ADVERTISEMENT

ಬ್ಲ್ಯಾಕ್‌ಮೇಲ್‌ ಅಸ್ತ್ರವಾಗಿದೆ...

ಪ್ರಜಾವಾಣಿ ವಿಶೇಷ
Published 24 ಅಕ್ಟೋಬರ್ 2015, 16:00 IST
Last Updated 24 ಅಕ್ಟೋಬರ್ 2015, 16:00 IST

‘ಮಾಹಿತಿ ಹಕ್ಕು ಕಾನೂನು ಜನ್ಮ ತಾಳಿದ್ದೇ ಕರ್ನಾಟಕದಲ್ಲಿ.  ಹೀಗಾಗಿ ಅದನ್ನು ದುರ್ಬಲಗೊಳಿಸುವ ಯಾವ ಉದ್ದೇಶವೂ ಸರ್ಕಾರಕ್ಕೆ ಇಲ್ಲ’
– ಹೀಗೆ ಸ್ಪಷ್ಟಪಡಿಸಿದ್ದು ಮಾಹಿತಿ ಆಯುಕ್ತರ ಆಯ್ಕೆ ಸಮಿತಿಯ ಸದಸ್ಯರೂ ಆಗಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ.
‘ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಇದು ಜಾರಿಗೆ ಬಂತು. ಅದರ ನಂತರ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದನ್ನು ಇಡೀ ದೇಶಕ್ಕೆ ವಿಸ್ತರಿಸಿತು. ಜನಪರವಾದ ಇಂತಹ ಕಾನೂನನ್ನು ದುರ್ಬಲಗೊಳಿಸುವ ಉದ್ದೇಶ ಇಲ್ಲ’ ಎಂದು ಅವರು ತಿಳಿಸಿದರು. ಅವರೊಂದಿಗೆ ನಡೆಸಿದ ಮಾತುಕತೆಯ ವಿವರ ಹೀಗಿದೆ...

* ಮಾಹಿತಿ ಆಯುಕ್ತರ ಹುದ್ದೆಗಳು ಹಲವು ತಿಂಗಳಿಂದಲೂ ಖಾಲಿ ಯಾಕಿವೆ?
ಕೆಲವು ಆಡಳಿತಾತ್ಮಕ ಕಾರಣಗಳಿಂದ ನೇಮಕ ಪ್ರಕ್ರಿಯೆ ಸ್ವಲ್ಪ ತಡ ಆಗಿರಬಹುದು. ಇದರ ಹಿಂದೆ ದುರುದ್ದೇಶವಂತೂ ಇಲ್ಲವೇ ಇಲ್ಲ.

*ಇತ್ತೀಚೆಗೆ ಸೇರಿದ್ದ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಸಭೆ ಕೂಡ ನೇಮಕ ಕುರಿತು ಅಂತಿಮ ತೀರ್ಮಾನ ಮಾಡಲಿಲ್ಲವಲ್ಲ...

ಸದ್ಯ ಒಬ್ಬ ಮುಖ್ಯ ಮಾಹಿತಿ ಆಯುಕ್ತರು ಸೇರಿದಂತೆ ಮೂವರು ಮಾಹಿತಿ ಆಯುಕ್ತರ ಹುದ್ದೆಗಳು ಖಾಲಿ ಇವೆ. ಜನವರಿ ವೇಳೆಗೆ ಇನ್ನೂ ಇಬ್ಬರು ಮಾಹಿತಿ ಆಯುಕ್ತರು ನಿವೃತ್ತಿಯಾಗುತ್ತಾರೆ. ಹೀಗಾಗಿ ಎಲ್ಲ ಐದು ಹುದ್ದೆಗಳಿಗೂ ಮತ್ತೊಮ್ಮೆ ಜಾಹೀರಾತು ಕೊಟ್ಟು ಅರ್ಜಿ ಆಹ್ವಾನಿಸುವುದು ಸೂಕ್ತ ಎನ್ನುವ ಅಭಿಪ್ರಾಯ ಬಂದದ್ದರಿಂದ ಅಂತಿಮ ತೀರ್ಮಾನ ಮಾಡಲಾಗಲಿಲ್ಲ.

*ಸರ್ಕಾರಕ್ಕೆ ಬೇಕಾದವರು ಅರ್ಜಿ ಸಲ್ಲಿಸಲಿಲ್ಲ ಎನ್ನುವ ಕಾರಣಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಯಿತು ಎನ್ನುವ ಆರೋಪ ಇದೆಯಲ್ಲ?

ಖಂಡಿತ ಹಾಗಿಲ್ಲ. ಬೆಂಗಳೂರು ಸುತ್ತಲಿನವರೇ ಹೆಚ್ಚಾಗಿ ಅರ್ಜಿ ಸಲ್ಲಿಸಿದ್ದರು. ಸರಿಯಾಗಿ ಪ್ರಚಾರ ಸಿಕ್ಕಿಲ್ಲದಿದ್ದುದೇ ಇದಕ್ಕೆ ಕಾರಣ ಎನ್ನುವ ಅಭಿಪ್ರಾಯ ಬಂತು. ಹೀಗಾಗಿ ಮತ್ತೊಮ್ಮೆ ಪತ್ರಿಕೆಯಲ್ಲಿ ಜಾಹೀರಾತು ನೀಡಲು ತೀರ್ಮಾನಿಸಲಾಯಿತು.

*ಮಾಹಿತಿ ಆಯುಕ್ತರ ನೇಮಕಕ್ಕೂ ಜಾತಿ– ಪ್ರದೇಶದ ಮಾನದಂಡ ಸರಿಯೇ?

ಖಂಡಿತ ಸರಿ ಇಲ್ಲ. ಏನು ಮಾಡುವುದು ಅದನ್ನು ಬಿಟ್ಟು ಹೊರ ಬರಲಾಗುತ್ತಿಲ್ಲ. ಇಂಥ ಮಾನದಂಡದಿಂದಾಗಿ ಸಂಸ್ಥೆಯ ಮಹತ್ವವೂ ಹಾಳಾಗುತ್ತಿದೆ.

*ಆರ್‌ಟಿಐ ದುರುಪಯೋಗದ ಬಗ್ಗೆ ಏನು ಹೇಳುತ್ತೀರಿ?
ಇದರಿಂದ ಎಷ್ಟು ಅನುಕೂಲ ಆಗಿದೆಯೊ ಅಷ್ಟೇ ಅನನುಕೂಲವೂ ಆಗಿದೆ. ಬರೇ ದುರುಪಯೋಗ ಮಾತ್ರ ಆಗುತ್ತಿಲ್ಲ, ಬ್ಲ್ಯಾಕ್‌ಮೇಲ್‌ಗೂ ಅಸ್ತ್ರವಾಗಿದೆ. ಇದಕ್ಕೆ ಬೇಕಾದಷ್ಟು ಉದಾಹರಣೆಗಳು ನಮ್ಮ ಮುಂದಿವೆ.

*ಹಾಗಾದರೆ ಅದರ ತಿದ್ದುಪಡಿ ಆಗಬೇಕು ಅನ್ನುತ್ತೀರಾ?
ಯಾವುದೇ ಕಾನೂನಾದರೂ ಕಾಲಕಾಲಕ್ಕೆ ಬದಲಾಗಬೇಕಾಗುತ್ತದೆ. ದುರುಪಯೋಗ ತಪ್ಪಿಸಲು ತಿದ್ದುಪಡಿ ಅಗತ್ಯ ಎನ್ನುವ ಅಭಿಪ್ರಾಯ ಅನೇಕರಿಂದ ಬಂದಿದೆ. ಆದರೆ, ತಿದ್ದುಪಡಿಗೆ ಶಿಫಾರಸು ಮಾಡಿದರೂ ಒಪ್ಪುವ ಸ್ಥಿತಿ ಕೇಂದ್ರದಲ್ಲಿ ಇಲ್ಲ.

*ಅನೇಕ ಇಲಾಖೆಗಳಲ್ಲಿ ಮಾಹಿತಿ ಸಿಗುವುದು ಈಗಲೂ ಕಷ್ಟ ಆಗಿದೆಯಲ್ಲ?
ಎಷ್ಟೇ ಸುಧಾರಣೆ ತಂದರೂ ಕೆಲವರು ಬದಲಾಗುವುದಿಲ್ಲ. ಅದಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದೊಂದೇ ಉಳಿದಿರುವ ದಾರಿ. ಎಲ್ಲ ಆದೇಶಗಳನ್ನೂ ತಮ್ಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕಬೇಕು, ಆನ್‌ಲೈನ್‌ನಲ್ಲಿ ಎಲ್ಲ ಮಾಹಿತಿ ಸಿಗುವಂತೆ ಮಾಡಬೇಕು ಎಂದು ಹೇಳಿದರೂ ಕೆಲವು ಇಲಾಖೆಗಳು ಅಸಡ್ಡೆ ತೋರುತ್ತಿವೆ. ಅದನ್ನು ಸರಿ ಮಾಡುವ ಪ್ರಯತ್ನ ಮಾಡಲಾಗುವುದು.

*ಪೂರ್ಣ ಪ್ರಮಾಣದ ಮಾಹಿತಿ ಆಯೋಗ ರಚನೆಯಾಗುವುದು ಯಾವಾಗ?
ಡಿಸೆಂಬರ್‌ ವೇಳೆಗೆ ಖಾಲಿ ಹುದ್ದೆ ಭರ್ತಿ ಆಗಲಿದೆ. ಆ ನಂತರ ಪೂರ್ಣ ಪ್ರಮಾಣದ ಆಯೋಗ ಅಸ್ತಿತ್ವಕ್ಕೆ ಬರಲಿದೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.