ADVERTISEMENT

ಬಡ ನೌಕರರ ಶ್ರೀಮಂತ ಕಂಪೆನಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2012, 19:30 IST
Last Updated 30 ಜೂನ್ 2012, 19:30 IST
ಬಡ ನೌಕರರ ಶ್ರೀಮಂತ ಕಂಪೆನಿ
ಬಡ ನೌಕರರ ಶ್ರೀಮಂತ ಕಂಪೆನಿ   

ಅಮೆರಿಕದ ನ್ಯೂಹ್ಯಾಂಪ್‌ಶೈರ್‌ನ ಸಲೇಂನಲ್ಲಿದೆ ಅತ್ಯಾಧುನಿಕ ಮೊಬೈಲ್, ಐಪಾಡ್, ಟ್ಯಾಬ್ ಮತ್ತಿತರ ಸಾಧನಗಳಿಗೆ ಹೆಸರಾದ `ಆ್ಯಪಲ್~ ಕಂಪೆನಿಯ ಮಾರಾಟ ಮಳಿಗೆ.

ಇಲ್ಲಿ ಜೋರ್ಡನ್ ಗ್ಯಾಲ್ಸನ್ ಮಾರಾಟ ಪ್ರತಿನಿಧಿಯಾಗಿದ್ದಾರೆ. ಕಳೆದ ವರ್ಷ ಮೂರೇ ತಿಂಗಳಲ್ಲಿ ಅವರು 7.5 ಲಕ್ಷ ಡಾಲರ್‌ನ (ಸುಮಾರು 4.17 ಕೋಟಿ ರೂಪಾಯಿಗೆ ಸಮ) ಸಾಧನಗಳನ್ನು ಮಾರಾಟ ಮಾಡಿದ್ದರು. `ನಾನಾಗ ಪ್ರತೀ ತಾಸಿಗೆ 11.25 ಡಾಲರ್ (ಸುಮಾರು 625 ರೂಪಾಯಿ) ಗಳಿಸಿದ್ದೆ. ನನಗೇ ಅದೊಂದು ಅಚ್ಚರಿ. ನಾನು ಆ್ಯಪಲ್‌ನ ಅಭಿಮಾನಿ, ಅದರ ಉತ್ಪನ್ನಗಳಿಗೆ ಭಾರೀ ಪ್ರಮಾಣದಲ್ಲಿ ಬೇಡಿಕೆ ಇತ್ತು~ ಎನ್ನುವಾಗ ಗ್ಯಾಲ್ಸನ್ ಮುಖದಲ್ಲೇನೋ ಹೊಳಪಿತ್ತು.

ಆದರೆ ಮರುಕ್ಷಣವೇ ಅದರ ಹಿಂದೆ ನೋವಿನ ಛಾಯೆಯೂ ಎದ್ದು ಕಂಡಿತ್ತು. ಏಕೆಂದರೆ `ಕಂಪೆನಿಯ ಗಳಿಕೆಗೂ ಮತ್ತು ಅದು ನಮಗೆ ಕೊಡುವ ವೇತನಕ್ಕೂ ಹೋಲಿಸಿ ನೋಡಿದರೆ ನಿರಾಶೆಯೇ ಜಾಸ್ತಿ~ ಎಂಬ ಅವರ ಮಾತಿನ ಮರ್ಮ ತಿಳಿಯಲು ಭಾರೀ ಕಸರತ್ತೇನೂ ಬೇಕಿಲ್ಲ.

ಸ್ಮಾರ್ಟ್‌ಫೋನ್‌ಗಳೆಂದರೆ ಅಮೆರಿಕನ್ನರಿಗೆ ಎಲ್ಲಿಲ್ಲದ ವ್ಯಾಮೋಹ. ಅದು `ಬೆಸ್ಟ್ ಬೈ, ವೆರಿಝೋನ್ ವೈರ್‌ಲೆಸ್~ ಮುಂತಾದ ಸಂಸ್ಥೆಗಳಲ್ಲಿ ಸಹಸ್ರಾರು ಹೊಸ ಉದ್ಯೋಗ ಸೃಷ್ಟಿಸಿದೆ. ಮೊಬೈಲ್ ಸಾಧನಗಳ ಮಾರುಕಟ್ಟೆ ಮೂಲಕ ಅರ್ಥ ವ್ಯವಸ್ಥೆಗೆ ಲಕ್ಷಾಂತರ ಕೋಟಿ ಡಾಲರ್ ಬಂಡವಾಳ ಹರಿದುಬರಲು ಕಾರಣವಾಗಿದೆ. ಇದರಲ್ಲಿ ಸರಣಿ ಮಳಿಗೆಗಳು, ಬಳಕೆದಾರ ಸ್ನೇಹಿ ಹೊಸ ಹೊಸ ಉತ್ಪನ್ನಗಳನ್ನು ಹೊರ ತರುತ್ತಲೇ ಇರುವ `ಆ್ಯಪಲ್~ ಅದ್ವಿತೀಯ ನಾಯಕ ಎಂದೇ ಹೇಳಬಹುದು.

ಕಳೆದ ವರ್ಷ ವಿಶ್ವದ ವಿವಿಧೆಡೆ ಆ್ಯಪಲ್‌ನ 327 ಮಳಿಗೆಗಳು ಮಾಡಿದ ಭರ್ಜರಿ ವ್ಯಾಪಾರಕ್ಕೆ ಸಾಟಿಯೇ ಇಲ್ಲ. ಅದರ ನಂತರದ ಸ್ಥಾನದಲ್ಲಿ ಫ್ಯಾಷನ್ ಉಡುಗೆ, ಆಭರಣಗಳಿಗೆ ಹೆಸರಾದ `ಟಿಫಾನೀಸ್~ ಇದೆ. ಟಿಫಾನೀಸ್ ಹೋದ ವರ್ಷ ವಿಶ್ವಾದ್ಯಂತ 1600 ಕೋಟಿ ಡಾಲರ್ (ಸುಮಾರು 89 ಸಾವಿರ ಕೋಟಿ ರೂ) ಮೊತ್ತದ ಸಿದ್ಧ ಉಡುಪುಗಳ ಮಾರಾಟ ಮಾಡಿದೆ.

ಆ್ಯಪಲ್ ಮಳಿಗೆಗಳಲ್ಲಿ ಸಿಕ್ಕಾಪಟ್ಟೆ ವ್ಯಾಪಾರ ಇದ್ದರೂ ನೌಕರರಿಗೆ ಸಿಗುತ್ತಿರುವುದು ಮಾತ್ರ ಅಷ್ಟಕ್ಕಷ್ಟೇ. ಅಮೆರಿಕದ ಕ್ಯಾಲಿಫೋರ್ನಿಯದ ಕ್ಯುಪೆರ್ಟಿನೊದಲ್ಲಿ ಮುಖ್ಯ ಕಚೇರಿ ಇರುವ ಆ್ಯಪಲ್‌ನ ಬಹುಪಾಲು ಸಿಬ್ಬಂದಿ ಕೈತುಂಬ ಸಂಬಳ ಎಣಿಸುವ ಎಂಜಿನಿಯರ್‌ಗಳಾಗಲಿ, ಎಕ್ಸಿಕ್ಯೂಟಿವ್‌ಗಳಾಗಲೀ ಅಲ್ಲ; ಐಫೋನ್, ಮ್ಯಾಕ್ ಫೋನ್‌ಗಳನ್ನು ಮಾರಿ ಗಂಟೆಗೆ ಇಷ್ಟು ಎಂದು ಸಣ್ಣ ಮೊತ್ತ ಪಡೆಯುವ ದಿನಗೂಲಿಗಳು.

ಅಮೆರಿಕದಲ್ಲಿ ಆ್ಯಪಲ್‌ನ 43 ಸಾವಿರ ನೌಕರರ ಪೈಕಿ 30 ಸಾವಿರ ಮಂದಿ ಆ್ಯಪಲ್ ಸ್ಟೋರ್ಸ್‌ಗಳಲ್ಲಿ ಕೆಲಸ ಮಾಡುವವರು. ಅವರಿಗೆ ಸಿಗುವ ಸಂಬಳ ವರ್ಷಕ್ಕೆ ಕೇವಲ ಸರಾಸರಿ 25 ಸಾವಿರ ಡಾಲರ್. ಆದರೆ ಆ್ಯಪಲ್ ಮಾತ್ರ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ, ಭಾರೀ ವೇತನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು (ಸಿಇಒ) ಹೊಂದಿದ ಕಂಪೆನಿ. ಏಕೆಂದರೆ ಅದರ ಸಿಇಒ ಟಿಮ್ ಕುಕ್‌ಗೆ ಹೋದ ವರ್ಷ ಸಂಬಳವಲ್ಲದೆ ಷೇರು ರೂಪದಲ್ಲಿ ಸಿಕ್ಕ ಪ್ರೋತ್ಸಾಹಧನ 57 ಕೋಟಿ ಡಾಲರ್ (ಸುಮಾರು 3170 ಕೋಟಿ ರೂಪಾಯಿ).

ಅಮೆರಿಕದ ಬಹುತೇಕ ಕಂಪೆನಿಗಳೇಕೆ ಉತ್ಪಾದನಾ ಘಟಕವನ್ನು ಹೊರ ದೇಶಗಳಲ್ಲಿ ಸ್ಥಾಪಿಸುತ್ತಿವೆ ಎಂಬ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಏಕೆಂದರೆ ಬ್ಯೂರೊ ಆಫ್ ಲೇಬರ್ ಸ್ಟಾಟಿಸ್ಟಿಕ್ಸ್ ಪ್ರಕಾರ ಅಮೆರಿಕದ ಒಟ್ಟೂ ಉದ್ಯೋಗಿಗಳಲ್ಲಿ ಶೇ 8ರಷ್ಟು ಮಾತ್ರ ಉತ್ಪಾದನಾ ಕ್ಷೇತ್ರದಲ್ಲಿದ್ದಾರೆ. ಏನಾದರೂ ಉದ್ಯೋಗ ಸೃಷ್ಟಿಯಾಗುತ್ತಿದ್ದರೆ ಅದು ಸೇವಾ ವಲಯದಲ್ಲಿ ಮಾತ್ರ.

ಸೇವಾ ವಲಯಕ್ಕೆ ಸಂಬಂಧಿಸಿದಂತೆ ಕಂಪೆನಿಗಳ ಧೋರಣೆಯೂ ಬದಲಾಗುತ್ತಿದೆ. ಹೊಸಬರನ್ನು ತೆಗೆದುಕೊಂಡು ಅವರಿಗೆ ಒಂದಿಷ್ಟು ತರಬೇತಿ ಕೊಡುತ್ತವೆ, ಈ ನೌಕರರು ಬೇಗ ಕೆಲಸ ಬಿಡಲಿ ಎಂದು ಅಪೇಕ್ಷಿಸುತ್ತವೆ. ಏಕೆಂದರೆ ಕಡಿಮೆ ಪಗಾರಕ್ಕೆ ಕೆಲಸ ಮಾಡಲು ಮುಂದೆ ಬರುತ್ತಿರುವ ಕಾಲೇಜು ವಿದ್ಯಾರ್ಥಿಗಳೇ ಈಗ ಬೇಕಾದಷ್ಟು ಸಿಗುವಾಗ ಹೆಚ್ಚಿಗೆ ಸಂಬಳದ ನೌಕರರು ಯಾರಿಗೆ ಬೇಕು? ಎಂದು ವ್ಯಾಖ್ಯಾನಿಸುತ್ತಾರೆ ನಾರ್ತ್ ಕರೋಲಿನಾ ವಿವಿ ಸಮಾಜಶಾಸ್ತ್ರ ಪ್ರಾಧ್ಯಾಪಕ ಆರ್ನ್ ಕೆಲ್‌ಬರ್ಗ್.

ಅಮೆರಿಕದ ರಿಟೇಲ್ ಕ್ಷೇತ್ರದಲ್ಲಿ ನಿಗದಿ ಮಾಡಿದ ಕನಿಷ್ಠ ಕೂಲಿ ಗಂಟೆಗೆ 7.25 ಡಾಲರ್. ಹಾಗೆ ನೋಡಿದರೆ ಆ್ಯಪಲ್ ಇದಕ್ಕಿಂತ ಹೆಚ್ಚು ಅಂದರೆ ತಾಸಿಗೆ 12 ಡಾಲರ್ ಕೊಡುತ್ತದೆ. ಜತೆಗೆ ಆರೋಗ್ಯ ವಿಮೆ, ಕಂಪೆನಿ ಷೇರು ಮತ್ತು ರಿಯಾಯ್ತಿ ದರದಲ್ಲಿ ಆ್ಯಪಲ್ ಸಾಧನಗಳನ್ನು ಕೊಳ್ಳುವ ಅವಕಾಶವೂ ಇದೆ. ಆದರೆ ಕಳೆದ ವರ್ಷ ಅದರ ಪ್ರತಿಯೊಬ್ಬ ಮಾರಾಟ ಸಹಾಯಕ ಮಾಡಿದ ಸರಾಸರಿ ವಹಿವಾಟು ಮೊತ್ತಕ್ಕೆ (4.73 ಲಕ್ಷ ಡಾಲರ್) ಹೋಲಿಸಿದರೆ ಇದೆಲ್ಲ ತೀರಾ  ಕಮ್ಮಿ.

ನಾಲ್ಕು ತಿಂಗಳ ಹಿಂದೆ ನ್ಯೂಯಾರ್ಕ್ ಟೈಂಸ್ ಪತ್ರಿಕೆ ಆ್ಯಪಲ್ ನೌಕರರ ಕಡಿಮೆ ವೇತನದ ಬಗ್ಗೆ ವರದಿ ಪ್ರಕಟಿಸಲು ಶುರು ಮಾಡಿದ ನಂತರ ಕಂಪೆನಿ ಎಚ್ಚೆತ್ತುಕೊಂಡಿದೆ. ಅನೇಕ ನೌಕರರಿಗೆ `ನಿಮ್ಮ ವೇತನ ಹೆಚ್ಚಲಿದೆ~ ಎಂದು ತಿಳಿಸಿದೆ. ಆದರೆ ಎಷ್ಟು, ಯಾವಾಗ, ಯಾರಿಗೆ ಎಂಬುದನ್ನು ಬಹಿರಂಗಮಾಡಿಲ್ಲ.

ಇದನ್ನು ಬಿಟ್ಟರೆ ಗ್ರಾಹಕ ಸೇವೆ ವಿಷಯದಲ್ಲಿ ಅದು ಅಗ್ರಗಣಿ. ಗ್ರಾಹಕರ ಅನುಕೂಲಕ್ಕಾಗಿ ಕ್ರೆಡಿಟ್ ಕಾರ್ಡ್ ಪಾವತಿ ಕಿಯಾಸ್ಕ್‌ಗಳು, ವಿವಿಧ ಸಾಧನಗಳ ಕಾರ್ಯ ವೈಖರಿ ತಿಳಿಯಲು `ಎಕ್ಸ್‌ಪೀರಿಯನ್ಸ್ ಝೋನ್~ಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ನಿಷ್ಠಾವಂತ ಗ್ರಾಹಕ ವರ್ಗ, ಕೆಲಸದ ಸಂಸ್ಕೃತಿ ಬೆಳೆಸಿಕೊಂಡ ನೌಕರ ವರ್ಗ ಅದರ ದೊಡ್ಡ ಆಸ್ತಿ. ಹೀಗಾಗಿಯೇ ರಿಟೇಲ್ ಮಾರಾಟದಲ್ಲಿ ಅದರದ್ದೇ ಆದ ವಿಶೇಷತೆಗಳಿವೆ. ಕಮೀಷನ್ ಇಲ್ಲದಿದ್ದರೂ ಗಂಟೆ ಲೆಕ್ಕದಲ್ಲಿ ಕೊಡುವ ವೇತನ ಸ್ವಲ್ಪ ಹೆಚ್ಚು. ಮಾರಾಟ ಮಳಿಗೆಯಲ್ಲಿ ಹೆಚ್ಚಿನವರು ಕಾಲೇಜು ಪದವೀಧರರು.

`ನೀವು ಅಲ್ಲಿ ಕೆಲಸ ಮಾಡುವಾಗ ಒಂದು ರೀತಿಯ ನೆಮ್ಮದಿಯ ಭಾವ ಮೂಡುತ್ತದೆ. ಏಕೆಂದರೆ ಅಲ್ಲಿನ ವಾತಾವರಣವೇ ಅಂಥದ್ದು. ಅದಕ್ಕಾಗೇ ಯಾವುದೇ ಬಂಡಾಯ ಮನೋಭಾವ ಅಲ್ಲಿ ಕಾಣುವುದಿಲ್ಲ~ ಎನ್ನುತ್ತಾರೆ ಮಾಜಿ ಉದ್ಯೋಗಿಯೊಬ್ಬರು.

ಆದರೂ ಮಳಿಗೆಗಳಲ್ಲಿ ನಡೆಸಿದ ಆಂತರಿಕ ಸಮೀಕ್ಷೆಗಳ ಪ್ರಕಾರ ಅಲ್ಲಿನ ನೌಕರರಲ್ಲಿ ಅಸಮಾಧಾನ ಹೆಚ್ಚು. ಅದರಲ್ಲೂ ಆ್ಯಪಲ್‌ನ `ಜೀನಿಯಸ್ ಬಾರ್~ ಎಂದೇ ಕರೆಯುವ ತಂತ್ರಜ್ಞರಲ್ಲಂತೂ ಇದು ಅಧಿಕ.

ಈ ಬಗ್ಗೆ ಸಮೀಕ್ಷೆ ನಡೆಸಲು ಮಾಧ್ಯಮಗಳಿಗೆ ಆ್ಯಪಲ್ ಅವಕಾಶ ಕೊಡುತ್ತಿಲ್ಲ. ಬದಲಾಗಿ `ನಮ್ಮದು ವಿಶ್ವದಲ್ಲೇ ಅತ್ಯಂತ ಹೆಚ್ಚು ಸಂತೃಪ್ತ ಸಿಬ್ಬಂದಿಗಳನ್ನು ಹೊಂದಿರುವ, ಅತ್ಯುತ್ತಮ ಗ್ರಾಹಕ ಸೇವೆ ನೀಡುತ್ತಿರುವ ರಿಟೇಲ್ ಸಮೂಹ. ಶೇ 90ರಷ್ಟು ತಂತ್ರಜ್ಞರು ಇಲ್ಲೇ ಕೆಲಸ ಮುಂದುವರಿಸಿರುವುದೇ ಇದಕ್ಕೆ ಸಾಕ್ಷಿ~ ಎಂದು ಪತ್ರಿಕಾ ಹೇಳಿಕೆ ನೀಡಿದೆ.

ಷಿಕಾಗೊದ ಆ್ಯಪಲ್ ಮಳಿಗೆಯ ಮಾಜಿ ವ್ಯವಸ್ಥಾಪಕ ಶೇನ್ ಗ್ರೇಸಿಯಾ ಹೇಳುವುದೇ ಬೇರೆ. `2007ರಲ್ಲಿ ಇಲ್ಲಿ ಕೆಲಸಕ್ಕೆ ಸೇರಿದಾಗ, ಮಾಡಿದರೆ ಇಲ್ಲಿ ಕೆಲಸ ಮಾಡಬೇಕು.

ಇದು ಅತ್ಯಂತ ಪ್ರತಿಷ್ಠೆಯ ಸ್ಥಳ ಎಂದು ಖುಷಿಯಾಗಿತ್ತು. ಆದರೆ ಮೂರು ವರ್ಷ ಕಳೆಯುವಷ್ಟರಲ್ಲಿ ಭ್ರಮನಿರಸನ ಆಯ್ತು. ಎಷ್ಟು ಕೆಲಸ ಮಾಡಿದರೂ ಒಂದು ಒಳ್ಳೆಯ ಮಾತಿಲ್ಲ. ನಿಮ್ಮ ಶ್ರಮವನ್ನು ಮೇಲಿನವರು ಯಾರೂ ಗುರುತಿಸಿ ಬೆನ್ನುತಟ್ಟುವುದೇ ಇಲ್ಲ~.

ವಿಪರೀತ ಒತ್ತಡ, ಸೂಕ್ತ ಪುರಸ್ಕಾರ ಸಿಗದ ಹತಾಶೆಯಿಂದ ಆರೋಗ್ಯ ಕೆಟ್ಟಾಗ ಗ್ರೇಸಿಯಾ ಈ ಕೆಲಸಕ್ಕೆ ವಿದಾಯ ಹೇಳಿದರು. `ಆದರೆ ಅದರಿಂದ ಕಂಪೆನಿಗೇನೂ ನಷ್ಟವಿಲ್ಲ. ನನ್ನ ಜಾಗ ತುಂಬಲು ಬೇಕಾದಷ್ಟು ಜನ ಕಾದು ಕುಳಿತಿರುತ್ತಾರೆ. ಏಕೆಂದರೆ ಆ್ಯಪಲ್‌ನಲ್ಲಿ ಕೆಲಸ ಮಾಡುವುದು ಬಹಳಷ್ಟು ಜನಕ್ಕೆ ಈಗಲೂ ಕನಸಿನ, ಪ್ರತಿಷ್ಠೆಯ ವಿಷಯ~ ಎನ್ನುವ ಅವರ ಮಾತನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.