ADVERTISEMENT

ಗ್ರೇಟ್ ಕಾಮಿಡಿ ಷೋ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ವಿಶ್ವ ನಗುವಿನ ದಿನ ಒಂದೇ ದಿನಕ್ಕೆ ಸೀಮಿತ. ಆದರೆ ನಮ್ಮ ರಾಜ್ಯದಲ್ಲಿ ಚುನಾವಣೆ ಮುಗಿಯುವವರೆಗೂ ನಗು ಅನವರತ. `ನಗಿರಿ.. ನಗಿಸಿರಿ...' ಎಂದರೋ ಮಹಾನುಭಾವರು. `ನಗ್ರೀ ಸ್ವಲ್ಪ. ಗುಮ್ಮನ ಹಾಗೆ ಕೂತಿರಬೇಡಿ ಸ್ವಾಮಿ..' ಎನ್ನುತ್ತಾರೆ ಮಾಸ್ಟರ್ ಹಿರಣ್ಣಯ್ಯ.

ಆದರೆ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಅವರ ನಾಟಕಗಳಿಗಿಂತ ಈ ರಾಜಕೀಯ ಪ್ರಹಸನಗಳು ಭರ್ಜರಿ ನಗು ಉಕ್ಕಿಸುತ್ತಿವೆ. ಚುನಾವಣೆ ಮುಗಿಯುವ ತನಕ ಮಾತ್ರ ಈ ನಗು ಸಾಂಕ್ರಾಮಿಕ. ಅಭ್ಯರ್ಥಿಗಳ ಮೊಗದಲ್ಲಿ ಮತ ಯಾಚಿಸುವಾಗ ಹುಸಿನಗು, ಪೊಳ್ಳು ಭರವಸೆ ನೀಡುವಾಗ ಕಳ್ಳನಗು, ಮತದಾರರ ಕೆದಕಾಟಕ್ಕೂ ಮುಚ್ಚಿಟ್ಟುಕೊಳ್ಳುವ ಗಹಗಹಿಸುವ ನಗು.. ಈ ತರಹೇವಾರಿ ನಗುವಿನ ಆಯಸ್ಸು ಸೋತ ಅಭ್ಯರ್ಥಿಯಲ್ಲಿ ಅಲ್ಪಾವಧಿ, ಗೆದ್ದ ಅಭ್ಯರ್ಥಿಯಲ್ಲಿ ಮುಂದಿನ ಚುನಾವಣೆ ಬರುವತನಕ.

ಈ ನಗು ಸದ್ಯಕ್ಕಂತೂ ನಮ್ಮ ನರಸಮ್ಮನ ಮೊಗದ್ಲ್ಲಲಿ ಕಿವಿಯಿಂದ ಕಿವಿಯತನಕ ಕುಣಿಯುತ್ತಿದೆ. `ಬಾಸ್ ಬಿಗ್' ಷೋನಲ್ಲಿ ಜಿಗಿಜಿಗಿ ಪೋಸ್ ಕೊಟ್ಟು ಕಿರುತೆರೆಯೂ ಹಿಗ್ಗಿ ಹೀರೆಕಾಯಿಯಾಗಿ ಹಿರಿ ತೆರೆಯಾಗುವ ಆಸೆ ಹುಟ್ಟಿಸಿದ ನರಸಮ್ಮ `ಮನೆ'ಯಿಂದ ಅವಸರಪಟ್ಟು ಈಚೆ ಬಂದದ್ಯಾಕೆ? ಮ್ಯಾಚ್ ಫಿಕ್ಸಿಂಗಾ? ಹಾಗೆ ಬರಲು ಹೊರಗಿರುವ `ಚುಂಬಕ' ಶಕ್ತಿಯಾದರೂ ಯಾವುದು ಎಂಬುದು ಶಾನೆ ತಲೆ ತಿನ್ನುತ್ತಿತ್ತು.

ಸಣ್ಣ ಫ್ರೇಮ್‌ನಲ್ಲಿ ಆಯಮ್ಮ ಕಂಡಾಗಲೆಲ್ಲಾ 52 ಇಂಚಿನ ಎಲ್‌ಸಿಡಿ ಮಾರುಕಟ್ಟೆಗೆ ಬಂದಿದೆ, ತೆಗೆದುಕೊಳ್ಳಬೇಕೆಂಬ ಖಯಾಲಿ ಮೂಡುತ್ತಿದ್ದುದಂತೂ ಹೌದು. ಖಯಾಲಿ ಪಕ್ಕಾ ಪ್ಲ್ಯಾನ್ ಆಗಿ ಬದಲಾಗುವಷ್ಟರಲ್ಲೇ ನರಸಮ್ಮ ರಿಯಾಲಿಟಿಯಿಂದ ಹೊರಬಿದ್ದು ನೇರವಾಗಿ ಧುಮುಕಿದ್ದು ರಿಯಲ್ ಆಟದ ಅಖಾಡಾಗೇ. ಆಡಿಯನ್ಸ್ ಪೋಲ್‌ನಲ್ಲಿ ಎಡವಟ್ಟಿಲ್ಲದಿದ್ದರೂ ಪೋಲಿಂಗ್ ಬೂತ್ ಆಕರ್ಷಣೆಯಿಂದ ಈ ಜಿಗಿತ ಎಂದು ತಜ್ಞರ ತಲೆಗಳಲ್ಲಿ ಮರ್ಕ್ಯುರಿ ಟ್ಯೂಬ್ ಈಗ ಝಗ್ ಎಂದು ಹೊತ್ತಿಕೊಂಡಿದೆ.

`ಮನೆ'ಯೊಳಗೆ ನೂರು ದಿನ ಇದ್ದಿದ್ದರೆ ಜುಜುಬಿ 50 ಲಕ್ಷ. ಹೊರಗಿದ್ದರೆ ಅದಕ್ಕೆ ಸಂಕಲನವೋ, ಗುಣಾಕಾರವೋ ಸೇರಿಕೊಳ್ಳುವ ಭಾಗ್ಯ. ಹೀಗಾಗಿ ಈ ನಗು ಒಂದು ಷೋ ಬಿಟ್ಟಿದ್ದಕ್ಕೋ, ಇನ್ನೊಂದು ಷೋಗೆ ಸೇರ್ಪಡೆಯಾಗಿದ್ದಕ್ಕೋ? ಬಲೆ ಕನ್‌ಫ್ಯೂಸು!

ಆದರೆ ಅಖಾಡದಲ್ಲಿ ಸೆಣಸಾಟಕ್ಕೆ ಅಂದಕಾಲತ್ತಿನ ಕಿಸ್ಸರ್ ಎಕ್ಸ್‌ಪರ್ಟ್‌ನನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೋ? ಬಾಕಿ ಚುಕ್ತಾ ಮಾಡುವ ಚಾಲಾಕು ನರಸಮ್ಮನ ಮನಸಿನೊಳಗಿದ್ದರೆ, ಅಖಾಡದಲ್ಲಿನ ಮಣ್ಣಿಗೆ ಹೋಳಿಯ ರಂಗು ಬೆರೆತುಕೊಂಡ ಮಜಾ ಮತದಾರರಿಗೆ.

ಈಗಾಗಲೇ ಓಕುಳಿಯಾಟಕ್ಕೆ ದಿನ ನಿಗದಿಪಡಿಸುವ ಲೆಕ್ಕಾಚಾರ ಮತದಾರರಲ್ಲಿದ್ದರೆ, ಅಖಾಡದಲ್ಲಿ ಮುಖಾಮುಖಿಯಾಗಿ ಬಿದ್ದುಬಿಟ್ಟರೆ ಹಲ್ಲು ತಾಗಿ ಹರಿಯದಂತೆ ಮುಖ ಮರೆಸುವ ಬ್ರ್ಯಾಂಡ್ ನ್ಯೂ ಟವಲ್‌ಗಾಗಿ ತಡಕಾಡುವ ಸಂಕಟ ಪಾಪ ಎಕ್ಸ್‌ಪರ್ಟಿಗೆ. ಏನೇ ಆದರೂ ನರಸಮ್ಮನನ್ನು ಸೆಳೆದುಕೊಂಡ ಪಕ್ಷದ `ತೂಕ'ವಂತೂ ಜಾಸ್ತಿ ಆಗಿದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.