ADVERTISEMENT

ಬೇರೆ ಪಕ್ಷದವರ ಕಾಲು ಎಳೆಯೋಣ!

ಎಂ.ಎನ್.ಯೋಗೇಶ್‌
Published 5 ಮೇ 2018, 18:35 IST
Last Updated 5 ಮೇ 2018, 18:35 IST

ಮಂಡ್ಯ: ಶಾಸಕ ಅಂಬರೀಷ್‌, ಮಂಡ್ಯ ವಿಧಾನಸಭಾ ಕ್ಷೇತ್ರದ ಸ್ಪರ್ಧಾ ಕಣದಿಂದ ಹಿಂದೆ ಸರಿಯುತ್ತಿದ್ದಂತೆ ಗಣಿಗ ಪಿ. ರವಿಕುಮಾರ್‌ಗೌಡ ಕಾಂಗ್ರೆಸ್‌ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

‘ಅಂಬರೀಷ್‌ ಬಿಟ್ಟರೆ ಸಾಕು’ ಎಂದು ಟಿಕೆಟ್‌ಗಾಗಿ ಕಾದು ಕುಳಿತಿದ್ದ ಕ್ಷೇತ್ರದ ಕೆಲವು ‘ಹಿರಿಯ ಮುಖಂಡರು’ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷಕ್ಕೆ ದುಡಿದ ಹಿರಿಯರನ್ನು ಹಿಂದಿಕ್ಕಿ, 36 ವರ್ಷದ ಯುವಕನೊಬ್ಬ ಟಿಕೆಟ್‌ ಪಡೆದದ್ದು ಅವರಿಗೆ ನುಂಗಲಾಗದ ತುತ್ತಾಗಿದೆ.

ಪರಿಣಾಮ, ಎಲ್ಲರೂ ಪ್ರಚಾರ ತ್ಯಜಿಸಿ, ಮೌನಕ್ಕೆ ಶರಣಾದರು. ಹಿರಿಯ ಮುಖಂಡರ ಮುನಿಸು ಪಕ್ಷದ ವರಿಷ್ಠರ ಗಮನಕ್ಕೆ ಬಂತು. ಹಿರಿಯರು ಮತ್ತು ಕಿರಿಯರನ್ನು ಕೂರಿಸಿ ಸಂಧಾನ ಮಾಡಲು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮಂಡ್ಯಕ್ಕೆ ಬಂದರು.

ADVERTISEMENT

ಒಂದು ಗಂಟೆ ಕಾಲ ನಡೆದ ಸಂಧಾನ ಸಭೆಯಲ್ಲಿ ಹಿರಿಯರ ಮುನಿಸಿಗೆ ಮುಲಾಮು ಹಚ್ಚುವಲ್ಲಿ ಶಿವಕುಮಾರ್‌ ಯಶಸ್ವಿಯಾದರು. ಕೊನೆಗೆ ಎಲ್ಲರೂ ರವಿಕುಮಾರ್‌ಗೌಡ ಪರ ಪ್ರಚಾರ ನಡೆಸಲು ಒಪ್ಪಿಕೊಂಡರು.

ನಂತರ ಮಾತನಾಡಿದ ಶಿವಕುಮಾರ್‌, ‘ಮಂಡ್ಯದಲ್ಲಿ ಕಬಡ್ಡಿ ಬಹಳ ಪ್ರಸಿದ್ಧಿ ಪಡೆದಿದೆ. ಈ ರಾಜಕೀಯ ಕಬಡ್ಡಿಯಲ್ಲಿ ಕಾಲಿಗೆ ಬೀಳುವುದು, ಕಾಲೆಳೆಯುವುದು ಎಲ್ಲವೂ ಸಮಾನ್ಯ’ ಎಂದರು. ಅವರ ಮಾತಿನ ಮರ್ಮ ಅರಿತ ಕಿರಿಯ ಮುಖಂಡರೆಲ್ಲರೂ ಗೊಳ್‌ ಎಂದು ನಕ್ಕರು. ಆದರೆ ಹಿರಿಯ ಮುಖಂಡರು ಮುಗುಮ್ಮಾಗಿದ್ದರು. ಇದನ್ನು ಕಂಡು ಮಾತನ್ನು ಮುಂದುವರಿಸಿದ ಶಿವಕುಮಾರ್‌, ‘ನಮ್ಮ ಕಾಲನ್ನು ನಾವೇ ಎಳೆದುಕೊಳ್ಳುವುದು

ಬೇಡ. ಹಾಗೆ ಮಾಡಿದರೆ ನಮಗೇ ನಷ್ಟ. ಬೇರೆ ಪಕ್ಷಗಳ ಮುಖಂಡರ ಕಾಲು ಎಳೆಯೋಣ’ ಎಂದಾಗ ಹಿರಿಯ, ಕಿರಿಯ ಮುಖಂಡರೆಲ್ಲರೂ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.