ಪ್ರೀತಿ ಹಾಗೂ ಅವರ ತೆಗಳಿಕೆ ಕ್ರೀಡಾಪಟುಗಳಿಗೆ ಕೆಲವೊಮ್ಮ ಮಾರಕವಾಗಿ ಪರಿಣಮಿಸುತ್ತದೆ.
ಅವರ ಆತ್ಮಸ್ಥೈರ್ಯವನ್ನೇ ಕಿತ್ತುಕೊಂಡು ಬಿಡುತ್ತದೆ. ಕ್ರೀಡೆ ಎಂದರೆ ಗೆಲ್ಲುವುದು, ಚಿನ್ನ, ಬೆಳ್ಳಿ, ಕಂಚಿನ ಪದಕದ ಸಾಧನೆ ಮಾಡುವುದು ಅಷ್ಟೇ ಅಲ್ಲ. ಶುದ್ಧವಾಗಿ, ಪ್ರೀತಿಯಿಂದ, ನಿಷ್ಪಕ್ಷಪಾತವಾಗಿ ಆಡುವುದು ಕ್ರೀಡೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ 81 ಮಂದಿ ಕ್ರೀಡಾಪಟುಗಳಲ್ಲಿ ಹೆಚ್ಚಿನವರು ಬರಿಗೈಲಿ ವಾಪಸಾಗಿದ್ದಾರೆ.
ಜನರ ಮನಸ್ಸು ಹಾಗೂ ಕಣ್ಣುಗಳಿಂದ ಮರೆಯಾಗಬಹುದು ಮತ್ತು ಅವಮಾನದ ಬೆಂಕಿಯೊಳಗೆ ಸಿಲುಕಬಹುದು ಎಂಬ ಆತಂಕ ಅವರಲ್ಲಿದೆ. ಇದಕ್ಕಾಗಿ ಅವರು ದೇಶವನ್ನು ಪ್ರತಿನಿಧಿಸಬೇಕಿತ್ತಾ? ವಿಶ್ವದ ಪ್ರಮುಖರೊಂದಿಗೆ ಸ್ಪರ್ಧಿಸುವ ಪ್ರತಿಭೆ ಹೊಂದಿರುವ ಅವರು ಇಂತಹ ಸಮಸ್ಯೆಗೆ ಸಿಲುಕಬೇಕಿತ್ತಾ?
ಆದರೆ ಈಗ ಈ ಕ್ರೀಡಾಪಟುಗಳಿಗೆ ಸಿಗುವ ಬೆಂಬಲ, ಅಭಿಮಾನ ಅವರ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರಬಲ್ಲದು. ಸಾಂತ್ವನ ನೀಡುವ ಮಾತುಗಳು ಅವರ ಮನಸ್ಸನ್ನು ಅರಳಿಸಬಲ್ಲದು. ಇದು ಅವರ ಮನಸ್ಸಿನಲ್ಲಿನ ತುಮುಲವನ್ನು ಹೊಡೆದೋಡಿಸಬಲ್ಲದು.
ಮುಂದಿನ ಒಲಿಂಪಿಕ್ಸ್‌ಗೆ ಉತ್ತಮ ಮನಸ್ಥಿತಿಯಲ್ಲಿ ಸಿದ್ಧರಾಗಲು ನೆರವಾಗಬಲ್ಲದು. ಗುರಿಯೆಡೆಗೆ ಮನಸ್ಸನ್ನು ಕೇಂದ್ರೀಕರಿಸಲು ಸಹಾಯವಾಗಬಲ್ಲದು. ಮುಂದೆ ಗೆದ್ದು ಬರಲು ತಾಕತ್ತು ತುಂಬಬಲ್ಲದು.
ಹಾಗಾಗಿ ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳ ಎದುರು ಸ್ಪರ್ಧಿಸಿ ಬಂದಿರುವ ಭಾರತದ 81 ಅಥ್ಲೀಟ್‌ಗಳಿಗೆ ಎಲ್ಲರೂ ಚಿಯರ್ ಹೇಳಬೇಕು. ಹಳೆಯದನ್ನು ಮರೆತು ಹೊಸ ದಿಕ್ಕಿನತ್ತ ಯೋಚಿಸಬೇಕು.
ಅಭಿಮಾನಿಗಳ ಬೆಂಬಲ, ಅವರ ಪ್ರೀತಿಯ ಚಿಯರ್, ಚಾಂಪಿಯನ್‌ಗಳನ್ನು ನಿರ್ಮಿಸಬಲ್ಲದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.