ADVERTISEMENT

ದೇಹ ಅಗಲಿತು ನೆನಪು ಉಳಿಯಿತು

ನೂರೊಂದು ನೆನಪು

ಎಸ್‌.ವಿ ರಾಜೇಂದ್ರ ಸಿಂಗ್ ಬಾಬು
Published 12 ಸೆಪ್ಟೆಂಬರ್ 2015, 19:30 IST
Last Updated 12 ಸೆಪ್ಟೆಂಬರ್ 2015, 19:30 IST

ರೇಖಾ ಬಿಟ್ಟ ಹುಳು ತಲೆಯನ್ನು ಕೊರೆಯುತ್ತಿತ್ತು. ವಿಷ್ಣುವಿಗೆ ಆ ವಿಷಯ ಹೇಳೋಣ ಎಂದು ಅವನಿಗೆ ಫೋನ್‌ ಮಾಡಿದೆ. ಮನೆಗೆ ಕರೆದ. ಎರಡು ಭಾಷೆಗಳಲ್ಲಿ ಸಿನಿಮಾ ಮಾಡುವುದು ಹಣಕಾಸಿನ ದೃಷ್ಟಿಯಲ್ಲಿ ನನಗೆ ಸಮಸ್ಯೆಯೇನೂ ಆಗಿರಲಿಲ್ಲ. ಯಾಕೆಂದರೆ ದೊಡ್ಡ ಫೈನಾನ್ಶಿಯರ್‌ ಅಶೋಕ್‌ ಹಿಂದೂಜಾ ನನಗೆ ಆರ್ಥಿಕ ನೆರವು ನೀಡಲು ಸಿದ್ಧರಿದ್ದರು. ಆದರೆ, ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ಸಿನಿಮಾ ಮಾಡಲು ಬೇಡುವ ಶ್ರಮ ದೊಡ್ಡದು. ಅದು ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆ ಗಂಭೀರವಾಗಿತ್ತು.

ಫೋನ್‌ನಲ್ಲಿ ವಿಷ್ಣುವಿನ ಜೊತೆ ಮಾತನಾಡಿದಾಗ ಅವನು ಪ್ರೀತಿಯಿಂದ ತರಾಟೆಗೆ ತೆಗೆದುಕೊಂಡ. ‘ಯಾವಾಗಲೂ ದೊಡ್ಡ ಬಜೆಟ್‌ನ ಸಿನಿಮಾಗೆ ಕೈಹಾಕುತ್ತೀಯ. ಬಂಧನ ತರಹದ ಸಣ್ಣ ಸಿನಿಮಾ ಮಾಡೋದಲ್ಲವೇ?’ ಎಂದೆಲ್ಲಾ ಹೇಳಿದ. ರೇಖಾಗೆ ರೀಡಿಂಗ್‌ ಕೊಟ್ಟು ಬಂದಿದ್ದಕ್ಕೆ ತಮಾಷೆ ಮಾಡಿದ. ‘ನಾಯಕಿಯರಿಗೆ ಮೊದಲು ಕಥೆ ಹೇಳಿ, ಆಮೇಲೆ ನಾಯಕರ ಬಳಿಗೆ ಬರುತ್ತೀರಿ ನೀವು ಕಿಲಾಡಿ ನಿರ್ದೇಶಕರು’ ಎಂದ. ಮೈಸೂರಿನಲ್ಲಿ ಭೇಟಿಯಾಗುವಂತೆ ನನ್ನನ್ನು ಕರೆದ. ಜನವರಿ ಒಂದರಂದು ಬರುವಂತೆ ಹೇಳಿದ. ನಾನು ಆ ದಿನ ರಾಕ್‌ಲೈನ್‌ ವೆಂಕಟೇಶ್‌ ಜೊತೆ ಧರ್ಮಸ್ಥಳಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುವುದು ರೂಢಿ. ಮೂರನೇ ತಾರೀಕು ಬಂದು ರೀಡಿಂಗ್‌ ಕೊಡುವುದಾಗಿ ಹೇಳಿದೆ. ಅವನು ತನ್ನ ಹೆಸರಿನಲ್ಲೂ ಪ್ರಾರ್ಥನೆ ಸಲ್ಲಿಸಿ ಬರುವಂತೆ ಹೇಳಿದ.

ಅವನ ಪಾತ್ರಕ್ಕೆ ಅಗತ್ಯ ಸಂಶೋಧನೆಯನ್ನು ನಾನು ನಿರಂತರವಾಗಿ ನಡೆಸಿದ್ದೆ. ಮಹಾರಾಜಾ ಕಾಲೇಜಿನಲ್ಲಿ ಪುಟ್ಟ ಮಾದಪ್ಪ ಎಂಬ ಇಂಗ್ಲಿಷ್‌ ಪ್ರೊಫೆಸರ್‌ ಇದ್ದರು. ಅವರು ಶೇಕ್ಸ್‌ಪಿಯರ್‌ನನ್ನು ಕೆಳಗೆ ಇಳಿಸುವಷ್ಟು ಪ್ರಖರವಾಗಿ ಪಾಠ ಮಾಡುತ್ತಿದ್ದ ನೆನಪು ಮನಸ್ಸಿನಲ್ಲಿ ಇತ್ತು. ಅವರ ಠಾಕುಠೀಕು ವೇಷಭೂಷಣ ಮನದಲ್ಲಿ ಮೂಡಿತು. ಚುಟ್ಟಾ ಸೇದುವುದು, ಅಚ್ಚುಕಟ್ಟಾಗಿ ಬಟ್ಟೆ ಹಾಕಿಕೊಳ್ಳುವುದು, ಮಾತನಾಡುವ ಶೈಲಿ ಇವೆಲ್ಲಾ ಹೇಗಿರಬೇಕು ಎಂದು ಮನಸ್ಸು ಸಂಶೋಧನೆ ನಡೆಸುತ್ತಲೇ ಇತ್ತು.

ಅಷ್ಟರಲ್ಲಿ ವಿಷ್ಣುವಿನ ಆರೋಗ್ಯದಲ್ಲಿ ಏರುಪೇರಾಗಿ ಕೊನೆಯುಸಿರೆಳೆದಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿತು. ಮೊನ್ನೆ ಅಂಬರೀಷ್‌ ವಿಷಯದಲ್ಲಿ ಪುಕಾರು ಎದ್ದಂತೆಯೇ ಆಗಲೂ ಆಗಿತ್ತು. ನನ್ನ ಮನಸ್ಸು ತಡೆಯಲಿಲ್ಲ. ವಿಷ್ಣುವಿಗೆ ಫೋನ್‌ ಮಾಡಿದೆ. ಕಿಂಗ್ಸ್‌ ಕೋರ್ಟ್ ಹೋಟೆಲ್‌ನಿಂದ ಅವನು ಮಾತನಾಡಿದ. ತನ್ನ ಆರೋಗ್ಯ ಚೆನ್ನಾಗಿಯೇ ಇದೆ ಎಂದು ಅವನು ಖಾತರಿಪಡಿಸಿದ ಮೇಲೆ ಸಮಾಧಾನವಾಯಿತು.

ಒಮ್ಮೆ ಅವನನ್ನು ನೋಡಿಕೊಂಡು ಬರೋಣ ಎನಿಸಿತು. 2009, ಡಿಸೆಂಬರ್‌ 27ನೇ ತಾರೀಕು ಶತಾಬ್ದಿ ರೈಲಿನಲ್ಲಿ ಹೋಗೋಣ ಎಂದುಕೊಂಡು ಟಿಕೆಟ್‌ ಬುಕ್‌ ಮಾಡಿಸಿದೆ. ವಿಷ್ಣುವಿಗೆ ಫೋನ್‌ ಮಾಡಿದೆ. ಭಾರತಿ ಎತ್ತಿಕೊಂಡರು. ವಿಷ್ಣು ಆರಾಮವಾಗಿದ್ದಾರೆ, ಎರಡು ದಿನ ಬಿಟ್ಟು ಬಂದರೂ ಚಿಂತೆ ಇಲ್ಲ ಎಂದರು. ಅವರ ಮಾತು ಕೇಳಿದ ಮೇಲೆ ನಾನು ಟಿಕೆಟ್‌ ಕ್ಯಾನ್ಸಲ್‌ ಮಾಡಿಸಿದೆ.

ಡಿಸೆಂಬರ್‌ 29ರ ರಾತ್ರಿ ಯಾವುದೋ ಸಿನಿಮಾ ನೋಡಿ ತಡವಾಗಿ ಮಲಗಿದ್ದೆ. ಮರುದಿನ ಬೆಳಿಗ್ಗೆ ಎದ್ದಾಗ ನನ್ನ ಹೆಂಡತಿ ‘ಟೀವಿ ನೋಡಿದಿರಾ?’ ಎಂದಳು. ಬೆಳಿಗ್ಗೆ ಟೀವಿ ನೋಡುವ ಅಭ್ಯಾಸವಿಲ್ಲದ ನಾನು ಅದನ್ನು ಹಾಕಿದರೆ, ವಿಷ್ಣು ಸಾವಿನ ಸುದ್ದಿ ಬರುತ್ತಿತ್ತು. ಅರ್ಧ ಗಂಟೆ ನನಗೆ ಕೈಕಾಲು ಆಡಲಿಲ್ಲ. 27ನೇ ತಾರೀಕು ಒಮ್ಮೆ ಹೋಗಿ ಅವನನ್ನು ಮಾತನಾಡಿಸಿಕೊಂಡು ಬಂದಿದ್ದರೆ ಚೆನ್ನಾಗಿತ್ತು ಎಂದು ಪದೇ ಪದೇ ಅನ್ನಿಸಿತು. ಅವನ ಮನೆಗೆ ಹೊರಡೋಣ ಎಂದುಕೊಂಡರೆ ಮೈಸೂರಿನಿಂದ ಪಾರ್ಥಿವ ಶರೀರವನ್ನು ಬಸವನಗುಡಿ ಮೈದಾನಕ್ಕೆ ತರುತ್ತಾರೆ ಎಂಬ ಸುದ್ದಿ ಬಂತು.

ನನಗೆ ಆಪ್ತರಾಗಿರುವ ಅನೇಕರಿಗೆ ಫೋನ್‌ ಮಾಡಿ ವಿಷಯ ತಿಳಿಸಿದೆ. ಸುಹಾಸಿನಿಗೆ ಫೋನ್‌ ಮಾಡಿದೆ. ಅವಳಿಗೂ ಶಾಕ್‌ ಆಯಿತು. ತಾನು ಬರುವುದು ಹೇಗೆ ಎಂದು ವಿಚಾರಿಸಿದಳು. ಅದಕ್ಕೂ ನಾನೇ ವ್ಯವಸ್ಥೆ ಮಾಡಿದೆ.

ಅಲ್ಲಿ ತುಂಬ ಜನರಿರುತ್ತಾರೆ ಎನ್ನುವುದು ನಮಗೆ ಗೊತ್ತಿತ್ತು. ಆದ್ದರಿಂದಲೇ ನಿರ್ಮಾಪಕ ಶೈಲೇಂದ್ರ ಬಾಬು ಹಾಗೂ ಕೆಲವು ಸ್ನೇಹಿತರು ಒಂದೇ ಕಾರಿನಲ್ಲಿ ಹೋದೆವು. ಅಲ್ಲಿ ಇಳಿಯುತ್ತಿದ್ದಂತೆ ನೀರವ ಮೌನ ನನ್ನನ್ನು ಕಾಡಿತು. ವಿಷ್ಣು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಅದಾಗಲೇ ಅಲ್ಲಿ ಜಮಾಯಿಸಿದ್ದರು.

ನಾನು ದೊಡ್ಡ ಹಾರ ತೆಗೆದುಕೊಂಡು ಹೋಗಿದ್ದೆ. ಏರ್‌ ಕೂಲರ್‌ ಬಾಕ್ಸ್‌ನಲ್ಲಿ ಇಟ್ಟಿದ್ದ ವಿಷ್ಣುವಿನ ಪಾರ್ಥಿವ ಶರೀರ ನೋಡಿ ದುಃಖ ತಡೆಯಲು ಆಗಲಿಲ್ಲ. ‘ನಿಮ್ಮ ಫ್ರೆಂಡ್‌ ನೋಡಿ ಸಾರ್‌’ ಎಂದು ಅಲ್ಲಿದ್ದ ಕೆಲವರು ಹೇಳಿದಾಗ ಸಂಕಟ ಹೆಚ್ಚಾಯಿತು. ಬದುಕು ಎಷ್ಟು ಕ್ಷಣಿಕ ಎನಿಸಿತು. ಹಾರವನ್ನು ಬಾಕ್ಸ್‌ ಮೇಲೆ ಇಟ್ಟೆ. ತುಂಬಾ ಚೆಂದದ ಒಂದು ಗುಲಾಬಿಯನ್ನು ತೆಗೆದುಕೊಂಡು ಹೋಗಿದ್ದೆ. ಅವನಿಗೆ ಗುಲಾಬಿ ತುಂಬ ಇಷ್ಟವಿತ್ತು. ಬಂಧನ ಸಿನಿಮಾಗೂ, ಗುಲಾಬಿಗೂ ಒಂದು ನಂಟಿದೆ. ಅವನು ಗುಲಾಬಿ ಹಿಡಿದು ಸುಹಾಸಿನಿಗೆ ಪ್ರಪೋಸ್‌ ಮಾಡುವ ಬಗೆಯನ್ನು ಅಭ್ಯಾಸಿಸುವ ಸನ್ನಿವೇಶ ಅನೇಕ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ವಿಷ್ಣುವಿನ ಶರೀರಕ್ಕೆ ಹಾಲೆರೆದಾಗ ಅದರ ಜೊತೆಗೇ ಆ ಗುಲಾಬಿಯನ್ನು ಇಟ್ಟುಬಂದೆ.

ಟೀವಿ ವಾಹಿನಿಯವರು ನನ್ನ ಹಿಂದೆ ಬಿದ್ದಿದ್ದರು. ಕೆಲವು ವಾಹಿನಿಗಳಿಂದ ತಪ್ಪಿಸಿಕೊಂಡೆನಾದರೂ ಒಂದು ವಾಹಿನಿಯವರು ನನ್ನನ್ನು ಬಿಡಲಿಲ್ಲ. ಅಲ್ಲಿಗೆ ಹೋಗಿ ಕೆಲವು ನೆನಪುಗಳನ್ನು ಹಂಚಿಕೊಳ್ಳುವಷ್ಟರಲ್ಲಿ ಅಂಬರೀಷ್‌ ಫೋನ್‌ ಬಂದಿತ್ತು.

ವಿಷ್ಣುವಿನ ಶರೀರದ ಅಂತಿಮ ಸಂಸ್ಕಾರ ಕಂಠೀರವ ಸ್ಟುಡಿಯೊದಲ್ಲಿ ಆಗಬೇಕು ಎಂದು ಕೆಲವು ಅಭಿಮಾನಿಗಳು ಒತ್ತಾಯಿಸಿದರೆ, ಇನ್ನು ಕೆಲವರು ಲಾಲ್‌ಬಾಗ್‌ನ ಜಾಗ ಸೂಕ್ತ ಎಂದು ಹೇಳುತ್ತಿದ್ದರು. ಅಂಬರೀಷ್‌ ಆ ದಿನದ ಒತ್ತಡವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ. ಬಾಲಕೃಷ್ಣ ಅವರ ಅಭಿಮಾನ್‌ ಸ್ಟುಡಿಯೊದಲ್ಲಿ ಅಂತಿಮ ಸಂಸ್ಕಾರ ಎಂದು ನಿಗದಿಯಾಯಿತು. ಸಂಜೆ 5 ಗಂಟೆಯ ಹೊತ್ತಿಗೆ ಅಲ್ಲಿಗೆ ಬರುವುದಾಗಿ ನಾನು ಅಂಬರೀಷನಿಗೆ ಹೇಳಿದೆ.

ಮತ್ತೆ ಚಾನೆಲ್‌ನವರು ನನ್ನನ್ನು ಕರೆದುಕೊಂಡು ಹೋದರು. ಅವರಿಂದ ತಪ್ಪಿಸಿಕೊಳ್ಳಲು ಆಗಲೇ ಇಲ್ಲ. ಸಂಜೆ 4.30ರವರೆಗೆ ನೆನಪುಗಳನ್ನು ಹಂಚಿಕೊಳ್ಳುತ್ತಾ ಹೋದಂತೆ ದುಃಖ ಇನ್ನಷ್ಟು ಹೆಚ್ಚಾಯಿತು.

ಉತ್ತರಹಳ್ಳಿ ಬಳಿಯ ಬಾಲಣ್ಣನವರ ಸ್ಟುಡಿಯೊ ಇದ್ದ ಜಾಗ ತಲುಪಲು ಹೊರಟಾಗ ಎಲ್ಲಿ ನೋಡಿದರೂ ವಿಷ್ಣು ಅಭಿಮಾನಿಗಳು. ವಿಷ್ಣುವಿನ ಫೋಟೊ, ಕಟೌಟ್‌ಗಳಿಗೆ ಲೆಕ್ಕವಿಲ್ಲ. ಹಾಗೆ ಇರಿಸಿದ ಫೋಟೊಗಳ ಮುಂದೆ ಒಂದೊಂದು ದೀಪ. ರಾಜ್ಯದ ಮೂಲೆಮೂಲೆಗಳಲ್ಲಿ ಅವನ ಅಭಿಮಾನಿಗಳು ಕಂಬನಿ ಮಿಡಿದಿದ್ದರು.

ಕಾರಿನಿಂದ ಇಳಿದು, ಸುಮಾರು ಅರ್ಧ ಕಿ.ಮೀ. ನಡೆದುಕೊಂಡೇ ಹೋದೆ. ಅಷ್ಟು ಹೊತ್ತಿಗೆ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಆಗಿತ್ತು. ಒಂದು ಕಡೆ ಸೂರ್ಯ ಮುಳುಗುತ್ತಿದ್ದ. ಇನ್ನೊಂದು ಕಡೆ ಚಿತೆ ಉರಿಯುತ್ತಿತ್ತು. ಚಿತೆ ಉರಿದು, ದೇಹ ಬೂದಿಯಾಗಬಹುದು. ಆದರೆ, ವಿಷ್ಣು ನಟನಾಗಿ ಉಳಿಸಿದ ನೆನಪುಗಳಿಗೆ ಅಂತ್ಯವೇ ಇಲ್ಲ ಎನಿಸಿತು. 45–50 ವರ್ಷಗಳ ನಮ್ಮ ನಂಟಿನ ಹಲವು ನೆನಪುಗಳು ಮರುಕಳಿಸಿದವು. ಕಿವಿಮೇಲೆ ‘ಈ ಭೂಮಿ ಬಣ್ಣದ ಬುಗುರಿ’, ‘ನೂರೊಂದು ನೆನಪು’ ಹಾಡುಗಳು ಬೀಳುತ್ತಲೇ ಇದ್ದವು. ‘ನನಗೆ ಒಂದು ಒಳ್ಳೆಯ ಹಾಡನ್ನು ನೀವು ಕೊಡುವುದಿಲ್ಲ’ ಎಂದು ವಿಷ್ಣು ನನ್ನನ್ನು ಹಾಗೂ ಹಂಸಲೇಖ ಅವರನ್ನು ಕೆಣಕಿದ ಪರಿಣಾಮವೇ ‘ಈ ಭೂಮಿ ಬಣ್ಣದ ಬುಗುರಿ’. ಆ ದಿನದ ಆ ಹಾಡಿನ ಅನುರಣನವೇ ವಿಷ್ಣುವಿನ ಬಯಕೆ ಈಡೇರಿತ್ತು ಎನ್ನುವುದಕ್ಕೆ ಸಾಕ್ಷಿಯಂತೆ ಇತ್ತು.

‘3ನೇ ತಾರೀಕು ನೀನು ಕಥೆ ಹೇಳಿದ ಮೇಲೆ ಪಾರ್ಟಿ ಮಾಡೋಣ’ ಎಂದು ಅವನು ಹೇಳಿದ ಕೊನೆಯ ಮಾತು ಕಾಡುತ್ತಲೇ ಇತ್ತು. 
ಆ ದಿನ ಅಂಬರೀಷನ ಜೊತೆ ನಾನು ಊಟ ಮಾಡಿ, ಹಲವು ನೆನಪುಗಳನ್ನು ಮೆಲುಕುಹಾಕಿದೆವು. ವಿಷ್ಣುವಿನ ಅಂತ್ಯಸಂಸ್ಕಾರದ ದೊಡ್ಡ ಜವಾಬ್ದಾರಿ ಹೊತ್ತು ನಿರ್ವಹಿಸಿದ ಅಂಬರೀಷ್‌, ಅವತ್ತು ತುಂಬ ದಣಿದಿದ್ದ. ಸಂಜೆಯವರೆಗೆ ಅವನಿಗೆ ಕಣ್ಣೀರು ತಡೆಯಲು ಆಗಿರಲಿಲ್ಲ. ರಾತ್ರಿ ಎರಡೂವರೆ ಗಂಟೆಯ ಸುಮಾರಿಗೆ ನಾನು ಮಲಗಲೆಂದು ಮನೆಗೆ ಹೋದಾಗ ಮತ್ತೆ ಮತ್ತೆ ವಿಷ್ಣುವಿನ ನೆನಪುಗಳು ಕಾಡಿದವು. ದುಃಖ ಒತ್ತರಿಸಿಕೊಂಡು ಬಂದಿತು.

ಮರುದಿನ ಧರ್ಮಸ್ಥಳಕ್ಕೆ ಹೊರಟು, ವಿಷ್ಣುವಿನ ಹೆಸರಿನಲ್ಲಿ ಪೂಜೆ ಮಾಡಿಸಿ ಭಾರತಿ ಅವರಿಗೆ ಪ್ರಸಾದ ಕೊಡಬೇಕು ಎಂದು ನಿರ್ಧರಿಸಿದೆ. ನಾನು, ರಾಕ್‌ಲೈನ್‌ ವೆಂಕಟೇಶ್‌ ಪ್ರತಿವರ್ಷದಂತೆ ಆ ದಿನವೂ ಹೊರಟರೂ ಹಾದಿಯುದ್ದಕ್ಕೂ ವಿಷ್ಣುವಿನದ್ದೇ ನೆನಪು. ವಿಷ್ಣುವಿನ ಹೆಸರಿನಲ್ಲಿ ಶತ ರುದ್ರಾಭಿಷೇಕ ಮಾಡಿಸಿದೆ.

ಬರುವಾಗ ರಾಕ್‌ಲೈನ್‌ ಅವರಿಗೆ ‘ಗುರು ಮಹೇಶ್ವರ’ ಸಿನಿಮಾದ ಕಥೆ ಹೇಳಿದೆ.  ಅದನ್ನು ಕೇಳಿ ಅವರು ಥ್ರಿಲ್‌ ಆದರು. ಖುದ್ದು ತಾನೇ ನಿರ್ಮಿಸಬಹುದಾಗಿತ್ತು ಎಂದೂ ಹೇಳಿದರು.

ಈಗ ನನ್ನ ಬಳಿ ‘ಗುರು ಮಹೇಶ್ವರ’ ಸ್ಕ್ರಿಪ್ಟ್‌ ಕೂಡ ಉಳಿದಿಲ್ಲ. ಎರಡು ಮೂರು ಸಿನಿಮಾಗಳಲ್ಲಿ ಆರ್ಥಿಕವಾಗಿ ಹೊಡೆತ ತಿಂದೆ. ಬ್ಯಾಂಕ್‌ನಲ್ಲಿ ಸಾಲ ಮಾಡಿ, ಮನೆಯ ಪತ್ರಗಳನ್ನು ಅಡವಿಟ್ಟಿದ್ದೆ. ಒಂದು ದಿನ ದಿಢೀರನೆ ಬ್ಯಾಂಕ್‌ನವರು ಮನೆಯನ್ನು ಹರಾಜು ಹಾಕಿದರು. ಅದರಲ್ಲಿದ್ದ ಸಾವಿರಾರು ಪುಸ್ತಕಗಳು, ಸೀಡಿಗಳು ಚೆಲ್ಲಾಪಿಲ್ಲಿಯಾದವು. ಆ ಸಂದರ್ಭದಲ್ಲಿ ಕಾಣೆಯಾದ ಕೆಲವು ಸ್ಕ್ರಿಪ್ಟ್‌ಗಳಲ್ಲಿ ‘ಗುರು ಮಹೇಶ್ವರ’ ಕೂಡ ಒಂದು. ನಾಲ್ಕೈದು ವರ್ಷಗಳ ಶ್ರಮ ಒಂದೇ ದಿನದಲ್ಲಿ ನುಚ್ಚುನೂರಾಗಿಬಿಟ್ಟಿತು. ಆ ಸಿನಿಮಾಗೆ ನಾನು ಪಟ್ಟಿದ್ದ ಶ್ರಮ, ಆ ಸ್ಕ್ರಿಪ್ಟ್‌ನಲ್ಲಿ ಇದ್ದ ಸಂಗತಿಗಳು ನನ್ನ ತಲೆಯಲ್ಲಿ ಇವೆ. ಆ ಸಿನಿಮಾ ತೆಗೆಯುವುದು ಸಾಧ್ಯ ಆಗಿದ್ದಿದ್ದರೆ ಎಂಬ ಪ್ರಶ್ನೆ ಮಾತ್ರ ಈಗಲೂ ಉಳಿದಿದೆ. ವಿಧಿಯೇ ಹಾಗೆ.

ವಿಷ್ಣು ಈಗ ಹಲವು ನಗರಗಳಲ್ಲಿ ಪ್ರತಿಮೆಯಾಗಿದ್ದಾನೆ. ಅವನ ಸಿನಿಮಾಗಳ ನೆನಪುಗಳನ್ನು ಉಸಿರಾಡುವ ಅನೇಕರು ನಮ್ಮ ನಡುವೆ ಇದ್ದಾರೆ. ನಾನು ಕೆಲವು ಊರುಗಳಿಗೆ ಹೋದಾಗ ಜನ ಅವನ ಜೊತೆಗಿನ ನನ್ನ ನೆನಪುಗಳನ್ನೇ ಕೆದಕುತ್ತಾರೆ. ಒಬ್ಬ ವ್ಯಕ್ತಿ ಸದಾ ಜೀವಂತವಾಗಿರುವುದು ಎಂದರೆ ಇದೇ ಅಲ್ಲವೇ ಎನಿಸುತ್ತದೆ.

ಈ ಅಂಕಣದಲ್ಲಿ ನನ್ನ–ವಿಷ್ಣು ನೆನಪಿನ ಒಂದಿಷ್ಟು ಕಂತುಗಳನ್ನು ಕಟ್ಟಿಕೊಟ್ಟಿದ್ದೇನೆ. ಅಮೆರಿಕ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಇರುವ ಕನ್ನಡಿಗರೂ ಸೇರಿದಂತೆ ಹಲವಾರು ಜನ ಬರಹಗಳಿಗೆ ಪ್ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ‘ನೂರೊಂದು ನೆನಪು’ ಅರ್ಥಪೂರ್ಣ ಎನಿಸಿದ್ದು ಅಂಥವರ ಪ್ರತಿಕ್ರಿಯೆಗಳಿಂದಲೇ.

ಇಷ್ಟಕ್ಕೂ ವಿಷ್ಣು ಅನೇಕರ ಮನಸ್ಸಿನಲ್ಲಿ ಬದುಕಿರುವಂತೆ ನನ್ನ ಮನಸ್ಸಿನಲ್ಲಿಯೂ ಜೀವಂತವಾಗಿಯೇ ಇದ್ದಾನೆ. ಅವನ ಜೊತೆ ಬದುಕಿನ ಮಹತ್ವದ ಕ್ಷಣಗಳಲ್ಲಿ ಭಾಗಿಯಾಗುವ ಅವಕಾಶ ನನ್ನದಾದದ್ದು ಅದೃಷ್ಟ ಎಂದೇ ಭಾವಿಸಿದ್ದೇನೆ.

* ಈ ಅಂಕಣ ಇಂದಿಗೆ ಮುಗಿಯಿತು.....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT